ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಜಲಕಂಟಕ; ಇಡೀ ನಗರವೇ ಮುಳುಗಿದೆಯಾ? ಎಲ್ಲಾಗಿದೆ ತಪ್ಪು?

|
Google Oneindia Kannada News

ಉದ್ಯಾನನಗರಿ ಬೆಂಗಳೂರು ಈಗ ಪ್ರವಾಹನಗರಿ ಎಂದು ಹೆಸರು ಪಡೆಯಬಹುದೇನೋ...! ಬೆಂಗಳೂರಿನಲ್ಲಿ ಆಗುತ್ತಿರುವ ಮಳೆ ಮತ್ತು ಜಲಪ್ರವಾಹ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ಮಳೆಯಾಗಿದೆ. ಅನೇಕ ಪ್ರದೇಶಗಳು ಅಕ್ಷರಶಃ ಕೆರೆಯಂತಾಗಿದೆ.

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಅನೇಕ ಸ್ಥಳಗಳು ನೀರಿನಲ್ಲಿ ಮುಳುಗಡೆಯಾಗಿದ್ದನ್ನು ಗಮನಿಸಬಹುದು. ಹೆಚ್ಚೂಕಡಿಮೆ ಅದೇ ಸ್ಥಿತಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಆಗಿದೆ. ಚೆನ್ನೈನಲ್ಲಿ 2015ರ ಪ್ರವಾಹದ ವೇಳೆ ಜನರು ಸಂಚರಿಸಲು ಬೋಟ್‌ಗಳನ್ನು ಬಳಸುತ್ತಿದ್ದುದು ನೆನಪಿರಬಹುದು. ಬೆಂಗಳೂರಿನಲ್ಲಿ ಬೆಳ್ಳಂದೂರು ಮೊದಲಾದ ಪ್ರದೇಶಗಳಲ್ಲಿ ಜನರು ಬೋಟ್ ಏರಬೇಕಾದ ಸ್ಥಿತಿ ಇದೆ.

ಬೆಂಗಳೂರಲ್ಲಿ 90ವರ್ಷದಲ್ಲೇ ಹೆಚ್ಚು ಹಾನಿ:24/7 ಕಾರ್ಯಾಚರಣೆ-ಸಿಎಂಬೆಂಗಳೂರಲ್ಲಿ 90ವರ್ಷದಲ್ಲೇ ಹೆಚ್ಚು ಹಾನಿ:24/7 ಕಾರ್ಯಾಚರಣೆ-ಸಿಎಂ

ಮೂರು ತಿಂಗಳು ಎಡಬಿಡದೆ ಮಳೆ ಸುರಿದರೆ ಪರಿಸ್ಥಿತಿ ಹೇಗಿರಬೇಕು. ಅದರಲ್ಲೂ ಈಗ್ಗೆ ಒಂದು ವಾರದಿಂದ ಸುರಿಯುತ್ತಿರುವ ಮಳೆ ಆ ಶಿವನ ರೌದ್ರಾವತಾರವೇನೋ ಎಂಬಂತೆ ಧುಮ್ಮಿಕ್ಕುತ್ತಿದೆ. ಬಹಳ ವ್ಯವಸ್ಥಿತವಾಗಿ ನಿರ್ಮಿಸಲಾದ ನಗರಗಳೇ ಇಂಥ ಮಳೆಗೆ ದಂಗಾಗಿ ಹೋಗುವಾಗ, ಅವ್ಯವಸ್ಥಿತವಾಗಿ ಬೆಳೆದ ಬೆಂಗಳೂರು ನಗರ ಹೇಗಾಗಬೇಡ..!

ಬೆಂಗಳೂರಿಗೆ ಇಂಥ ಪ್ರವಾಹ ಪರಿಸ್ಥಿತಿ ಅನಿವಾರ್ಯವಾ? ಇದಕ್ಕೆ ಪರಿಹಾರ ಇಲ್ಲವಾ? ಈ ಸ್ಥಿತಿಗೆ ಯಾರನ್ನು ದೂಷಿಸಬೇಕು? ಯಾವ ಕಾರಣಕ್ಕೆ ಈ ಸಮಸ್ಯೆ ಆಗುತ್ತಿದೆ?

ಒಂದೆರಡು ಕೆರೆ ಬಳಿ ಮಾತ್ರ ಪ್ರವಾಹ?

ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಒಂದು ವಿಚಾರದ ಬಗ್ಗೆ ಬೆಳಕು ಚೆಲ್ಲಿದರು. ಅವರ ಪ್ರಕಾರ, ಬೆಂಗಳೂರಿನ ಬಹುತೇಕ ಭಾಗ ಸುರಕ್ಷಿತವಾಗಿದೆ. ಬೆಂಗಳೂರಿನ ಅತಿದೊಡ್ಡ ಕೆರೆಗಳಾದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ವ್ಯಾಪ್ತಿಯಲ್ಲಿ ಮಾತ್ರ ಪ್ರವಾಹ ಕೈಮೀರಿದೆ. ಬೆಂಗಳೂರಿನ 800 ಚದರ ಕಿಮೀ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಇರುವುದು 5-6 ಚದರ ಕಿಮೀ ಇರಬಹುದು ಎನ್ನುತ್ತಾರೆ ಆಯುಕ್ತರು.

"ಕಳೆದ 50 ವರ್ಷಗಳಲ್ಲಿ ಅತಿಹೆಚ್ಚು ಮಳೆ ಬಿದ್ದದ್ದು ಇದು ಎರಡನೇ ಬಾರಿ. ಆಗಸ್ಟ್ 30ರಿಂದ ಸೆಪ್ಟೆಂಬರ್ 4ರವರೆಗೂ ಬಿದ್ದ ಮಳೆ ಸಾಮಾನ್ಯ ಮಳೆಗಿಂತ ಐದು ಪಟ್ಟು ಹೆಚ್ಚು. 162 ಕೆರೆಗಳು ತುಂಬಿಹೋಗಿದ್ದರಿಂದ ಪ್ರವಾಹ ಉಂಟಾಗಿದೆ...

"ಆದಾಗ್ಯೂ ಪರಿಸ್ಥಿತಿಯನ್ನು ಬಹಳ ಬೇಗ ನಿಯಂತ್ರಣಕ್ಕೆ ತರಲಾಗಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ ಮಾತ್ರ ಪ್ರವಾಹ ಸ್ಥಿತಿ ಸೀಮಿತವಾಗಿದೆ. ಬೆಂಗಳೂರಿನ 800 ಚ.ಕಿಮೀ. ಪ್ರದೇಶದ ಪೈಕಿ 5-6 ಚದರ ಕಿಮೀ ಪ್ರದೇಶದಲ್ಲಿ ಮಾತ್ರ ಪ್ರವಾಹ ಇದೆ.

ಬೆಂಗಳೂರಿನ ಎಂಟು ವಲಯಗಳಲ್ಲಿ ಮಹದೇವಪುರ ಮಾತ್ರ ಬಾಧಿತವಾಗಿದೆ. 20 ಬೋಟ್‌ಗಳನ್ನು ಬಳಕೆ ಮಾಡುತ್ತಿದ್ದೇವೆ. ಪಂಪ್‌ಗಳ ಮೂಲಕ ನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದೇವೆ. ನೀರಿನ ಹರಿವು ಮಾರ್ಗದಲ್ಲಿ ತಡೆಗಳನ್ನು ತೆಗೆಯಲು ಕ್ರಮ ಕೈಗೊಂಡಿದ್ದೇವೆ.

ನಮ್ಮಲ್ಲಿ ಸಾಕಷ್ಟು ಸಂಪನ್ಮೂಲ ಇದ್ದು ಯಾರೂ ಕೂಡ ಕಂಗಾಲಾಗುವ ಅಗತ್ಯ ಇಲ್ಲ. ನಾಗರಿಕ ಸಹಕಾರ ಅಪೇಕ್ಷಿಸುತ್ತೇವೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಮಂಗಳವಾರ ಬೆಳಗ್ಗೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಅಂತ್ಯ ಅಲ್ಲ

ಅಂತ್ಯ ಅಲ್ಲ

ಬೆಂಗಳೂರಿನಲ್ಲಿ ಇಷ್ಟು ಮಳೆಯಾದರೆ ಪ್ರವಾಹವಾಗದೇ ಬೇರೆ ವಿಧಿ ಇಲ್ಲ ಎಂಬ ವಾದಕ್ಕೆ ಹಲವರ ಬೆಂಬಲ ಇದೆ. ಖ್ಯಾತ ಆರ್ಕಿಟೆಕ್ಟ್ ಮತ್ತು ನಗರ ವಿನ್ಯಾಸಗಾರ ನರೇಶ್ ವಿ ನರಸಿಂಹನ್ ಕೂಡ ಈ ಅನಿಸಿಕೆಯನ್ನು ಬೆಂಬಲಿಸುತ್ತಾರೆ.

ಹವಾಮಾನ ಬದಲಾವಣೆಯ ಪರಿಣಾಮವನ್ನು ಬೆಂಗಳೂರು ಎದುರಿಸುತ್ತಿದೆ. ನ್ಯೂಯಾರ್ಕ್ ಆದರೂ ವಾಷಿಂಗ್ಟನ್ ಆದರೂ ಈ ಪರಿಣಾಮವನ್ನು ಎದುರಿಸಲೇಬೇಕು. ಬೆಂಗಳೂರಿನಲ್ಲಿ ಉದ್ಭವಿಸಿರುವ ಸ್ಥಿತಿಯನ್ನು ಪ್ರಳಯ ಎಂಬಂತೆಯೋ ಅಥವಾ ಬೆಂಗಳೂರಿನ ಅಂತ್ಯ ಆಗೇ ಹೋಯಿತು ಎಂಬಂತೆಯೋ ಭಾವಿಸಬಾರದು ಎಂದು ನರೇಶ್ ಹೇಳುತ್ತಾರೆ.

ಎಂಜಿನಿಯರಿಂಗ್ ಸಮಸ್ಯೆ

ಎಂಜಿನಿಯರಿಂಗ್ ಸಮಸ್ಯೆ

ಬೆಂಗಳೂರಿನಲ್ಲಿ ಇಂಥ ಪ್ರವಾಹ ಪರಿಸ್ಥಿತಿ ಬರಲು ಜಲಮಾರ್ಗಗಳ ನಶಿಸುವಿಕೆ ಒಂದು ಕಾರಣವಾದರೆ ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಲಾಗದೇ ಇರುವುದೂ ಇನ್ನೊಂದು ಕಾರಣ ಎಂದು ಹೇಳಲಾಗುತ್ತದೆ.

"ಬೆಂಗಳೂರಿನಲ್ಲಿ ವರ್ಷಗಳಿಂದ ಚರಂಡಿ ನೀರಿನ ಪೈಪುಗಳಲ್ಲಿ ಕೆಸರು ಮತ್ತು ಕೊಳಚೆ ನೀರು ಸೇರಿಕೊಂಡಿದೆ.... ಪೈಪುಗಳನ್ನು ಆಗಾಗ್ಗೆ ಸ್ವಚ್ಛ ಮಾಡದೇ ಹೋದರೆ ಹೂಳಿಗೆ ಒಂದು ಮೀಟರ್, ಕೊಳಚೆಗೆ ಎರಡು ಮೀಟರ್ ಹೋಗುತ್ತದೆ. ಒಂದೂವರೆ ಮೀಟರ್‌ನಷ್ಟು ಪೈಪ್ ಜಾಗ ಮಾತ್ರ ಮಳೆ ನೀರಿಗೆ ಉಳಿಯುತ್ತದೆ. ಸೆಪ್ಟೆಂಬರ್ 4ರಂದು ಬಿದ್ದ ರೀತಿ ಮಳೆಯೇನಾದರೂ ಆದರೆ ಚರಂಡಿ ಪೈಪುಗಳಲ್ಲಿ ಮಳೆ ನೀರು ಹರಿವಿಗೆ ಜಾಗವೇ ಇಲ್ಲದಂತಾಗುತ್ತದೆ" ಎಂದು ನರೇಶ್ ವಿ ನರಸಿಂಹನ್ ವಿವರಿಸುತ್ತಾರೆ.

ಈ ಪ್ರವಾಹ ಸಮಸ್ಯೆ ಎಂಜಿನಿಯರಿಂಗ್‌ನದ್ದು. ಬೆಂಗಳೂರಿನಲ್ಲಿ ಇಷ್ಟು ಮಳೆ ಬಿದ್ದರೂ ಪ್ರವಾಹ ಏಳದಿರುವ ಪ್ರದೇಶಗಳು ಅನೇಕ ಇವೆ. ನಗರ ಈ ಪರಿಸ್ಥಿತಿಯನ್ನು ಸಂಭಾಳಿಸುತ್ತಿದೆ. ಸಂಪೂರ್ಣ ನಿಯಂತ್ರಣಕ್ಕೆ ಬರಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಕಸ ಬಿಸಾಡುವ ಜನರು

ಕಸ ಬಿಸಾಡುವ ಜನರು

ಬೆಂಗಳೂರಿನಲ್ಲಿ ಚರಂಡಿ ಪೈಪುಗಳು ಹಳೆಯದಾಗಿ ಹಾಳಾಗಿ ಹೋಗುತ್ತಿವೆ. ಅದರ ಅಗಲವೂ ಕೂಡ ಹೆಚ್ಚು ನೀರಿನ ಹರಿವಿಗೆ ತಕ್ಕಷ್ಟು ಇಲ್ಲ. 5-10 ಸೆಂ.ಮೀ. ಮಳೆಯಾದರೂ ಚರಂಡಿ ತುಂಬಿ ಹರಿಯುತ್ತದೆ.

ಬೆಂಗಳೂರಿನ ಹಲವು ಕಡೆ ಬಿಬಿಎಂಪಿ ಚರಂಡಿಗಳಿಗೆ ಹೊದಿಕೆ ಹಾಕಿದೆ. ಆದರೂ ತೆರೆದಿರುವ ಚರಂಡಿ ಇದ್ದರೆ ಜನರು ಕಸವನ್ನು ಹಾಕುವ ಪ್ರವೃತ್ತಿ ಮಾತ್ರ ನಿಂತಿಲ್ಲ. ಮನೆ ಬಾಗಿಲಿಗೆ ಕಸದ ಆಟೋ ಬಂದರೂ ಜನರು ಚರಂಡಿ ಇತ್ಯಾದಿಯನ್ನು ಕಸದ ತೊಟ್ಟಿ ಎಂಬಂತೆ ಭಾವಿಸುತ್ತಾರೆ. ಪ್ರವಾಹಕ್ಕೆ ಈ ಕಸವೂ ಒಂದು ಮುಖ್ಯ ಕಾರಣವಾಗುತ್ತದೆ.

ಹಾಗೆಯೇ, ಮಳೆ ನೀರು ಹರಿಯಲು ಇರುವ ಮಾರ್ಗವೆಲ್ಲವೂ ಈಗ ಒತ್ತುವರಿಯಾಗಿ ಹೋಗಿದೆ. ಕೆರೆ ಪ್ರದೇಶಗಳೂ ಒತ್ತುವರಿ ಆಗಿವೆ. ದಶಕಗಳ ಹಿಂದೆ ಬೆಂಗಳೂರು ಸಿಕ್ಕಾಪಟ್ಟೆ ವೇಗವಾಗಿ ಬೆಳೆಯುವಾಗ ಕೆರೆ ಕಟ್ಟೆ ಕಾಲುವೆ ಯಾವುದನ್ನೂ ನೋಡದೇ ಬಡಾವಣೆಗಳಾಗಿ ಮಾರ್ಪಾಡು ಮಾಡಲಾಯಿತು. ಯಾವುದಾದರೂ ಕೆರೆ ಒಣಗಿದರೂ ಸಾಕು ಅಲ್ಲಿ ಅಪಾರ್ಟ್ಮೆಂಟ್, ಮನೆಗಳು ತಲೆ ಎತ್ತುತ್ತಿತ್ತು. ಈಗಲೂ ಅದು ಮುಂದುವರಿದಿರುವುದು ಹೌದು. ಈ ವಿಚಾರದಲ್ಲಿ ಸರಕಾರವನ್ನು ಮಾತ್ರ ಬೊಟ್ಟು ಮಾಡಲು ಸಾಧ್ಯ. ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಜಾಣಕುರುಡರಂತೆ ಅಧಿಕಾರಿಗಳು ಇದ್ದ ಪರಿಣಾಮ ಇದು. ಪರ್ಸೆಂಟ್ ಕಮಿಷನ್, ಕಿಕ್ ಬ್ಯಾಕ್‌ನ ಪಾಪ ಫಲವೇ ಇದು ಎನ್ನಲಡ್ಡಿ ಇಲ್ಲ.

ನ್ಯೂಯಾರ್ಕ್ ಆದರೂ ಇದೇ ಕಥೆ ಎಂದ ಸುಧಾಕರ್

ನ್ಯೂಯಾರ್ಕ್ ಆದರೂ ಇದೇ ಕಥೆ ಎಂದ ಸುಧಾಕರ್

ಮಳೆಯಿಂದಾಗಿ ಬೆಂಗಳೂರಿನ ಇನ್ಫ್ರಾಸ್ಟ್ರಕ್ಚರ್ ಕುಸಿದುಹೋಗಿದೆ ಎಂದು ಆರೋಪಿಸಿ ಇನ್ಫೋಸಿಸ್‌ನ ಮಾಜಿ ಡೈರೆಕ್ಟರ್ ಮೋಹನ್ ದಾಸ್ ಮುಖ್ಯಮಂತ್ರಿಗೆ ಪತ್ರ ಬರೆದ ಬಗ್ಗೆ ಸಚಿವ ಡಾ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ಬಿದ್ದಷ್ಟು ಮಳೆ ನ್ಯೂಯಾರ್ಕ್‌ಗೆ ಬಂದಿದ್ದರೂ ಇದೇ ಸ್ಥಿತಿ ಆಗುತ್ತಿತ್ತು ಎಂಬಂತೆ ಪ್ರತಿಕ್ರಿಯಿಸಿದ್ದಾರೆ.

"ಇಷ್ಟೇ ಮಳೆ ನ್ಯೂಯಾರ್ಕ್ ನಗರಕ್ಕೆ ಆಗಿದ್ದರೆ ಏನಾಗುತ್ತಿತ್ತು? ದೂರು ನೀಡುವುದು ಸುಲಭ ಕೆಲಸ. ಆದರೆ, ಸಮಸ್ಯೆಗೆ ಪರಿಹಾರ ಹುಡುಕುವುದು ಅಷ್ಟು ಸುಲಭವಲ್ಲ. ನೂರಾರು ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಾಡಿದ್ದು, ನಂತರ ಅದರ ಅಭಿವೃದ್ಧಿ ಮಾಡದೇ ಹೋಗಿದ್ದು ಯಾರ ತಪ್ಪು?" ಎಂದು ಪ್ರಶ್ನಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್, "ಸಂಕಷ್ಟದ ಸಂದರ್ಭದಲ್ಲಿ ಜನರು ಸರಕಾರದ ಜೊತೆ ಸೇರಿ ಸಮಸ್ಯೆ ಎದುರಿಸಬೇಕು. ಆರೋಪಗಳಿಗೆ ಇದು ಸಮಯ ಅಲ್ಲ" ಎಂದು ಹೇಳಿದ್ದಾರೆ.

ತೆಲಂಗಾಣ ಸಚಿವರ ಸಹಾನಭೂತಿ

ಪ್ರವಾಹ ಸ್ಥಿತಿಯಲ್ಲಿರುವ ಬೆಂಗಳೂರಿನ ಬಗ್ಗೆ ಟೀಕೆಗಳು ಹರಿದುಬರುತ್ತಿರುವ ಮಧ್ಯದಲ್ಲೇ ನೆರೆಯ ತೆಲಂಗಾಣದ ಸಚಿವ ಮತ್ತು ಟಿಆರ್‌ಎಸ್ ಮುಖ್ಯಸ್ಥ ಕೆಟಿ ರಾಮರಾವ್ ಸಿಲಿಕಾನ್ ಸಿಟಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

"ನಮ್ಮ ನಗರಗಳು ರಾಜ್ಯ ಮತ್ತು ದೇಶದ ಪ್ರಗತಿಗೆ ಪ್ರಮುಖ ಆರ್ಥಿಕ ಯಂತ್ರಗಳಾಗಿವೆ. ಬಹಳ ವೇಗವಾಗಿ ನಗರೀಕರಣ ಆಗುತ್ತಿರುವುದರಿಂದ ಸೌಕರ್ಯ ವ್ಯವಸ್ಥೆಯನ್ನು ಬಲಪಡಿಸಲು ಸರಿಯಾದ ಬಂಡವಾಳ ಹಾಕದಿದ್ದರೆ ಕುಸಿಯುವುದು ಹೌದು...

"ಹವಾಮಾನ ಬದಲಾವಣೆಯ ಪರಿಣಾಮದಿಂದ ಬಚಾವಾಗುವ ಯಾವ ನಗರವೂ ಭಾರತದಲ್ಲಿ ಇಲ್ಲ. ಭಾರತ ಪ್ರಗತಿಪಥದಲ್ಲಿ ಮುಂದುವರಿಯಬೇಕಾದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿ ಸೌಕರ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಬಂಡವಾಳ ಹಾಕಬೇಕು.

"ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟವಾದ ಸುಧಾರಣೆಗಳಾಗಬೇಕು. ನಮ್ಮ ಸಾಂಪ್ರದಾಯಿಕ ಮನಸ್ಥಿತಿಯನ್ನು ಬದಿಗೊತ್ತಿ ಸರಿಯಾದ ರೀತಿಯಲ್ಲಿ ಯೋಜಿಸಬೇಕು. ಸ್ವಚ್ಛ ರಸ್ತೆ, ಸ್ವಚ್ಛ ನೀರು, ಸ್ವಚ್ಛ ಗಾಳಿ ಮತ್ತು ಉತ್ತರ ಮಳೆ ನೀರು ನಿರ್ವಹಣೆ ವ್ಯವಸ್ಥೆಯನ್ನು ನಿರ್ಮಿಸುವುದು ಕಷ್ಟವಲ್ಲ. ಆದರೆ, ಅದಕ್ಕೆ ಬಂಡವಾಳ ಬೇಕು" ಎಂದು ತೆಲಂಗಾಣದ ನಗರ ಯೋಜನೆ, ಉದ್ಯಮ ಸಚಿವರೂ ಆದ ಕೆ ಟಿ ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಹೈದರಾಬಾದ್‌ನಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದಾಗ ಬೆಂಗಳೂರಿನ ಕೆಲ ನಾಯಕರು ಲೇವಡಿ ಮಾಡಿದ್ದರು. ಆ ವಿಚಾರವನ್ನು ಉಲ್ಲೇಖಿಸಿದ ಕೆ ಟಿ ರಾಮರಾವ್, "ನಾವು ಒಂದು ದೇಶವಾಗಿ ಬೆಳೆಯಬೇಕಾದರೆ ಪರಸ್ಪರರ ಅನುಭವಗಳಿಂದ ಕಲಿತು ಸಾಗಬೇಕು" ಎಂದು ಸಲಹೆ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Bengaluru is making national and international headlines due to heavy rains and floods. Few argue that flood is limited to less than 1% of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X