ಫ್ಲೋರ್ ಮೇಲೆ ನಾಯಿಗಳಂತೆ ತೆವಳಿ, ನಾಣ್ಯ ನೆಕ್ಕಿಸಿದ ಕಂಪನಿ: ಟಾರ್ಗೆಟ್ ರೀಚ್ ಆಗದ್ದಕ್ಕೆ ನೌಕರರಿಗೆ ವಿಕೃತ ಶಿಕ್ಷೆ
ಕಂಪನಿಗಳು ತನ್ನ ಉದ್ಯೋಗಿಗಳಿಗೆ ತಿಂಗಳಿಗೆ ಇಷ್ಟು ಟಾರ್ಗೆಟ್ ನೀಡುತ್ತವೆ. ಅದನ್ನು ರೀಚ್ ಮಾಡಲು ಉದ್ಯೋಗಿಗಳನ್ನು ಹಗಲಿರುಳೆನ್ನದೆ ಕೆಲಸ ಮಾಡುತ್ತಾರೆ. ಟಾರ್ಗೆಟ್ ಹೆಸರಿನಲ್ಲಿ ಉದ್ಯೋಗಿಗಳಿಗೆ ಟಾರ್ಚರ್ ಮಾಡುವ ಕಂಪನಿಗಳು ಕೂಡ ಇವೆ. ಮನುಷ್ಯರನ್ನು ಯಂತ್ರಗಳಂತೆ ನಡೆಸಿಕೊಳ್ಳುವ ಈ ಕಾಲದಲ್ಲಿ ಮಾನವೀಯತೆ ಎನ್ನುವುದು ಮರೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ವೈರಲ್ ಆಗಿದೆ. ಕಂಪನಿ ನೀಡಿರುವ ಟಾರ್ಗೆಟ್ ಮುಗಿಸಲಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿಗೆ ಘೋರ ಶಿಕ್ಷೆ ನೀಡುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ.
ಕೇರಳದ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯು ತನ್ನ ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳನ್ನು ಕೀಳಾಗಿ ನಡೆಸಿಕೊಂಡ ಆರೋಪ ಕೇಳಿಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಿಬ್ಬಂದಿಯನ್ನು ಸರಪಳಿಯಿಂದ ಕಟ್ಟಿದ ನಾಯಿಗಳಂತೆ ಮೊಣಕಾಲುಗಳ ಮೇಲೆ ನಡೆಯುವಂತೆ ಹಾಗೂ ನೆಲದಿಂದ ನಾಣ್ಯಗಳನ್ನು ನೆಕ್ಕುವಂತೆ ಶಿಕ್ಷೆ ಕೊಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.

ವ್ಯಕ್ತಿಯೊಬ್ಬರ ಕತ್ತಿಗೆ ನಾಯಿಯಂತೆ ಹಗ್ಗ ಹಾಕಿ, ನೆಲದ ಮೇಲೆ ಮೊಣಕಾಲುಗಳ ಮೇಲೆ ತೆವಳುವಂತೆ ಪೀಡಿಸುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿದೆ. ಈ ವಿಡಿಯೋ ಮಾಧ್ಯಮಗಳಲ್ಲೂ ಪ್ರಸಾರವಾಗಿದ್ದು, ಇದನ್ನ ಕಂಡ ಕೇರಳ ರಾಜ್ಯ ಕಾರ್ಮಿಕ ಇಲಾಖೆಯು ಕೆಲಸದ ಸ್ಥಳದಲ್ಲಿ ನಡೆದ ಅಮಾನವೀಯ ಕಿರುಕುಳದ ಬಗ್ಗೆ ತನಿಖೆಗೆ ಆದೇಶಿಸಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ, ರಾಜ್ಯ ಕಾರ್ಮಿಕ ಸಚಿವ ವಿ.ಶಿವನ್‌ಕುಟ್ಟಿ ಇದರ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದಾರೆ.
ಟಾರ್ಗೆಟ್ ರೀಚ್ ಆಗದ ಸಿಬ್ಬಂದಿಗೆ ಸಂಸ್ಥೆಯ ಆಡಳಿತ ಮಂಡಳಿಯು ಈ ಶಿಕ್ಷೆಗಳನ್ನು ವಿಧಿಸುತ್ತದೆ ಎಂದು ಕೆಲವು ಉದ್ಯೋಗಿಗಳು ಹೇಳಿಕೆ ನೀಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆಯು ಕೇರಳದ ಕಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಗೆ ಸಂಬಂಧಿಸಿದ್ದು, ಈ ಕೃತ್ಯವು ಪೆರುಂಬವೂರ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಕಂಪನಿ ಮಾಲೀಕರು ಈ ಆರೋಪಗಳನ್ನು ನಿರಾಕರಿಸಿದ್ದು, ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೇರಳದಂತಹ ರಾಜ್ಯದಲ್ಲಿ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇದೊಂದು ಆಘಾತಕಾರಿ ಸಂಗತಿ ಎಂದು ಕಾರ್ಮಿಕ ಸಚಿವ ಶಿವನ್‌ಕುಟ್ಟಿ ಹೇಳಿದ್ದಾರೆ. ಈ ಘಟನೆಯ ತನಿಖೆಗೆ ನಾನು ಆದೇಶಿಸಿದ್ದೇನೆ. ತನಿಖೆ ನಡೆಸಿದ ನಂತರ ಘಟನೆಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಹೈಕೋರ್ಟ್ ವಕೀಲ ಕುಲತ್ತೂರ್ ಜೈಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಕುರಿತು ಪ್ರಕರಣ ದಾಖಲಿಸಿದೆ. ಬಳಿಕ ಕೇರಳ ರಾಜ್ಯ ಯುವ ಆಯೋಗವು ಮಧ್ಯಪ್ರವೇಶಿಸಿ, ಈ ಕಿರುಕುಳ ಘಟನೆಯ ಬಗ್ಗೆ ತನ್ನದೇ ಆದ ಪ್ರಕರಣವನ್ನು ದಾಖಲಿಸಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ವರದಿ ಸಲ್ಲಿಸುವಂತೆ ಸಮಿತಿಯು ನಿರ್ದೇಶಿಸಿದೆ.












Click it and Unblock the Notifications