Sankey Tank: ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಿದ್ಧತೆ, ಯಾವಾಗ?
ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾದ ಸ್ಯಾಂಕಿ ಕೆರೆಯು ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಬೆಂಗಳೂರಿಗರಿಗೆ ಈ ಸ್ಟಾಟ್ ಸಖತ್ ಹಾಟ್ ಫೇವರೇಟ್. ಇಲ್ಲಿ ಪ್ರತಿ ದಿನವೂ ವಾಕಿಂಗ್ ಜಾಗಿಂಗ್ ಮಾಡುತ್ತಾ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಇದೀಗ ರಾಜ್ಯ ಸರ್ಕಾರದ ವತಿಯಿಂದ ಈ ಸ್ಯಾಂಕಿ ಕೆರೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರಿಗೆ ಕುಡಿಯುವ ನೀರಾಗಿ ಜೀವಜಲವಾಗಿರುವ ಕಾವೇರಿಗೆ ಗೌರವ ಸೂಚಿಸಲು "ಕಾವೇರಿ ಆರತಿ" ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಬೆಂಗಳೂರಿನ ಕೆರೆಯಲ್ಲಿ ಆರತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಸದ್ಯ ಬೆಂಗಳೂರಿನ ಬಹುತೇಕ ಜನರಿಗೆ ಕಾವೇರಿ ನೀರು ಜೀವಜಲವಾಗಿದೆ. ಈ ಹಿನ್ನೆಲೆ ಜನರ ದಾಹ ನೀಗಿಸುತ್ತಿರುವ ಈ ಕಾವೇರಿ ನದಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಇದೇ ಮಾರ್ಚ್ 21ರಂದು ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುಂದಾಗಿದೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗಂಗಾರತಿಯು ಖ್ಯಾತಿ ಗಳಿಸಿದೆ. ಇದೇ ಮಾದರಿಯಲ್ಲೇ ಬೆಂಗಳೂರಿನ ಮಲ್ಲೇಶ್ವರ ಬಳಿ ಇರುವ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಗೆ ಪ್ಲ್ಯಾನ್ ಮಾಡಿಕೊಂಡಿದೆ. ವಿಶೇಷವೆಂದರೆ ಈ ಆರತಿ ಕಾರ್ಯಕ್ರಮಕ್ಕೂ ಉತ್ತರ ಪ್ರದೇಶದಿಂದಲೇ ಪುರೋಹಿತರನ್ನು ಕರೆಸಲು ಸರ್ಕಾರ ತೀರ್ಮಾನಿಸಿದೆ.
ಕಾವೇರಿ ನದಿಯ ಉಪನದಿ ಎಂದು ಕರೆಯಲ್ಪಡುವ ವೃಷಭಾವತಿ ನದಿಯ ಉಗಮ ಸ್ಥಾನವೂ ಇದೇ ಸ್ಯಾಂಕಿ ಕೆರೆ. ಈ ಕಾರಣದಿಂದಲೂ ಕಾವೇರಿ ಆರತಿಗೆ ಇದೇ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ವೃಷಭಾವತಿ ಉಗಮದ ಮೂಲದ ಬಗ್ಗೆ ಈಗಲೇ ಕೆಲವರು ಏನೇನೋ ಹೇಳುತ್ತಾರೆ. ಕೆಲ ಇತಿಹಾಸಕಾರರು ಬಸವನಗುಡಿಯ ನಂದಿ ಪಾದದಲ್ಲಿ ವೃಷಭಾವತಿ ನದಿ ಹುಟ್ಟುತ್ತದೆ ಎನ್ನುತ್ತಾರೆ. ಇನ್ನೂ ಕೆಲವರು ಸ್ಯಾಂಕಿ ಕೆರೆಯನ್ನು ಉಗಮ ಸ್ಥಾನ ಅಂತಾರೆ.

ಆದರೆ ಸ್ಯಾಂಕಿ ಕೆರೆಯ ಸಮೀಪದಲ್ಲೇ ಇರುವ ಜಲಗಂಗಮ್ಮ ತಾಯಿ ದೇವಸ್ಥಾನವನ್ನು ವೃಷಭಾವತಿ ನದಿಯ ಉಗಮ ಸ್ಥಾನ ಗುರುತಾಗಿ ಸ್ಥಾಪಿಸಲಾಗಿದೆ ಎಂದೂ ಹೇಳಲಾಗುತ್ತೆ. ಈ ಹಿನ್ನೆಲೆ ಈ ಬಾರಿ ಇಲ್ಲೇ ಕಾವೇರಿ ಆರತಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕಾರ್ಯಕ್ರಮದಲ್ಲಿ ಲೇಸರ್ ಲೈಟ್ ಪ್ರದರ್ಶನ, ಲೈವ್ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾವೇರಿ ಆರತಿ ಅಂಗವಾಗಿ ವಿಶೇಷ ಮೆರವಣಿಗೆ, ಪೂಜೆ ನೆರವೇರಲಿದೆ. ಇದಾದ ನಂತರ ಕೊಡಗಿನ ಭಾಗಮಂಡಲದಲ್ಲಿರುವ ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ನದಿಗಳ ಸಂಗಮ ತಾಣದಿಂದ ಸಂಗ್ರಹಿಸಿ ತಂದ ಪವಿತ್ರ ಜಲವನ್ನು ಇಲ್ಲಿ ಬರುವ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ನೀಡಲಾಗುವುದು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಸಿಬ್ಬಂದಿ ಸೇರಿದಂತೆ ಸಾವಿರಾರು ಮಂದಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಭಾಗವಹಿಸುವ ನಿರೀಕ್ಷೆ ಇದೆ.
ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ಟಿ.ನರಸಿಪುರದ ತ್ರಿವೇಣಿ ಸಂಗಮದಲ್ಲಿ ಇತ್ತೀಚೆಗಷ್ಟೇ ಕರ್ನಾಟಕ ಕುಂಭಮೇಳ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿತ್ತು. ಇಲ್ಲಿಯೂ ಅದ್ಧೂರಿಯಾಗಿ ಕಾವೇರಿ ಆರತಿ ನೆರವೇರಿತ್ತು. ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಈಗ ಬೆಂಗಳೂರಿನಲ್ಲೂ ಇದೇ ರೀತಿಯ ಕಾರ್ಯಕ್ರಮ ನೆರವೇರಲಿದೆ.












Click it and Unblock the Notifications