Karnataka 7th Pay Commission; ವೇತನ ಬಡ್ತಿ ದರಗಳ ವ್ಯತ್ಯಾಸ, ವಿವರ
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿರುವ ಉತ್ತರಗಳಲ್ಲಿ ಕೇಂದ್ರ ಸರ್ಕಾರಿ ನೌಕರರು, ಕೇರಳ ರಾಜ್ಯದ ನೌಕರರ ವಾರ್ಷಿಕ ವೇತನ ಬಡ್ತಿ ದರಗಳ ವ್ಯತ್ಯಾಸದ ಬಗ್ಗೆ ವಿವರಣೆಯನ್ನು ನೀಡಿದೆ.
ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗೆ ಉತ್ತರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರಿ ನೌಕರರು, ಕೇರಳ ರಾಜ್ಯದ ನೌಕರರ ವಾರ್ಷಿಕ ವೇತನ ಬಡ್ತಿ ದರಗಳ ವ್ಯತ್ಯಾಸದ ಬಗ್ಗೆ ವಿವರಣೆಯನ್ನು ನೀಡಿದೆ.
ಸಿ. ಎಸ್. ಷಡಾಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ 7ನೇ ರಾಜ್ಯ ವೇತನ ಆಯೋಗಕ್ಕೆ ವಾರ್ಷಿಕ ವೇತನ ಬಡ್ತಿ ದರವನ್ನು ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಕನಿಷ್ಠ ಮೂಲ ವೇತನಕ್ಕೆ ಶೇ 3.04ರಷ್ಟು ವೇತನ ಬಡ್ತಿ ದರವನ್ನು ಮಂಜೂರು ಮಾಡುವಂತೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಮಾತ್ರ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರವನ್ನು ನೀಡಿದೆ. ಆಯೋಗ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವೃಂದವಾರು ಹಾಗೂ ಇಲಾಖಾವಾರು ಮಾಹಿತಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಲು ಸಮಯವನ್ನು ನೀಡಲಿದೆ. ಬಳಿಕ ಅಂತಿಮ ವರದಿ ಸಿದ್ಧಪಡಿಸಲಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಚುನಾವಣಾ ಬಜೆಟ್ ಆಗಿರುವ ಕಾರಣಕ್ಕೆ 7ನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ಅನುದಾನ ಮೀಸಲಿಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

ವೇತನ ಬಡ್ತಿಯಲ್ಲಿನ ವ್ಯತ್ಯಾಸ
ಕೇಂದ್ರ ಮತ್ತು ಇತರೆ ರಾಜ್ಯಗಳ ವಾರ್ಷಿಕ ವೇತನ ಬಡ್ತಿ ದರಗಳ ವ್ಯತ್ಯಾಸದ ವಿವರ ಹೀಗಿದೆ (ಕನಿಷ್ಠ ಮೂಲ ವೇತನ). ಕೇಂದ್ರ ಸರ್ಕಾರ ಶೇ 3, ಕೇರಳ ಸರ್ಕಾರ ಶೇ 3.04 ಮತ್ತು ಕರ್ನಾಟಕ ಸರ್ಕಾರ ಶೇ 2.35 ಆಗಿರುತ್ತದೆ.
ಕೇಂದ್ರ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದ ಸಂದರ್ಭದಲ್ಲಿ ಪೇ ಬ್ಯಾಂಡ್ ವ್ಯವಸ್ಥೆ ಜೊತೆಗೆ ವಾರ್ಷಿಕ ವೇತನ ಬಡ್ತಿ ದರಗಳನ್ನು ನಿರ್ಧಿಷ್ಟ ಪ್ರಮಾಣಕ್ಕೆ ಬದಲಾಗಿ ಮೂಲ ವೇತನದ ಶೇ. 3 ರಷ್ಟು ವೇತನ ಬಡ್ತಿ ದರವನ್ನು ದಿನಾಂಕ 1/1/2006ರಿಂದ ಜಾರಿ ಮಾಡಿ ಇಂದಿನವರೆಗೂ ಮುಂದುವರಿಸಿರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ವಾರ್ಷಿಕ ಬಡ್ಡಿ ದರವನ್ನು ಶೇ. 3 ಹಾಗೂ ಕೇರಳ ರಾಜ್ಯ ಸರ್ಕಾರವು ಶೇ. 3.04ರಷ್ಟು ವಾರ್ಷಿಕ ವೇತನ ಬಡ್ತಿ ದರವನ್ನು ನೀಡುತ್ತಿವೆ. ಕರ್ನಾಟಕ ಸರ್ಕಾರವು ಶೇ. 2.35 ನೀಡುತ್ತಿದ್ದು, ಇದರಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ನೀಡುತ್ತಿರುವ ವಾರ್ಷಿಕ ವೇತನ ಬಡ್ತಿ ಒಂದರಲ್ಲೇ ಹಲವು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರು ಆರ್ಥಿಕ ನಷ್ಟಕ್ಕೆ ಗುರಿಯಾಗಿರುತ್ತಾರೆ. ವಾರ್ಷಿಕ ವೇತನ ಬಡ್ತಿ ದರವನ್ನು ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಕನಿಷ್ಠ ಮೂಲವೇತನಕ್ಕೆ ಶೇ. 3.04 ರಷ್ಟು ವೇತನ ಬಡ್ತಿ ದರವನ್ನು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಬೇಕು ಎಂದು ನೌಕರರ ಸಂಘ ಹೇಳಿದೆ.

ಕೇಂದ್ರ ಮಾದರಿಯ ವೇತನದ ಬಗ್ಗೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವೇತನ ಆಯೋಗಕ್ಕೆ ಸಲ್ಲಿಸಿರುವ ಉತ್ತರದಲ್ಲಿ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರು ಹಲವಾರು ವರ್ಷಗಳಿಂದ ಕೇಂದ್ರ ಮಾದರಿ ವೇತನವನ್ನು ನೀಡುವಂತೆ ಆಗ್ರಹಿಸಿ ಹೋರಾಟಗಳನ್ನು ಮಾಡಿದ್ದರು. ಆದರೆ ಇದುವರೆವಿಗೂ ಯಾವ ಸರ್ಕಾರಗಳು ಈ ಬಗ್ಗೆ ಗಮನಹರಿಸಲಿಲ್ಲ.
ಕರ್ನಾಟಕ ರಾಜ್ಯ ಸರ್ಕಾರವು 7ನೇ ವೇತನದ ಆಯೋಗದ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ಪರಿಶೀಲಿಸಲು ಸೂಚಿಸಿರುತ್ತದೆ. ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಈಗಾಗಲೇ 2 ವೇತನ ಆಯೋಗ, ಸಮಿತಿಗಳ ಸೌಲಭ್ಯಗಳಿಂದ ವಂಚಿತರಾಗಿರುವುದರಿಂದ ಹಾಗೂ ಮಾರ್ಚ್ 2023ಕ್ಕೆ 5 ವರ್ಷಗಳ ಅವಧಿಯನ್ನು 6ನೇ ವೇತನ ಆಯೋಗ ಪೂರ್ಣಗೊಳ್ಳುವುದರಿಂದ, ಅಲ್ಲದೇ ಈಗಾಗಲೇ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಸೌಲಭ್ಯವನ್ನು ಪಡೆದು ಈಗಾಗಲೇ 7 ವರ್ಷಗಳು ಕಳೆದಿರುವುದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.
ಆದುದರಿಂದ ಪ್ರಸ್ತುತ 7ನೇ ರಾಜ್ಯ ವೇತನ ಆಯೋಗದ ಸೌಲಭ್ಯವನ್ನು ಪಡೆದ ನಂತರ ಕೇಂದ್ರ ಸರ್ಕಾರವು 2026ರಲ್ಲಿ ಪರಿಷ್ಕರಿಸಲಿರುವ ವೇತನ ಶ್ರೇಣಿ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಹೇಳಿದೆ.

7ನೇ ವೇತನ ಆಯೋಗದ ವರದಿಯಲ್ಲಿ ಗಮನಿಸಿದ ಅಂಶಗಳು
ವೇತನವು ಆಕರ್ಷಿತವಾಗಿ ಹಾಗೂ ಹೆಚ್ಚು ಪ್ರತಿಭೆಯುಳ್ಳ ನೌಕರರನ್ನು ಉಳಿಸಿಕೊಳ್ಳುವಿಕೆ. ವೇತನವು ಹೆಚ್ಚು ಶ್ರಮವಹಿಸಿ ಕೆಲಸ ಮಾಡುವಂತೆ ಪ್ರೇರೇಪಿಸುವುದು. ವೇತನ ನೀತಿಯು ಇತರ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸುಧಾರಣೆಗಳನ್ನು ಪ್ರೇರೇಪಿಸುವುದು. ವೇತನವು ದೀರ್ಘಕಾಲದವರೆಗೆ ಆರ್ಥಿಕವಾಗಿ ತಡೆದುಕೊಳ್ಳುವ ಮಟ್ಟದಲ್ಲಿರುವಂತೆ ಖಾತ್ರಿ ಪಡಿಸಿಕೊಳ್ಳುವುದು.
ಹಿಂದಿನ ವ್ಯವಸ್ಥೆಯಲ್ಲಿದ್ದ ಪೇ ಬ್ಯಾಂಡ್ ಮತ್ತು ಗ್ರೇಡ್ ಪೇ ಗಳನ್ನು ಬದಲಾವಣೆಗೊಳಿಸಿ ವೇತನದಲ್ಲಿದ್ದ ಪೇ ಬ್ಯಾಂಡ್‌ಗಳನ್ನು ಗ್ರೇಡ್ ಪೇನೊಂದಿಗೆ ವಿಲೀನಗೊಳಿಸಿ ಹೊಸ ವೇತನಕೋಶಗಳನ್ನು ಪರಿಚಯಿಸಿದೆ. ಯಾವುದೇ ಹೊಸದಾದ ಕೋಶಗಳನ್ನು ಪರಿಚಯಿಸದೆ ಹಾಗೂ ಯಾವುದೇ ಹಂತಗಳನ್ನು ತೆಗೆದು ಹಾಕದೇ ಹೊಸ ವೇತನ ಶ್ರೇಣಿಗಳನ್ನು ವೇತನ ಮೆಟ್ರಿಕ್ಸ್ ರೂಪದಲ್ಲಿ ಪರಿಚಯಿಸಿದೆ. 15ನೇ ಅಂತರಾಷ್ಟ್ರೀಯ ಆಯೋಗದ ತತ್ವಗಳನ್ನು ಆಧರಿಸಿ ಮೆಟ್ರಿಕ್ಸ್‌ನ ಪ್ರಾರಂಭಿಕ ಕನಿಷ್ಠ ವೇತನವನ್ನು ನಿರ್ಧರಿಸಲಾಗಿದೆ.

ರಾಜ್ಯದ ಪರಿಷ್ಕೃತ ವೇತನ ಸಂದರ್ಭದಲ್ಲಿ ಪರಿಗಣಿಸಬೇಕಾದ ಅಂಶ
ರಾಜ್ಯದಲ್ಲಿ ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ. 32 ರಷ್ಟು ಹುದ್ದೆಗಳು ಖಾಲಿಯಿದ್ದು, ನೌಕರರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಗಳು ಅನೇಕ ಹೊಸ ಯೋಜನೆಗಳು ಹಾಗೂ ಹೊಸ ತಾಲ್ಲೂಕು, ಜಿಲ್ಲೆಯನ್ನು ಘೋಷಣೆ ಮಾಡಿ ನೌಕರರ ಜವಾಬ್ದಾರಿಯನ್ನು ಹೆಚ್ಚಿಸಿದೆ. ರಾಜ್ಯದಲ್ಲಿ 4 ಕೋಟಿ ಜನಸಂಖ್ಯೆ ಇದ್ದಾಗ 7.63 ಲಕ್ಷ ಹುದ್ದೆಗಳಿದ್ದು, ಹಾಲಿ 6.50 ಕೋಟಿ ಜನ ಸಂಖ್ಯೆಗೆ 5.20 ಲಕ್ಷ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜನಸಂಖ್ಯೆ ಹಾಗೂ ಸರ್ಕಾರದ ಹೊಸ ಯೋಜನೆಗಳಿಗೆ ಅನುಗುಣವಾಗಿ ಖಾಲಿ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಸರ್ಕಾರಕ್ಕೆ ಆರ್ಥಿಕ ಉಳಿತಾಯವಾಗಿರುತ್ತದೆ. ಇದರ ನಡುವೆ ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹ ಸಂಪನ್ಮೂಲ ಕ್ರೋಡೀಕರಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯವು ರಾಷ್ಟ್ರದಲ್ಲಿ ಜಿ. ಎಸ್. ಟಿ. ಸಂಗ್ರಹಣೆಯಲ್ಲಿ 2ನೇ ಸ್ಥಾನ, ಅಭಿವೃದ್ಧಿ ಸೂಚ್ಯಾಂಕದಲ್ಲಿ 1ನೇ ಸ್ಥಾನದಲ್ಲಿದೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯವು 5ನೇ ಸ್ಥಾನದಲ್ಲಿದೆ.
ರಾಜಸ್ವ ಸಂಗ್ರಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತಮ ವೇತನ ಹಾಗೂ ಭತ್ಯೆಗಳನ್ನು ಹೆಚ್ಚಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಲಾರದು ಹಾಗೂ ಇದು ನೌಕರರನ್ನು ಉತ್ತೇಜಿಸುವ ಕ್ರಮವಾಗಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ಸಂಪೂರ್ಣ ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿದ ನಂತರದ ಮೊತ್ತಕ್ಕೆ ಶೇ. 40 ರಷ್ಟು ಫಿಟ್ ಮೆಂಟ್ ಸೌಲಭ್ಯವನ್ನು 5 ವರ್ಷ ಪೂರ್ಣಗೊಂಡ ದಿನಾಂಕ 01/07/2022ರಿಂದ ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ನೌಕರರ ಸಂಘ ಹೇಳಿದೆ.












Click it and Unblock the Notifications