Maha Kumbh Mela 2025: ನಾಳೆ ಪ್ರಯಾಗ್‌ರಾಜ್‌ನಲ್ಲಿ ನೋ ವೆಹಿಹಲ್ ಝೋನ್ ನಿಯಮ ಜಾರಿ
ನಮ್ಮ ದೇಶ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಆಯೋಜಕ ನಿರೀಕ್ಷೆಗೂ ಮೀರಿದ ಜನದಟ್ಟಣೆಯಾಗುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು. ಆದರೆ ಈಗಿನ ಭಕ್ತರ ಸಂಖ್ಯೆಯನ್ನು ನೋಡಿದರೆ ಇನ್ನೂ ಹದಿನೈದು ದಿನಗಳ ಕಾಲ ನಡೆಯುವ ಈ ಮಹಾ ಕುಂಭ ಮೇಳದಲ್ಲಿ ಐವತ್ತರಿಂದ ಅರವತ್ತು ಕೋಟಿ ಭಕ್ತರು ಭಾಗಿಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಮಹಾ ಕುಂಭಮೇಳ ಆರಂಭವಾದ ಒಂದು ತಿಂಗಳಲ್ಲಿಯೇ 45 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ, ಜನವರಿ 29, 2025ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಶಾಹಿ ಸ್ನಾನ, ಫೆಬ್ರವರಿ 3, 2025ರಂದು ವಸಂತ ಪಂಚಮಿಯ ದಿನ ಮೂರನೇ ಶಾಹಿ ಸ್ನಾನ ಈಗಾಗಲೇ ನಡೆದಿದ್ದು, ಕೋಟ್ಯಂತರ ಭಕ್ತರು ಭಾಗಿಯಾಗಿದ್ದಾರೆ. ನಾಳೆ ಅಂದರೆ ಫೆಬ್ರವರಿ 12 ಮತ್ತೊಂದು ವಿಶೇಷ ದಿನವಾಗಿದ್ದು, ನಾಳೆ ಇನ್ನಷ್ಟು ಭಕ್ತರು ಭಾಗಿಯಾಗಲಿದ್ದಾರೆ.

ಫೆಬ್ರವರಿ 12, 2025ರಂದು ಮಾಘಿ ಪೂರ್ಣಿಮೆಯ ದಿನ 10 ಲಕ್ಷಕ್ಕೂ ಅಧಿಕ ಭಕ್ತರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಈಗಾಗಲೇ ಒಂದು ತಿಂಗಳಿನಿಂದ ಕಲ್ಪವಾಸದಲ್ಲಿದ್ದು, ನಾಳೆ ಅವರ ಮಾಘಿ ಪೂರ್ಣಿಮೆ ಪುಣ್ಯಸ್ನಾನದೊಂದಿಗೆ ಕಲ್ಪವಾಸ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜನದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್‌ನಲ್ಲಿ ನೋ ವೆಹಿಕಲ್ ಝೋನ್ ಘೋಷಣೆ ಮಾಡಲಾಗಿದೆ. ಖಾಸಗಿ ಮಾತ್ರವಲ್ಲದೇ ಸರ್ಕಾರಿ ವಾಹನಗಳಿಗೂ ಕೂಡ ಪ್ರವೇಶ ನಿರ್ಭಂಧ ಹೇರಲಾಗಿದೆ. ಮಹಾ ಕುಂಭಮೇಳಕ್ಕೆ ಆಗಮಿಸುವವರು ನಗರದ ಹೊರಗಿನ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬೇಕಿದೆ. ನಾಳೆ ಮುಂಜಾನೆಯಿಂದಲೇ ನೋ ವೆಹಿಹಲ್ ಝೋನ್ ನಿಯಮ ಜಾರಿಯಾಗಲಿದ್ದು, ಮಹಾ ಕುಂಭಮೇಳಕ್ಕೆ ತೆರಳುವ ಭಕ್ತರು ಗಮನಿಸಬೇಕಿದೆ.

ಇನ್ನು ಉತ್ತರ ಪ್ರದೇಶದ ಸರ್ಕಾರ ಮಹಾ ಕುಂಭ ಮೇಳದ ಯಶಸ್ಸಿಗಾಗಿ 7,000 ಕೋಟಿ ಅನುದಾನ ಘೋಷಿಸಿ ಸಕಲ ವ್ಯವಸ್ಥೆ ಕೈಗೊಂಡಿತ್ತು. 10,000 ಹೆಕ್ಟೇರ್‌ಗಳ ವಿಶಾಲವಾದ ಪ್ರದೇಶದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅಲ್ಲದೇ 30 ಕಿರು ಸೇತುವೆಗಳನ್ನು ನಿರ್ಮಾಣ, 400 ಕಿಲೋ ಮೀಟರ್‌ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿತ್ತು. ಹೀಗಿದ್ದರೂ ಕೂಡ ಮಹಾ ಕುಂಭ ಮೇಳಕ್ಕೆ ಆಗಮಿಸುವ ಜನದಟ್ಟಣೆ ನಿಯಂತ್ರಣಕ್ಕೆ ಸಿಗದಂತಾಗಿದೆ.












Click it and Unblock the Notifications