Get Updates
Get notified of breaking news, exclusive insights, and must-see stories!

ಹತ್ತು ಹಲವು ವಿಶೇಷತೆಗಳ ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್: ಕ್ರಿಸ್‌ಮಸ್‌ಗೆ ಭೇಟಿ ನೀಡಿ

ಭಾವೈಕ್ಯತೆ ಸಂಗಮವಾಗಿ, ಎರಡು ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿ ಹತ್ತು ಹಲವು ವಿಶೇಷತೆಗಳೊಂದಿಗೆ ಎಲ್ಲರ ಗಮನಸೆಳೆಯುತ್ತಿರುವ ಕೊಡಗಿನ ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್. ಕೇವಲ ಚರ್ಚ್ ಆಗಿ ಮಾತ್ರ ಉಳಿಯದೆ ಪ್ರವಾಸಿ ತಾಣವಾಗಿಯೂ ಆಕರ್ಷಿಸುತ್ತದೆ.

ಸಂತ ಅನ್ನಮ್ಮ ಕೊಡಗಿನ ಹೆಮ್ಮೆಯ ಇಗರ್ಜಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚರ್ಚ್ ನ್ನು ಕೊಡಗಿನ ವೀರರಾಜೇಂದ್ರ ಪೇಟೆಯ ರಾಜ ದೊಡ್ಡವೀರರಾಜೇಂದ್ರ ನಿರ್ಮಿಸಿಕೊಟ್ಟಿದ್ದು ಎನ್ನುವುದೇ ವಿಶೇಷ. ಸುಮಾರು 150 ಅಡಿ ಎತ್ತರದ ಭವ್ಯ ಗಾಥಿಕ್ ಶೈಲಿಯ ಗೋಪುರ ಹೊಂದಿದ್ದು ಇಡೀ ನಗರದ ಹೃದಯ ಭಾಗದಲ್ಲಿ ಎದ್ದು ಕಾಣುತ್ತಿದೆ.

ಈ ಚರ್ಚ್‍ ನ್ನು 1791-92ನೇ ಇಸವಿಯ ಮೂರನೇ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ಬಂದ 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರ ಹೊಸದಾಗಿ ನಿರ್ಮಿಸಿದ್ದ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸಲು ವ್ಯವಸ್ಥೆ ಮಾಡಿ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಯಿಸಿ 1792ರ ನವೆಂಬರ್ 10ರಂದು ಸಂತ ಅನ್ನಮ್ಮ ಚರ್ಚ್ ನ್ನು ನಿರ್ಮಿಸಿದರು.

ವೀರರಾಜೇಂದ್ರ ನೀಡಿರುವ ರಡು ದೀಪಕಂಬಗಳು

ವೀರರಾಜೇಂದ್ರ ನೀಡಿರುವ ರಡು ದೀಪಕಂಬಗಳು

ಸಂತ ಅನ್ನಮ್ಮ ಚರ್ಚ್ ಮೇಲ್ನೋಟಕ್ಕೆ ಸುಂದರ ಗೋಪುರದೊಂದಿಗೆ ಆಕರ್ಷಿಸುತ್ತದೆ. ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತುಶಿಲ್ಪದ, ಭವ್ಯ ಗಾಥಿಕ್ ಶೈಲಿಯ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರ, ದೀರ್ಘ ವೃತ್ತಾಕಾರದ ಪ್ರವೇಶ ದ್ವಾರ, 150 ಅಡಿಗಳಷ್ಟು ಎತ್ತರದ ಗೋಪುರ ಅದರ ಮೇಲೆ 6 ಅಡಿ ಎತ್ತರದ ಪಂಚಲೋಹದ ಶಿಲುಬೆಯನ್ನಿಟ್ಟಿರುವುದು ವಿಶೇಷ. ಫ್ರಾನ್ಸ್‌ನ "ಲೂರ್ದ್" ಮಾದರಿಯ ಸುಂದರ ಕೃತ್ರಿಮ ಗವಿ ಹಾಗೂ ಸಾಲ್ವದೋರ್‌ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್‌ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳು ಚರ್ಚ್ ನ ಮತ್ತೊಂದು ಗಮನಾರ್ಹ ವಿಷಯವಾಗಿದೆ.

ಚರ್ಚ್ ಒಳ ಪ್ರವೇಶಿಸಿದರೆ ಭವ್ಯ ಸಭಾಂಗಣ,. ಪಶ್ಚಿಮ ಭಿತ್ತಿ(ಗೋಡೆ)ಯ ಬಳಿ ಸುಂದರ ಬಲಿಪೀಠವಿದ್ದರೆ, ಚರ್ಚ್‌ನ ಸ್ಥಾಪನೆಗೆ ಕಾರಣನಾದ ದೊರೆ ವೀರರಾಜೇಂದ್ರ ಒಡೆಯ ನೀಡಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ್ಚ) 'ವಿ' ಸಂಕೇತದಿಂದ ಕೂಡಿದ್ದು, ಬಲಿಪೀಠದ ಮೇಜಿನ ಮೇಲಿಡಲಾಗಿದೆ. ಮೇಜಿನ ಹಿಂಭಾಗದಲ್ಲಿ ಪರಮ ಪ್ರಸಾದದ ಪೆಟ್ಟಿಗೆಯಿದ್ದು, ಪೆಟ್ಟಿಗೆಯ ಮೇಲೆ ಏಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ. ಚರ್ಚ್‌ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ 'ಪಿಯಾತ್' ಶಿಲ್ಪದ ಮಾದರಿಯ 'ಪಿಯಾತ್' ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು.

ಏಸುವಿನ ಶಿಲುಬೆಗೆ ಏರಿಸುವ ಹಾದಿ

ಏಸುವಿನ ಶಿಲುಬೆಗೆ ಏರಿಸುವ ಹಾದಿ

ಮೇರಿ ತಾಯಿಯ ನಾಭಿ, ಏಸುವಿನ ನಾಭಿಗೆ ಸನಿಹವಿರುವಂತಹ ಭಾವ, ತಾಯಿಯ ಹೊಕ್ಕಳ ಬಳ್ಳಿಯ ಆಜನ್ಮ ಸಂಬಂಧದ ಸಂಕೇತದಂತೆ ತೋರುವ ಕರುಣಾರಸದ ಚಿತ್ರ ಇದಾಗಿದೆ. 'ಪಿಯಾತ್' ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿಯ ಮುಖ ತೋರುವ ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ ಸಂತ ಸಭಾಸ್ಟಿಯನ್ನನ ಸ್ಮಾರಕ ಶಿಲ್ಪ ಕಂಡು ಬರುತ್ತದೆ. ಏಸುವಿನ ತೆರೆದ ಹೃದಯ ಸ್ಥಾನ ಶಿಲ್ಪದ ಬಲಬದಿಯಲ್ಲಿದ್ದು, ಪಿಯಾತ್‌ಗೂಡಿನ ಬುಡದಲ್ಲಿ INRI-Jesus Nezererus Rexiudaorum ಎಂಬ ಬರವಣಿಗೆ ಕಂಡು ಬರುತ್ತದೆ. ಇದು ನಜರೇತಿನ ಯೇಸು ಜ್ಯೂದರ ಅರಸ ಎಂಬ ಲ್ಯಾಟಿನ್ ಉಕ್ತಿಯಾಗಿದೆ. ಆಸನಗಳಿರುವ ಅಂಕಣವು ಬಲಿಪೀಠದ ಬಲಬದಿಗೆ ಇದ್ದು, ಬಾಲಕ ಏಸುವಿನ ಶೋಭಾಯ ಮುಖದ ಶಿಲ್ಪವು ಎಲ್ಲರ ಆಕರ್ಷಿಸುತ್ತದೆ.

ಇದೆಲ್ಲದರ ನಡುವೆ ಏಸುವಿನ ಶಿಲುಬೆಗೆ ಏರಿಸುವ ಹಾದಿಯನ್ನು ಸಭಾಂಗಣದ ಗೋಡೆ ಮತ್ತು ಕಂಬಗಳ ನಡುವೆ 14 ಕಾಷ್ಠ ಶಿಲ್ಪಗಳ ಮೂಲಕ ತೋರಿಸಲಾಗಿದೆ. ಈ ಕಾಷ್ಠ ಶಿಲ್ಪದ ಬಗ್ಗೆ ವಿವರಣೆಯನ್ನು ನೀಡುವುದಾದರೆ ಒಂದನೆಯ ಶಿಲ್ಪದಲ್ಲಿ ಏಸುವಿನ ಮರಣಕ್ಕೆ ನಿರ್ಣಯದಲ್ಲಿ ಕ್ರೌರ್ಯ, ದೌರ್ಜನ್ಯದ ಪ್ರತೀಕವಾದ ಭಾವ ಕಂಡು ಬಂದರೆ, ಎರಡನೆಯ ಶಿಲ್ಪದಲ್ಲಿ ಬದುಕಿನ ಯಾತನೆಗಳನ್ನು, ಶಿಲುಬೆಯನ್ನು ಹತ್ತಲೇಳಿಸುವಲ್ಲಿ ಸಮಚಿತ್ತದಿಂದಿರುವ ಏಸುವಿನ ಮುಖವನ್ನು ಕಾಣಬಹುದು. ಮೂರನೆಯದು ಮೊದಲ ಬಾರಿಗೆ ಭಾರವಾದ ಶಿಲುಬೆಯೊಡನೆ ಬೋರಲಾಗಿ ಬೀಳುತ್ತಿರುವ ಏಸುವಿನ ನೋವನ್ನು ಸಹಿಸುವ ದೃಢಚಿತ್ತ ಮುಖವನ್ನು ಹೊತ್ತ ಶಿಲ್ಪವಾಗಿದೆ.

ದೇವಮಾನವನಾಗುವ ತೇಜೋ ಮುಖ

ದೇವಮಾನವನಾಗುವ ತೇಜೋ ಮುಖ

ಏಸುವು ಶಿಲುಬೆಯನ್ನು ಹೊತ್ತು ಹೋಗುವಲ್ಲಿ ತಾಯಿಯ ದರ್ಶನ ಮತ್ತು ಆಕೆಯ ಅವರ್ಣನೀಯ ಅಳಲನ್ನು ಬಿಂಬಿಸುವ ಶಿಲ್ಪವು ನಾಲ್ಕನೆಯದಾಗಿದೆ. ಐದನೆಯ ಶಿಲ್ಪವು 'ಸಿರೇನ್ಯನಾದಸಿ ಮೋನ' ಏಸುವಿಗೆ ಶಿಲುಬೆ ಹೊರಲು ಸಹಾಯಕ್ಕೆ ಬರುವುದನ್ನು ತೋರಿಸುತ್ತದೆ. ಇನ್ನು ವೆರೋನಿಕಮ್ಮ ಎಂಬ ವನಿತೆ ಏಸುವಿನ ಬಳಲಿಕೆ ಕಂಡು ಮುಖವೊರೆಸುವುದನ್ನು ಆರನೆಯ ಶಿಲ್ಪದಲ್ಲಿದೆ. ಏಳನೆಯ ಶಿಲ್ಪದಲ್ಲಿ ಎರಡನೇ ಬಾರಿಗೆ ಶಿಲುಬೆಯ ಭಾರದಿಂದ ಬಳಲಿ ಬೀಳುವ ಮಾನವನ ಅಂತಃಕರಣ ಮಿಡಿಯುವ ಏಸುವಿನ ಭಂಗಿಯಾಗಿದೆ. ಎಂಟನೆಯ ಶಿಲ್ಪದಲ್ಲಿ ಏಸುವನ್ನು ಹಿಂಬಾಲಿಸಿ ಬಂದ ಪುಣ್ಯ ಸ್ತ್ರೀಯರಿಗೆ ಏಸುವು ನೀಡುತ್ತಿರುವ ಸಾಂತ್ವನ ಕಾಣುತ್ತದೆ. ಏಸುವು ಮೂರನೇ ಬಾರಿ ಶಿಲುಬೆಗೆ ಸಿಲುಕಿ ಭಾರದಿಂದ ಬಳಲಿ ಬೋರಲಾಗಿ ಬೀಳುತ್ತಿದ್ದರೂ, ಹೊಡೆಯುತ್ತಿರುವುದನ್ನು ಒಂಭತ್ತನೆಯ ಶಿಲ್ಪದಲ್ಲಿದೆ.

ಹತ್ತನೆಯದರಲ್ಲಿ ಕಠಿಣ ಮನಸ್ಸಿನ ಸೈನಿಕರು ಏಸುವಿನ ವಸ್ತ್ರವನ್ನು ಸೆಳೆದು ಹರಾಜು ಹಾಕುವುದನ್ನು ಚಿತ್ರಿಸಲಾಗಿದ್ದರೆ, ಹನ್ನೊಂದನೆಯದರಲ್ಲಿ ಏಸುವನ್ನು ಶಿಲುಬೆಗೆ ಜಡಿದ ಚಿತ್ರವಾಗಿ ಸಾಂದರ್ಭಿಕವಾಗಿ ಕೆಂಪು ವರ್ಣಾಚ್ಚಾದಿತವಾಗಿದೆ. ಮರಣವೇ ಮಹಾನವಮಿ ಎನ್ನುವಂತೆ ಏಸುವಿನ ಪ್ರಾಣ ತ್ಯಾಗದ ಚಿತ್ರ ಹನ್ನೆರಡನೆಯದರಲ್ಲಿದೆ. 'ಪಿಯಾತ್' ಭಂಗಿಯ ಶಿಲ್ಪವು ಹದಿಮೂರನೆಯದರಲ್ಲಿದೆ. ಕೊನೆಯ ಶಿಲ್ಪದಲ್ಲಿ ದೇವಮಾನವನಾಗುವ ತೇಜೋ ಮುಖದ ಏಸುವಿನ 'ತಿರುಶರೀರ'ದ ಚಿತ್ರಣವಿದೆ.

 ಪ್ರವಾಸಿಗರನ್ನು ಆಕರ್ಷಿಸುವ ಅನ್ನಮ್ಮ ಚರ್ಚ್

ಪ್ರವಾಸಿಗರನ್ನು ಆಕರ್ಷಿಸುವ ಅನ್ನಮ್ಮ ಚರ್ಚ್

ಕಾಷ್ಠ ಶಿಲ್ಪದ ಮೂಲಕ ಸಂಕಟದಿಂದ ಶಾಂತಿಯ ಗುರಿಯತ್ತ ಸಾಗುವ ಮನುಕುಲದ ಕತೆಯನ್ನು ನಿರ್ಮಿಸಿರುವುದು ಗುಲಿಯನ್ ಪಾದ್ರಿ ಎಂದು ಹೇಳಲಾಗಿದೆ. ಇವುಗಳ ಪಕ್ಕದಲ್ಲಿಯೇ ಬಾಲ ಏಸುವು ತನ್ನ ಅಜ್ಜಿ ಅನ್ನಮ್ಮ ಬಳಿ ನಿಂತು ಲಾಲಿತ್ಯ ಸವಿಯುವ ಶಿಲ್ಪವು ಪ್ರತ್ಯೇಕ ಗೂಡಿನಲ್ಲಿ ಕಂಡು ಬರುತ್ತದೆ. ಒಟ್ಟಾರೆ ರಾಜ್ಯದಲ್ಲಿರುವ ನೂರಾರು ಚರ್ಚ್ ಗಳ ನಡುವೆ ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್ ವಿಶಿಷ್ಟ ಮತ್ತು ವಿಭಿನ್ನವಾಗಿ ಗಮನಸೆಳೆಯುವುದಂತು ನಿಜ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+