ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗ್ತಾರೆ? ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಕೇಸರಿ ಉತ್ಸವ ನಡೆಸುವ ನಾಯಕರು ಬಿಜೆಪಿಗೆ ಬೇಕಾ?
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇದೆ. ಸರಿಯಾದ ಕಾಲಘಟ್ಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮೂರು ವರ್ಷದ ಅಧಿಕಾರಾವಧಿ ಮುಗಿದಿದೆ. ಚುನಾವಣೆಗೆ ಪಕ್ಷವನ್ನು ಮುನ್ನಡೆಸಬಲ್ಲ ನಾಯಕನಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ಕೊಡಲು ವರಿಷ್ಠರು ಶೋಧ ನಡೆಸಿದ್ದಾರೆ.
ಈ ತಿಂಗಳಲ್ಲಿ ಕಟೀಲ್ ಅವಧಿ ಮುಗಿಯುತ್ತದೆ. ಅಷ್ಟರೊಳಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಲಿದೆ. ಅಂದರೆ ಇನ್ನು ನಾಲ್ಕೈದು ದಿನದಲ್ಲಿ ಘೋಷಣೆ ಆಗುವುದು ಖಚಿತ ಎನ್ನಲಾಗಿದೆ. ಅಷ್ಟರೊಳಗೆ ರಾಜ್ಯ ಬಿಜೆಪಿಗೆ ಸಮರ್ಥವಾಗಿರುವ ಹೊಸ ಅಧ್ಯಕ್ಷರು ಸಿಗುತ್ತಾರಾ?
2023ರ ಚುನಾವಣೆಯನ್ನು ಎದುರಿಸಲು ಬಿಜೆಪಿ ವರಿಷ್ಠರು ಈಗಾಗಲೇ ಗ್ರೌಂಡ್ ವರ್ಕ್ ಶುರು ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ಪ್ರತಿಷ್ಠಿತ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ ಜಿವಿ ಅವರನ್ನು ಕರೆತರಲಾಗಿದೆ.
ಚುನಾವಣೆಯಲ್ಲಿ ಹಸಿದ ಹುಲಿಯಂತೆ ಬಿಜೆಪಿಯ ಮೇಲೆ ಮುಗಿದುಬೀಳಲು ಅಣಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮೋತ್ಸವ ಹೊಸ ರಂಗು ಕೊಟ್ಟಿದೆ. ಬಹುತೇಕ ಬಿಜೆಪಿ ನಾಯಕರು ಸಿದ್ದರಾಮಯ್ಯ ಎಂದರೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ. ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಸಿದ್ದರಾಮಯ್ರನ್ನು ಎದುರುಗೊಳ್ಳಲು ಬಿಜೆಪಿಯಲ್ಲಿ ಅಂಥ ಸಮರ್ಥರು ಯಾರಿದ್ದಾರೆ?

ಕಟೀಲ್ ಯಾಕಿಲ್ಲ?
ಈಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿಎಲ್ ಸಂತೋಷ್ ಅವರ ಶಿಫಾರಸಿನ ಮೇರೆಗೆ ನಳಿನ್ ಕುಮಾರ್ ಕಟೀಲ್‌ರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇರಿಸಲಾಗಿತ್ತು. ಮೂಲಗಳ ಪ್ರಕಾರ ಯಡಿಯೂರಪ್ಪರ ಪ್ರಭಾವಳಿಯನ್ನು ತಗ್ಗಿಸುವ ಉದ್ದೇಶದಿಂದ ಕಟೀಲ್‌ರನ್ನು ಅಖಾಡಕ್ಕೆ ಇಳಿಸಲಾಗಿತ್ತು ಎನ್ನಲಾಗುತ್ತದೆ. ಹೆಸರಿಗಷ್ಟೇ ಕಟೀಲ್, ಆದರೆ, ಅದರ ಹಿಂದೆ ಸೂತ್ರಪಟ ಹಿಡಿದು ಆಡಿಸುತ್ತಿದ್ದುದು ಬೇರೆಯವರೇ ಎಂದೂ ಹೇಳಲಾಗುತ್ತದೆ.
ಆದರೆ, ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಬಹಳ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಲ್ಲ ಮತ್ತು ಇಡೀ ಪ್ರದೇಶಕ್ಕೆ ಪ್ರಭಾವ ವ್ಯಾಪಿಸಬಹುದಾದ ನಾಯಕರು ಬೇಕಾಗಿದೆ. ಅಲ್ಲದೇ ಇತ್ತೀಚೆಗೆ ನಡೆದ ಹಿಂದೂ ಮುಖಂಡರ ಕೊಲೆ ಪ್ರಕರಣಗಳು, ಬುರ್ಖಾ ವಿವಾದ ಇತ್ಯಾದಿಯನ್ನು ರಾಜ್ಯ ನಾಯಕತ್ವ ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬ ಅಸಮಾಧಾನ ವರಿಷ್ಠರಿಗೆ ಇದೆ. ರಾಜ್ಯದಲ್ಲಿ ಈ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಳೀನ್ ಕುಮಾರ್ ಕಟೀಲ್‌ಗೆ ನೀಡುವುದು ಸೂಕ್ತವಲ್ಲ ಎಂಬ ನಿಲುವಿಗೆ ವರಿಷ್ಠರು ಬಂದಿದ್ದಾರೆ. ಹೀಗಾಗಿ, ಹೊಸ ರಾಜ್ಯಾಧ್ಯಕ್ಷರಿಗಾಗಿ ಹುಡುಕಾಟ ನಡೆದಿದೆ.

ಸಿದ್ದರಾಮೋತ್ಸವ vs ಕೇಸರಿ ಉತ್ಸವ
2023ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ದೊಡ್ಡ ಸವಾಲುಗಳಿವೆ. ಒಂದೆಡೆ ಆಡಳಿತವಿರೋಧಿ ಅಲೆ, ಇನ್ನೊಂದೆಡೆ ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಇದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದ ಸವಾಲು ಇದೆ. 40 ಪರ್ಸೆಂಟ್ ಕಮಿಷನ್ ಭೂತ ಮತ್ತೆ ಕಾಡಿ ರಾಜ್ಯ ಸರಕಾರಕ್ಕೆ ಭ್ರಷ್ಟಾಚಾರದ ಮಸಿ ಮೆತ್ತುತ್ತಿದೆ. ಬಿಜೆಪಿಯ ಬಲ ಮತ್ತು ದೌರ್ಬಲ್ಯ ಎರಡೂ ಆಗಿರುವ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಇಲ್ಲದಿರುವುದು ಪಕ್ಷಕ್ಕೆ ಕಷ್ಟ ಕೊಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಜನರ ಮತಗಳನ್ನು ಸೆಳೆಯುವಷ್ಟು ಪ್ರಭಾವ ಹೊಂದಿಲ್ಲ. ಹಿಂದೆ ಯಡಿಯೂರಪ್ಪ ಪ್ಲಸ್ ಮೋದಿ ಪ್ಲಸ್ ಕೇಸರಿ ಕಾರ್ಯತಂತ್ರ ಕೆಲಸ ಮಾಡಿತ್ತು. ಈಗ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಬಿಜೆಪಿ ವಿಭಿನ್ನ ಕಾರ್ಯತಂತ್ರದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲಿದೆ.
ಕಾಂಗ್ರೆಸ್ ಪಕ್ಷದ ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಬಿಜೆಪಿಗೆ ಕೇಸರಿ ಉತ್ಸವ ನಡೆಸುವುದು ಅನಿವಾರ್ಯವಾಗಬಹುದು. ಸಿದ್ದರಾಮಯ್ಯನವರ ಹರಿತವಾದ ವಾಗ್ದಾಳಿಗಳನ್ನು ಅಷ್ಟೇ ಸಮರ್ಥವಾಗಿ ಸಂಭಾಳಿಸುವ ನಾಯಕರು, ಹಿಂದುತ್ವದ ಚಿಂತನೆಯನ್ನು ರಾಜಕೀಯವಾಗಿ ಸಮರ್ಥವಾಗಿ ಬಳಸಿಕೊಳ್ಳಬಲ್ಲ ನಾಯಕರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸುವ ಸಾಧ್ಯತೆ ಇದೆ.

ಬಿಜೆಪಿಯ ಸಂಭಾವ್ಯ ರಾಜ್ಯಾಧ್ಯಕ್ಷರಿವರು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಚಾಲನೆಯಲ್ಲಿದೆ. ಏಳೆಂಟು ಜನರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಅದರಲ್ಲಿ ಮೂವರ ಹೆಸರು ಬಹಳ ಮುಖ್ಯವಾಗಿ ಗಮನ ಸೆಳೆದಿದೆ.
ಸಿಟಿ ರವಿ: ನಾಲ್ಕು ಬಾರಿ ಶಾಸಕರಾಗಿರುವ ಸಿಟಿ ರವಿ ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಕ್ಷ ಸಂಘಟನೆಗೋಸ್ಕರ ಸಚಿವ ಸ್ಥಾನವನ್ನು ತ್ಯಜಿಸಿ ಹೋಗಿರುವ ಸಿಟಿ ರವಿ ಬಹಳ ವಾಕ್‌ಚಾತುರ್ಯ ಇರುವ ನಾಯಕ. ಪ್ರಖರ ಹಿಂದುತ್ವ ಪ್ರತಿಪಾದಿಸುವ ನಾಯಕ. ಒಕ್ಕಲಿಗ ಜಾತಿಯ ಬಲ ಇರುವ ನಾಯಕನೂ ಹೌದು. ತಮಿಳುನಾಡು ಮೊದಲಾದ ಕೆಲವಾರು ರಾಜ್ಯಗಳಲ್ಲಿ ಇವರು ಬಿಜೆಪಿ ಸಂಘಟನಾ ಉಸ್ತುವಾರಿಯಾಗಿ ಕೆಲಸ ನಿಭಾಯಿಸಿದ್ದಾರೆ. ಹಾಗೆಯೇ, ಬಿಎಲ್ ಸಂತೋಷ್ ಅವರ ಬೆಂಬಲವೂ ಸಿಟಿ ರವಿಗೆ ಇದೆ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸುನೀಲ್ ಕುಮಾರ್: ಕರಾವಳಿ ಜಿಲ್ಲೆಯವರಾದ ಸುನೀಲ್ ಕುಮಾರ್ ಸದ್ಯ ಇಂಧನ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಬಿಲ್ಲವ ಸಮುದಾಯದ ಇವರು ಸಿಟಿ ರವಿಯಂತೆ ಪ್ರಖರ ಹಿಂದುತ್ವವಾದಿ. ಹಿಂದುಳಿದ ಸಮುದಾಯಕ್ಕೆ ನಾಯಕತ್ವ ನೀಡಬೇಕೆಂದು ವರಿಷ್ಠರು ನಿರ್ಧರಿಸಿದಲ್ಲಿ ಸುನೀಲ್ ಕುಮಾರ್‌ಗೆ ರಾಜ್ಯಾಧ್ಯಕ್ಷ ಸ್ಥಾನ ಒಲಿಯಬಹುದು.
ಶೋಭಾ ಕರಂದ್ಲಾಜೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಲಾಗಿದ್ದ ಶೋಭಾ ಕರಂದ್ಲಾಜೆ ಸದ್ಯ ಕೇಂದ್ರ ಸಚಿವೆಯಾಗಿದ್ದಾರೆ. ರಾಜ್ಯ ಸರಕಾರದಲ್ಲಿ ಇವರು ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಉತ್ತಮ ಸಚಿವೆ ಎಂದೂ ಖ್ಯಾತರಾಗಿದ್ದಾರೆ. ಹಿಂದುತ್ವದ ವಿಚಾರಗಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ಒಕ್ಕಲಿಗ ಜಾತಿಯ ಬಲವೂ ಇವರಿಗೆ ಇದೆ. ಆದರೆ, ಪಕ್ಷ ಸಂಘಟನೆಯ ಕಾರ್ಯವನ್ನು ಇವರು ಹೇಗೆ ನಿಭಾಯಿಸಬಲ್ಲರು ಎಂಬುದು ಪ್ರಶ್ನೆ.

ಎರಡನೇ ಸಾಲಿನ ಹೆಸರುಗಳು
ಡಾ. ಸಿ.ಎನ್. ಅಶ್ವತ್ಥನಾರಾಯಣ: ಇವರು ಬಿಜೆಪಿಯಲ್ಲಿ ಬಹಳ ಸದ್ದಿಲ್ಲದೇ ಬೆಳೆಯುತ್ತಿರುವ ನಾಯಕ. ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ವೈದ್ಯಕೀಯ ಶಿಕ್ಷಣ ಪಡೆದಿರುವವರು. ರಾಮನಗರ, ಕನಕಪುರ ಭಾಗಗಳಲ್ಲಿ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವರನ್ನು ಎದುರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಅರವಿಂದ್ ಬೆಲ್ಲದ: ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ಹೊಸ ಸಿಎಂ ಆಯ್ಕೆ ವಿಚಾರ ಬಂದಾಗ ಮುಂಚೂಣಿಯಲ್ಲಿದ್ದ ಹೆಸರುಗಳಲ್ಲಿ ಅರವಿಂದ್ ಬೆಲ್ಲದ್ ಕೂಡ ಒಬ್ಬರು. ಪ್ರಭಾವಿ ಲಿಂಗಾಯತ ಕೋಮಿಗೆ ಸೇರಿದ ಇವರು ಹಿರಿಯ ನಾಯಕ ಚಂದ್ರಕಾಂತ ಬೆಲ್ಲದ ಅವರ ಮಗ.
ಅರವಿಂದ್ ಲಿಂಬಾವಳಿ: ಸಿಎಂ ರೇಸ್‌ನಲ್ಲಿ ಇವರ ಹೆಸರೂ ಇತ್ತು. ಹಿಂದುಳಿದ ವರ್ಗಗಳ ಅರವಿಂದ್ ಲಿಂಬಾವಳಿಗೆ ಸಚಿವ ಸ್ಥಾನ ದಕ್ಕದೇ ಹೋಗಿದೆ. ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಬಾವಳಿ ಹೆಸರು ಕೇಳಿಬರುತ್ತಿದೆ. ಹಿಂದಿನ ಒಂದೆರಡು ವಿವಾದ ಬಿಟ್ಟರೆ ಉಳಿದಂತೆ ಲಿಂಬಾವಳಿ ಹೆಚ್ಚು ವಿವಾದಾತ್ಮಕ ಎನಿಸಿಲ್ಲ.
ಆರ್ ಅಶೋಕ್: ಇವರು ರಾಜಕೀಯದಲ್ಲಿ ಪಳಗಿದವರು. ಉಪಮುಖ್ಯಮಂತ್ರಿಯಾಗಿದ್ದವರು. ಬೆಂಗಳೂರಿನ ಕಠಿಣ ಪೈಪೋಟಿಯ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಮತ್ತು ಪ್ರಭಾವ ಉಳಿಸಿಕೊಂಡಿರುವವರು. ಪ್ರಬಲ ಒಕ್ಕಲಿಗ ಕೋಮಿನವರು. ಜನಸಂಘಟನೆಯಲ್ಲಿ ಮತ್ತು ಚುನಾವಣಾ ರಾಜಕೀಯದಲ್ಲಿ ಬಹಳ ನಿಷ್ಣಾತ ಎನಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications