ಚುನಾವಣೆ ಗೆಲ್ಲಲು ಯುಪಿ ಮಾಡೆಲ್ ಹಿಡಿದ ಕರ್ನಾಟಕ ಬಿಜೆಪಿ

ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಣೋತ್ಸಾಹ ಶುರುವಾಗಿದೆ. ಕಾಂಗ್ರೆಸ್ 'ಸಿದ್ದರಾಮೋತ್ಸವ' ಮೂಲಕ ಹೊಸ ರಣತಂತ್ರದೊಂದಿಗೆ ಕಳೆಗಟ್ಟಿದೆ. ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ ಎಂಬುದು ಸರಕಾರದ ಇತ್ತೀಚಿನ ಕೆಲ ನಿರ್ಧಾರಗಳು ಹೇಳುತ್ತವೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ಮಾಡಿಸಿದ್ದರು. ಅದರ ವರದಿ ಬಿಡುಗಡೆ ಆಗದೇ ಹೋದರೂ ಜಾತಿ ಸಮೀಕ್ಷೆಯ ಅಂಶಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸ ಆಯಾಮ ಒದಗಿಸಿರುವುದು ಹೌದು. ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಒಂದು ಹೆಜ್ಜೆ ಮುಂದು. 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಜಾತಿ ಸಮುದಾಯಗಳನ್ನು ಅಳೆದು ತೂಗಿ ಲೆಕ್ಕ ಹಾಕಿ ಒಟ್ಟಿಗೆ ಕರೆದೊಯ್ಯಲು ಸಿದ್ದರಾಮೋತ್ಸವವನ್ನು ಕಾಂಗ್ರೆಸ್ ನಡೆಸುತ್ತಿದೆ.

ಅತ್ತ, ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಮತ್ತು ಧರ್ಮ ಯಾವಾಗಲೂ ಪ್ರಮುಖ ಟ್ರಂಪ್ ಕಾರ್ಡ್‌ಗಳಾಗಿದ್ದುದು. ಯಡಿಯೂರಪ್ಪ ಮೂಲಕ ಲಿಂಗಾಯತರ ಅರ್ಧಕ್ಕಿಂತ ಹೆಚ್ಚು ಮತಗಳು ಬಿಜೆಪಿಗೆ ಗಟ್ಟಿಯಾಗಿದ್ದವು. ಈಗ ಯಡಿಯೂರಪ್ಪ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರೂ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆ ಈಗಲೂ ಲಿಂಗಾಯತ ವಲಯದಲ್ಲಿ ಇದೆ.

ಇನ್ನು, ಇತ್ತೀಚೆಗೆ ಸಂಭವಿಸಿದ ಹಿಂದೂ ಕಾರ್ಯಕರ್ತರ ಹತ್ಯೆ ಘಟನೆಗಳು ಕೆಲ ಹಿಂದೂ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿವೆ. ಹಿಂದುತ್ವಕ್ಕೆ ಸಾಂಪ್ರದಾಯಿಕವಾಗಿ ಬೆಂಬಲಿಸುತ್ತಿದ್ದ ಜನರು ಬಿಜೆಪಿಯಿಂದ ವಿಮುಖರಾದರೂ ಅಚ್ಚರಿ ಇಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಇನ್ನೇನಾದರೂ ವಿಶೇಷ ಕಾರ್ಯತಂತ್ರದ ಅವಶ್ಯಕತೆ ಇದೆ. ಅದೇ ಈಗ ಯುಪಿ ಮಾಡೆಲ್ ಅನ್ನು ರಾಜ್ಯ ಬಿಜೆಪಿ ಅನುಸರಿಸುತ್ತಿದೆ.

ಏನಿದು ಯುಪಿ ಮಾಡೆಲ್?

ಏನಿದು ಯುಪಿ ಮಾಡೆಲ್?

ಉತ್ತರಪ್ರದೇಶದಲ್ಲಿ ಯೋಗಿ ಅದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿತು. ಹೇಳಿಕೇಳಿ ಉತ್ತರಪ್ರದೇಶ ತೀವ್ರತರವಾದ ಜಾತಿಸಂಕೀರ್ಣತೆಯನ್ನು ಹೊಂದಿರುವ ರಾಜ್ಯ. ಜಾತಿ ವ್ಯವಸ್ಥೆ ಬಹಳ ಆಳವಾಗಿ ಹೊಕ್ಕಿದೆ. ನಮ್ಮಲ್ಲಿ ಬ್ರಾಹ್ಮಣ ಮತ್ತು ಲಿಂಗಾಯತರು ಬಿಜೆಪಿಗೆ ಹೇಗೆ ಹೆಚ್ಚು ಒಲವು ತೋರುತ್ತಾ ಬಂದಿದ್ದಾರೋ ಹಾಗೇ ಉತ್ತರಪ್ರದೇಶದಲ್ಲಿ ಪ್ರಬಲ ಯಾದವ ಸಮುದಾಯ ಸಮಾಜವಾದಿ ಪಕ್ಷದ ಪರ ಇದೆ.

ಅದನ್ನು ಮೀರಿ ಮತಗಳನ್ನು ಗೆಲ್ಲುವುದು ಬಿಜೆಪಿಗೆ ಇದ್ದ ಪ್ರಮುಖ ಸವಾಲು. ಅದಕ್ಕಾಗಿ ಉ.ಪ್ರ. ಬಿಜೆಪಿ ವಿಭಿನ್ನ ಕಾರ್ಯತಂತ್ರ ರೂಪಿಸಿತು. ಯಾದವ ಇತ್ಯಾದಿ ಪ್ರಬಲ ಸಮುದಾಯಗಳನ್ನು ಓಲೈಸುವ ಬದಲು ಇತರ ಸಣ್ಣಪುಟ್ಟ ಸಮುದಾಯಗಳತ್ತ ಬಿಜೆಪಿ ಗಮನ ಹರಿಸಿತು. ವೋಟ್ ಬ್ಯಾಂಕ್ ಅನಿಸದ ಈ ಸಮುದಾಯಗಳನ್ನು ವಿವಿಧ ರಾಜಕೀಯ ಪಕ್ಷಗಳು ಅಲಕ್ಷಿಸುತ್ತಾ ಬಂದಿದ್ದವು. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಈ ಸಮುದಾಯಗಳಿಗೆ ವಿಶೇಷ ಯೋಜನೆಗಳನ್ನು ನೀಡಿ ಅವರನ್ನು ಆಕರ್ಷಿಸುವ ಕೆಲಸ ಮಾಡಿತು. ಪರಿಣಾಮವಾಗಿ, ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಮೀರಿ ಜಯ ಸಾಧಿಸಿತು.

ರಾಜ್ಯದಲ್ಲೂ ಯುಪಿ ತಂತ್ರ

ರಾಜ್ಯದಲ್ಲೂ ಯುಪಿ ತಂತ್ರ

ಉತ್ತರಪ್ರದೇಶದಲ್ಲಿ ಬಿಜೆಪಿ ಅನುಸರಿಸಿದ ತಂತ್ರವನ್ನೇ ಕರ್ನಾಟಕದಲ್ಲೂ ಅಳವಡಿಸುವ ಪ್ರಯತ್ನ ನಡೆದಿರುವುದು ಮೇಲ್ನೋಟಕ್ಕೆ ತೋರುತ್ತಿದೆ. ಇತ್ತೀಚಿನ ಕೆಲ ದಿನಗಳಿಂದ ಬಿಜೆಪಿ ಘೋಷಿಸಿರುವ ಕೆಲ ಯೋಜನೆಗಳು ಸುಳಿವು ನೀಡುತ್ತವೆ. ಹರಿದುಹಂಚಿ ಹೋಗಿರುವ ಒಬಿಸಿ ಸಮುದಾಯಗಳತ್ತ ಬಿಜೆಪಿ ಗಮನ ಹರಿಸಿದೆ.

ಬ್ರಾಹ್ಮಣ ಮತಗಳು ಬಿಜೆಪಿಗೆ ಈಗಲೂ ಗಟ್ಟಿಯೇ. ಲಿಂಗಾಯತರನ್ನು ಯಡಿಯೂರಪ್ಪ ಮೂಲಕ ಬಿಜೆಪಿ ಹೇಗಾದರೂ ಒಲಿಸಿಕೊಳ್ಳುತ್ತದೆ. ಎಡಗೈ ದಲಿತ ಸಮುದಾಯದಲ್ಲಿ ಬೇರೆ ಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ಇದೆ. ಈಗ ಬಿಜೆಪಿಗೆ ಸಮಸ್ಯೆಯಾಗಿರುವುದು ಒಬಿಸಿ ಮತ್ತು ಒಕ್ಕಲಿಗರದ್ದು.

ಒಕ್ಕಲಿಗರ ಹೆಚ್ಚಿನ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಹೋಗುತ್ತವೆ. ಈ ಕೊರತೆ ನೀಗಿಸಲು ಬಿಜೆಪಿ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಆ ಪ್ರಬಲ ಸಮುದಾಯವನ್ನು ಇಡಿಯಾಗಿ ಓಲೈಸಲು ಸದ್ಯಕ್ಕೆ ಬಿಜೆಪಿಗೆ ಅಸಾಧ್ಯದ ಮಾತು. ಹೀಗಾಗಿ, ಬಿಜೆಪಿಯ ಕಣ್ಣು ಒಬಿಸಿ ಮೇಲೆ ನೆಟ್ಟಿದೆ.

ಕುರುಬರನ್ನು ಬಿಟ್ಟು

ಕುರುಬರನ್ನು ಬಿಟ್ಟು

ಕರ್ನಾಟಕದಲ್ಲಿ ಒಬಿಸಿ ಗುಂಪಿಗೆ ಅನೇಕ ಸಮುಧಾಯಗಳು ಬರುತ್ತವೆ. ಸುಮಾರು ೨೦೦ ಜಾತಿಗಳು ಒಬಿಸಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾದವು ವಾಲ್ಮೀಕಿ, ಕುರುಬ, ತಿಗಳ, ಈಡಿಗ, ಉಪ್ಪಾರ ಇತ್ಯಾದಿ ಸಮುದಾಯಗಳು. ಒಬಿಸಿ ಸಮುದಾಯಗಳು ರಾಜ್ಯದಲ್ಲಿ ಶೇ. 30ಕ್ಕಿಂತ ಹೆಚ್ಚಿವೆ. ಒಕ್ಕಲಿಗ, ಲಿಂಗಾಯತ ಸಮುದಾಯಗಳಂತೆ ಒಬಿಸಿಯಲ್ಲಿ ಐಕ್ಯತೆ ಕಡಿಮೆ. ಒಬಿಸಿ ಎನ್ನುವುದು ಜಾತಿಯ ವರ್ಗೀಕರಣವಾಗಿ ಮಾತ್ರ ಉಳಿದಿದೆ. ಹೀಗಾಗಿ, ಯಾವ ಪಕ್ಷಕ್ಕೂ ಅದು ಮತ ಬ್ಯಾಂಕ್ ಆಗಿ ಪರಿಗಣಿತವಾಗಿಲ್ಲ.

ಒಬಿಸಿಯಲ್ಲಿ ಕುರುಬ ಸಮುದಾಯ ಮಾತ್ರ ರಾಜಕೀಯವಾಗಿ ನಿರ್ಧಾರಿತ ಸ್ಥಿತಿಯಲ್ಲಿದ್ದಾರೆ. ಒಕ್ಕಲಿಗರಿಗೆ ದೇವೇಗೌಡರು ಡೀಫಾಲ್ಟ್ ನಾಯಕರಾಗಿರುವಂತೆ ಕುರುಬರಿಗೆ ಸಿದ್ದರಾಮಯ್ಯರೇ ಮೇರು. ಹೀಗಾಗಿ, ಶೇ. 90ಕ್ಕಿಂತ ಹೆಚ್ಚು ಕುರುಬರ ಮತಗಳು ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್‌ಗೆ ಹೋಗುತ್ತವೆ ಎಂಬುದು ತಜ್ಞರ ಲೆಕ್ಕಾಚಾರ.

ಒಬಿಸಿಯಲ್ಲಿ ಕುರುಬರ ಸಂಖ್ಯೆ ಶೇ. 8ಕ್ಕಿಂತ ಹೆಚ್ಚು ಇದೆ. ಇವರನ್ನು ಬಿಟ್ಟು ಇತರ ನೂರಕ್ಕೂ ಹೆಚ್ಚು ಒಬಿಸಿ ಸಮುದಾಯಗಳನ್ನು ಓಲೈಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್‌ಗೆ ನಿಷ್ಠವಾಗಿಲ್ಲದ ಒಬಿಸಿ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಯ ಗುರಿ.

ಬಿಜೆಪಿ ಘೋಷಿಸಿದ ಯೋಜನೆಗಳು

ಬಿಜೆಪಿ ಘೋಷಿಸಿದ ಯೋಜನೆಗಳು

* ತುಮಕೂರು ವಿವಿಯಲ್ಲಿ ಚೆನ್ನಿಗರಾಯಸ್ವಾಮಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ
* ತಿಗಳರ ಅಗ್ನಿ ಬನ್ನಿರಾಯಸ್ವಾಮಿಯ ಜಯಂತಿ ಆಚರಣೆ
* ತಿಗಳ, ಮಾಲಿ, ಮಾಲಗಾರ, ಕಿಂಬರ ಹಾಗು ಇತರ ಒಬಿಸಿ ಸಮುದಾಯಗಳ ಕಲ್ಯಾಣಕ್ಕಾಗಿ ೪೦೦ ಕೋಟಿ ರೂ ಎತ್ತಿಡಲಾಗಿದೆ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಘಟಕ ರಚಿಸಲಾಗುತ್ತಿದೆ. ಇದು ಈ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಗಮನ ವಹಿಸಲಿದೆ.
* ಒಬಿಸಿ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದಲ್ಲಿ ೪.೪೫ ಕೋಟಿ ರೂ ವೆಚ್ಚದಲ್ಲಿ ಹಾಸ್ಟೆಲ್‌ಗಳನ್ನು ನಿರ್ಮಿಸುವ ಯೋಜನೆ ಇದೆ.

ಇದರ ಜೊತೆಗೆ ಪ್ರತೀ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ. ಪ್ರಾದೇಶಿಕವಾರು ಕಾರ್ಯಕ್ರಮಗಳನ್ನು ಸರಕಾರ ಮಾಡುತ್ತಿದೆ. ಕಲ್ಯಾಣ ಕರ್ಹಾಟಕದಲ್ಲಿ ಸಿರಧಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದಾಗಿ ಸರಕಾರ ಹೇಳಿದೆ. ಏಮ್ಸ್ ಆಸ್ಪತ್ರೆಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿರುವುದಾಗಿ ಸಿಎಂ ಹೇಳಿದ್ದಾರೆ. ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೆ ವಿದ್ಯಾಸಿರಿ, ಕ್ರೀಡಾಪಟುಗಳಿಗೆ ಶೇ. 2 ಉದ್ಯೋಗ ಮೀಸಲಾತಿ, ಸಂಗೊಳ್ಳಿ ರಾಯಣ್ಣ ಮಿಲಿಟರಿ ಶಾಲೆ ಇತ್ಯಾದಿ ಹತ್ತು ಹಲವು ಯೋಜನೆಗಳನ್ನು ಸರಕಾರ ಹಾಕಿಕೊಂಡಿದೆ.

ಸರ್ವಸಮುದಾಯಗಳ ಏಳ್ಗೆ

ಸರ್ವಸಮುದಾಯಗಳ ಏಳ್ಗೆ

"ನೀವು ರಾಜಕೀಯಕ್ಕೆ ಬಂದು ಸಮುದಾಯದ ಏಳ್ಗೆ ಮಾಡಬೇಕೆಂದಿಲ್ಲ. ನಿಮ್ಮ ಸಮುದಾಯವನ್ನು ಬಲಪಡಿಸುವ ಜನರಿಗೆ ನೀವು ಬೆಂಬಲ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮಾನ ಪಾತ್ರ ಇದೆ, ಸಮಾನ ಅವಕಾಶಗಳಿವೆ. ಸರ್ವ ಸಮುದಾಯಗಳ ಏಳ್ಗೆಗಾಗಿ ಯಾಕೆ ಪ್ರಯತ್ನಗಳಾಗಿಲ್ಲ ಎಂದು ಯೋಚಿಸುವ ಸಮಯ ಬಂದಿದೆ" ಎಂದು ನಾಲ್ಕೈದು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಬಿಜೆಪಿ ವಿವಿಧ ಸಮುದಾಯಗಳತ್ತ ಗಮನ ಹರಿಸುತ್ತಿರುವುದು ಈ ಎಲ್ಲಾ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ. ಇದು ಆಡಳಿತವಿರೋಧಿ ಅಲೆ ಮತ್ತು ಸಿದ್ದರಾಮಯ್ಯ ಪರ ಅಲೆಯನ್ನು ಎದುರಿಸಿ ಬಿಜೆಪಿಗೆ ಸತತ ಎರಡನೇ ಬಾರಿ ಅಧಿಕಾರ ತಂದುಕೊಡುತ್ತದಾ ಎಂಬ ಕುತೂಹಲವಂತೂ ಇದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+