Women's Day 2025: ಗಂಡು ಸಂತಾನಕ್ಕಾಗಿ ಜೀವವನ್ನೇ ಬಲಿ ಕೊಟ್ಟ ಲಕ್ಷ್ಮಿಯ ದುರಂತ ಕಥೆ
ಸುಮಾರು ಎಂಟು ವರ್ಷಗಳಿಂದ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಒತ್ತಡಗಳ ನಡುವೆ, ಮನಸಿಗೆ ನೆಮ್ಮದಿ ಸಂತೋಷ ತರುವ ಕೆಲಸವೆಂದರೆ ಹೆರಿಗೆ ನಿರ್ವಹಣೆ. ಗರ್ಭವತಿ ಎಂದು ತಿಳಿದ ಕ್ಷಣ ದಿಂದ ಹೆರಿಗೆಯ ತನಕ ಎಲ್ಲಾ ಸೇವೆಗಳನ್ನು ನಮ್ಮಲ್ಲಿ ನೀಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಕರಣಗಳೇ ಹೆಚ್ಚಿರುವುದರಿಂದ , ನಮ್ಮಲ್ಲಿಗೆ ಬರುವವರನ್ನು ಪ್ರೋತ್ಸಾಹಿಸಿ, ಸಮಾಲೋಚನೆ ನೀಡಿ ಕಡೆಯವರೆಗೂ ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಅತೀ ನಾಜೂಕಿನ ಕೆಲಸ.
ಹೆರಿಗೆಯ ನಂತರ, ಹುಟ್ಟಿದ ಮಗು ಹೆಣ್ಣು ಮಗು ಅಂತಾದರೆ ಚೂರು ಖುಷಿ ಇದ್ದರೂ, ಗಂಡು ಮಗು ಆಗಿದಿದ್ದರೆ ಸರಿ ಇತ್ತು ಎನ್ನುವ ಅಸಮಾಧನವೇ ಹೆಚ್ಚು. ಎರಡನೆಯ, ಮೂರನೇಯ ಮಗು ಕೂಡಾ ಹೆಣ್ಣಾಗಿದ್ದಲ್ಲಿ ಆ ತಾಯಿಯ ಕಣ್ಣಲ್ಲಿ ಕಾಣುವ ನಿರಾಶೆಯ ಭಾವಕ್ಕೆ, ಯಾವ ಸಮಾಧಾನವೂ ಇಲ್ಲ. ನಾಕು ಹೆಣ್ಣು ಹೆತ್ತು ಬಿಟ್ಟೆಯಲ್ಲ ಅನ್ನುವ ಚುಚ್ಚು ಮಾತು ಮಾತ್ರವೇ ಅವಳ ಪಾಲಿಗೆ ಉಳಿಯುವುದು.

ಹೆಣ್ಣಿನ ಕೆಲಸ ಹೆರುವುದು, ಹೊರುವುದು. ಹಾಗಾಗಿ ಎಷ್ಟೇ ಹೆಣ್ಣು ಮಕ್ಕಳು ಇದ್ದರೂ ಗಂಡುಮಗು ಬೇಕೇ ಬೇಕು ಎನ್ನುವ ಗಂಡ, ಅತ್ತೆ , ಅತ್ತಿಗೆ ನಾದಿನಿಯರು ನಮ್ಮ ನಡುವೆ ಇದ್ದಾರೆ. ವಿಪರ್ಯಾಸ ಎಂದರೆ, ಕೆಲವೊಮ್ಮೆ ತಾಯಿಯೂ ಇದಕ್ಕೆ ಇಂಬು ಕೊಡುತ್ತಾಳೆ. ಇದರಲ್ಲಿ ಅಕ್ಷರಸ್ಥರು, ಅನಕ್ಷರರು ಎಂಬ ಭೇದವಿಲ್ಲ. ಒಟ್ಟಿನಲ್ಲಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ, ಇರುವ ಮಕ್ಕಳಿಗೆ ತಾಯಿ ಇರಬೇಕೆನ್ನುವ ಮುಂದಾಲೋಚನೆ ಮಾಡುವುದಿಲ್ಲ. ಹದಿನಾರನೇ ಶತಮಾನದಿಂದಲೂ ಹೆಣ್ಣು ಹೆಣ್ಣೇಂದೇತಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎನ್ನುವ ಮಾತನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದರೂ ಕೇಳದ ಕಿವುಡರಾಗಿ ಎಷ್ಟೋ ತಾಯಂದಿರನ್ನು ಕಳೆದು ಕೊಳ್ಳುವಂತಾಗಿದೆ.
ಲಕ್ಷ್ಮಿಯ ಕಥೆಯೂ ಹೀಗೆ ಆಗಿದ್ದು
ಸಾವಿರಾರು ಪ್ರಾರ್ಥನೆಗಳು, ಹರಕೆಗಳು, ತನ್ನ ಮಕ್ಕಳ ಕರೆಗೂ ಓಗೊಡದೆ ಲಕ್ಷ್ಮಿ ಹೊರಟು ಬಿಟ್ಟಳು. ಒಂಭತ್ತು ತಿಂಗಳ ಕೆಳಗೆ, ಲಕ್ಷ್ಮಿಯ ಪರಿಚಯ ನನಗಿರಲಿಲ್ಲ. ಮೂರು ಮಕ್ಕಳ ಜೊತೆಗೆ ಮಡಿಲಲ್ಲಿ ಇನ್ನೊಂದು ಹೊತ್ತ ಲಕ್ಷ್ಮಿ, ಆ ದಿನ ಅಬೋರ್ಟ್ ಮಾಡಿಕೊಡಿ ಎಂದು ಕೇಳಲು ಬಂದಿದ್ದವಳು. ಗರ್ಭದ ತಿಂಗಳು ಹೆಚ್ಚಾಗಿ ಹೋಗಿದ್ದರಿಂದ, ಮುಂದುವರೆಸಲು ಹೇಳಿದೆ. ಕಣ್ಣಲ್ಲಿ ನಿರೀಕ್ಷೆ, ಮನದಲ್ಲಿ ಅಳುಕು ಎರಡು ಕಾಣುತಿತ್ತು.

ತಿಂಗಳು ತಿಂಗಳು ಮುಟ್ಟು ಸರಿಯಾಗಿ ಆಗುತ್ತಿರಲಿಲ್ಲ, ಹಾಗಾಗಿ ನನಗೆ ಗೊತ್ತಾಗಲಿಲ್ಲ, ದಯವಿಟ್ಟು ಇದನ್ನು ಹೆರಿಗೆ ಮಾಡಿಸಿಕೊಡಿ ಮತ್ತು ಮಕ್ಕಳಾಗದೇ ಇರುವ ಹಾಗೆ ಆಪರೇಷನ್ ಕೂಡ ಮಾಡಿಸಿ ಕೊಡಿ ಎಂದು ಕೇಳಿಕೊಂಡಳು. ಅಗತ್ಯ ಗರ್ಭಿಣಿ ಸೇವೆಗಳಲ್ಲಿ ಚೂರು ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಯಿತು. ಇನ್ನೇನು ಹೆರಿಗೆಗೆ ಒಂದು ವಾರವಿದೆ ಎನ್ನುವಾಗ, ನಗುತ್ತಾ ಹೋದವಳು, ಮತ್ತೆ ವಾಪಸು ಬಂದಿದ್ದು ಹೆಣವಾಗಿಯೇ.
ಅಮ್ನಿಓಟಿಕ್ಲ್ ಫ್ಲೂಯಿಡ್ ಎಂಬಾಲಿಸಂ ಜೊತೆಗೆ ಬ್ರಾನ್ಕೊ ನ್ಯುಮೋನಿಯಾ ಅವಳನ್ನು ಬಲಿ ಪಡೆದವು. ಬದುವುಕುವುದೇ ಕಷ್ಟ ಎನ್ನುವಂತಿದ್ದ ಲಕ್ಷ್ಮಿ, ಸಾವು ಬದುಕಿನ ನಡುವೆ ನಲ್ವತ್ತು ದಿನಗಳು ಭಯಂಕರ ಹೋರಾಟ ನಡೆಸಿ, ಕಡೆಗೆ ಸೋತು ಹೋದಳು. ಎಲ್ಲಾ ಸೂಕ್ತ ಚಿಕಿತ್ಸೆ ಸಿಕ್ಕರೂ, ಸಾವು ಅವಳನ್ನು ಅಪ್ಪಿಕೊಂಡುಬಿಟ್ಟಿತ್ತು. ಒಂದೆರೆಡು ದಿನ ಕಳೆದು ಲಕ್ಷ್ಮಿಯ ಮನೆಗೆ ಹೋದಾಗ, ಅವಳ ಗಂಡ ಯಾರೊಟ್ಟಿಗೋ ನನ್ನ ಮಗ ಮುದ್ದಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ, ತೊಟ್ಟಿಲಲ್ಲಿದ್ದ ಕೂಸು ಮಾತ್ರ, ಹಸಿವಿಗೋ, ಅಪ್ಪುಗೆಗೊ ಅಳುತ್ತಲೇ ಇತ್ತು.
ವಿಶೇಷ ಬರಹ- ಡಾ. ವರ್ಣಿತ ಎಂ ಕೆ. ಮಳವಳ್ಳಿ, ಮಂಡ್ಯ.












Click it and Unblock the Notifications