Mantralaya Mutt: ಮಂತ್ರಾಲಯಕ್ಕೆ ಹೋಗಿ ಬರುವವರು ಏನೆಲ್ಲ ನಿಯಮ ಪಾಲಿಸಬೇಕು?
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಅದರಲ್ಲೂ ಗುರುವಾರದಂದು ರಾಯರ ಭಕ್ತರೆಲ್ಲ ಮಂತ್ರಾಲಯದಲ್ಲೇ ಬೀಡುಬಿಟ್ಟಿರುತ್ತಾರೆ. ಇದು ರಾಯರ ಮೇಲಿರುವ ಭಕ್ತಿಗೆ ಸಾಕ್ಷಿ. ಮಂತ್ರಾಲಯವು ಆಂಧ್ರಪ್ರದೇಶದಲ್ಲಿದ್ದರೂ ಕರ್ನಾಟಕದ ಭಕ್ತರೇ ಸದಾ ನೆರೆದಿರುತ್ತಾರೆ.
ರಾಜ್ಯದ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಬರುವವರು ಕೆಲವು ನಿಯಮಗಳನ್ನು ಪಾಲಿಸುವ ಪರಿಪಾಠವಿದೆ. ಅದರಂತೆ ಮಂತ್ರಾಲಯಕ್ಕೆ ಹೋಗಿ ಬರುವವರು ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ. ಆದರೆ, ಈ ಬಗ್ಗೆ ಅದೆಷ್ಟೋ ಮಂದಿಗೆ ಗೊತ್ತೇ ಇಲ್ಲ. ಇನ್ನು ರಾಯರ ಭಕ್ತರು ಏನೆಲ್ಲ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ...

ಮೊದಲಿಗೆ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸುವವರು ಕಡ್ಡಾಯವಾಗಿ ನಿಮ್ಮ ಕುಲದೇವರನ್ನು ಪ್ರಾರ್ಥಿಸಿಕೊಳ್ಳಿ. ಯಾತ್ರೆ ಕೈಗೊಳ್ಳುವ ಮುನ್ನ ನೀವು ಯಾವ ಕಾರಣಕ್ಕಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದೀರಿ ಎಂಬುದನ್ನು ದೃಢವಾಗಿ ನಿರ್ಧರಿಸಿಕೊಳ್ಳಿ. ಮುಖ್ಯವಾಗಿ ಮಂತ್ರಾಲಯಕ್ಕೆ ಹೋಗುವ ಮುನ್ನ ಧೂಮಪಾನ, ಮದ್ಯಪಾನ ಸೇರಿದಂತೆ ಇತರ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು ಎನ್ನುತ್ತಾರೆ. ಇದನ್ನು ಸಂಪೂರ್ಣವಾಗಿ ತ್ಯಜಿಸುವುದು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ದೇವಸ್ಥಾನಕ್ಕೆ ಹೋಗಿಬರುವವರೆಗೆ ಆದರೂ ದೂರವಿಡಲು ಪ್ರಯತ್ನಿಸಿ.
ಮಂತ್ರಾಲಯಕ್ಕೆ ಭೇಟಿ ನೀಡಿದ ನಂತರ ಭಕ್ತರ ಅನುಕೂಲಕ್ಕಾಗಿ ಮಠದಿಂದ ಸ್ಥಾಪಿಸಲಾದ ಮನೆಗಳು, ಕುಟೀರಗಳು ಅಥವಾ ಅತಿಥಿ ಗೃಹಗಳಲ್ಲಿ ತಂಗಬಹುದು. ಇನ್ನು ಮಠದಲ್ಲಿ ಇರುವ ನಿಯಮಗಳು ಹಾಗೂ ಆಚರಣೆಗಳ ಬಗ್ಗೆ ಅಗೌರವ ತೋರಬೇಡಿ. ಮುಖ್ಯವಾಗಿ ರಾಯರ ಸನ್ನಿಧಿಯನ್ನು ಪ್ರವೇಶಿಸುವ ಮುನ್ನ ಅಲ್ಲೇ ಇರುವ ಪವಿತ್ರ ತುಂಬಾಭದ್ರಾ ನದಿಯಲ್ಲಿ ತಪ್ಪದೇ ಸ್ನಾನ ಮಾಡಿ. ಬಿಡುವಿದ್ದರೆ ಅಲ್ಲೇ ಇರುವ ಮಂಚಾಲಮ್ಮನ ದರ್ಶನವನ್ನೂ ಪಡೆಯಿರಿ. ರಾಯರ ಬೃಂದಾವನದ ದರ್ಶನ ಪಡೆಯುವ ಮುನ್ನ ಮೌನದಿಂದ ಇರಲು ಪ್ರಯತ್ನಿಸಿ.

ರಾಯರ ದೇವಾಲಯದ ಆವರಣದಲ್ಲಿ ಯಾವ ಕಾರಣಕ್ಕೂ ಅನ್ಯಾಯದ, ಅವಾಚ್ಯ ಪದಗಳು ಅಥವಾ ಕೆಟ್ಟ ವರ್ತನೆಯನ್ನು ತೋರಲೇಬೇಡಿ. ರಾಯರಿಗೆ ಇದು ಕೊಂಚವೂ ಇಷ್ಟವಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು. ಮುಖ್ಯವಾಗಿ ಬೃಂದಾವನ ಪ್ರವೇಶಿಸುವಾಗ ಜೋರಾಗಿ ಕೂಗುವುದು, ಗಲಾಟೆ ಮಾಡಬಾರದು. ಬದಲಿಗೆ ಶಾಂತತೆಯನ್ನು ಕಾಪಾಡಬೇಕು. ಮನಸ್ಸಿಗೆ ನೆಮ್ಮದಿ ಸಿಗಲು ಅಲ್ಲಿ ರಾಯರ ಮಂತ್ರಗಳನ್ನು, ಸ್ತೋತ್ರಗಳನ್ನು ಪಠಿಸುವುದು ಒಳ್ಳೆಯದು. ಕೊನೆಗೆ ನಿಮಗೆ ಯಾವುದೇ ಮಂತ್ರ ಬರುವುದಿಲ್ಲ ಎಂದಾದರೆ ಶ್ರೀಗುರು ರಾಘವೇಂದ್ರ ಎಂದು ಜಪಿಸಿದರೂ ಸಾಕು.
ರಾಯರ ದರ್ಶನ ಪಡೆಯುವಾದ ಯಾವುದೇ ರೀತಿಯ ಕೂಲಿಂಗ್ ಗ್ಲಾಸ್ ಅಥವಾ ಮಾಡ್ರನ್ ಡ್ರೆಸ್‌ಗಳನ್ನು ಧರಿಸಬೇಡಿ. ಲಕ್ಷಣವಾಗಿ, ಸಾಂಪ್ರದಾಯಿಕವಾಗಿ ಮಠದಲ್ಲಿರುವ ನಿಯಮದಂತೆಯೇ ವಸ್ತ್ರ ಧರಿಸಿ ರಾಯರ ದರ್ಶನ ಮಾಡಿಬನ್ನಿ. ಇನ್ನು ಮಂತ್ರಾಲಯದಲ್ಲಿ ಮಹಿಳೆಯರು ಯಾವುದೇ ಉರುಳು ಸೇವೆ, ಸಾಷ್ಟಾಂಗ ನಮಸ್ಕಾರ ಮಾಡಬಾರದು ಎನ್ನುತ್ತಾರೆ. ಮಂಡಿಯೂರಿ ನಮಸ್ಕರಿಸಿದರೂ ಸಾಕು. ಒಂದು ವೇಳೆ ರಾಯರಿಗೆ ವಿಶೇಷ ಸೇವೆಯ ಉದ್ದೇಶವಿದ್ದರೆ ಮುಂಜಾನೆ 5 ಗಂಟೆಯಿಂದ 7 ಗಂಟೆಯ ಸಮಯದಲ್ಲಿ ಮಾಡುವುದು ಒಳ್ಳೆಯದು.

ಮಂತ್ರಾಲಯದಿಂದ ವಾಪಸ್ ಬಂದ ನಂತರ ಅಲ್ಲಿ ನಿಮಗೆ ನೀಡಿದ ಮಂತ್ರಾಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಕೊಳ್ಳಿ. ನಿಮ್ಮ ಗುರಿಗಳ ಯಶಸ್ಸಿಗಾಗಿ ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿ. ಬಳಿಕ ರಾಯರ ಸನ್ನಿಧಿಯಲ್ಲಿ ನೀವು ಪಾಲಿಸಿದ ನಿಯಮಗಳು ಹಾಗೂ ಒಳ್ಳೆಯ ಆಲೋಚನೆಗಳು, ಆಚರಣೆಗಳನ್ನು ನಿಮ್ಮ ಮನೆಯಲ್ಲಿ ಪ್ರತಿದಿನವೂ ರೂಢಿಸಿಕೊಳ್ಳಲು ಮುಂದಾಗಿರಿ..












Click it and Unblock the Notifications