Maha Kumbh Mela 2025: ವಸಂತ ಪಂಚಮಿಯ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಗೈದ ಭಕ್ತರ ಸಂಖ್ಯೆ ಎಷ್ಟು?
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭ ಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ ದಿನ ಕನಿಷ್ಠ ಐವತ್ತು ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ.
2025ರ ಜನವರಿ 13ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾದ ಈ ಮಹಾ ಕುಂಭ ಮೇಳ ಫೆಬ್ರವರಿ 26 ಮಹಾ ಶಿವರಾತ್ರಿಯವರೆಗೆ ನಡೆಯಲಿದೆ. ಈ ಬಾರಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.

ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ ನಡೆದಿದ್ದು, ಜನವರಿ 29ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಶಾಹಿ ಸ್ನಾನ ನಡೆದಿದೆ. ಇಂದು ಫೆಬ್ರವರಿ 3ರಂದು ವಸಂತ ಪಂಚಮಿಯ ದಿನದಂದು ಮೂರನೇ ಹಾಗೂ ಕೊನೆಯ ಶಾಹಿ ಸ್ನಾನ ನಡೆದಿದೆ. ವಸಂತ ಪಂಚಮಿ ಈ ಪವಿತ್ರ ದಿನದಂದು ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಸುಮಾರು 62 ಲಕ್ಷ ಜನರು ಪವಿತ್ರ ಸ್ನಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಸಂತ ಪಂಚಮಿಯ ಹಿನ್ನೆಲೆಯಲ್ಲಿ ಬೆಳಗ್ಗೆ 7.30ರ ಸುಮಾರಿಗೆ ಎಲ್ಲಾ 13 ಅಖಾರರಗಳಲ್ಲಿ ಮಹಾನಿರ್ವಾನಿ ಅಟಲ್, ಜುನಾ ಹಾಗೂ ನಿರಂಜನಿಗಳನ್ನು ಸೇರಿ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿದ್ದು, ಸಾಧು ಮತ್ತು ಸನ್ಯಾಸಿಗಳ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಲಾಗಿದೆ. ವಸಂತ ಪಂಚಮಿಯಂದು ಅಮೃತ ಸ್ನಾನ ಮಾಡಿದರೆ ಪುಣ್ಯ ಪಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಇನ್ನು ಮಹಾ ಕುಂಭ ಮೇಳದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕೂಡ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಮೌನಿ ಅಮವಾಸ್ಯೆಯ ದಿನ ದುರಂತ ನಡೆದಿದ್ದು, ಕಾಲ್ತುಳಿತದಿಂದ ಮೂವತ್ತು ಜನ ಅಸುನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಜನದಟ್ಟಣೆ ನಿಯಂತ್ರಿಸಲು ಬಿಗಿ ಭದ್ರತೆ ಮಾಡಿಕೊಂಡಿದ್ದಾರೆ. ಇನ್ನು ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಹಗಲು ರಾತ್ರಿ ಎನ್ನದೇ ಮಹಾ ಕುಂಭ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications