Kalasipalya: ಸರಿಯಾಗಿ ಬಳಕೆಯಾಗದ ಬೃಹತ್ ಬಸ್ ನಿಲ್ದಾಣ, ಅಲ್ಲಲ್ಲಿ ಒಂದೊಂದು ಬಸ್ಸುಗಳು
ಸುಮಾರು ಆರು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಕಳೆದ (ಫೆಬ್ರವರಿ) ತಿಂಗಳು ಉದ್ಘಾಟನೆಗೊಂಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ.
ಸುಮಾರು ಆರು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಕಳೆದ (ಫೆಬ್ರವರಿ) ತಿಂಗಳು ಉದ್ಘಾಟನೆಗೊಂಡಿತ್ತು. ಚುನಾವಣಾ ವರ್ಷವಾಗಿರುವುದರಿಂದ ಬೊಮ್ಮಾಯಿ ಸರಕಾರ, ಸಚಿವ ಆರ್.ಅಶೋಕ್ ಅವರ ಒತ್ತಡಕ್ಕೆಂದೋ ಏನೋ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು.
ಬೆಂಗಳೂರು - ಮೈಸೂರು ಹೆದ್ದಾರಿ ವಿಚಾರದಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಏನು ಕ್ರೆಡಿಟ್ ವಾರ್ ನಡೆಯುತ್ತಿದೆಯೋ, ಅದೇ ರೀತಿ ಕಲಾಸಿಪಾಳ್ಯ ಬಸ್ ನಿಲ್ದಾಣದ ವಿಚಾರದಲ್ಲೂ ಕೂಡಾ.. ಅಸಲಿಗೆ ಈ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿದ್ದು ಸಿದ್ದರಾಮಯ್ಯನವರ ಅವಧಿಯಲ್ಲಿ. ಎರಡು ವರ್ಷದ ಹಿಂದೆನೇ ಈ ನಿಲ್ದಾಣ ಕಾರ್ಯಗತಗೊಳ್ಳಬೇಕಿತ್ತು. ಆದರೆ, ಕೊರೊನಾ, ಆರ್ಥಿಕ ಮುಗ್ಗಟ್ಟಿನಿಂದಾಗಿ ಚುನಾವಣಾ ವರ್ಷದಲ್ಲಿ ಈಗ ಚಾಲನೆಗೊಂಡಿದೆ.

ಚುನಾವಣೆ ಇಲ್ಲದೇ ಹೋದ ಪಕ್ಷದಲ್ಲಿ ನಿಲ್ದಾಣದ ಲೋಕಾರ್ಪಣೆ ಇನ್ನಷ್ಟು ದಿನ ಮುಂದಕ್ಕೆ ಹೋಗುತ್ತಿತ್ತೋ ಏನೋ. ಒಂದು ತಿಂಗಳ ಹಿಂದೆ ಆರಂಭಗೊಂಡ ನಿಲ್ದಾಣ ಸದ್ಯ ಕಾಟಾಚಾರಕ್ಕೆ ಕಾರ್ಯನಿರ್ವಹಿಸುತ್ತಿದೆ. ಕೆ.ಆರ್.ಮಾರ್ಕೆಟ್, ಅವೆನ್ಯೂ ರಸ್ತೆ ಮುಂತಾದ ಕಿರಿದಾದ ಜಾಗದಲ್ಲಿನ ಸದಾ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿದ್ದರಾಮಯ್ಯನವರ ಸರಕಾರದ ನಿರ್ಧಾರ ಇದಾಗಿತ್ತು. ಕಲಾಸಿಪಾಳ್ಯ ಟಿಟಿಎಂಸಿ (Traffic and Transit Management Centre) ನಿಲ್ದಾಣ 63.17 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಜಧಾನಿಯ ಹತ್ತಿರದ ನಗರಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಸುಗಳೂ ಇಲ್ಲಿಂದಲೂ ಕಾರ್ಯನಿರ್ವಹಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ. ನಿಲ್ದಾಣ ಆರಂಭವಾಗಿ ಒಂದು ತಿಂಗಳು ಆಗುತ್ತಿದೆ ಮಾತ್ರ, ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ, ಸದ್ಯದ ಮಟ್ಟಿಗೆ ಈ ನಿಲ್ದಾಣ ಸಾರ್ವಜನಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ.

ನಿಲ್ದಾಣದಿಂದ ಕನಕಪುರ, ಮಾಗಡಿ, ಮಳವಳ್ಳಿ, ಚಾಮರಾಜನಗರ, ಮೈಸೂರು ಕಡೆಗೆ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆಯನ್ನೇನ್ನೋ ಆರಂಭಿಸಿದೆ. ಆದರೆ, ಪ್ರಯಾಣಿಕರ ಮತ್ತು ಮಾಹಿತಿಯ ಕೊರತೆಯಿಂದಾಗಿ ನಿಲ್ದಾಣ ಮತ್ತು ಬಸ್ ಬಿಕೋ ಅನ್ನುತ್ತಿದೆ. ಫ್ಲ್ಯಾಟ್ ಫಾರ್ಮ್ ಮಾರ್ಗಸೂಚಿಯಿದ್ದರೂ, ಅನೌನ್ಸಮೆಂಟ್ ಇಲ್ಲದೇ ಇರುವುದು ಪ್ರಯಾಣಿಕರ ಪರದಾಟಕ್ಕೆ ಇನ್ನೊಂದು ಕಾರಣವಾಗಿದೆ.
ಮತ್ತದೇ ಟ್ರಾಫಿಕ್ ಜಾಂ ಕಿರಿಕಿರಿ
ಕೆ.ಆರ್.ಮಾರ್ಕೆಟ್ ವೃತ್ತದಲ್ಲಿನ ವಿಪರೀತ ದಟ್ಟಣೆ ತಡೆಯುವ ಉದ್ದೇಶವೇ ಕಲಾಸಿಪಾಳ್ಯ ಬಸ್ ನಿಲ್ದಾಣದ ನಿರ್ಮಾಣ. ಆದರೆ, ಮೆಜಿಸ್ಟಿಕ್ ಕಡೆಯಿಂದ ಮಾರುಕಟ್ಟೆ ಮೂಲಕ ಬೇರೆ ಪ್ರದೇಶಗಳಿಗೆ ಹೋಗುವ ಬಿಎಂಟಿಸಿ ಬಸ್ಸುಗಳು ಇನ್ನೂ ಸರ್ಕಲ್ ನಲ್ಲೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸುತ್ತಿವೆ. ಮತ್ತದೇ ಟ್ರಾಫಿಕ್ ಜಾಂ ಕಿರಿಕಿರಿ..

ಮೆಜಿಸ್ಟಿಕ್ ನಿಂದ ವಯಾ ಮಾರ್ಕೆಟ್ ಮೂಲಕ ಬಸವನಗುಡಿ
ಉದಾಹರಣೆಗೆ, ಮೆಜಿಸ್ಟಿಕ್ ನಿಂದ ವಯಾ ಮಾರ್ಕೆಟ್ ಮೂಲಕ ಬಸವನಗುಡಿ, ವಿಜಯನಗರದ ಕಡೆಗೆ ಹೋಗುವ ಬಸ್ಸುಗಳನ್ನು ಕಡ್ಡಾಯವಾಗಿ ಕಲಾಸಿಪಾಳ್ಯ ಬಸ್ ನಿಲ್ದಾಣದ ಮೂಲಕ ಸಂಚರಿಸುವಂತೆ ಮಾಡಿದರೆ, ನಿಲ್ದಾಣದ ಉದ್ದೇಶವೂ ಈಡೇರಬಹುದು. ಟ್ರಾಫಿಕ್ ಸಮಸ್ಯೆಗೆ ಪರಿಹಾರವೂ ಸಿಗಬಹುದು. ಸಾರಿಗೆ ಇಲಾಖೆ ತಕ್ಷಣವೇ ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ..
ಕಲಾಸಿಪಾಳ್ಯ ಬಸ್ ನಿಲ್ದಾಣ
ಕಲಾಸಿಪಾಳ್ಯ ಬಸ್ ನಿಲ್ದಾಣದ ಹೊರಗೆ ಖಾಸಗಿ ಬಸ್ಸುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಷ್ಟು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ಬಸ್ ನಿಲ್ದಾಣ ಪ್ರವೇಶದ ದೀಪದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ, ಭದ್ರತಾ ವ್ಯವಸ್ಥೆಯೂ ಸರಿಯಾಗಿಲ್ಲ. ಮಾಹಿತಿಯ ಕೊರತೆ ಪ್ರಮುಖವಾಗಿ ಇಲ್ಲಿ ಕಾಡುತ್ತಿದೆ. ಕಲಾಸಿಪಾಳ್ಯ ಬಸ್ ನಿಲ್ದಾಣ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿ, ಯಾವ ಕಾರಣಕ್ಕಾಗಿ ಕೋಟ್ಯಾಂತರ ರೂಪಾಯಿ ಸುರಿಯಲಾಗಿದೆಯೋ ಆ ಉದ್ದೇಶ ಈಡೇರಲಿ ಎನ್ನುವ ಆಶಯ ಜನಸಾಮಾನ್ಯರದ್ದು.











Click it and Unblock the Notifications