ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರ ಪ್ರವಾಹದ ಬಗ್ಗೆ ಯಡಿಯೂರಪ್ಪ ಮನ ಕಲಕುವ ನೆನಪು

By ಬಿ.ಎಸ್.ಯಡಿಯೂರಪ್ಪ
|
Google Oneindia Kannada News

ಇದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅನುಭವ. ಮನಸಿಗೆ ತಟ್ಟುವಂಥ ಹಲವು ಅಂಶಗಳಿರುವ ಅನುಭವ ಕಥನವನ್ನು ನಿಮ್ಮೆದುರು ಇಡುತ್ತಿದ್ದೇವೆ, ಯಥಾವತ್ತಾಗಿ. -ಸಂಪಾದಕ

ನೂರಾರು ಹಳ್ಳಿಗಳ ಸಾವಿರಾರು ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿಕೊಡುವ ಕೆಲಸದ ಒಟ್ಟು ಉಸ್ತುವಾರಿ ನನಗೆ ಅನೇಕ ಪಾಠಗಳನ್ನು ಕಲಿಸಿತು. ಪ್ರಕೃತಿ ಪರಮಶಕ್ತ. ಎಲ್ಲ ಅನಾಹುತಗಳನ್ನು ತಡೆಯಲು ನಮಗೆ ಆಗದೇ ಇರಬಹುದು. ಆದರೆ ಅಂಥ ಅನಾಹುತಗಳು ಘಟಿಸಿದ ನಂತರ ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದೆವು ಹಾಗೂ ಸಂಕಟದಲ್ಲಿ ಇದ್ದ ಜನರ ನೆರವಿಗೆ ಹೇಗೆ ಮಾನವೀಯವಾಗಿ ಸ್ಪಂದಿಸಿದೆವು ಎಂಬುದು ಬಹಳ ಮುಖ್ಯ ಹಾಗೂ ಅದು ಬಹು ದೊಡ್ಡ ಸವಾಲು.

ಆ ಸಂಕಟದ ಕಾಲದಲ್ಲಿ ನಾನು ಹೆಚ್ಚು ಬಲಶಾಲಿಯಾಗಿ ಹೊರ ಹೊಮ್ಮಿದೆ ಎಂದು ನನಗೆ ಅನಿಸುತ್ತದೆ. ಆದರೆ ಇದು ಪ್ರಕೃತಿ ನನಗೆ ಕಲಿಸಿದ ವಿನಯದಿಂದ ಬಂದ ಮಾತು.

75 ವರ್ಷ ವಯಸ್ಸು ಯಡಿಯೂರಪ್ಪ ಪಾಲಿಗೆ ಕೇವಲ ನಂಬರ್!75 ವರ್ಷ ವಯಸ್ಸು ಯಡಿಯೂರಪ್ಪ ಪಾಲಿಗೆ ಕೇವಲ ನಂಬರ್!

ಈಚಿನ ನನ್ನ ಪರಿವರ್ತನಾ ಯಾತ್ರೆಯ ಅಂಗವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೆ. ಜನರು ನುಗ್ಗಿ ಬರುತ್ತಿದ್ದರು. ನನ್ನ ಮುಖದ ಮೇಲೆ ಮಂದಹಾಸ ಇತ್ತು. ಆಗ ನನ್ನ ನೆನಪಿನ ಪಟಲದ ಮೇಲೆ ಕೆಲವು ವರ್ಷಗಳ ಹಿಂದೆ ಇದೇ ಭಾಗದಲ್ಲಿ ಮಾಡಿದ ಪ್ರವಾಸದ ನೆನಪು ಮರುಕಳಿಸತೊಡಗಿತು. ಅದು ಒಂಬತ್ತು ವರ್ಷಗಳ ಹಿಂದಿನ ಮಾತು. ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ನಾನು ಭಾರವಾದ ಹೃದಯ ಹೊತ್ತುಕೊಂಡು ವಿಸ್ತೃತವಾದ ಪ್ರವಾಸ ಮಾಡಿದ್ದೆ.

ನಲವತ್ತು ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಬಹುಶಃ ನಾನು ಮರೆಯಲಾಗದ ದೃಶ್ಯಗಳು ಯಾವುವು ಎಂದರೆ, ಸಾಮಾನ್ಯವಾಗಿ ಬರಪೀಡಿತವಾದ ಈ 15 ಜಿಲ್ಲೆಗಳು ಭಾರಿ ಮಳೆಯಿಂದ ಪ್ರವಾಹ ಪೀಡಿತವಾಗಿ ಅಲ್ಲಿನ ಜನ ಜೀವನ ಹೆಚ್ಚೂ ಕಡಿಮೆ ಕೊಚ್ಚಿಕೊಂಡು ಹೋಗಿ, ಜನರನ್ನು ಸಂಕಷ್ಟಕ್ಕೆ ಗುರಿ ಮಾಡಿದ್ದು.

ಪ್ರಳಯಾಂತಕ ಎನ್ನುವಂಥ ಮಳೆ ಹಾಗೂ ಪ್ರವಾಹ

ಪ್ರಳಯಾಂತಕ ಎನ್ನುವಂಥ ಮಳೆ ಹಾಗೂ ಪ್ರವಾಹ

ಅದು 2009ನೇ ಇಸವಿ. ಆಗ ನಾನು ಮುಖ್ಯಮಂತ್ರಿಯಾಗಿದ್ದೆ. ರಾಯಚೂರು, ವಿಜಯಪುರ, ಕಲಬುರ್ಗಿ, ಬಾಗಲಕೋಟೆ ಜಿಲ್ಲೆಗಳೂ ಸೇರಿದಂತೆ ಒಟ್ಟು 15 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿತ್ತು. ಕೇವಲ ಒಂದೆರಡೇ ದಿನಗಳ ಅಂತರದಲ್ಲಿ ಪ್ರಳಯಾಂತಕ ಎನ್ನುವಂಥ ಮಳೆ ಹಾಗೂ ಪ್ರವಾಹಕ್ಕೆ ಇದೇ ಜಿಲ್ಲೆಗಳು ಸಾಕ್ಷಿಯಾದುವು. ಎಂಥ ವಿಪರ್ಯಾಸ?

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರ ವರೆಗೆ ಮಳೆ

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರ ವರೆಗೆ ಮಳೆ

ಸೆಪ್ಟೆಂಬರ್ 29 ರಂದು ಸುರಿಯಲು ಆರಂಭವಾದ ಮಳೆ ಅಕ್ಟೋಬರ್ 3 ರ ವರೆಗೆ ನಿರಂತರವಾಗಿ ಮುಂದುವರಿಯಿತು. ಆದರೆ ಮೊದಲ ಎರಡು ದಿನ ಬಿದ್ದ ಮಳೆಯೇ ಭಾರೀ ಎನ್ನುವಂತೆ ಇತ್ತು. ಆ ಮಳೆಯೇ ಸುಮಾರು 350 ಹಳ್ಳಿಗಳ 1.80 ಲಕ್ಷ ಜನರ ಜೀವನವನ್ನು ಬುಡಮೇಲು ಮಾಡಿ ಹಾಕಿತು. ಆ ದೃಶ್ಯ ಭಯಾನಕವಾಗಿತ್ತು. ಚಂಡಮಾರುತದಂಥ ಮಳೆ ಹಾಗೂ ಕೃಷ್ಣಾ ಮತ್ತು ತುಂಗಭದ್ರಾ ನದಿಯಲ್ಲಿ ಬಂದ ಪ್ರವಾಹದಿಂದ ಸುಮಾರು 280-300 ಜನರು ಸತ್ತು ಹೋದರು. ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟೆಗಳ ಗೇಟುಗಳನ್ನು ತೆರೆಯಬೇಕಾಗಿ ಬಂತು. ಕಳೆದ ಆರು ದಶಕಗಳಲ್ಲಿ ಈ 15 ಜಿಲ್ಲೆಗಳಲ್ಲಿ ಇಂಥ ಮಳೆ ಆಗಿರಲೇ ಇಲ್ಲ.

25 ಲಕ್ಷ ಎಕರೆಯಷ್ಟು ಕೃಷಿ ಭೂಮಿ ಜಲಾವೃತ

25 ಲಕ್ಷ ಎಕರೆಯಷ್ಟು ಕೃಷಿ ಭೂಮಿ ಜಲಾವೃತ

ಸದಾ ಮಿನುಗುತ್ತಿದ್ದ ಅಲ್ಲಿನ ಭೂ ಪ್ರದೇಶ ಹೇಗೆ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಗಳು ನಿರ್ಮಾಣವಾಗಿದ್ದುವು ಮತ್ತು 25 ಲಕ್ಷ ಎಕರೆಯಷ್ಟು ಕೃಷಿ ಭೂಮಿ ಜಲಾವೃತವಾಗಿತ್ತು, ಸಾವಿರಾರು ಜಾನುವಾರುಗಳು ಮಹಾಪೂರದಲ್ಲಿ ಕೊಚ್ಚಿ ಹೋಗಿದ್ದವು ಹಾಗೂ ಲಕ್ಷಾಂತರ ಜನರು ರಾತ್ರಿ ಕಳೆಯುವುದರ ಒಳಗಾಗಿ ಹೇಗೆ ತಮ್ಮ ನೆಲೆ ಹಾಗೂ ಬದುಕನ್ನು ಕಳೆದುಕೊಂಡಿದ್ದರು ಎಂಬುದನ್ನೆಲ್ಲ ಕಂಡು ನನ್ನ ಮನಸ್ಸು ಮಮ್ಮಲ ಮರುಗಿತು. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿತ್ತು. ಅದರ ಆರ್ಭಟದ ಮುಂದೆ ನಾವು ಅಸಹಾಯಕರಾಗಿದ್ದೆವು. ನನ್ನ ಕಣ್ಣಿನಲ್ಲಿ ನೀರು ಸುರಿಯತೊಡಗಿದುವು. ಅನೇಕ ದಿನ ನನಗೆ ಅದೇ ಅದೇ ದೃಶ್ಯಗಳು ಕಣ್ಣ ಮುಂದೆ ಬಂದು ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಆದರೆ ನಾನು ಎದೆಗುಂದಲಿಲ್ಲ. ನಾಯಕನಾಗಿ ನಾನು ಮುಂದೆ ನಿಂತು ಕೆಲಸ ಮಾಡಬೇಕು ಎಂದು ನನಗೆ ಗೊತ್ತಿತ್ತು. ಸಾರ್ವಜನಿಕರ ಮುಂದೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಕಾಲ ಅದಾಗಿರಲಿಲ್ಲ.

24 ಗಂಟೆಗಳ ಕಾಲವೂ ಪರಿಸ್ಥಿತಿಯ ಮೇಲೆ ನಿಗಾ ಇಟ್ಟೆ

24 ಗಂಟೆಗಳ ಕಾಲವೂ ಪರಿಸ್ಥಿತಿಯ ಮೇಲೆ ನಿಗಾ ಇಟ್ಟೆ

ನನ್ನ ಮುಂದೆ ತಕ್ಷಣದ ಎರಡು ಸವಾಲುಗಳು ಇದ್ದುವು : ಮೊದಲು ನೆಲೆ ಕಳೆದುಕೊಂಡು ಬಯಲಿಗೆ ಬಿದ್ದ ಜೀವಗಳಿಗೆ ಗಂಜಿ ಕೇಂದ್ರಗಳನ್ನು ತೆರೆಯಬೇಕಿತ್ತು ಮತ್ತು ನಂತರ ಅವರಿಗೆ ಕಾಯಂ ಆದ ನೆಲೆ ಕಲ್ಪಿಸಬೇಕಿತ್ತು. ಅದೇನು ಸಣ್ಣ ಕೆಲಸ ಆಗಿರಲಿಲ್ಲ. ಅದು ನಮ್ಮ ಮುಂದೆ ಇದ್ದ ಬೃಹತ್ ಎನ್ನುವಂಥ ಸವಾಲು ಆಗಿತ್ತು. ಮೊದಲು ಅಲ್ಲಿನ ಜನರ ನಿತ್ಯದ ಅಗತ್ಯಗಳನ್ನು ಪೂರೈಸಬೇಕಿತ್ತು ಹಾಗೂ ತದನಂತರ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾ ವಹಿಸಬೇಕಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ನಾನು ತಕ್ಷಣ ಕಾರ್ಯಪ್ರವೃತ್ತನಾದೆ. ನಾನೇ ಖುದ್ದಾಗಿ ದಿನದ 24 ಗಂಟೆಗಳ ಕಾಲವೂ ಪರಿಸ್ಥಿತಿಯ ಮೇಲೆ ನಿಗಾ ಇಟ್ಟೆ. ಇಂಥ ಭೀಕರ ದುರಂತವನ್ನು ನಿಭಾಯಿಸಬೇಕಾದರೆ ಅದು ತಂಡದ ಕಾರ್ಯವೇ ಆಗಿರಬೇಕು ಎಂಬುದನ್ನು ನಾನು ಅರಿತುಕೊಂಡೆ. ಸಂಕಷ್ಟಕ್ಕೆ ಈಡಾಗಿರುವ ಜನರ ಅಗತ್ಯಗಳನ್ನು ಪೂರೈಸಲು ಎಲ್ಲರೂ ಮುಂದೆ ಬರಬೇಕು ಎಂದು ಸ್ಪಷ್ಟವಾಗಿ ಕರೆ ಕೊಟ್ಟೆ.

10,000 ಕೋಟಿ ರೂಪಾಯಿಗಳ ನೆರವು ಕೊಡಬೇಕು ಎಂದು ಮನವಿ

10,000 ಕೋಟಿ ರೂಪಾಯಿಗಳ ನೆರವು ಕೊಡಬೇಕು ಎಂದು ಮನವಿ

ನನ್ನ ಸಂಪುಟದ ಸಚಿವರು ಹಾಗೂ ಸರ್ಕಾರದ ಅಧಿಕಾರಿಗಳನ್ನು ಒಟ್ಟು ಮಾಡಿದೆ. ಎಲ್ಲರಿಗಿಂತ ಮುಂದಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದೆ. ನನ್ನ ಮೊದಲ ಭೇಟಿಯ ನಂತರ ಬೆಂಗಳೂರಿನಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ನಾನು ಕಣ್ಣಾರೆ ಕಂಡ ಅಲ್ಲಿನ ದಾರುಣ ಸ್ಥಿತಿಯನ್ನು ಅವರಿಗೆಲ್ಲ ವಿವರಿಸಿದೆ. ಆಗ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ನೆರವು ಪಡೆಯಲು ನಾನು ಯಾವ ಪ್ರತಿಷ್ಠೆಯನ್ನೂ ತೋರಿಸಲಿಲ್ಲ. ನಾನೇ ಖುದ್ದಾಗಿ ಆಗಿನ ರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರದ ಹಣಕಾಸು ಸಚಿವರಿಗೆ ಮಾತನಾಡಿ, ಕೇಂದ್ರದ ಸಂಕಷ್ಟ ಪರಿಹಾರ ನಿಧಿಯಿಂದ 10,000 ಕೋಟಿ ರೂಪಾಯಿಗಳ ನೆರವು ಕೊಡಬೇಕು ಎಂದು ಮನವಿ ಮಾಡಿದೆ. ಸ್ಥಳಕ್ಕೆ ಭೇಟಿ ನೀಡಲು ಬಂದಿದ್ದ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಹಣಕಾಸು ಸಚಿವರ ಜೊತೆಗೆ ವೈಮಾನಿಕ ಸಮೀಕ್ಷೆ ಮಾಡಲೂ ನಾನೇನು ಹಿಂದೇಟು ಹಾಕಲಿಲ್ಲ.

ಮಂತ್ರಾಲಯ ದೇವಸ್ಥಾನವೂ ಜಲಾವೃತವಾಗಿತ್ತು

ಮಂತ್ರಾಲಯ ದೇವಸ್ಥಾನವೂ ಜಲಾವೃತವಾಗಿತ್ತು

ಪ್ರವಾಹ ಪೀಡಿತವಾದ ನೂರಾರು ಹಳ್ಳಿಗಳ ಜನರಿಗೆ ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು. ಕೆಲವೇ ದಿನಗಳಲ್ಲಿ ನೂರಾರು ಗಂಜಿ ಕೇಂದ್ರಗಳನ್ನು, ಪುನರ್ ವಸತಿ ತಾಣಗಳನ್ನು ನಿರ್ಮಿಸಲಾಯಿತು. ಕನಿಷ್ಠ ಒಂದು ಲಕ್ಷ ಜನರಿಗೆ ಅಲ್ಲಿ ವಾಸಕ್ಕೆ, ಊಟಕ್ಕೆ ವ್ಯವಸ್ಥೆ ಮಾಡಲಾಯಿತು. ಪ್ರವಾಹದಿಂದಾಗಿ ರಸ್ತೆ ಮತ್ತು ರೈಲು ಮಾರ್ಗಗಳು ಹೆಚ್ಚೂ ಕಡಿಮೆ ಕೊಚ್ಚಿಕೊಂಡು ಹೋಗಿದ್ದುವು. ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ತುಂಗಭದ್ರಾ ಸೇತುವೆ ಕೂಡ ಪ್ರವಾಹದ ಪಾಲು ಆದುದರಿಂದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜೊತೆಗಿನ ಸಂಪರ್ಕ ಕಡಿದು ಹೋಗಿತ್ತು. ಆಂಧ್ರಪ್ರದೇಶದಲ್ಲಿನ ಮಂತ್ರಾಲಯ ದೇವಸ್ಥಾನವೂ ಜಲಾವೃತವಾಗಿತ್ತು.

500 ಕೋಟಿ ರೂಪಾಯಿ ಸಂಗ್ರಹಿಸಿದೆವು

500 ಕೋಟಿ ರೂಪಾಯಿ ಸಂಗ್ರಹಿಸಿದೆವು

ಸಂತ್ರಸ್ತ ಜನರಿಗೆ ನೆರವು ಕ್ರೋಡೀಕರಿಸಲು ಬೆಂಗಳೂರಿನಲ್ಲಿಯೂ ಪಾದಯಾತ್ರೆ ಮಾಡಬೇಕು ಎಂದು ನಿರ್ಧರಿಸಿದೆ. ರಾಜಧಾನಿಯಲ್ಲಿ ಮಾಡಿದ ಎರಡು ದಿನಗಳ ಪಾದಯಾತ್ರೆಯಲ್ಲಿ 500 ಕೋಟಿ ರೂಪಾಯಿ ಸಂಗ್ರಹಿಸಲು ಸಾಧ್ಯವಾಯಿತು. ಖಾಸಗಿ ಉದ್ಯಮಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕೂಡ ನೆರವು ನೀಡಲು ಮುಂದೆ ಬರಬೇಕು ಎಂದು ಅರಿಕೆ ಮಾಡಿಕೊಂಡೆ. ಮಳೆಯಿಂದ ಸಂತ್ರಸ್ತವಾದ ಹಳ್ಳಿಗಳಲ್ಲಿ ಮನೆ ಕಟ್ಟಿಕೊಡಲು ಮುಂಚೂಣಿ ಐ.ಟಿ ಕಂಪೆನಿಗಳು ಮುಂದೆ ಬಂದವು. ಒಂದು ಲಕ್ಷ ಮನೆ ಕಟ್ಟುವ ಗುರಿ ನಮ್ಮ ಮುಂದೆ ಇತ್ತು. ಖಾಸಗಿ ಹಾಗೂ ಸರ್ಕಾರಿ ಪಾಲುದಾರಿಕೆಯಲ್ಲಿ ನಿಗದಿತ ವೇಳೆಯಲ್ಲಿಯೇ ಎಲ್ಲ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸಾಧಿಸಿದೆವು.

ಆಂಧ್ರಪ್ರದೇಶ ರಾಜ್ಯಪಾಲರ ಮೆಚ್ಚುಗೆ

ಆಂಧ್ರಪ್ರದೇಶ ರಾಜ್ಯಪಾಲರ ಮೆಚ್ಚುಗೆ

ಅಷ್ಟು ವೇಗವಾಗಿ ಹಾಗೂ ಅಷ್ಟು ದಕ್ಷ ರೀತಿಯಲ್ಲಿ ನಾನೇ ಮುಂದೆ ನಿಂತು ನನ್ನ ತಂಡದಿಂದ ಕೆಲಸ ಮಾಡಿಸಿದ್ದನ್ನು ಕಂಡು ಆಂಧ್ರಪ್ರದೇಶದ ಆಗಿನ ರಾಜ್ಯಪಾಲರು ಬೆಂಗಳೂರಿಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಂಧ್ರಪ್ರದೇಶದ ಸಹಯೋಗದಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೆ ತುಂಗಭದ್ರಾ ಸೇತುವೆಯನ್ನು ನಿರ್ಮಿಸಬೇಕು ಎಂದು ನಿರ್ಧರಿಸಲಾಯಿತು. ಮನೆ ಹಾಗೂ ಹೊಲ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದ ಗ್ರಾಮಸ್ಥರ ನೆರವಿಗೆ ಧಾವಿಸಲು ನಾನು ಎಲ್ಲ ಬಗೆಯ ಪ್ರಯತ್ನ ಮಾಡಿದೆ. ರೈತರ ಬೆಳೆ ಸಾಲ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಹಾನಿಗೀಡಾದ ರಸ್ತೆ ಹಾಗೂ ಕೊಚ್ಚಿ ಹೋದ ಸೇತುವೆಗಳನ್ನು ಪುನಃ ಕಟ್ಟಲು ಕೇಂದ್ರ ಸರ್ಕಾರದ ಸಂಕಷ್ಟ ಪರಿಹಾರ ನಿಧಿ ಹಾಗೂ ಕೇಂದ್ರ ರಸ್ತೆ ನಿಧಿಯಿಂದ ನೆರವು ಕೊಡಬೇಕು ಎಂದು ಪ್ರಾರ್ಥಿಸಿದೆ. ನನ್ನ ಮೇಲೆ ಬರೀ ಮನೆಗಳನ್ನು ಮಾತ್ರ ನಿರ್ಮಿಸುವ ಹೊಣೆ ಇರಲಿಲ್ಲ. ಜೊತೆಗೆ ಅಲ್ಲಿನ ಶಾಲೆಗಳನ್ನು, ಸರ್ಕಾರಿ ಕಚೇರಿಗಳನ್ನೂ ಪುನಃ ಕಟ್ಟಬೇಕಿತ್ತು. ಭಾರತೀಯ ವಾಯಪಡೆ ಹಾಗೂ ಸ್ಥಳೀಯ ಜನರ ಅವಿರತ ಶ್ರಮದಿಂದಾಗಿ ಹಾಗೂ ಸಕಾಲಿಕ ರಕ್ಷಣಾ ಕ್ರಮಗಳಿಂದಾಗಿ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಯಿತು.

ಸಹಜ ಸ್ಥಿತಿಗೆ ಮರಳಲು ತಿಂಗಳೇ ಕಳೆದವು

ಸಹಜ ಸ್ಥಿತಿಗೆ ಮರಳಲು ತಿಂಗಳೇ ಕಳೆದವು

ಪರಿಸ್ಥಿತಿಯನ್ನು ಎಂದಿನ ಸಹಜ ಸ್ಥಿತಿಗೆ ತರಲು ಅನೇಕ ತಿಂಗಳುಗಳೇ ಹಿಡಿದುವು. ಈ ಪ್ರಕ್ರಿಯೆಯಲ್ಲಿ ನಾನು ನನ್ನ ಸ್ತಿಮಿತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಇಂಥ ಮಾನವ ದುರಂತಗಳನ್ನು ನಿಭಾಯಿಸಬೇಕಾದರೆ ಜನರ ಮನಃಸ್ಥಿತಿಗಳನ್ನೂ ಅರ್ಥ ಮಾಡಿಕೊಳ್ಳಬೇಕಾದುದು ಬಹಳ ಮುಖ್ಯ. ಪುನರ್ ವಸತಿಗೆ ಬೇಕಾದ ಸಂಪನ್ಮೂಲ ಕ್ರೋಡೀಕರಿಸಿ ಒದಗಿಸುವುದು ಇನ್ನೂ ಮಹತ್ವದ ಕೆಲಸ. ಆಗಿನ ಸಂಕಟದ ದಿನಗಳಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳ ಜನರು ನನ್ನ ಜೊತೆಗೆ ನಿಂತರು. ಅವರ ಔದಾರ್ಯವನ್ನು ನಾನು ಹೇಗೆ ಮರೆಯಲಿ! ಆ ಸಾರಿಯ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಬಾರದು ಎಂದು ನಾನು ತೀರ್ಮಾನಿಸಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ತಿಂಥಿಣಿ ಗ್ರಾಮದಲ್ಲಿ ದೀಪಾವಳಿ ಆಚರಿಸುವುದು ಎಂದು ನಿರ್ಣಯಿಸಿದೆ. ಸಂತ್ರಸ್ತರ ಜೊತೆಗೆ ಅನೇಕ ಗಂಟೆಗಳನ್ನು ಕಳೆದೆ. ಅವರ ಜೊತೆಗೆ ಊಟ ಮಾಡಿದೆ. ಅವರಿಗೆ ಊಟ ಬಡಿಸಿದೆ. ಅವರಿಗೆ ನೈತಿಕ ಸ್ಥೈರ್ಯ ತುಂಬುವುದು ಹಾಗೂ ನನ್ನ ಭಾರವಾದ ಹೃದಯವನ್ನು ಹಗುರ ಮಾಡಿಕೊಳ್ಳುವುದು ನನ್ನ ಉದ್ದೇಶವಾಗಿತ್ತು.

ಪ್ರಕೃತಿ ನಮಗೆ ಪಾಠ ಕಲಿಸಿತು

ಪ್ರಕೃತಿ ನಮಗೆ ಪಾಠ ಕಲಿಸಿತು

ರಾಯಚೂರು ಜಿಲ್ಲೆಯ ಪ್ರವಾಹ ಪೀಡಿತ ಮಲ್ಕಾಪುರ ಗ್ರಾಮದಲ್ಲಿ ಮರು ವರ್ಷದ ದೀಪಾವಳಿಯನ್ನು ಕಳೆದೆ. ಪ್ರವಾಹ ಸಂತ್ರಸ್ತರಿಗಾಗಿ ಒಂದು ಬಹುರಾಷ್ಟ್ರೀಯ ಕಂಪೆನಿ ಹಾಗೂ ಒಂದು ಸ್ವಯಂ ಸೇವಾ ಸಂಸ್ಥೆ ಮನೆಗಳನ್ನು ಕಟ್ಟಿಸಿದ್ದವು. ಅಲ್ಲಿನ ನಿವಾಸಿಗಳ ಬಾಲಕಿಯರಿಗೆ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಿದ್ದು ನನ್ನ ಕಣ್ಣ ಮುಂದೆ ಸುಳಿದು ಹೋಯಿತು. ನೂರಾರು ಹಳ್ಳಿಗಳ ಸಾವಿರಾರು ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿಕೊಡುವ ಕೆಲಸದ ಒಟ್ಟು ಉಸ್ತುವಾರಿ ನನಗೆ ಅನೇಕ ಪಾಠಗಳನ್ನು ಕಲಿಸಿತು. ಪ್ರಕೃತಿ ಪರಮಶಕ್ತ. ಎಲ್ಲ ಅನಾಹುತಗಳನ್ನು ತಡೆಯಲು ನಮಗೆ ಆಗದೇ ಇರಬಹುದು. ಆದರೆ ಅಂಥ ಅನಾಹುತಗಳು ಘಟಿಸಿದ ನಂತರ ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದೆವು ಹಾಗೂ ಸಂಕಟದಲ್ಲಿ ಇದ್ದ ಜನರ ನೆರವಿಗೆ ಹೇಗೆ ಮಾನವೀಯವಾಗಿ ಸ್ಪಂದಿಸಿದೆವು ಎಂಬುದು ಬಹಳ ಮುಖ್ಯ ಹಾಗೂ ಅದು ಬಹು ದೊಡ್ಡ ಸವಾಲು. ಆ ಸಂಕಟದ ಕಾಲದಲ್ಲಿ ನಾನು ಹೆಚ್ಚು ಬಲಶಾಲಿಯಾಗಿ ಹೊರ ಹೊಮ್ಮಿದೆ ಎಂದು ನನಗೆ ಅನಿಸುತ್ತದೆ. ಆದರೆ ಇದು ಪ್ರಕೃತಿ ನನಗೆ ಕಲಿಸಿದ ವಿನಯದಿಂದ ಬಂದ ಮಾತು. (ಲೇಖನ -ಟ್ವಿಟ್ ಲಾಂಗರ್)

English summary
2013- year of challenges to Karnataka. Because of flood in north Karnataka. Then CM Yeddyurappa now recall that situation and wrote an article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X