Kumbh Mela: ಮಲೆನಾಡಿನ ಭಕ್ತಾದಿಗಳಿಗೆ ಗುಡ್‌ನ್ಯೂಸ್: ಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, 33ನೇ ದಿನಕ್ಕೆ 50 ಕೋಟಿಗೂ ಅಧಿಕ ಭಕ್ತರು ಭಾಗಿಯಾಗಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು ಆದರೆ ಆಯೋಜಕರ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು, ಈಗಾಗಲೇ 50 ಕೋಟಿ ಭಕ್ತರು ಪುಣ್ಯ ಸ್ನಾನ ಮೂಲಕ ಈ ಬಾರಿಯ ಮಹಾ ಕುಂಭಮೇಳ ಹೊಸ ದಾಖಲೆ ಸೃಷ್ಟಿಸಿದೆ.
ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದು, ಇದೀಗ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ ಮಲೆನಾಡಿನ ಭಕ್ತಾದಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಶಿವಮೊಗ್ಗದಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ವಿಶೇಷ ರೈಲು ಸಂಚಾರ ನಡೆಸಲಿದೆ.
ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದಿಂದ (ರೈಲು ಸಂಖ್ಯೆ. 06223) ರಂದು ಹೊರಟು ಫೆಬ್ರವರಿ 24ರ ಬೆಳಿಗ್ಗೆ 11:10ಕ್ಕೆ ಪ್ರಯಾಗರಾಜ್ ತಲುಪಲಿದೆ ಹಾಗೂ ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್‍ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27ರ ಬೆಳಿಗ್ಗೆ 06:45ಕ್ಕೆ ಶಿವಮೊಗ್ಗ ತಲುಪಲಿದೆ ವಿಶೇಷ ರೈಲು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಭಕ್ತಾದಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಫೆಬ್ರವರಿ 15ರ ಮಧ್ಯಾಹ್ನದ ನಂತರ ವಿಶೇಷ ರೈಲಿನ ಬುಕಿಂಗ್ ಸೇವೆ ಆರಂಭವಾಗಲಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ. ಮಹಾ ಕುಂಭಮೇಳ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿ ಕೊಟ್ಟಿರುವ ರೈಲ್ವೆ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ಎಂದು ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ರೈಲ್ವೆ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು 144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್‌ನ ಮಹಾ ಕುಂಭ ಮೇಳಕ್ಕೆ ತೆರಳಬೇಕು ಎನ್ನುವ ಅಸಂಖ್ಯಾತ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದ ಹಿಂದೂಗಳ ಆಸೆಗೆ ಪೂರಕವಾಗಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನ್ ವೈಷ್ಣವ್ ಅವರ ಬಳಿ ಮನವಿ ಮಾಡಲಾಗಿತ್ತು. ಇದೀಗ ಶಿವಮೊಗ್ಗದಿಂದ ಸಂಚರಿಸುವ ವಿಶೇಷ ರೈಲಿಗೆ ಅನುಮತಿ ನೀಡಲಾಗಿದೆ.












Click it and Unblock the Notifications