ಬದುಕಿನಲ್ಲಿ ಆಸೆ ಇರಲಿ..ದುರಾಸೆ ಬೇಡ..ಯಾಕೆ ಗೊತ್ತಾ?
ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ಮಾತು ಸರ್ವ ಕಾಲಕ್ಕೂ ಸಲ್ಲುವಂತದ್ದಾಗಿದೆ. ಆದರೆ ಆಸೆ ಇಲ್ಲದೆ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗಲ್ಲ ಎಂಬುದು ಅಷ್ಟೇ ಸತ್ಯ. ನಮ್ಮ ಆಸೆಗಳು ಇತಿಮಿತಿಯಲ್ಲಿದ್ದು, ಅವು ದುರಾಸೆಯಾಗದೆ ಹೋದರೆ ಬದುಕು ಸುಂದರವಾಗಿರಲು ಸಾಧ್ಯವಾಗುತ್ತದೆ. ಆದರೆ ಈ ಆಸೆ ಎಂಬುದು ನಮ್ಮನ್ನು ಅಷ್ಟು ಸುಲಭವಾಗಿ ಬಿಡುವಂತಹದ್ದಲ್ಲ ಅದು ಮತ್ತಷ್ಟು ಬೇಕೆನಿಸುವ ಕಡೆಗೆ ಎಳೆಯುತ್ತಿರುತ್ತದೆ.. ಹೀಗಾಗಿಯೇ ಬಹಳಷ್ಟು ಸಂದರ್ಭಗಳಲ್ಲಿ ಆಸೆಗಳು ದುರಾಸೆಯಾಗಿ ದುಃಖದಲ್ಲಿ ಅಂತ್ಯ ಕಾಣುತ್ತವೆ.
ಆಸೆಗಳಿಲ್ಲದೆ ಹೋದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಆ ಆಸೆಗಳು ಹೇಗಿರಬೇಕು ಎಂಬ ಚೌಕಟ್ಟನ್ನು ಹಾಕಿಕೊಂಡು ಅದರಾಚೆಗೆ ದಾಟದೆ ಹೋದರೆ ಬದುಕಿಗೆ ಅರ್ಥ ಬರಲಿದೆ. ನಾವು ಮನುಷ್ಯರು ಹೀಗಾಗಿ ಆಸೆಗಳು ದುರಾಸೆಯಾಗಿ ಪರಿವರ್ತನೆಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನಮ್ಮ ಸ್ವಾರ್ಥಗಳೇ ದುರಾಸೆಯನ್ನು ಪೋಷಿಸುತ್ತವೆ. ನಾನು ಮಾತ್ರ ಚೆನ್ನಾಗಿರಬೇಕೆಂಬ ಸ್ವಾರ್ಥ ಮತ್ತು ಎಲ್ಲವೂ ನನಗೆ ದಕ್ಕಬೇಕೆಂಬ ದುರಾಸೆ ನಮ್ಮ ಮನುಷ್ಯತ್ವದ ಮೇಲೆ ಪರಿಣಾಮ ಬೀರುತ್ತದೆ. ನಮ್ಮನ್ನು ಹೇಗೆಗೋ ಆಡಿಸುತ್ತವೆ.

ಕೃಷಿ ಮಾಡುವ ರೈತನಿಂದ ಹಿಡಿದು ವ್ಯಾಪಾರ ಮಾಡುವ ವ್ಯಾಪಾರಿ ತನಕ. ಎಲ್ಲರೂ ಕೆಲವೊಮ್ಮೆ ಲಾಭದ ದುರಾಸೆಗೆ ಬಿದ್ದು ನಷ್ಟ ಮಾಡಿಕೊಂಡಿರುವವರೇ.. ಇದರಾಚೆಗೆ ಬೇರೆ, ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಂದಿ ಕೂಡ ಒಂದಲ್ಲ ಒಂದು ಕಾರಣಕ್ಕೆ ದುರಾಸೆಯ ವಿಷ ವರ್ತುಲದಲ್ಲಿ ಸಿಲುಕಿ ಬರೀ ಹಣ ಮಾತ್ರವಲ್ಲ ಮಾನವನ್ನು ಕಳೆದುಕೊಂಡು ಬದುಕಿಗೆ ಕಪ್ಪು ಮಸಿಯನ್ನು ಬಳಿದುಕೊಂಡವರೇ. ಏಕೆ ಹೀಗೆ? ಎಂದು ಯೋಚನೆ ಮಾಡಿದರೆ ನಾವು ಆಸೆಗಳಿಗೆ ಚೌಕಟ್ಟು ಹಾಕಿ ಅದರಾಚೆಗೆ ದಾಟದಂತೆ ನೋಡಿಕೊಳ್ಳುವಲ್ಲಿ ಸೋಲುತ್ತಿರುವುದೇ ಕಾರಣವಾಗಿದೆ.
ನಮಗೆ ದಕ್ಕುವುದೆಲ್ಲವೂ ದೇವರು ಕೊಟ್ಟ ಭಿಕ್ಷೆ
ಇಷ್ಟಕ್ಕೂ ದುರಾಸೆಗಳು ಯಾವಾಗ ಹುಟ್ಟುತ್ತವೆ ಎಂಬುದನ್ನು ನೋಡಿದ್ದೇ ಆದರೆ ಆಸೆಗಳು ನೆರವೇರುತ್ತಾ ಬಂದಾಗ ದುರಾಸೆಗಳು ಹುಟ್ಟಲು ಶುರುವಾಗುತ್ತವೆ. ಒಂದು ವೇಳೆ ಇದಕ್ಕೆ ಕಡಿವಾಣ ಹಾಕದೆ ಹೋದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಭೂಮಿ ಮೇಲೆ ಎಲ್ಲವನ್ನು ಸೃಷ್ಟಿ ಮಾಡಿರುವ ಭಗವಂತ ಎಲ್ಲದಕ್ಕೂ ಅಂತ್ಯ ಇಟ್ಟಿದ್ದಾನೆ. ಆದರೆ ನಾವು ಅದರ ಬಗ್ಗೆ ಯೋಚನೆ ಮಾಡದೆ ಮುಂದುವರೆಯುತ್ತಾ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ. ನಮಗೇನು ದಕ್ಕಿದೆಯೋ ಅದು ದೇವರು ಕೊಟ್ಟ ಭಿಕ್ಷೆ ಎಂದು ಅವನಿಗೆ ಸಮರ್ಪಿಸಿದರೆ ಜೀವನ ಸುಖಮಯವಾಗಿರುತ್ತವೆ.

ಇವತ್ತು ಈ ರೀತಿ ಆಲೋಚನೆ ಮಾಡುವವರ ಸಂಖ್ಯೆ ಕಡಿಮೆಯಿದೆ. ಎಲ್ಲವೂ ನನ್ನಿಂದಲೇ, ನಾನೇ ಮಾಡಿದ್ದು ಎಂಬ ಅಹಂ, ಮತ್ತು ಇನ್ನಷ್ಟು ಮಾಡಬೇಕೆಂಬ ದುರಾಸೆ ಆರಂಭದಲ್ಲಿ ಎಲ್ಲವನ್ನು ತಂದುಕೊಟ್ಟರೂ ಕ್ರಮೇಣ ಕಂದಾಯ ಕೇಳಬಹುದು. ಇದಕ್ಕೊಂದು ದೃಷ್ಟಾಂತ ಕಥೆಯನ್ನು ಸ್ವಾಮಿ ಶಿವಾನಂದರು ಹೇಳಿದ್ದಾರೆ. ಗೋವಿಂದ ಮತ್ತು ಆನಂದ ಎಂಬ ಇಬ್ಬರು ವ್ಯಾಪಾರಿಗಳು ತಮ್ಮ ಊರಿನಲ್ಲಿಯೇ ವ್ಯಾಪಾರ ನಡೆಸಿಕೊಂಡು ಬಂದಿದ್ದರು. ವ್ಯಾಪಾರದಿಂದ ಒಂದಷ್ಟು ಲಾಭ ಬರುತ್ತಿತ್ತಾದರೂ ಅದು ಅವರಿಗೆ ಸಮಾಧಾನವಾಗಿರಲಿಲ್ಲ. ದೂರದ ಊರಿನಲ್ಲಿ ವ್ಯಾಪಾರ ಮಾಡಿದರೆ ಅಲ್ಲಿ ಬಹಳಷ್ಟು ಲಾಭ ಗಳಿಸಬಹುದೆಂದು ಯಾರೋ ಹೇಳಿದ ಮಾತು ಇಬ್ಬರನ್ನು ಆ ಊರಿಗೆ ಹೋಗಿ ಅಲ್ಲಿ ವ್ಯಾಪಾರ ನಡೆಸಲು ಪ್ರೇರೇಪಿಸಿತು.
ದುರಾಸೆಗೆ ಬಿದ್ದವರು ನಷ್ಟ ಹೊಂದಿದರು
ಗೋವಿಂದ ಮತ್ತು ಆನಂದ ದೂರದ ಊರಿಗೆ ಹೋಗಿ ವ್ಯಾಪಾರ ಮಾಡಲು ಸಿದ್ದರಾದರು. ತಮ್ಮಲ್ಲಿರುವ ಹಣವನ್ನೆಲ್ಲಾ ವ್ಯಾಪಾರಕ್ಕೆ ಬಂಡವಾಳವಾಗಿ ಸುರಿದು ಅದರಿಂದ ಲಕ್ಷಾಂತರ ರೂಪಾಯಿ ಲಾಭಗಳಿಸುವ ಬಯಕೆ ಅವರದ್ದಾಗಿತ್ತು. ಅಪರಿಚಿತ ಊರು, ಅಪರಿಚಿತ ಜನ, ತಮ್ಮಲ್ಲಿರುವ ಬಂಡವಾಳವನ್ನು ಹೇಗೆ ವ್ಯಾಪಾರಕ್ಕೆ ವಿನಿಯೋಗಿಸುವುದು ಎಂಬುದು ಅವರಿಗೆ ಚಿಂತೆಯಾಯಿತು. ಬಹಳ ಯೋಚಿಸಿದ ನಂತರ ಅವರಿಬ್ಬರು ಒಂದು ನಿರ್ಧಾರಕ್ಕೆ ಬಂದರು. ನಮ್ಮಲ್ಲಿರುವ ಬಂಡವಾಳವನ್ನೆಲ್ಲಾ ಸಂಪೂರ್ಣವಾಗಿ ವ್ಯಾಪಾರಕ್ಕೆ ಬಳಸಿದರೆ ತೊಂದರೆಯಾಗಬಹುದು. ಆದುದರಿಂದ ಬಂಡವಾಳದ ಸ್ವಲ್ಪ ಭಾಗವನ್ನು ಮಾತ್ರ ಖರ್ಚು ಮಾಡಿ ಕ್ರಮೇಣ ಸ್ವಲ್ಪ ಸ್ವಲ್ಪವೇ ವ್ಯಾಪಾರ ಕುದುರಿದ ನಂತರ ಬಳಸಿಕೊಳ್ಳೋಣ ಎಂದುಕೊಂಡರು.
ತಮ್ಮಲ್ಲಿದ್ದ ಬಂಡವಾಳದ ಸ್ವಲ್ಪ ಭಾಗವನ್ನು ಹಾಕಿ ವ್ಯಾಪಾರ ಆರಂಭಿಸಿದರು. ಆದರೆ ಈ ಸ್ವಲ್ಪ ಭಾಗದ ಬಂಡವಾಳ ವ್ಯಾಪಾರದ ಪ್ರಾರಂಭದ ಖರ್ಚಿಗೆ ಸರಿದೂಗಿ ಲಾಭವೇನೂ ಬರಲಿಲ್ಲ. ಮತ್ತೆ ಇನ್ನು ಸ್ವಲ್ಪ ಭಾಗವನ್ನು ವ್ಯಾಪಾರಕ್ಕೆ ಬಳಸಿದರು. ಅದು ಸಹ ಖರ್ಚು ವೆಚ್ಚಗಳಿಗೆ ಸರಿ ಹೋಗಿ ಲಾಭ ಕಾಣಲಿಲ್ಲ. ಹೀಗೆ ಸ್ವಲ್ಪ ಸ್ವಲ್ಪ ಬಂಡವಾಳ ಹಾಕುತ್ತಾ ಹೋದರು. ವ್ಯಾಪಾರ ಕುದುರುವ ವೇಳೆಗೆ ಬಂಡವಾಳವೆಲ್ಲಾ ಕರಗಿ ಸಂಪೂರ್ಣ ನಷ್ಟ ಹೊಂದಿದರು. ಈ ದೃಷ್ಟಾಂತ ಕಥೆ ಮನುಷ್ಯ ಆಸೆಯ ಕುದುರೆಯೇರಿದರೆ ಎಂತಹ ಕಷ್ಟ ನಷ್ಟಗಳಿಗೆ ತಳ್ಳಲ್ಪಡುತ್ತಾನೆ ಎಂಬುದನ್ನು ಹೇಳುತ್ತದೆ.
ದುರಾಸೆ ನಮ್ಮನ್ನು ಜೀವಂತ ಸುಡುವ ಬೆಂಕಿ
ಆಸೆ ಎಂಬುದು ನಮ್ಮಲ್ಲಿ ಇಲ್ಲದೆ ಹೋದರೆ ನಾವು ಉನ್ನತಿ ಕಾಣಲು ಸಾಧ್ಯವಿಲ್ಲವೇನೋ.. ನಾವು ನಮ್ಮ ಮಿತಿಯಲ್ಲಿ ಆಸೆ ಪಡುವುದು ಮತ್ತು ಆ ಆಸೆ ನೆರವೇರುವ ತನಕ ವಿರಮಿಸದೆ ದುಡಿಯುವುದು ನಮ್ಮನ್ನು ನಮ್ಮ ಆಸೆಯ ಸುಖವನ್ನು ಬಹಳ ಕಾಲದವರೆಗೆ ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ಹಾಗೆ ನಡೆಯುವುದು ಮಾತ್ರ ಬಹಳ ಅಪರೂಪ. ಏಕೆಂದರೆ ನಾವೆಲ್ಲರೂ ಆಸೆಯ ಕುದುರೆ ಏರಿ ಹೊರಡುವವರು ಹೀಗಾಗಿ ಕೆಲವೊಮ್ಮೆ ಆಸೆಯ ಕುದುರೆಯ ಹಾದಿ ಬದಲಿದಾಗ ಆಸೆಯ ಸುಖದ ಅಮಲಿನಲ್ಲಿದ್ದ ನಾವು ದಾರಿ ತಪ್ಪಿರುವುದು ಅರಿವಾಗದೆ ಸಂಕಷ್ಟದ ಕಡೆಗೆ ಹೋದರೂ ಅಚ್ಚರಿಯಿಲ್ಲ.
ದುರಾಸೆ ಎಂಬುವುದು ನಮ್ಮನ್ನು ಜೀವಂತ ಸುಡುವ ಬೆಂಕಿ. ಏಕಾಂತದಲ್ಲಿ ಕುಳಿತು ಸಿಂಹಾವಲೋಕನ ಮಾಡಿ ನೋಡಿದರೆ ನಾವು ಆಸೆ ಮಾಡಿ ಪಡೆದದ್ದು ದುರಾಸೆ ಮಾಡಿ ಕಳೆದುಕೊಂಡಿದ್ದು ಎಲ್ಲವನ್ನೂ ಪಟ್ಟಿ ಮಾಡಬಹುದು. ದುರಾಸೆಯಿಂದ ನಾವು ಪಡೆದುದಕ್ಕಿಂತಲೂ ಕಳೆದುಕೊಂಡಿದ್ದೇ ಜಾಸ್ತಿ ಎಂಬುವುದು ನಮ್ಮ ಅರಿವಿಗೆ ಬಾರದಿರದು. ಆಸೆಯನ್ನು ನಿಯಂತ್ರಿಸದೇ ಹೋದರೆ ಇದುವರೆಗೆ ಆಸೆ ಮಾಡಿ ಏನನ್ನೂ ಪಡೆದಿದ್ದೆವೆಯೋ ಅಥವಾ ಉಳಿಸಿಟ್ಟಿದ್ದೇವೆಯೇ ಅವುಗಳನ್ನೆಲ್ಲ ಕಳೆದುಕೊಳ್ಳಬೇಕಾಗಿ ಬರಬಹುದು. ಆಸೆಯನ್ನು ವರ್ಜಿಸದ ಹೊರತು ನಮ್ಮ ಬದುಕಿನಲ್ಲಿ ಸುಖ, ನೆಮ್ಮದಿ ಕಾಣಲಾಗದು.
ಬುದ್ಧನ ಯುಕ್ತಿ ಸದಾ ನಮ್ಮ ನೆನಪಿನಲ್ಲಿರಲಿ
ಇವತ್ತು ಲೌಕಿಕ ಸುಖದ ಬಗೆಗಿನ ನಮ್ಮ ಆಸೆ ಕ್ರಮೇಣ ದುರಾಸೆಯಾಗಿ ಚಿಂತೆ, ನೋವು, ದುಃಖ, ಕಷ್ಟಗಳ ಗೂಡಾಗಿ ಒಂದು ಸುಂದರ ಬದುಕನ್ನು ಬಲಿತೆಗೆದುಕೊಳ್ಳುತ್ತಿದೆ. ನಮ್ಮ ಆಸೆಯನ್ನು ಆಧ್ಯಾತ್ಮದೆಡೆಗೆ ವಾಲಿಸಿ ಜ್ಞಾನದ, ಯೋಗದ, ಇತರೆ ದೈವ ಕಾರ್ಯದ ಬಗೆಗೆ, ದೈವತ್ವದೊಂದಿಗೆ ಸಂಪೂರ್ಣವಾಗಿ ಐಕ್ಯವಾಗಿಸಿಕೊಳ್ಳುವ ಮೂಲಕ ಆಸೆಯನ್ನು ಈ ದೇಹದಿಂದ ಹೊಡೆದೋಡಿಸಬೇಕು. ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ಯುಕ್ತಿ ಸದಾ ನಮ್ಮ ನೆನಪಿನಲ್ಲಿಟ್ಟುಕೊಳ್ಳಬೇಕು. ನಾವೆಲ್ಲರೂ ಎಲ್ಲವೂ ಬಹುಬೇಗಲೇ ದಕ್ಕಬೇಕೆಂದು ಬಯಸುತ್ತಿದ್ದೇವೆ. ಇದೊಂದು ರೀತಿಯ ದುರಾಸೆಯೇ.. ಈ ದುರಾಸೆಯೇ ನಮ್ಮನ್ನು ಅಧಃಪತನಕ್ಕೆ ತಳ್ಳಬಹುದು. ಅದು ಏನೇ ಇರಲಿ ನಾವು ದುರಾಸೆಯನ್ನು ಅರ್ಥ ಮಾಡಿಕೊಂಡರೆ ಅದರಿಂದ ಬಿಡುಗಡೆಯಾಗುವುದು ಕಷ್ಟವೇನಲ್ಲ.












Click it and Unblock the Notifications