J C Madhuswamy Profile: ಕೃಷಿಯಿಂದ, ಕಾನೂನು ಸಚಿವರಾದ ಜೆ. ಸಿ.ಮಾಧುಸ್ವಾಮಿ ಪರಿಚಯ
ಜೆ. ಸಿ. ಮಾಧುಸ್ವಾಮಿ ಪೂರ್ಣ ಹೆಸರು ಜಯಚಾಮರಾಜಪುರ ಚಂದ್ರಶೇಖರಯ್ಯ ಮಾಧುಸ್ವಾಮಿ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಹಿಡಿತವಿರುವ ಜನನಾಯಕ.
ತುಮಕೂರು, ಫೆಬ್ರವರಿ. 27: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜೆ. ಸಿ. ಮಾಧುಸ್ವಾಮಿ. ನಾಲ್ಕು ಬಾರಿ ಶಾಸಕರಾಗಿರುವ ಜೆ. ಸಿ. ಮಾಧುಸ್ವಾಮಿ ಪ್ರಸ್ತುತ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಸಚಿವರಾಗಿದ್ದಾರೆ.
ಮೂಲತಃ ಕೃಷಿಕರಾಗಿರುವ ಜೆ.ಸಿ.ಮಾಧುಸ್ವಾಮಿ. 1953ರ ಫೆಬ್ರವರಿ 04 ರಂದು ಜನಿಸಿದ್ದಾರೆ. ಜೆ.ಸಿ.ಮಾಧುಸ್ವಾಮಿ ಈಗಲೂ ತಮ್ಮ ಚಿಕ್ಕನಾಯಕನಹಳ್ಳಿಯ ಗ್ರಾಮ ಜೆ.ಸಿ. ಪುರದಲ್ಲಿ ವಾಸಿಸುತ್ತಿದ್ದಾರೆ. ಜೋರು ಧನಿ, ಕೆಲವೊಮ್ಮೆ ಒರಟು ವ್ಯಕ್ಯಿತ್ವದಿಂದ ಗುರುತಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ನಾಯಕರುಗಳಲ್ಲಿ ಲಿಂಗಾಯಿತ ಸಮುದಾಯದ ಮಾಧುಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್ ಬಾಬು ಹೆಸರು ಹೆಚ್ಚು ಪ್ರಚಲಿತವಾಗಿದೆ.

ಜೆ. ಸಿ. ಮಾಧುಸ್ವಾಮಿ ಪೂರ್ಣ ಹೆಸರು ಜಯಚಾಮರಾಜಪುರ ಚಂದ್ರಶೇಖರಯ್ಯ ಮಾಧುಸ್ವಾಮಿ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಹಿಡಿತವಿರುವ ಜನನಾಯಕ. ಪಕ್ಷಕ್ಕಲ್ಲದೇ ಅವರ ವ್ಯಕ್ತಿತ್ವಕ್ಕೆ ಮತ ಹಾಕುವವರೇ ಹೆಚ್ಚು ಮಂದಿ. ತಾವು ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದರೂ, ಇಲ್ಲಿ ಮತ ಬೀಳುವುದು ಮಾಧುಸ್ವಾಮಿ ಎಂಬ ಕಾರಣಕ್ಕೆ. ಸದ್ಯಕ್ಕೆ ಸಚಿವರಾಗಿ ಜಿಲ್ಲೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ತಂದಿರುವುದಕ್ಕೆ ಜನಮನ್ನಣೆ ಇನ್ನೂ ಅಧಿಕವಾಗಿದೆ. ರಸ್ತೆ ಅಗಲೀಕರಣ ಸೇರಿದಂತೆ ಶೆಟ್ಟಿಕೆರೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಿರುವುದು ಜನರಲ್ಲಿ ಅಭಿಮಾನಕ್ಕೆ ಕಾರಣವಾಗಿದೆ.
ಜೆ.ಸಿ ಮಾಧುಸ್ವಾಮಿ ಸಮಾಜವಾದಿ ತತ್ವಗಳನ್ನು ಮೈಗೂಡಿಸಿಕೊಂಡವರು. ಕರ್ನಾಟಕದ ರಾಜಕೀಯದಲ್ಲಿ ಸಾಹಿತ್ಯಗಳನ್ನು ಓದುವ ನಾಯಕರಲ್ಲಿ ಇವರೂ ಪ್ರಮುಖರು. ಎಂಎ, ಎಲ್‌ಎಲ್‌ಬಿ ಮುಗಿಸಿರುವ ಇವರು ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ಲೇಖಕ ಪೂರ್ಣಚಂದ್ರ ತೇಜಸ್ವಿ ಜೊತೆಗೆ ಒಡನಾಟ ಹೊಂದಿದ್ದರು. ಇನ್ನು, ಎಲ್‌ಎಲ್‌ಬಿ ವ್ಯಾಸಂಗ ಮಾಡುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಪಾಠಿಯಾಗಿದ್ದರು. ಇದೇ ಕಾರಣಕ್ಕೆ ಇಬ್ಬರು ಎಷ್ಟೋ ಬಾರಿ ಕಾಲೆಳೆದುಕೊಳ್ಳುವುದು ಕೂಡ ನಾವು ನೋಡುತ್ತೇವೆ.

ಬಿಜೆಪಿ ನಾಯಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು, ಜೆಡಿಯು ಪಕ್ಷದಿಂದ. ಜೆಡಿಯು ಅಭ್ಯರ್ಥಿಯಾಗಿ 2004 ರಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದ ಇವರು 43,040 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಚಿಕ್ಕನಾಯಕನಹಳ್ಳಿಯಲ್ಲಿಯೇ 2008 ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕೆ ಇಳಿದು 24,308 ಮತಗಳನ್ನು ಪಡೆದು ಜೆಡಿಎಸ್‌ನ ಸಿ. ಬಿ. ಸುರೇಶ್ ಬಾಬು ವಿರುದ್ಧ ಸೋಲು ಅನುಭವಿಸಿದ್ದರು.
ಮುಂದಿನ 2013 ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿ ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣೆಗೆ ಸ್ಫರ್ಧಿಸಿದ್ದರು. 49,620 ಮತಗಳನ್ನು ಪಡೆದು ಜೆಡಿಎಸ್‌ನ ಸಿ. ಬಿ. ಸುರೇಶ್ ಬಾಬು ವಿರುದ್ಧ ಮತ್ತೆ ಸೋಲು ಅನುಭವಿಸಿದರು. ಬಳಿಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿಎ 2018 ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ 69,612 ಮತಗಳನ್ನು ಪಡೆದು ಸುರೇಶ್ ಬಾಬು ಅವರನ್ನು ಸೋಲಿಸಿದ್ದರು. ಇದೇ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನ ಸಂತೋಷ್ ಜಯಚಂದ್ರ ಅವರು ಕಣಕ್ಕಿಳಿದಿದ್ದರು.

2019 ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರ್ಪಡೆಯಾಗಿದ್ದ ಜೆ.ಸಿ.ಮಾಧುಸ್ವಾಮಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಸಣ್ಣ ನೀರಾವರಿ ಖಾತೆ ಹೊಣೆ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೆಚ್ಚುವರಿ ಹೊಣೆ ವಹಿಸಲಾಗಿತ್ತು. ಬಳಿಕ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ 2021 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದರು. ಇಲ್ಲಿಯೂ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೊಣೆ ವಹಿಸಿಕೊಂಡಿದ್ದಾರೆ.
ಶಾಸಕ ಜೆ.ಸಿ ಮಾಧುಸ್ವಾಮಿ ಅವರು ಒಟ್ಟು ಆಸ್ತಿ 3.01 ಕೋಟಿ ರೂಪಾಯಿಯಿದೆ ಎನ್ನಲಾಗಿದೆ. ಇದರಲ್ಲಿ ಆಸ್ತಿ4.14 ಕೋಟಿ. ಸಾಲ 1.13 ಕೋಟಿಯಿದೆ. ಮಾಧುಸ್ವಾಮಿ ಅವರು ಇಂದಿಗೂ ತಮ್ಮ ಹಳ್ಳಿಯಲ್ಲೇ ವಾಸವಿದ್ದು, ಖಾಯಂ ವಿಳಾಸ ಕೂಡ ಅದೇ ಆಗಿದೆ.
ಕಳೆದ ಚುನಾವಣೆಗಳಲ್ಲಿ ಕಂಡಿದ್ದ ಸೋಲಿನ ಕಾರಣದಿಂದ ಈ ಬಾರಿ ಕ್ಷೇತ್ರದಕ್ಕೆ ಕೆಲವು ಅಭಿವೃಧಿ ಕೆಲಸಗಳನ್ನು ಮಾಡಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಮಾಧುಸ್ವಾಮಿ ಅವರ ಗೆಲುವಿಗೆ ಕಾರಣವಾಗಬಹದು. ಆದರೆ, 2018ರ ಚುನಾವಣೆಯಲ್ಲಿ ಅಂದಿನ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಮೇಲಿನ ಕೋಪದಿಂದ ಜನ ಇವರಿಗೆ ಮತ ಹಾಕಿದ್ದರು ಎನ್ನುವುದನ್ನು ಮರೆಯುವಂತಿಲ್ಲ.
ಸದನದಲ್ಲಿ ಸಿದ್ದರಾಮಯ್ಯ ಅವರ ಸರಿಸಮರಾಗಿ ಏಟಿಗೆ ಏಟು ನೀಡುತ್ತಾರೆ ಮಾಧುಸ್ವಾಮಿ ಎಂಬ ಮಾತುಗಳು ಕೇಳಿ ಬರುತ್ತವೆ. ಹಳ್ಳಿಯಲ್ಲೇ ವಾಸವಿರುವ ಕಾರಣಕ್ಕೆ ಜನರು ಸರಳ ವ್ಯಕ್ತಿ ಎಂದು ಕರೆಯುತ್ತಾರೆ. ತಮ್ಮ ಶಾಸಕ ತಮಗೆ ಬೇಕಾದಾಗ ಸಿಗುತ್ತಾರೆ ಎಂಬ ನಂಬಿಕೆ ಕ್ಷೇತ್ರದ ಜನರದ್ದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯರಾಗಿರುವ ಇವರು https://www.facebook.com/JCMadhuswamyOfficial ಫೇಸ್‌ಬುಕ್‌ನಲ್ಲಿ ತಮ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.












Click it and Unblock the Notifications