ಸಂಕಷ್ಟದಿಂದ ಪಾರಾಗಬೇಕಾದರೆ ಸತ್ವಗುಣ ಬೆಳೆಸಿಕೊಳ್ಳಿ
ನಾವು ಏನೇ ಹೇಳಿದರೂ ಸ್ನೇಹ, ವ್ಯವಹಾರ, ಸಂಬಂಧ ಬೆಸೆಯ ಬೇಕಾದರೆ ಎದುರಿಗಿರುವರು ಹೇಗೆ? ಆತ ಅಥವಾ ಆಕೆಯ ಗುಣ ಹೇಗಿದೆ? ಪ್ರಾಮಾಣಿಕರೋ? ಅವರ ಹಿನ್ನಲೆ ಏನು? ಹೀಗೆ ಹತ್ತಾರು ರೀತಿಯಲ್ಲಿ ತೂಗಿ ಅಳೆದು ಮುಂದುವರೆಯುತ್ತೇವೆ. ಅದರಲ್ಲೂ ಗುಣದ ಬಗ್ಗೆ ತಿಳಿದುಕೊಂಡೇ ಒಂದು ಹೆಜ್ಜೆ ಮುಂದೆ ಇಡುತ್ತೇವೆ. ಅದರಲ್ಲೂ ನಮ್ಮದೇ ಆದ ಮಾನದಂಡಗಳಿಂದ ಅವರ ಗುಣಲಕ್ಷಣಗಳನ್ನು ಅಳೆದು ಮುಂದಿನ ತೀರ್ಮಾನ ಮಾಡುತ್ತೇವೆ. ಇಲ್ಲಿ ಮುಖ್ಯವಾಗಿ ನಾವು ಗಮನಿಸುವುದು ಅವರ ಗುಣಗಳನ್ನಾಗಿದ್ದು, ಅದು ಇಷ್ಟವಾದರೆ ಯಾವುದೇ ತಕರಾರು ಇಲ್ಲದೆ ಅವರು ಇಷ್ಟವಾಗುತ್ತಾರೆ. ಹಾಗೆಯೇ ಅವರ ಸ್ನೇಹ ಸಂಬಂಧವೂ ಗಟ್ಟಿಯಾಗುತ್ತವೆ.
ಬಹಳಷ್ಟು ಸಲ ಒಬ್ಬ ವ್ಯಕ್ತಿ ಒಳ್ಳೆಯವನೇ ಆಗಿರುತ್ತಾನೆ ಆದರೆ ಹೊರಗಿನ ಪ್ರಪಂಚಕ್ಕೆ ಆತ ತೋರ್ಪಡಿಸುವ ಗುಣಲಕ್ಷಣಗಳು ಇಷ್ಟವಾಗದೆ ಹೋಗಿ ಬಿಡುತ್ತದೆ. ಹೀಗಾಗಿ ಆತನಿಂದ ದೂರವಿರಲು ಜನ ಪ್ರಯತ್ನಿಸುತ್ತಿರುತ್ತಾರೆ. ನಮ್ಮ ಗುಣ ಲಕ್ಷಣಗಳನ್ನು ನಾವು ಯಾವುತ್ತೂ ಮುಚ್ಚಿಡಲಾಗುವುದಿಲ್ಲ. ಅದು ನಾವು ನಡೆದುಕೊಳ್ಳುವ ರೀತಿ, ಮಾಡುವ ವ್ಯವಹಾರದಲ್ಲಿಯೇ ತೋರಿಸಿ ಬಿಡುತ್ತದೆ. ಹೀಗಾಗಿ ಕೆಲವೊಂದು ಗುಣಗಳು ಮನುಷ್ಯನ ಹುಟ್ಟಿನಿಂದಲೇ ಬಂದಿರುತ್ತದೆ. ಆದ್ದರಿಂದ ಬದಲಾಯಿಸಿಕೊಳ್ಳಿ ಎಂದರೆ ಅದು ತಕ್ಷಣಕ್ಕೆ ಸಾಧ್ಯವಾಗದೆ ಹೋಗಬಹುದು. ಆದರೆ ನಮ್ಮ ಗುಣಗಳು ಬೇರೆಯವರಿಗೆ ಮಾತ್ರವಲ್ಲ, ಕೆಲವೊಮ್ಮೆ ನಮಗೆ ತೊಂದರೆ ಕೊಟ್ಟಿರುತ್ತದೆ. ಈ ವೇಳೆ ಛೆ! ನಾನು ಹೀಗಿರಬಾರದು ಬದಲಾಯಿಸಿಕೊಳ್ಳಬೇಕು ಎಂದು ನಮಗೆ ನಾವೇ ಹೇಳಿಕೊಂಡಿರುತ್ತೇವೆ.

ನಮ್ಮ ಗುಣದಲ್ಲಿ ಲೋಪದೋಷಗಳು ಕಂಡು ಬಂದಾಗ ಅದನ್ನು ಬದಲಾಯಿಸಿಕೊಳ್ಳುವುದು ಜಾಣತನವಾಗುತ್ತದೆ. ಅದು ಬಿಟ್ಟು ನಾನು ಇರೋದೆ ಹೀಗೆ ಎಂದು ಕೊಳ್ಳುವುದು ಅಹಂಕಾರದ ಪರಮಾವಧಿಯಾಗುತ್ತದೆ, ಅದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಇಷ್ಟಕ್ಕೂ ಮನುಷ್ಯ ಒಂದೇ ಗುಣವನ್ನು ಹೊಂದಿರುವುದಿಲ್ಲ. ಆತನಲ್ಲಿ ಎಲ್ಲ ಗುಣಗಳೂ ಬೆರೆತಿರುತ್ತವೆ. ಆದರೆ ಬೇರೆಲ್ಲ ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ರೂಢಿಸಿಕೊಂಡು ಬಾಳುವವನು ನಿಜವಾದ ಮನುಷ್ಯನಾಗುತ್ತಾನೆ. ನಮ್ಮಲ್ಲಿ ಎಂತಹ ಗುಣಗಳಿರಬೇಕು? ಮತ್ತು ಮನುಷ್ಯ ಯಾವೆಲ್ಲ ಗುಣಗಳನ್ನು ಹೊಂದಿರುತ್ತಾನೆ? ಈ ಗುಣಗಳು ಬರಲು ಕಾರಣಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲ ಅಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ.
ರಜೋ, ತಮಸ್ಸು ದೂರವಾಗಬೇಕಾದರೆ ಸತ್ವ ಗುಣ ಬೇಕು
ಅಧ್ಯಾತ್ಮಿಕ ಚಿಂತಕರ ಪ್ರಕಾರ ಒಳ್ಳೆಯ ವ್ಯಕ್ತಿಯಾಗ ಬೇಕಾದರೆ ಸತ್ವಗುಣಗಳನ್ನು ಬೆಳೆಸಿಕೊಳ್ಳಬೇಕಂತೆ. ಏಕೆಂದರೆ ಸತ್ವಗುಣ ಹೊಂದಿದವರು ಸಾಧಕರಾಗುತ್ತಾರಂತೆ. ಅಷ್ಟೇ ಅಲ್ಲ ಈ ಸತ್ವಗುಣ ನೀರಿನ ಹಾಗೆ ನಿರ್ಮಲವಾಗಿದ್ದು, ಉತ್ತಮ ಸಂಸ್ಕಾರಕ್ಕೆ ಕಾರಣವಾಗಿರುತ್ತದೆಯಂತೆ. ಹಾಗಾಗಿ ಒಬ್ಬ ವ್ಯಕ್ತಿ ಸತ್ವಗುಣವನ್ನು ತನ್ನಲ್ಲಿ ಬೆಳೆಸಿಕೊಂಡರೆ ಸಂಸ್ಕಾರವಂತ ಬದುಕು ಸಾಗಿಸಲು ಅನುಕೂಲವಾಗುತ್ತದೆ. ಜತೆಗೆ ಪ್ರಸನ್ನತೆ ಆತ್ಮಾನುಭವ, ಪರಮಶಾಂತಿ, ತೃಪ್ತಿ, ಆಹ್ಲಾದ ಪರಮಾತ್ಮನಿಷ್ಠೆ ಇವು ಸತ್ವಗುಣದ ಲಕ್ಷಣಗಳಾಗಿರುವುದರಿಂದ ಸತ್ವಗುಣ ಹೊಂದಿದ ವ್ಯಕ್ತಿ ಸಮಾಜದಲ್ಲಿ ಸದಾ ಪ್ರಜ್ವಲಿಸಲು ಸಾಧ್ಯವಾಗುತ್ತದೆಯಂತೆ.
ಇನ್ನು ಸತ್ವಗುಣವನ್ನು ನಾವು ಹೊಂದುವುದರಿಂದ ನಮ್ಮಲ್ಲಿರುವ ಇತರೆ ರಜೋ, ತಮಸ್ಸು, ಗುಣಗಳು ದೂರವಾಗುತ್ತವೆ. ಈ ಗುಣಗಳು ಯಾವಾಗ ನಮ್ಮಿಂದ ದೂರವಾಗುತ್ತವೆಯೋ? ತನ್ನಿಂದ ತಾನಾಗೆ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸತ್ವ, ರಜ, ತಮ ಎಂಬ ಗುಣಗಳು ಮನಸ್ಸಿಗೆ ಸಂಬಂಧಪಟ್ಟವು ಆಗಿರುವುದರಿಂದ ರಜೋ ಮತ್ತು ತಮೋ ಗುಣಗಳನ್ನು ಮನಸ್ಸಿನಿಂದ ದೂರಮಾಡ ಬೇಕಾದರೆ ಮನಸ್ಸಿನಲ್ಲಿ ಸತ್ವಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂಬುದು ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯವಾಗಿದೆ. ಇಷ್ಟಕ್ಕೂ ಒಬ್ಬ ವ್ಯಕ್ತಿಗೆ ಸತ್ವಗುಣಗಳು ಅಷ್ಟು ಸುಲಭವಾಗಿ ಬರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ನಮ್ಮಲ್ಲಿ ಸತ್ವಗುಣ ಬೆಳೆಸಿಕೊಳ್ಳುವುದು ಹೇಗೆ?
ಮನುಷ್ಯ ತನ್ನಲ್ಲಿ ಸತ್ವಗುಣ ಬೆಳೆಸಿಕೊಳ್ಳುವುದು ಒಂದು ರೀತಿಯ ಸಾಧನೆಯೇ ಸರಿ. ಇದು ನಮ್ಮಲ್ಲಿ ಬರಬೇಕಾದರೆ ಅಧ್ಯಾತ್ಮಿಕತೆಯ ಕಡೆಗೆ ಒಲವು ಹೊಂದಬೇಕು. ಮತ್ತು ದೇವರ ಕಡೆಗೆ ಶ್ರದ್ಧೆಯನ್ನು ಬೆಳೆಯಿಸಿಕೊಳ್ಳಬೇಕು. ಒಳ್ಳೆಯದರ ಚಿಂತನೆ ಮಾಡಬೇಕು. ಒಳ್ಳೆಯದನ್ನು ಕೇಳುವುದು, ಒಳ್ಳೆಯ ಕೆಲಸ ಮಾಡುವುದನ್ನು ಮುಂದುವರೆಸಿದರೆ ಸತ್ವಗುಣಗಳು ಬೆಳೆಯುತ್ತವೆ.
ಈ ಸತ್ವಗುಣಗಳು ನಮ್ಮಲ್ಲಿ ತುಂಬಿದರೆ ಇತರೆ ದುರ್ಗುಣಗಳಿಗೆ ಅವಕಾಶವಿರುವುದಿಲ್ಲ. ನಮ್ಮಲ್ಲಿ ರಜೋ ಮತ್ತು ತಮೋ ಗುಣಗಳು ಜಾಸ್ತಿಯಾದಾಗ ಸಮಾಜದ ದೃಷ್ಠಿಯಲ್ಲಿ ಕೆಟ್ಟ ವ್ಯಕ್ತಿಯಾಗಿ ಬಿಂಬಿತವಾಗುತ್ತೇವೆ. ವಿಕೃತ ನಡೆ, ನುಡಿ ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆಗ ನಾವು ನಮಗೆ ಗೊತ್ತಿಲ್ಲದೆ ಕೆಟ್ಟ ಕಾರ್ಯಗಳನ್ನು ಮಾಡಿ ಮನೆ ಮತ್ತು ಸಮಾಜಕ್ಕೆ ಭಾರವಾಗುತ್ತೇವೆ. ಇದೆಲ್ಲವನ್ನು ತೊಡೆದು ಹಾಕಬೇಕಾದರೆ ನಾವು ನಮ್ಮಲ್ಲಿ ಸತ್ವ ಗುಣವನ್ನು ಬೆಳೆಸಿಕೊಳ್ಳಬೇಕು.
ಯಾವಾಗ ನಮ್ಮಲ್ಲಿ ಸತ್ವಗುಣ ತುಂಬಿಕೊಳ್ಳುತ್ತದೆಯೋ ಆಗ ಉಳಿದ ತಮೋ ಮತ್ತು ರಜೋ ಗುಣಗಳು ಸದ್ದಿಲ್ಲದೆ ನಾಶವಾಗಿ ಬಿಡುತ್ತವೆ. ಸತ್ವಗುಣ ಸದಾ ಪರಿಶುದ್ಧತೆಯನ್ನು ಬಯಸುತ್ತದೆ. ಆದರೆ ರಜೋ ಗುಣ ಮತ್ತು ತಮೋ ಗುಣವು ಹಾಗಲ್ಲ. ಅದು ಕ್ಷಣಿಕ ಸುಖ ಮತ್ತು ಅಂಧಕಾರದತ್ತವೇ ನಮ್ಮನ್ನು ಆಕರ್ಷಿಸುತ್ತದೆ. ಇದರಿಂದ ನಾವು ಸುಖವಾಗಿರಲು ಸಾಧ್ಯವಿಲ್ಲ.
ಸತ್ವಗುಣ ನಮ್ಮಲ್ಲಿ ಬೆಳೆಯಿಸಿಕೊಂಡರೆ ಇದ್ದಷ್ಟು ದಿನ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸತ್ವ ಗುಣ ನಮ್ಮಲ್ಲಿ ಬೆಳೆಯಬೇಕಾದರೆ ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಸುಲಭ ಉತ್ತರವೆಂದರೆ ನಾವು ಸಜ್ಜನರ ಸಹವಾಸದಲ್ಲಿರಬೇಕು. ಅಷ್ಟೇ ಅಲ್ಲ ಸಾತ್ವಿಕ ವಸ್ತುಗಳನ್ನೇ ಬಯಸಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಏಕಾಂತ ಸ್ಥಳದಲ್ಲಿ ಧ್ಯಾನ ಮಾಡಬೇಕು. ಕರ್ತವ್ಯ ಹಾಗೂ ನಿಸ್ವಾರ್ಥ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.
ರಾಮಕೃಷ್ಣ ಪರಮಹಂಸರು ಹೇಳಿದ್ದೇನು?
ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಪ್ರಕೃತಿಯಿಂದ ಜನನಗೊಂಡ ಗುಣಗಳಾಗಿವೆ. ಮನುಷ್ಯನ ಆತ್ಮದಲ್ಲಿ ಸೇರಿ ದೇಹವನ್ನು ಕಟ್ಟಿಹಾಕಿವೆ. ಅವುಗಳಲ್ಲಿ ಸತ್ವಗುಣವು ಶುದ್ಧವಾಗಿರುವುದರಿಂದ ಪ್ರಕಾಶವೂ ಪಾಪರಹಿತವೂ ಆಗಿದೆ. ಅದು ಸುಖದ ಸಂಗದಿಂದಲೂ, ಜ್ಞಾನದ ಸಂಗದಿಂದಲೂ ಆತ್ಮನನ್ನು ಬಂಧನಕ್ಕೆ ಒಳಪಡಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಇನ್ನು ಶ್ರೀ ರಾಮಕೃಷ್ಣ ಪರಮಹಂಸರು ಪ್ರಕಾರ ಸತ್ವ ರಜಸ್ಸು ತಮಸ್ಸು ಮೂರು ಗುಣಗಳು ದರೋಡೆಕೋರರಂತೆ. ಆದರೆ ಮೂರರಲ್ಲಿ ಪ್ರತ್ಯೇಕ ಗುಣವಿದೆ.
ಇವುಗಳನ್ನು ವಿಶ್ಲೇಷಿಸಿ ಹೇಳುತ್ತಾ ಸತ್ಯವೊಂದನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಆ ಪ್ರಕಾರ ಮೂರು ಗುಣಗಳ ದರೋಡೆಕೋರರು ಸತ್ವಜ್ಞಾನವನ್ನು ಅರಸಿಕೊಂಡು ನಡೆಯುವ ಮನುಷ್ಯನನ್ನು ಜೀವನದ ಹಾದಿಯಲ್ಲೇ ತಡೆದು ದರೋಡೆ ಮಾಡುತ್ತಾರೆ. ತಮಸ್ಸು ಕೊಲ್ಲೋಣ ಎನ್ನುತ್ತದೆ. ರಜಸ್ಸು ಆತನನ್ನು ಜಗತ್ತಿಗೆ ಕಟ್ಟಿಹಾಕುತ್ತದೆ. ಆದರೆ ಸತ್ವ ಬಿಡುಗಡೆ ಮಾಡುತ್ತದೆ. ಸತ್ವದ ರಕ್ಷಣೆಯಿಂದ ಮನುಷ್ಯ ಅಪಾಯದಿಂದ ಪಾರಾಗುತ್ತಾನೆ. ಆದುದರಿಂದ ಸತ್ವಗುಣವನ್ನು ಬೆಳೆಸಿಕೊಳ್ಳಿ ಅದು ನಿಮ್ಮನ್ನು ರಕ್ಷಿಸುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಯೋಚಿಸಿ ನೋಡಿದರೆ ಇದು ನಿಜವೆನಿಸುತ್ತದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications