ಆತ್ಮಾರ್ಪಣೆ ಎಂಬುದೆಲ್ಲ ಸುಳ್ಳು, ಇವೆಲ್ಲ ಬಿಜಿನೆಸ್: ಕಾಶ್ಮೀರದ ಕಥೆ ತೆರೆದಿಟ್ಟರು ರವಿ ಬೆಳಗೆರೆ

ಪುಲ್ವಾಮಾದಲ್ಲಿ ಉಗ್ರ ದಾಳಿ ನಂತರ ಜಮ್ಮು-ಕಾಶ್ಮೀರದಲ್ಲಿ ಸುತ್ತಾಡಿ, ವರದಿಗಾರಿಕೆ ಮಾಡಿಕೊಂಡು ಬೆಂಗಳೂರಿಗೆ ತಲುಪಿದ ಕೆಲವೇ ಗಂಟೆಯಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮಾತನಾಡಿದ್ದಾರೆ. ಅವರು ನೋಡಿದ, ಅವರಿಗೆ ತುಂಬ ಕಾಡಿದ ದೃಶ್ಯಗಳು ಕಣ್ಣುಗಳಲ್ಲಿ ಹಸಿಯಾಗಿವೆಯೇನೋ ಎಂಬಂತೆ, ಕ್ಯಾಮೆರಾಗಳಲ್ಲಿ ದಾಖಲಾದ ಸಿನಿಮಾವೊಂದರಂತೆ ಹರವಿಡುತ್ತಾ ಸಾಗಿದರು ಪತ್ರಕರ್ತ ರವಿ ಬೆಳಗೆರೆ.
ಅವರ ಧ್ವನಿಯಲ್ಲಿ ಸಿಟ್ಟು ಕುದಿಯುತ್ತಿತ್ತು. "ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ" ಎಂಬುದು ಅವರ ಗಟ್ಟಿ ಧ್ವನಿಯಾಗಿತ್ತು. "ಇವರೆಲ್ಲ ತಮ್ಮ ಪ್ರಾಣವನ್ನು ಅರ್ಪಿಸಿ ಹುತಾತ್ಮರಾದರು ಎಂದು ಬರೆಯುತ್ತಾರಲ್ಲಾ, ಇವರ್ಯಾರೂ ಪ್ರಾಣ ಅರ್ಪಿಸಿ ಹುತಾತ್ಮರಾಗಿರುವುದಿಲ್ಲ" ಎನ್ನುತ್ತಾರೆ ರವಿ ಬೆಳಗೆರೆ.
Exclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನ
ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಂತೋಷ ಇರುವ ರೀತಿಯಲ್ಲೇ, ಫೀಲ್ಡ್ ಗೆ ಹೋಗದೆ ಕಥೆ ಹೊಸೆಯುವವರು, ಇತಿಹಾಸವೇ ತಿಳಿಯದೇ ಬಾಯಿಗೆ ಬಂದಂತೆ ಮಾತನಾಡುವವರು, ರಾಜಕೀಯ ಸಿದ್ಧಾಂತದ ಕಾರಣಗಳಿಗಾಗಿ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಬೆಳಗೆರೆ.
ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು
ಇನ್ನು ಮುಂದೆ ಅವರದೇ ಮಾತುಗಳಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಕೇಳಿ.

ಆದಿಲ್ ದರ್ ನ ಊರಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ
ಈ ಆತ್ಮಾಹುತಿ ದಾಳಿ ಆಗಿದ್ದು ಮಾರುತಿ ಓಮ್ನಿ ಥರದ ವಾಹನ ಮೂಲಕ. ಆ ದಾಳಿಗೆ ಸಜ್ಜಾದ ಆ ಉಗ್ರ ಅದಿಲ್ ದರ್ ಮೊದಲಿಗೆ ಫೋಟೋ ತೆಗೆಸಿಕೊಳ್ಳುತ್ತಾನೆ, ತಾನು ಹೇಳಬೇಕಾದ ವಿಚಾರದ ವಿಡಿಯೋ ಮಾಡಿಸಿಕೊಳ್ಳುತ್ತಾನೆ. ಎಲ್ಲವನ್ನೂ ಸಿದ್ಧ ಮಾಡಿಟ್ಟು ಬಂದು, ಆ ನಂತರ ಎಂಬತ್ತರಿಂದ ನೂರು ಕೇಜಿಯ ಸ್ಫೋಟಕ ಇದ್ದ ಕಾರನ್ನು ತಾನೇ ತೆಗೆದುಕೊಂಡು ಹೋಗಿ ಗುದ್ದಿ, ಪ್ರಾಣವನ್ನು ಬಿಟ್ಟು, ಸಿಆರ್ ಪಿಎಫ್ ಸಿಬ್ಬಂದಿಯನ್ನು ಕೊಲ್ಲುತ್ತಾನೆ. ಅದಾಗಿ ಐದು ನಿಮಿಷದೊಳಗೆ ಆತನ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಆಗುತ್ತವೆ. ಬಹಳ ವ್ಯವಸ್ಥಿತವಾಗಿ ನಡೆದ ಘಟನೆ ಅದು. ಅದಿಲ್ ದರ್ ನ ಊರು ಕಾಕ ಪುರ. ನಮ್ಮ ಚಳ್ಳಕೆರೆಯಷ್ಟು ಇರಬಹುದು. ಕಾಕ ಪುರದಲ್ಲಿ ನಾನು ಸುಮಾರು ಹೊತ್ತು ಕಳೆದಿದ್ದೀನಿ. ಸ್ಥಳೀಯರ ಜತೆಗೂ ಮಾತನಾಡಿದ್ದೀನಿ. ಕಾಕ ಪುರ ಬಂದ್ ಕೂಡ ಆಗಿತ್ತು. ಅಲ್ಲಿ ಸುತ್ತಾಡುವಾಗ ನನಗೆ ಕಂಡುಬಂದಿದ್ದು ಏನು ಅಂದರೆ, ಅಲ್ಲಿ ಏನೂ ಕೊರತೆ ಇಲ್ಲ. ಬದುಕುವುದಕ್ಕೆ ಏನು ಬೇಕೋ ಎಲ್ಲವೂ ಇದೆ. ಎಲ್ಲ ವ್ಯವಸ್ಥೆಗಳೂ ಇವೆ. ಕಾಲೇಜಿದೆ ಪ್ರತಿಯೊಂದೂ ಇದೆ.

ವರ್ಷದ ಹಿಂದೆಯೇ ಆತ ಸತ್ತಿರುವುದಾಗಿ ದಾಖಲಾಗಿತ್ತು
ಅದಿಲ್ ದರ್ ಕೂಡ ಬಡವ ಏನಲ್ಲ. ಅವನದು ಮಧ್ಯಮ ವರ್ಗದ ಕುಟುಂಬ ಅಂದುಕೊಳ್ಳಿ. ಅದಿಲ್ ದರ್ ಒಂದು ವರ್ಷದ ಹಿಂದೆ ಎನ್ ಕೌಂಟರ್ ನಲ್ಲಿ ಮೃತನಾದ ಎಂದು ದಾಖಲೆ ಇದೆ. ಆದರೆ ಅವನು ಮೃತನಾಗಿರಲಿಲ್ಲ. ಅವನನ್ನು ಬಂಧಿಸಲಾಗಿತ್ತು. ಅವನು ಉಗ್ರರ ಸಂಪರ್ಕಕ್ಕೆ ಬಂದಿದ್ದ ಎಂದು ಬಂಧಿಸಲಾಗಿತ್ತು. ಹಾಗೆ ಬಂಧಿಸಿದಾಗ ಅವನ ಮೇಲೆ ಹಿಂಸಾಚಾರ ನಡೆದಿದೆ. ಒಬ್ಬ ಪಿಕ್ ಪಾಕೆಟರ್ ಸಿಕ್ಕಿದರೇ ಪೊಲೀಸರು ಹಿಡಿದುಕೊಂಡು ಹೋಗಿ ಬಡಿಯುತ್ತಾರೆ. ಬಾಯಿ ಬಿಡಿಸುತ್ತಾರೆ. ಅವನಿಗೆ ಬೆಣ್ಣೆ ಬಿಸ್ಕತ್ ಕೊಟ್ಟು, ಅಪ್ಪಾ ಎಷ್ಟು ಜೇಬು ಕತ್ತರಿಸಿದೆ, ಯಾವ ಉಗ್ರವಾದಿ ಜತೆಗೆ ಇದ್ದೆ ಅಂತ ಕೇಳುವುದಕ್ಕೆ ಆಗಲ್ಲ. ಅವನನ್ನು ಸರಿಯಾಗಿಯೇ ವಿಚಾರಣೆ ಮಾಡಬೇಕಾಗುತ್ತದೆ. ಇವನನ್ನು ಹಾಗೇ ಹೊಡೆದು-ಬಡಿದು ಮಾಡಿದ್ದಾರೆ. ಆ ಹಿಂಸಾಚಾರ ಏನು ನಡೆಯಿತು ಅದರ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆತ ಪಾಕಿಸ್ತಾನಕ್ಕೆ ಹೋಗಿ, ಜೈಶ್ ಇ ಮೊಹ್ಮದ್ ಜತೆ ಸೇರಿಕೊಂಡಿದ್ದಾನೆ. ಅದರಿಂದ ಉತ್ತೇಜನ ಪಡೆದು, ಈ ಹಿಂಸಾಚಾರ ಮಾಡಿ, ಸತ್ತಿದ್ದಾನೆ.
ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಲಕ್ಷಗಟ್ಟಲೆ ಹಣ ಮೊದಲಿಗೇ ಬಂದಿರುತ್ತದೆ
ಇವರು ಪ್ರಾಣ ಅರ್ಪಿಸಿ ಹುತಾತ್ಮರಾದರು ಎಂದು ಬರೆಯುತ್ತಾರಲ್ಲಾ, ಇವರ್ಯಾರೂ ಪ್ರಾಣ ಅರ್ಪಿಸಿ ಹುತಾತ್ಮರಾಗಿರುವುದಿಲ್ಲ. ಲಕ್ಷಗಟ್ಟಲೆ ದುಡ್ಡನ್ನು ತಮ್ಮ ಕುಟುಂಬಕ್ಕೆ ಕೊಡಿ ಎಂದು ಮೊದಲಿಗೆ ಜೈಶ್ ಇ ಮೊಹ್ಮದ್ ಸಂಘಟನೆಯಿಂದ ಹಣ ತೆಗೆದುಕೊಳ್ಳುತ್ತಾರೆ. ಅದನ್ನು ಅಪ್ಪ-ಅಮ್ಮನ ಹೆಸರಲ್ಲಿ ಇಡ್ತಾರೆ. ಅಥವಾ ಬೇರೆ ಎಲ್ಲಾದರೂ ಇನ್ವೆಸ್ಟ್ ಮಾಡ್ತಾರೆ. ಆ ನಂತರ ತಮ್ಮ ಪ್ರಾಣವನ್ನು ಕೊಡ್ತಾರೆ. ಇದು ಬಿಜಿನೆಸ್. ನಾನು ಹಲವು ಉಗ್ರಗಾಮಿಗಳನ್ನು ಭೇಟಿ ಮಾಡಿದ್ದೀನಿ. ಅಫ್ಘನಿಸ್ತಾನದಲ್ಲೂ ಭಯೋತ್ಪಾದಕರನ್ನು ಮಾತನಾಡಿಸಿದ್ದಿನಿ. ಇದ್ಯಾಕಪ್ಪಾ ಹೀಗೆ ಮಾಡ್ತೀಯಾ ಅಂತ ಪ್ರಶ್ನೆ ಮಾಡಿದರೆ, ಅವರಿಗೆ ಕೆಲವು ಭ್ರಮೆಗಳಿವೆ ಹಾಗೂ ತಪ್ಪು ತಿಳಿವಳಿಕೆಗಳಿವೆ. ನೀವು ಕಾಶ್ಮೀರಕ್ಕೆ ಹೋಗಿ, ನಿಮಗೆ ಪಾಕಿಸ್ತಾನ ಬೇಕಾ ಅಥವಾ ಇಂಡಿಯಾ ಬೇಕಾ? ಎರಡೂ ಪ್ರಶ್ನೆಗಳಿಗೆ ಬೇಡ ಅನ್ನೋ ಉತ್ತರ ಬರುತ್ತದೆ. ಮತ್ತೇನು ಬೇಕು? ಸ್ವಾತಂತ್ರ್ಯ ಬೇಕು ಅಂತಾರೆ. ಇದೆಂಥ ಮತಿಭ್ರಮಣೆಗೊಂಡವರ ಮಾತು ಅಂದರೆ, ಸ್ವಾತಂತ್ರ್ಯ ತಗೊಂಡು ಏನು ಮಾಡ್ತೀರಾ ಅಂದರೆ, ಇಡೀ ಕಾಶ್ಮೀರದಲ್ಲಿ ಒಂದು ಬೆಂಕಿ ಪೊಟ್ಟಣದ ಕಾರ್ಖಾನೆ ಇಲ್ಲ.

ಪ್ರವಾಸೋದ್ಯಮವೇ ಮಲಗಿದರೆ ಉಪವಾಸವೇ ಗತಿ
ಅಲ್ಲಿ ಮತ್ತದೇ ಸೇಬು, ಕೇಸರಿ ಹಾಗೂ ಸ್ವಲ್ಪ ಅಕ್ಕಿ ಇಷ್ಟು ಬಿಟ್ಟರೆ ಇರುವುದೆಲ್ಲವೂ ಕೂಡ ಬೆಟ್ಟ, ಮಂಜು, ಸರೋವರ. ಅದೊಂದು ಪ್ರವಾಸೋದ್ಯಮ ತಾಣ ಅಷ್ಟೆ. ನಾವು ಹೋದರೆ ಅವರಿಗೆ ಊಟ. ನಾವು ಹೋಗದಿದ್ದರೆ ಯಾವ ಕಾಶ್ಮೀರಿಯೂ ಊಟ ಮಾಡಿ, ಮಲಗಲಾರ. ಮುಖ್ಯ ಆದಾಯ ಇರುವುದೇ ಪ್ರವಾಸೋದ್ಯಮದಲ್ಲಿ. ಅದಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಾರೆ. ನಿಮ್ಮೂರಿನಲ್ಲಿ ಎಲ್ಲವೂ ಚೆನ್ನಾಗಿದೆ ಅಂದರೆ ಜನ ಬರುವುದಕ್ಕೆ ಇಷ್ಟ ಪಡುತ್ತಾರೆ. ಈಗ ಡೆಲ್ಲಿ ಇದೆ. ಅದು ಚೆನ್ನಾಗಿದೆ. ಹೋಗಬೇಕು ಅನ್ನಿಸುತ್ತೆ. ಹೋಗ್ತೀನಿ. ಅದೇ ಡೆಲ್ಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದರೆ, ನಮಗ್ಯಾಕೆ ಬೇಕು ಕನ್ಯಾಕುಮಾರಿಗೆ ಹೋಗೋಣ, ಮದ್ರಾಸ್ ಗೆ ಹೋಗೋಣ ಅಂದುಕೊಳ್ಳುತ್ತೀವಿ. ಇದು ಸಹಜ ತಾನೆ? ಈಗ ಬೆಂಗಳೂರಿಗೆ ಅದೆಷ್ಟು ಜನ ಬರ್ತಾರೆ? ಕಾಶ್ಮೀರಿಗಳೂ ಸೇರಿ ಎಷ್ಟು ಮಂದಿ ಬರ್ತಾರೆ ಲೆಕ್ಕ ಹಾಕಿಕೊಳ್ಳಿ. ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ಹೋಗುತ್ತಾರೆ. ಏಕೆಂದರೆ ಇದು ಶಾಂತಿಯುತವಾದ ನಗರ. ಆ ಶಾಂತಿಯುತ ವಾತಾವರಣ ಇದ್ದರೆ ಕಾಶ್ಮೀರ ಬದುಕುತ್ತದೆ. ಇಲ್ಲ ಅಂದರೆ ಅವರು ಮಣ್ಣು ತಿಂದು ಸಾಯಬೇಕು. ಅವರಿಗೆ ಬೇರೆ ದಾರಿ ಇಲ್ಲ.
ಪುಲ್ವಾಮಾ ದಾಳಿ: ಪಾಕ್ ಕೈವಾಡವನ್ನು ಒಪ್ಪಿಕೊಂಡುಬಿಟ್ಟರೇ ಮುಷ್ರಫ್?

ಉಗ್ರಗಾಮಿಗಳ ಪಾಲಿನ ತವರುಮನೆ ಪಿಂಗ್ಲಿನ್
ಪುಲ್ವಾಮಾ ಅನ್ನೋ ಜಾಗ ಏನಿದೆ, ಅದೊಂದು ಜಿಲ್ಲೆ. ನಮ್ಮ ತುಮಕೂರು ಇದ್ದ ಹಾಗೆ. ಚಿತ್ರದುರ್ಗ ಇದ್ದ ಹಾಗೆ. ಈ ಜಿಲ್ಲೆಯಲ್ಲಿ ಪಿಂಗ್ಲಿನ್ ಅಂತ ಊರಿದೆ. ಅದೊಂದು ಹಳ್ಳಿ. ಅದು ಇಡೀ ಕಾಶ್ಮೀರಿ ಉಗ್ರಗಾಮಿಗಳ ತವರು ಮನೆ. ಉಗ್ರವಾದ ಹುಟ್ಟಿ-ಬೆಳೆಯೋದೇ ಅಲ್ಲಿ. ಅದೇನು ಪಾಕಿಸ್ತಾನಕ್ಕೆ ಹತ್ತಿರ ಏನಿಲ್ಲ. ಸುಮಾರು ನೂರು ಕಿಲೋಮಿಟರ್ ಅಷ್ಟು ದೂರ ಇದೆ. ಆದರೆ ಅದು ಹೇಗೋ ಏನೋ ಆ ಜಾಗ ಮೊದಲಿಂದಲೂ ಉಗ್ರವಾದವನ್ನು ಬೆಂಬಲಿಸುವುದು, ಬೆಳೆಸುವುದು, ಶೆಲ್ಟರ್ ಕೊಡುವುದು, ಅಲ್ಲಿಂದ ಬರುವ ಟೆರರಿಸ್ಟ್ ಗಳಿಗೆ ಅನ್ನ ಕೊಡುವುದು ಮಾಡುತ್ತಿದೆ. ಹೀಗೆ ನಾನು ಬಂದು, ಬೆಂಗಳೂರಿನಲ್ಲಿ ಮರದ ಕೆಳಗೆ ಬದುಕುವುದಕ್ಕೆ ಆಗಲ್ಲ. ಹಾಗೆ ಉಗ್ರಗಾಮಿಗಳನ್ನು ಇಟ್ಟುಕೊಂಡಂಥ ಮನೆ ಮೇಲೆ ದಾಳಿ ಮಾಡಿದಾಗ ಇಬ್ಬರು ಉಗ್ರರನ್ನು ನಮ್ಮ ಸೈನಿಕರು ಕೊಂದು ಹಾಕಿದರು. ಮನೆ ಯಜಮಾನನನ್ನು ಕೂಡ ಕೊಂದು ಹಾಕಿದರು. ನಿಮ್ಮ ಮನೆಯಲ್ಲಿ ಕಳ್ಳರನ್ನು ಇಟ್ಟುಕೊಂಡರೆ ನಿಮ್ಮನ್ನು ಬಿಡುವುದಕ್ಕೆ ಆಗಲ್ಲ. ಆಗ ನೀವೂ ಕಳ್ಳರೇ. ಪಿಂಗ್ಲಿನ್ ನಲ್ಲಿ ನಾನೇ ಸ್ವತಃ ಮಾಡಿದ ವರದಿಗಾರಿಕೆ ಸವಾಲಿನದು ಹಾಗೂ ವೃತ್ತಿಪರವಾಗಿ ಸಾರ್ಥಕತೆ ನೀಡಿದಂಥದ್ದು. ನಮ್ಮ ಮಕ್ಕಳಿಗೆ ಇಂದಿನ ಸನ್ನಿವೇಶಕ್ಕೆ ತುರ್ತಾಗಿ ನಾವು ಹೇಳಿಕೊಡಬೇಕಾದದ್ದು ಏನು ಗೊತ್ತೆ? ಅದನ್ನು ಮುಂದಿನ ಕಂತಿನಲ್ಲಿ ಹೇಳ್ತೀನಿ.
(ಮುಂದುವರಿಯುವುದು)