Maha Kumbh Mela 2025: ಕುಂಭಮೇಳದಲ್ಲಿ 15 ದಿನಕ್ಕೆ ₹40,000 ಗಳಿಸಿದ ಯುವಪ್ರೇಮಿ
ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಧಾರ್ಮಿಕವಾಗಿ ಮಾತ್ರವಲ್ಲದೇ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ವಿಕಾಸಕ್ಕೂ ಕಾರಣವಾಗುತ್ತದೆ. 2013ರಲ್ಲಿ ನಡೆದ ಮಹಾ ಕುಂಭಮೇಳವು ₹12,000 ಕೋಟಿಗಳಷ್ಟು ಆದಾಯವನ್ನು ಗಳಿಸಿತ್ತು. ಹಾಗೂ 2019ರಲ್ಲಿ ನಡೆದ ಕುಂಭ ಮೇಳವು 1.2 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು ಅಲ್ಲದೇ ಕುಂಭ ಮೇಳವು 6 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗವನ್ನು ಸೃಷ್ಟಿಸಿತ್ತು.
ಈ ಬಾರಿ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದ್ದು, ಈ ಬಾರಿಯ ಮಹಾ ಕುಂಭಮೇಳಕ್ಕೆ ಹೆಚ್ಚಿನ ಹಣ ವ್ಯವಹಿಸಲಾಗಿದ್ದು, ಆದಾಯವನ್ನು ಕೂಡ ಗರಿಷ್ಠ ಮಟ್ಟದಲ್ಲಿ ನಿರೀಕ್ಷಿಸಲಾಗುತ್ತಿದೆ. ತಜ್ಞರ ಪ್ರಕಾರ ಈ ಬಾರಿಯ ಮಹಾ ಕುಂಭಮೇಳದಿಂದ ₹1.5 ಲಕ್ಷ ಕೋಟಿಯಿಂದ ₹2ಲಕ್ಷ ಕೋಟಿಯವರೆಗೆ ಆದಾಯ ಬರುವ ನಿರೀಕ್ಷೆ ಇದೆ.

ಮಹಾ ಕುಂಭಮೇಳವು ಲಕ್ಷಾಂತರ ಜನರಿಗೆ ಉದ್ಯೋವನ್ನು ಸೃಷ್ಟಿಸುತ್ತದೆ. ಈ ಬೃಹತ್ ಉತ್ಸವದ ಹೆಜ್ಜೆ ಹೆಜ್ಜೆಗೂ ಭಕ್ತರ ಸಾಗರದ ನಡುವೆ ವ್ಯಾಪಾರಿಗಳನ್ನು ನೋಡಬಹುದು. ದಿನ ನಿತ್ಯದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳು, ದೇವರಿಗೆ ಸಂಬಂಧಿಸಿದ ವಸ್ತುಗಳು, ಅಲಂಕಾರಿಕಾ ವಸ್ತುಗಳು ಹೀಗೆ ಅನೇಕ ರೀತಿಯ ವ್ಯಾಪಾರಿಗಳು ಇಲ್ಲಿ ಜೀವನ ಕಟ್ಟಿಕೊಂಡಿರುತ್ತಾರೆ. ಕೈಲಾದಷ್ಟು ಬಂಡವಾಳ ಹಾಕಿ ಉತ್ತಮ ಲಾಭದ ನಿರೀಕ್ಷೆಯಲ್ಲೇ ಹಗಲು ರಾತ್ರಿ ಎನ್ನದೇ ವ್ಯಾಪಾರ ನಡೆಸುತ್ತಿರುತ್ತಾರೆ.
ಆದರೆ ಈ ಬಾರಿಯ ಮಹಾ ಕುಂಭಮೇಳದಲ್ಲಿ ಆಸಾಮಿಯೊಬ್ಬ ಒಂದು ರೂಪಾಯಿ ಕೂಡ ಬಂಡವಾಳ ಹಾಕದೇ ಕೇವಲ ಹದಿನೈದು ದಿನದಲ್ಲಿ ನೆಲವತ್ತು ಸಾವಿರ ರೂಪಾಯಿಗಳನ್ನು ಗಳಿಸಿದ್ದಾನೆ. ಆಶ್ಚರ್ಯ ಆದರೂ ಇದು ಸತ್ಯ. ಹೌದು ಮಹಾ ಕುಂಭಮೇಳದಲ್ಲಿ ಯುವಕನೊಬ್ಬ ಹಲ್ಲು ಉಜ್ಜುವ ಬೇವಿನ ಕಡ್ಡಿ ಮಾರಾಟ ಮಾಡಿ ಈಗಾಗಲೇ ನೆಲವತ್ತು ಸಾವಿರ ರೂಪಾಯಿ ಗಳಿಸಿದ್ದಾನೆ.
ಮಹಾ ಕುಂಭಮೇಳಕ್ಕೆ ಬರುವ ಕೋಟ್ಯಂತರ ಭಕ್ತರಲ್ಲಿ ಹಲವರು ತಮ್ಮ ದಿನ ನಿತ್ಯದ ಬಳಕೆಯ ವಸ್ತುಗಳನ್ನು ಮರೆತು ಅಥವಾ ಜೊತೆಯಲ್ಲಿ ಯಾಕೆ ಎಂದು ಬಿಟ್ಟು ಬಂದಿರುತ್ತಾರೆ. ಪ್ರಯಾಗ್ ರಾಜ್‌ನಲ್ಲಿ ಕನಿಷ್ಟ ಎರಡು ದಿನ ಕಳೆಯುವ ಅವರು ಪ್ಲಾಸ್ಟಿಕ್ ಬ್ರಶ್‌ಗಳ ಬದಲಿಗೆ ಹಲ್ಲು ಉಜ್ಜಲು ಕಡಿಮೆಯ ಬೆಲೆಯ ಬೇವಿನ ಕಡ್ಡಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೇ ಬಂಡವಾಳ ಮಾಡಿಕೊಂಡ ಈ ಯುವಕ ಯಾವುದೇ ಬಂಡವಾಳ ಇಲ್ಲದೇ ಊರಿನಲ್ಲಿ ಸಿಗುವ ಬೇವಿನ ಮರದ ಕಡ್ಡಿಗಳನ್ನು ತಂದು ಮಾರಾಟ ಮಾಡಿ ಸಾವಿರಾರು ರೂಪಾಯಿ ಗಳಿಸಿದ್ದಾನೆ. ಈತನ ಗರ್ಲ್ ಫ್ರೆಂಡ್ ಕೊಟ್ಟ ಉಪಾಯವಂತೆ ಇದು. ಅದೇನೆ ಇರಲಿ ದುಡಿಯುವ ಮನಸ್ಸಿದ್ದರೆ, ಜೊತೆಯಲ್ಲಿ ಶ್ರಮವಿದ್ದರೆ, ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಗಳಿಕೆ ಸಾಧ್ಯ ಎನ್ನುವುದನ್ನು ಈ ಯುವಕ ತೋರಿಸಿಕೊಟ್ಟಿದ್ದಾನೆ. ಸದ್ಯ ಈ ಯುವಕನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications