Maha Kumbh Mela 2025: ಕುಂಭಮೇಳದ ಆರಂಭ ಮತ್ತು ಐತಿಹಾಸಿಕ ಮಹತ್ವದ ಸಂಪೂರ್ಣ ವಿವರ
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರ ಉತ್ಸವವಾದ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳ ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಪುಷ್ಯ ಮಾಸದ ಮೊದಲ ಹುಣ್ಣಿಮೆಯ ದಿನ ಈ ಮಹಾ ಕುಂಭಮೇಳವು ಆರಂಭವಾಗಿದ್ದು, 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ. ಮೊದಲ ದಿನವೇ ಒಂದು ಕೋಟಿ ಭಕ್ತರು ಕುಂಭ ಮೇಳದ ಪವಿತ್ರಾ ಸ್ನಾನ ಮಾಡಿದ್ದಾರೆ.
ಭಾರತೀಯರು, ವಿದೇಶಿಗರು, ಹಿಂದೂಗಳು, ಹಿಂದೂಯೇತರರು, ಆಸ್ತಿಕರು, ನಾಸ್ತಿಕರು, ನಾಗ ಸಾಧುಗಳು, ಸಂತರು ಸೇರಿದಂತೆ ಜಗತ್ತಿನಾದ್ಯಂತದಿಂದ ಸುಮಾರು 40 ಕೋಟಿ ಭಕ್ತರು ಮಹಾ ಕುಂಭ ಮೇಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕೋಟ್ಯಂತರ ಮಂದಿ ಭಾಗಿಯಾಗುವ ಈ ಮಹಾ ಕುಂಭಮೇಳದ ಮಹತ್ವವೇನು? ಕುಂಭಮೇಳದ ಇತಿಹಾಸವೇನು? ಈ ಬಗ್ಗೆ ವಿವರಣೆ ಇಲ್ಲಿದೆ.

ಕುಂಭಮೇಳದ ಇತಿಹಾಸದ ಬಗ್ಗೆ ಅನೇಕ ಉಲ್ಲೇಖಗಳಿವೆ. ಸುಮಾರು ಏಳುನೂರು ವರ್ಷಗಳ ಹಿಂದೆ ಈ ಕುಂಭಮೇಳ ಆರಂಭವಾಯಿತು ಎಂದು ಅನೇಕರು ನಂಬುತ್ತಾರೆ. ಇನ್ನು ಕೆಲವು ಗ್ರಂಥಗಳ ಪ್ರಕಾರ ಸತ್ಯಯುಗದಲ್ಲಿ ಆದಿ ಶಂಕರಾಚಾರ್ಯ ಅವರಿಂದ ಕುಂಭಮೇಳ ಪ್ರಾರಂಭವಾಯಿತು ಎನ್ನುವ ಉಲ್ಲೇಖವಿದೆ. ಇನ್ನು ಕೆಲವರು ಸಮುದ್ರ ಮಂಥನದ ಬಳಿಕವೇ ಕುಂಭಮೇಳ ಆರಂಭವಾಯಿತು ಎಂದು ನಂಬುತ್ತಾರೆ. ಈ ಕುಂಭ ಮೇಳದ ಬಗ್ಗೆ ಅನೇಕ ಕಡೆಗಳಲ್ಲಿ ವಿವಿಧ ರೀತಿಯ ಉಲ್ಲೇಖ, ಪುರಾವೆ ಹಾಗೂ ವಿವರಣೆ ಇದೆ.
ಆದಿ ಶಂಕರಾಚಾರ್ಯ ಧರ್ಮವನ್ನು ರಕ್ಷಿಸುವ ಸಲುವಾಗಿ ಮೊದಲು ನಾಗಾ ಸಾಧುಗಳ ಗುಂಪನ್ನು ರಚಿಸಿದರು. ಹೀಗಾಗಿ ಕುಂಭ ಮೇಳದಲ್ಲಿ ಧರ್ಮವನ್ನು ರಕ್ಷಿಸುವ ನಾಗಾ ಸಾಧುಗಳನ್ನು ಮೊದಲು ಸ್ನಾನ ಮಾಡಬೇಕು ಎನ್ನುವ ನಂಬಿಕೆಯಾಗಿದೆ. ಹೀಗಾಗಿ ಮಹಾ ಕುಂಭ ಮೇಳದಲ್ಲಿ ಅಮೃತ ಸ್ನಾನದ ವೇಳೆ ಮೊದಲು 13 ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಬಳಿಕ ಉಳಿದ ಸಾಧು, ಸಂತರು, ಗಣ್ಯರು ಹಾಗೂ ಸಾರ್ವಜನಿಕರು ಸ್ನಾನ ಮಾಡುತ್ತಾರೆ. ಹೀಗಾಗಿ ಮಹಾ ಕುಂಭ ಮೇಳದಲ್ಲಿ ಅಥವಾ ಕುಂಭ ಮೇಳಗಳಲ್ಲಿ ನಾಗಾ ಸಾಧುಗಳಿಗೆ ಹೆಚ್ಚಿನ ಗೌರವ ಪ್ರಾಮುಖ್ಯತೆ ನೀಡಲಾಗುತ್ತದೆ.
ಪ್ರಯಾಗ್ ರಾಜ್‌ನಲ್ಲೇ ಮಹಾ ಕುಂಭಮೇಳ ಯಾಕೆ?
ಸಾಮಾನ್ಯವಾಗಿ ನಾಲ್ಕು ವರ್ಷಗಳಿಗೊಮ್ಮೆ, ಆರು ವರ್ಷ ವರ್ಷಗಳಿಗೊಮ್ಮೆ ಹಾಗೂ ಹನ್ನೆರಡು ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಆರು ವರ್ಷ ವರ್ಷಕ್ಕೆ ನಡೆಯುವ ಕುಂಭ ಮೇಳವನ್ನು ಅರ್ಧ ಕುಂಭ ಎಂದು, ಹನ್ನೆರಡು ವರ್ಷ ವರ್ಷಕ್ಕೆ ನಡೆಯುವ ಕುಂಭ ಮೇಳವನ್ನು ಪೂರ್ಣ ಅಥವಾ ಮಹಾ ಕುಂಭ ಮೇಳ ಎಂದು ಕರೆಯಲಾಗುತ್ತದೆ. ಕುಂಭ ಮೇಳವನ್ನು ಕ್ರಮವಾಗಿ ಪ್ರಯಾಗ್ ರಾಜ್, ಉಜ್ಜಯಿನಿ, ನಾಸಿಕ್, ಹರಿದ್ವಾರದ ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಸಲಾಗುತ್ತದೆ.

ಉಜ್ಜಯಿನಿ, ಪ್ರಯಾಗ್ ರಾಜ್, ನಾಸಿಕ್, ಹರಿದ್ವಾರಗಳಲ್ಲಿಯೇ ಕುಂಭಮೇಳವನ್ನು ಯಾಕೆ ಮಾಡುತ್ತಾರೆ ಎನ್ನುವುದಕ್ಕೆ ಪೌರಾಣಿಕ ಕಥೆಯೊಂದಿದೆ. ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ ಕೊನೆಯಲ್ಲಿ ಇಂದ್ರನ ಪುತ್ರ ಅಮೃತ ಪಾತ್ರೆಯನ್ನು ರಕ್ಷಿಸಿಕೊಳ್ಳಲು ಓಡುವ ಸಮಯದಲ್ಲಿ ಅಮೃತ ಕಲಶದಿಂದ ಕೆಲ ಹನಿಗಳು ಉಜ್ಜಯಿನಿ, ಪ್ರಯಾಗ್ ರಾಜ್, ನಾಸಿಕ್ ಹಾಗೂ ಹರಿದ್ವಾರಗಳಲ್ಲಿ ಬಿದ್ದವು ಎನ್ನುವ ನಂಬಿಕೆಯಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿಯೇ ಅನಾದಿ ಕಾಲದಿಂದಲೂ ಕುಂಭ ಮೇಳವನ್ನು ನಡೆಸಿಕೊಂಡು ಬರಲಾಗುತ್ತಿದೆ.











Click it and Unblock the Notifications