Maha Kumbh Mela 2025: 27 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಮಹಾ ಕುಂಭಮೇಳದಲ್ಲಿ ಪತ್ತೆ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಮಹಾ ಕುಂಭಮೇಳದ ಅಂತ್ಯದಲ್ಲಿ ನೆಲವತ್ತು ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿದ್ದು, ಈಗಾಗಲೇ ಇಪ್ಪತೈದು ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್‌ಗೆ ಸಾವಿರಾರು ಸಾಧು-ಸಂತರು ನಾಗಸಾಧುಗಳು, ಕೋಟ್ಯಂತರ ಭಕ್ತರು, ವಿದೇಶಿ ಭಕ್ತರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಸಾವಿರಾರು ನಾಗಸಾಧುಗಳು ಭಾಗಿಯಾಗುತ್ತಿದ್ದು, ಒಬ್ಬೊಬ್ಬರ ಕಥೆ ವಿಭಿನ್ನವಾಗಿದೆ. ಈ ಪೈಕಿ ಸುಮಾರು 27 ವರ್ಷಗಳ ಹಿಂದೆ ತನ್ನವರನೆಲ್ಲಾ ಕಳೆದುಕೊಂಡಿದ್ದ ನಾಗಸಾಧು ಒಬ್ಬರಿಗೆ ತನ್ನ ಕುಟುಂಬ ಮತ್ತೆ ಮರಳಿ ಸಿಕ್ಕಿದೆ. ಆದರೆ ಈಗಾಗಲೇ ಆತ ಸನ್ಯಾಸತ್ವವನ್ನು ಸ್ವೀಕರಿಸಿದ್ದು, ಕುಟುಂಬಸ್ಥರನ್ನು ಮತ್ತೆ ಒಪ್ಪಿಕೊಳ್ಳಲು ಹಾಗೂ ಅವರ ಜೊತೆ ಹೋಗಲು ನಿರಾಕರಿಸಿದ್ದಾನೆ.

ಜಾರ್ಖಂಡ್ ಮೂಲದ ಕುಟುಂಬದ ಸದಸ್ಯನೊಬ್ಬ 27 ವರ್ಷಗಳ ಹಿಂದೆ ತನ್ನ ಮನೆಯನ್ನು ತೊರೆದು ಹೋಗಿದ್ದು, ಈವರೆಗೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿಯ ಮಹಾ ಕುಂಭಮೇಳದಲ್ಲಿ ದಿಢೀರ್ ಕಾಣಿಸಿಕೊಂಡಿದ್ದಾರೆ. ಗಂಗಾ ಸಾಗರ್ ಯಾದವ ಎನ್ನುವವರು 1998ರಲ್ಲಿ ಜಾರ್ಖಂಡ್ನ ಧನ್ಬಾದ್ನಿಂದ ಕಾಣೆಯಾಗಿದ್ದರು. ತಮ್ಮನ ಮದುವೆಗೆ ಸೀರೆ ತರುತ್ತೇನೆ ಎಂದು ಊರು ಬಿಟ್ಟವರು ಈವರೆಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಸಹ ಪ್ರಯೋಜನವಾಗಿರಲಿಲ್ಲ.
ಕೊನೆಗೆ 27 ವರ್ಷಗಳ ನಂತರ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳದಲ್ಲಿ ಗಂಗಾ ಸಾಗರ್ ಯಾದವ ಕಂಡು ಬಂದಿದ್ದಾರೆ. ಕುಟುಂಬಸ್ಥರು ಕೂಡಲೇ ಪ್ರಯಾಗ್ ರಾಜ್‌ಗೆ ಬಂದು ಭೇಟಿಯಾಗಿದ್ದಾರೆ. ಆದರೆ ಗಂಗಾ ಸಾಗರ್, ಬಾಬಾ ರಾಜಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದು, ನಾನು ವಾರಣಾಸಿಯವನು ನನಗೂ ನಿಮಗೂ ಸಂಬಂಧ ಇಲ್ಲ ಎಂದು ಅವರನ್ನು ಮಾತನಾಡಿಸಲು ಅವರೊಂದಿಗೆ ಹೋಗಲು ನಿರಾಕರಿಸಿದ್ದಾರೆ.
ಕುಟುಂಬಸ್ಥರು ಬಾಬಾ ರಾಜಕುಮಾರ್ ಬಳಿ ಬೇಡಿಕೊಂಡಿದ್ದು, ಕೊನೆಗೆ ಸ್ಥಳೀಯ ಪೊಲೀಸರು ಕೂಡ ಈ ಪ್ರಕರಣಕ್ಕೆ ಎಂಟ್ರಿಯಾಗಿದ್ದಾರೆ. ಈ ವೇಳೆ ಕುಟುಂಬಸ್ಥರು ದೇಹದ ಗುರುತುಗಳನ್ನು ಹೇಳಿದ್ದಾರೆ. ಅಲ್ಲದೇ ಪೊಲೀಸರ ಬಳಿ ಡಿಎನ್ಎ ಟೆಸ್ಟ್ ಮಾಡಿಸಲು ಹೇಳಿದ್ದು, ಮಹಾ ಕುಂಭಮೇಳ ಮುಗಿಯುವರೆಗೂ ಕಾದು ಅವರ ಮನವೊಲಿಸುತ್ತೇವೆ. ಒಂದು ವೇಳೆ ಡಿಎನ್ಎ ಟೆಸ್ಟ್ ವರದಿಯಲ್ಲಿ ಮ್ಯಾಚ್ ಆಗದೇ ಇದ್ದರೆ ಬಾಬಾ ರಾಜಕುಮಾರ್ ಅವರ ಬಳಿ ಕ್ಷಮೆ ಕೇಳಿ ವಾಪಸ್ ಊರಿಗೆ ಹೋಗುತ್ತೇವೆ ಎಂದು ಗಂಗಾ ಸಾಗರ್ ಕುಟುಂಬ ಕಾಯುತ್ತಿದೆ.












Click it and Unblock the Notifications