Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು
ಬೆಂಗಳೂರು, ಜನವರಿ 18; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಲಾಗಿದೆ. ಆಯೋಗಕ್ಕೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದ್ದು, ಅದು ತನ್ನ ಕಾರ್ಯವನ್ನು ಆರಂಭ ಮಾಡಿದೆ.
7ನೇ ರಾಜ್ಯ ವೇತನ ಆಯೋಗದ ಜಂಟಿ ಕಾರ್ಯದರ್ಶಿ ಜಿ. ಬಿ. ಹೇಮಣ್ಣ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ವೇತನ ಆಯೋಗ ರಚನೆ ಮಾಡಿದೆ ಎಂದು ಹೇಳಿದ್ದಾರೆ.
19/11/2022 ರಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಿದೆ ಎಂದು ಹೇಳಿದೆ. ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಈಗ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಈ ಕೆಳಕಂಡ ಪ್ರಶ್ನಾವಳಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸಿದೆ.
ಈ ಪ್ರಶ್ನಾವಳಿಗಳಿಗೆ ಸರ್ಕಾರದ ಅಮುಕಾ/ ಪ್ರಕಾ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾನಿಲಯಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ನೌಕರರು, ನಿವೃತ್ತ ವೇತನದಾರರು ಹಾಗೂ ಆಸಕ್ತ ಸಾರ್ವಜನಿಕರು, ಉತ್ತರಗಳನ್ನು ತಮ್ಮ ಅನಿಸಿಕೆ ಹಾಗೂ ಮುಕ್ತ ಸಲಹೆಗಳನ್ನು ಸಲ್ಲಿಸಬಹುದಾಗಿದೆ. 10/2/2023 ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ಪ್ರಶ್ನಾವಳಿಗಳನ್ನು ಹೀಗೆ ವಿಭಜಿಸಲಾಗಿದೆ
7ನೇ ರಾಜ್ಯ ವೇತನ ಆಯೋಗದ ಜಂಟಿ ಕಾರ್ಯದರ್ಶಿ ಜಿ. ಬಿ. ಹೇಮಣ್ಣ ಪ್ರಶ್ನಾವಳಿಗಳನ್ನು ಹೇಗೆ ವಿಭಾಗ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 7 ಅಂಶಗಳನ್ನು ತಿಳಿಸಲಾಗಿದೆ. ಅದು ಹೀಗಿದೆ.
1. ಪ್ರಶ್ನಾವಳಿ-ಎ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ
2. ಪ್ರಶ್ನಾವಳಿ-ಬಿ ಸರ್ಕಾರದ ಅಮುಕಾ/ ಪ್ರಕಾ/ ಕಾರ್ಯದರ್ಶಿಗಳಿಗೆ
3. ಪ್ರಶ್ನಾವಳಿ-ಸಿ ಇಲಾಖಾ ಮುಖ್ಯಸ್ಥರಿಗೆ
4. ಪಶ್ನಾವಳಿ-ಡಿ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿ ವರ್ಗದವರಿಗೆ
5. ಪ್ರಶ್ನಾವಳಿ-ಇ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ
6. ಪ್ರಶ್ನಾವಳಿ-ಎಫ್ ಸ್ಥಳೀಯ ಸಂಸ್ಥೆಗಳಿಗೆ
7. ಪ್ರಶ್ನಾವಳಿ-ಜಿ ಸಾರ್ವಜನಿಕರಿಗೆ

ಹುದ್ದೆಗಳ ಸಮಾನತೆ ನಿರ್ಧಾರ
ರಾಜ್ಯ ಸರ್ಕಾರದ ಆದೇಶದಲ್ಲಿ ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ಅವರಿಗೆ ಹೊಸ ವೇತನ ರಚನೆಯನ್ನು ಶಿಫಾರಸ್ಸು ಮಾಡಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿದೆ.
ಆಯೋಗವನ್ನು ನಿರ್ದಿಷ್ಟವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಸಿಬ್ಬಂದಿಗಳ ನಡುವಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರೀಯ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಕೋರಲಾಗಿದೆ ಎಂದು ತಿಳಿಸಲಾಗಿದೆ.

ವೇತನ, ಭತ್ಯೆ, ವೈದ್ಯಕೀಯ ಸೌಲಭ್ಯ
7ನೇ ರಾಜ್ಯ ವೇತನ ಆಯೋಗವು, ನಿವೃತ್ತಿ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅವಶ್ಯವಿರುವ ಬದಲಾವಣೆಗಳ ಕುರಿತು ಸಹ ಶಿಫಾರಸ್ಸು ಮಾಡುವಂತೆ ಸೂಚಿಸಲಾಗಿದೆ.
ಆಯೋಗವು ತನ್ನ ಶಿಫಾರಸ್ಸುಗಳನ್ನು ಮಾಡುವಲ್ಲಿ ರಾಜ್ಯದ ಸಂಪನ್ಮೂಲಗಳು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತಾದ ರಾಜ್ಯ ಸರ್ಕಾರದ ಹೊಣೆಗಳು, ಶಾಸನಬದ್ಧ ಹಾಗೂ ನಿಯಂತ್ರಕ ಕಾರ್ಯಗಳು, ಋಣ ಸೇವಾ ನಿರ್ವಹಣೆಗಳು ಮತ್ತು ಇತರೆ ಅಭಿವೃದ್ಧಿಯೇತರ ಅಗತ್ಯಗಳನ್ನು ಮತ್ತು ರಾಜ್ಯ ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಅಧಿನಿಯಮ 2002ರ ಅವಕಾಶಗಳ ಪರಿಮಿತಿಯನ್ನು ಗಮನದಲ್ಲಿರಿಸಬೇಕಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರಿ ನೌಕರರ ವೇತನ ಶ್ರೇಣಿ
ರಾಜ್ಯ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿಗಳ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಯನ್ನು ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ಅಥವಾ ವೇತನ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ.
ಕಳೆದ ಬಾರಿ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ವೇತನ ಭತ್ಯೆಗಳನ್ನು, ದಿನಾಂಕ 01/7/2017 ರಿಂದ ಜಾರಿಗೆ ಬರುವಂತೆ ಹಾಗೂ ಆರ್ಥಿಕ ಪ್ರಯೋಜನಗಳು ದಿನಾಂಕ 01/04/2018 ರಿಂದ ಅನ್ವಯವಾಗುವಂತೆ 2018 ರಲ್ಲಿ ಪರಿಷ್ಕರಿಸಲಾಯಿತು.
ಸರ್ಕಾರಿ ನೌಕರರ ವೇತನ ಶ್ರೇಣಿ, ಹೊಸ ವೇತನ ರಚನೆ ಮಾಡುವಾಗ ಸಾಮಾನ್ಯವಾಗಿ ಅಳವಡಿಸಿಕೊಳ್ಳುವ ಮಾನದಂಡಗಳಲ್ಲಿ ವಿವಿಧ ಹುದ್ದೆಗಳ ವಿದ್ಯಾರ್ಹತೆ ಮತ್ತು ತರಬೇತಿ, ಜವಾಬ್ದಾರಿಯ ಪ್ರಮಾಣ, ಕಾರ್ಯಕ್ಷೇತ್ರದ ವ್ಯಾಪ್ತಿ, ವೃತ್ತಿ ಸಂಬಂಧಿತ ತೊಂದರೆಗಳು, ನಿರ್ಣಯ ತೆಗೆದುಕೊಳ್ಳಲು ಅಗತ್ಯವಿರುವ ಹಂತಗಳು, ಬಡ್ತಿ ಅವಕಾಶಗಳು, ಇತರೇ ಇಲಾಖೆಗಳಲ್ಲಿರುವ ಸಮಾನ ದರ್ಜೆಯ ಹುದ್ದೆಗಳ ಸಮಾನಾಂತರ ಹಾಗೂ ನೇರ ಸಂಬಂಧ ತುಲನಾತ್ಮಕ ಸ್ವರೂಪ ಮತ್ತು ಕಾಲಕಾಲಕ್ಕೆ ರಚನೆ ಆಗಿರುವ ವೇತನ ಶ್ರೇಣಿಗಳ ಕುರಿತ ಐತಿಹಾಸಿಕ ಸಂಬಂಧಗಳು ಮುಂತಾದವುಗಳನ್ನು ಒಳಗೊಂಡಿದೆ.
{document3}












Click it and Unblock the Notifications