ರಾಜ್ಯದಲ್ಲಿ ಕೈ ಕೊಟ್ಟ ಮಳೆ..ಎಲ್ಲೆಡೆ ಬರ: ಜಲಸಂರಕ್ಷಣೆ ಕಾರ್ಯ ಮಾಡಿದಿದ್ದರೆ ‘ಜಲಕ್ಷಾಮ’ ಖಚಿತ
ಜಗತ್ತಿನಲ್ಲಿ ಯುದ್ಧಗಳು ನಡೆದರೆ ಅದು ನೀರಿಗಾಗಿ ನಡೆಯುತ್ತವೆ ಎಂಬ ಮಾತುಗಳು ಪ್ರಚಲಿತದಲ್ಲಿದೆ. ಅದಕ್ಕೆ ಪೂರಕ ಎಂಬಂತೆ ಇದೀಗ ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಿತ್ತಾಟ ಶುರುವಾಗಿದೆ.
ಬಹುಶಃ ಹಲವು ದಶಕಗಳ ಹಿಂದಿನ ವಾತಾವರಣವನ್ನು ನಾವು ಉಳಿಸಿಕೊಂಡು ಬಂದಿದ್ದರೆ, ವಾಡಿಕೆಯ ಮಳೆ ಸುರಿದು ನೀರಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ? ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ಅವೈಜ್ಞಾನಿಕ ಕಾರ್ಯಗಳು ನಮ್ಮನ್ನು ನೀರಿಗಾಗಿ ಗುದ್ದಾಡುವಂತೆ ಮಾಡಿದೆ.

ಎಲ್ಲೋ ಒಂದು ಕಡೆ ವಾತಾವರಣದಲ್ಲಿ ಏರುಪೇರಾಗುತ್ತಿದ್ದು, ಮೊದಲಿನಂತೆ ಕಾಲಕ್ಕೆ ತಕ್ಕಂತೆ ಯಾವುದೂ ನಡೆಯುತ್ತಿಲ್ಲ. ಒಂದು ವೇಳೆ ಹಿಂದಿನಂತೆಯೇ ಮಳೆ, ಚಳಿ, ಬಿಸಿಲು ಇದ್ದಿದ್ದರೆ ನಾವ್ಯಾರು ಇವತ್ತು ಇಷ್ಟೊಂದು ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಹಾಗಾದರೆ ಇವತ್ತಿನ ಪ್ರಾಕೃತಿಕ ಸಮಸ್ಯೆಗಳಿಗೆ ಕಾರಣ ಯಾರು? ಎಂಬ ಪ್ರಶ್ನೆಗೆ ಉತ್ತರ ನಾವೇ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.
ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿ ಸುರಿದ ಮಳೆ ಈ ಬಾರಿ ಕೈಕೊಟ್ಟಿದೆ. ಮುಂಗಾರಿನಲ್ಲಿ ವಾಡಿಕೆಯ ಮಳೆ ಸುರಿಯಲೇ ಇಲ್ಲ. ಮುಂಗಾರು ಮಳೆಯ ಕಾಲವೆಂದೇ ಹೇಳಲಾಗುವ ಜೂನ್ ನಿಂದ ಸೆಪ್ಟಂಬರ್‌ವರೆಗೆ ಅಂದುಕೊಂಡಂತೆ ಮಳೆ ಸುರಿಯಲೇ ಇಲ್ಲ. ಆದರೆ ಹಿಂಗಾರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಈ ಮಳೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ಜನ ಅಂತರ್ಜಲದ ದೃಷ್ಟಿಯಿಂದ ಮಳೆ ಬರಲಿ ಎಂದು ಕಾಯುವಂತಾಗಿದೆ.

ವಾಡಿಕೆಯ ಮಳೆಯಾಗುತ್ತಿಲ್ಲ ಏಕೆ..?
ಮುಂದಿನ ದಿನಗಳಲ್ಲಿ ಮಳೆ ಸುರಿದರೆ ಅದರಿಂದ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಅದರಲ್ಲೂ ಮಲೆನಾಡಿನ ಭಾಗದಲ್ಲಿ ಕಾಫಿ ತೋಟ ಹೊಂದಿರುವ ಬೆಳೆಗಾರರಂತು ಸಂಕಷ್ಟ ಎದುರಿಸಬೇಕಾಗುತ್ತದೆ. ಇದೀಗ ಅಲ್ಲಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಇದು ನಗರ ಪ್ರದೇಶದ ಜನರನ್ನು ನಿದ್ದೆಗೆಡಿಸುವಂತೆ ಮಾಡಿದರೆ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಭತ್ತ ಬೆಳೆದ ರೈತರಿಗೆ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಚಳಿಯಿರುತ್ತಿತ್ತು. ಆದರೀಗ ಮೈಸುಡುವ ಬಿಸಿಲು ಕಾಣಿಸುತ್ತಿದೆ. ಜೊತೆಗೆ ಸಿಡಿಲು, ಗುಡುಗಿನ ಮಳೆ ಬೆಚ್ಚಿ ಬೀಳುವಂತೆ ಮಾಡುತ್ತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ವಾಡಿಕೆಯ ಮಳೆಯಾಗುತ್ತಿಲ್ಲ. ಬರುವ ಮಳೆಯೂ ಸಕಾಲದಲ್ಲಿ ಸುರಿಯುತ್ತಿಲ್ಲ. ಇದರಿಂದ ಮಳೆ ಬಂದರೂ ಪ್ರಯೋಜನವಾಗುತ್ತಿಲ್ಲ. ಮೊದಲೆಲ್ಲ ಯುಗಾದಿ ಕಳೆಯುತ್ತಿದ್ದಂತೆಯೇ ಮಳೆಯೂ ಆರಂಭವಾಗುತ್ತಿತ್ತು. ಜೂನ್ ಜುಲೈನಲ್ಲಿ ಎಡೆಬಿಡದೆ ಮಳೆ ಸುರಿದು ಮಲೆನಾಡಿನಲ್ಲಿ ನೀರಿನ ಸೆಲೆಯಿರುವ ಸ್ಥಳಗಳಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು. ಬೆಟ್ಟಗುಡ್ಡಗಳ ಮೇಲಿನಿಂದ ನೀರು ಉಕ್ಕಿ ಬರುತ್ತಿತ್ತು. ಹಿರಿಯರು ತಮ್ಮೂರಿನ ಬೆಟ್ಟದಲ್ಲಿ ಮಳೆಯಾಗಿ ಜಲ ಉಕ್ಕಿ ಹರಿದರೆ ಈ ಬಾರಿ ಉತ್ತಮ ಮಳೆಯಾಗಿದೆ. ಮುಂದಿನ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಿದ್ದರು.

ಪಾಕೃತಿಕ ಸಮತೋಲನ ಕಾಪಾಡುವಲ್ಲಿ ವಿಫಲ
ಮಳೆಗಾಲ ಕಳೆದರೂ ಡಿಸೆಂಬರ್ ತಿಂಗಳ ತನಕವೂ ನೀರಿನ ಸೆಲೆಗಳಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು. ಆದರೀಗ ಅವು ಕಾಣಿಸುತ್ತಿಲ್ಲ. ಹೀಗಾಗಿ ಮಳೆ ಬಂದಾಗ ಉಕ್ಕಿಹರಿಯುವ ನದಿ ತೊರೆಗಳು ಪ್ರವಾಹ ಸೃಷ್ಟಿಸಿ, ಮಳೆ ನಿಲ್ಲುತ್ತಿದ್ದಂತೆಯೇ ಬತ್ತಿ ಹೋಗುತ್ತಿವೆ. ಇದರಿಂದಾಗಿಯೇ ಕೆರೆ ಕಟ್ಟೆಗಳಿಗೆ, ಜಲಾಶಯಗಳಿಗೆ ನೀರಿನ ಕೊರೆತೆ ಎದುರಾಗುತ್ತಿದೆ. ಮುಖ್ಯವಾಗಿ ಭೂಮಿಯಲ್ಲಿ ನೀರು ಇಂಗದೆ ಹರಿದು ಹೋಗುತ್ತಿರುವುದೇ ಅಂತರ್ಜಲದ ಸಮಸ್ಯೆಗೆ ಕಾರಣವಾಗಿದೆ.
ಕಾವೇರಿ ಉಗಮ ಪ್ರದೇಶ ಕೊಡಗು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳು ಅಭಿವೃದ್ಧಿಯಾಗಿವೆ. ಇಲ್ಲಿ ಆಗಿರುವ ಅಭಿವೃದ್ಧಿ ಬದಲಾವಣೆ ತಂದಿದೆ ಇದರಿಂದ ಸಮಸ್ಯೆಗಳಾಗಿವೆ. ಹಾಗೆಂದು ಅಭಿವೃದ್ಧಿ ಕಾರ್ಯ ಮಾಡದೆ ಓಬಿರಾಯನ ಕಾಲದಂತೆ ಬದುಕಲು ಸಾಧ್ಯವಿಲ್ಲ. ಆದರೆ ಅಭಿವೃದ್ಧಿ ಜತೆಗೆ ಪಾಕೃತಿಕ ಸಮತೋಲನ ಕಾಪಾಡುವ ಕೆಲಸವನ್ನು ನಾವು ಕಟ್ಟು ನಿಟ್ಟಾಗಿ ಮಾಡಬೇಕಾಗಿತ್ತು. ಆದರೆ ಆ ವಿಚಾರದಲ್ಲಿ ನಾವು ಎಡವಿದ್ದೇವೆ. ಅದು ನಮ್ಮನ್ನು ಬೇರೆ, ಬೇರೆ ರೀತಿಯಿಂದ ಸಂಕಷ್ಟಕ್ಕೆ ತಳ್ಳುತ್ತಿದೆ.
ಜಲಸಂರಕ್ಷಣಾ ಕಾರ್ಯಕ್ಕೆ ಮುಂದಾಗೋಣ
ಬೃಹತ್ ಕಟ್ಟಡ ಕಟ್ಟಲು, ಹೈಟೆನ್ಷನ್ ವಿದ್ಯುತ್ ತಂತಿ ಮಾರ್ಗಕ್ಕಾಗಿ ಮರಕಾಡುಗಳ ಹನನ ಮಾಡಿದ್ದೇವೆ. ರಸ್ತೆ, ರೈಲ್ವೆ, ಮಾರ್ಗಗಳಿಗಾಗಿ ಬೆಟ್ಟ ಗುಡ್ಡವನ್ನು ಅಗೆದಿದ್ದೇವೆ. ಇದರಿಂದ ಪ್ರಾಕೃತಿಕ ಪರಿಸರ ಬುಡಮೇಲು ಆಗಿದೆ. ಆದರೆ ಅದಕ್ಕೆ ತಕ್ಕಂತೆ ಪ್ರಕೃತಿಯನ್ನು ಕಾಪಾಡುವ ಕೆಲಸ ಮಾಡಿದ್ದೇವಾ? ಖಂಡಿತಾ ಇಲ್ಲ. ಇದರ ಪರಿಣಾಮಗಳನ್ನು ಈಗಾಗಲೇ ಅನುಭವಿಸಿದ್ದೇವೆ. ಈಗಲೂ ಭೂಕುಸಿತ, ಪ್ರವಾಹ, ಜಲಕ್ಷಾಮ ಹೇಗೆ ಎಲ್ಲವೂ ನಮ್ಮನ್ನು ಕಾಲಕ್ಕೆ ತಕ್ಕಂತೆ ಕಾಡಿದೆ, ಕಾಡುತ್ತಲೂ ಇದೆ.
ಇವತ್ತು ಬಹಳಷ್ಟು ಕಡೆಗಳಲ್ಲಿ ಗದ್ದೆಗಳು ತೋಟಗಳಾಗಿವೆ. ನಿವೇಶನಗಳಾಗಿವೆ. ಗದ್ದೆಯಿದ್ದಾಗ ನೀರು ನಿಂತು ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಮಲೆನಾಡು ಭಾಗದಲ್ಲಿ ಅದರಲ್ಲೂ ಕೊಡಗಿನಲ್ಲಿ ಹಲವು ಕಾರಣಗಳಿಂದಾಗಿ ಭತ್ತದ ಕೃಷಿ ಕಡಿಮೆಯಾಗಿದೆ ಇದರ ಪರಿಣಾಮ ಅಂತರ್ಜಲ ಸಮಸ್ಯೆ ಎದುರಾಗುತ್ತಿದೆ. ಬೇಸಿಗೆ ಬರುತ್ತಿದ್ದಂತೆಯೇ ಹೊಳೆ, ಬಾವಿಗಳಲ್ಲಿ ನೀರು ಪಾತಾಳ ಸೇರಿ ನೀರಿನ ಸಮಸ್ಯೆ ಎದುರಾಗುತ್ತಿದೆ.
ಇನ್ನು ಮುಂದೆಯಾದರೂ ಮರಗಿಡಗಳನ್ನು ಹೆಚ್ಚು ಹೆಚ್ಚು ನೆಡುವುದು, ಸಾಧ್ಯವಾದಗಲೆಲ್ಲ ಇಂಗು ಗುಂಡಿಗಳನ್ನು ನಿರ್ಮಿಸುವುದು, ಕೊಳವೆ ಬಾವಿ ಇರುವ ಸ್ಥಳಗಳಲ್ಲಿ ಹೊಂಡಗಳನ್ನು ತೋಡಿ ಮಳೆಕೊಯ್ಲು ಮಾಡುವುದು, ಹೀಗೆ ಜಲಸಂರಕ್ಷಣೆಯ ಕಾರ್ಯವನ್ನು ಮಾಡಿದ್ದೇ ಆದರೆ ಒಂದಿಷ್ಟು ಸಮಾತೋಲನೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಬಹುದೇನೋ..?












Click it and Unblock the Notifications