ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರು ಯಾಕೆ ಹೀಗೆಲ್ಲ ಮಾಡುತ್ತಾರೆ? ಇಂದಿಗೂ ನಿಗೂಢ!

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ರಾಜಕೀಯ ಜೀವನದ ಕುತೂಹಲಕಾರಿ ಘಟನೆಗಳು

ಇದು ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ. ಆ ಸಂದರ್ಭದಲ್ಲೊಮ್ಮೆ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡುತ್ತಾರೆ.

ಹೀಗೆ ಭೇಟಿ ಮಾಡಿದಾಗ ದೇವೇಗೌಡರು ನೇರವಾಗಿಯೇ ವಿಷಯಕ್ಕೆ ಬರುತ್ತಾರೆ: ಬಸವರಾಜ್, ಹೇಗಿದ್ದರೂ ನಿಮಗೆ ನನ್ನ ಮಗ ಕುಮಾರಸ್ವಾಮಿ ಆತ್ಮೀಯ. ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹಠ ಹಿಡಿದಿದ್ದಾನೆ. ಯಾವ ಕಾರಣಕ್ಕೂ ಚುನಾವಣೆಗೆ ನಿಲ್ಲುವುದು ಬೇಡ ಅಂತ ಅವನಿಗೆ ಹೇಳಿ ಅನ್ನುತ್ತಾರೆ.

ಆಗ ಬಸವರಾಜ ಬೊಮ್ಮಾಯಿ ಅಚ್ಚರಿಯಿಂದ; ಸಾರ್, ಕುಮಾರಸ್ವಾಮಿ ಅವರು ನಿಮ್ಮ ಮಗ. ಅವರಿಗೆ ನನ್ನ ಮಾತಿಗಿಂತ ನಿಮ್ಮ ಮಾತೇ ಮುಖ್ಯ. ಹೀಗಾಗಿ ಕೇಳಿಯೇ ಕೇಳುತ್ತಾರೆ. ನೀವೇ ಹೇಳಿ ಎನ್ನುತ್ತಾರೆ.

ಕುಮಾರಸ್ವಾಮಿ ಬಹಿಷ್ಕಾರ ಎಂಬ ಗೌಡರ ಹೊಸ ತಂತ್ರದ ಹಿಂದೇನಿದೆ? ಕುಮಾರಸ್ವಾಮಿ ಬಹಿಷ್ಕಾರ ಎಂಬ ಗೌಡರ ಹೊಸ ತಂತ್ರದ ಹಿಂದೇನಿದೆ?

ಹಾಗಲ್ಲ, ಮಕ್ಕಳ ಮನಸ್ಸು ಹೇಗೆ ಅಂತ ಹೇಳಲಾಗದು. ಹಾಗೆಯೇ ಕುಮಾರಸ್ವಾಮಿ ಏನಾದರೂ ಚುನಾವಣೆಗೆ ನಿಂತರೆ ಅವರಣ್ಣ ರೇವಣ್ಣನ ಜತೆ ದಾಯಾದಿ ಕಲಹ ಶುರುವಾಗುತ್ತದೆ. ಅದು ನನಗೆ ಬೇಕಿಲ್ಲ ಎಂಬುದು ದೇವೇಗೌಡರ ಮಾತು.

ಸಾರ್, ಹಾಗಿದ್ದರೆ ಒಂದು ಕೆಲಸ ಮಾಡಿ. ಅವರು ಒಂದು ಜಿಲ್ಲೆಯಿಂದ, ಇವರು ಒಂದು ಜಿಲ್ಲೆಯಿಂದ ಸ್ಪರ್ಧಿಸುವಂತೆ ಮಾಡಿ. ಆಗ ಕಚ್ಚಾಟವೇ ಉದ್ಭವಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಪರಿಹಾರ ಹೇಳುತ್ತಾರೆ.

ದೇವೇಗೌಡರ ಹಣೆಯಲ್ಲಿ ಚಿಂತೆಯ ನೆರಿಗೆಗಳು ಮೂಡುತ್ತವೆ. ಆ ವಿಷಾದದಲ್ಲೇ ಅವರು, ಸಮಸ್ಯೆ ಅಷ್ಟೇ ಅಲ್ಲ ಬಸವರಾಜು, ಚುನಾವಣೆಗೆ ನಿಂತು ಸ್ಪರ್ಧಿಸಿದರೆ ಕುಮಾರಸ್ವಾಮಿ ಗೆದ್ದು ಸಿಎಂ ಆಗುತ್ತಾನೆ. ಆ ಮೂಲಕ ರೇವಣ್ಣನಿಗೆ ಡಿಸಿಎಂ ಆಗುವ ಯೋಗ ತಪ್ಪುತ್ತದೆ ಎನ್ನುತ್ತಾರೆ.

ಒಂದೂವರೆ ವರ್ಷದ ಹಿಂದೆ ದೇವೇಗೌಡ್ರು ಆ ಮಾತು ಆಡಿದ್ದಾದರೂ ಏಕೆ? ಒಂದೂವರೆ ವರ್ಷದ ಹಿಂದೆ ದೇವೇಗೌಡ್ರು ಆ ಮಾತು ಆಡಿದ್ದಾದರೂ ಏಕೆ?

ಆಗ ಬಸವರಾಜ ಬೊಮ್ಮಾಯಿ; ಸಾರ್, ನಿಮ್ಮ ಮಕ್ಕಳ ಪೈಕಿ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ತಪ್ಪಿದರೂ ಮತ್ತೊಬ್ಬರಿಗೆ ಸಿಎಂ ಆಗುವ ಯೋಗ ಇರುವುದಾದರೆ ಒಳ್ಳೆಯದೇ ಅಲ್ಲವೇ? ಆಗಲಿ ಬಿಡಿ ಎನ್ನುತ್ತಾರೆ.

ಆಗ ದೇವೇಗೌಡರು; ಸಮಸ್ಯೆ ಅಷ್ಟೇ ಅಲ್ಲ ಬಸವರಾಜು, ಕುಮಾರಸ್ವಾಮಿ ಸಿಎಂ ಆದರೆ ರೇವಣ್ಣನಿಗೆ ಡಿಸಿಎಂ ಆಗುವ ಯೋಗ ತಪ್ಪುವುದಷ್ಟೇ ಅಲ್ಲ, ನನಗೂ ದೆಹಲಿಯಲ್ಲಿ ದಕ್ಕಬೇಕಿರುವ ಉನ್ನತ ಹುದ್ದೆ(ರಾಷ್ಟ್ರಪತಿ)ಕೈತಪ್ಪಿ ಹೋಗುತ್ತದೆ ಎಂದು ಹೇಳಿ ಮೌನಿಯಾಗುತ್ತಾರೆ. ಮುಂದಿನದು ಇತಿಹಾಸ.

ದೇವೇಗೌಡರ ನಿಗೂಢ ಹೆಜ್ಜೆಗಳು

ದೇವೇಗೌಡರ ನಿಗೂಢ ಹೆಜ್ಜೆಗಳು

ಇದನ್ನೇಕೆ ನೋಡಬೇಕೆಂದರೆ ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷಗಳ ರಾಜಕಾರಣಿಗಳು ಮಾತ್ರವಲ್ಲ, ಸ್ವಪಕ್ಷದ ರಾಜಕಾರಣಿಗಳೂ ದೇವೇಗೌಡರ ಹೆಜ್ಜೆಗಳನ್ನು ತುಂಬ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾರೆ.

ಯಾಕೆಂದರೆ ಬಹುತೇಕ ನಾಯಕರು ಶಸ್ತ್ರಾಸ್ತ್ರಗಳನ್ನು ತಯಾರಿಸಿ, ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿರುವುದು ಅರಿವಿಗೆ ಬಂದರೆ, ದೇವೇಗೌಡರ ಬತ್ತಳಿಕೆಯಲ್ಲಿ ಎಂತೆಂತಹ ಅಸ್ತ್ರಗಳು ತಯಾರಾಗಿರುತ್ತವೆ? ಎಂಬುದು ಯಾರ ಊಹೆಗೂ ನಿಲುಕುವುದಿಲ್ಲ.

ರಾಷ್ಟ್ರಪತಿ ಆಳ್ವಿಕೆ ಬರಲಿ ಎಂದ ಗೌಡರ ಮಾತಿನ ಅಂತರಾಳ ರಾಷ್ಟ್ರಪತಿ ಆಳ್ವಿಕೆ ಬರಲಿ ಎಂದ ಗೌಡರ ಮಾತಿನ ಅಂತರಾಳ

ಗೌಡರು ಪ್ರಧಾನಿಯಾಗುವುದು ಅಂದೇ ನಿರ್ಧಾರವಾಗಿತ್ತು

ಗೌಡರು ಪ್ರಧಾನಿಯಾಗುವುದು ಅಂದೇ ನಿರ್ಧಾರವಾಗಿತ್ತು

ಇಂತದೇ ಇನ್ನೊಂದು ಘಟನೆ. ಅದು ನಡೆದಿದ್ದು ಇಪ್ಪತ್ತೆಂಟು ವರ್ಷಗಳ ಹಿಂದೆ. ಆ ಸಂದರ್ಭದಲ್ಲಿ ಎಂಭತ್ತೊಂಭತ್ತರ ವಿಧಾನಸಭಾ ಚುನಾವಣೆ ಮುಗಿದಿರುತ್ತದೆ. ಜನತಾದಳ ಒಡೆದು ಅಧಿಕಾರ ಕಳೆದುಕೊಂಡಿರುತ್ತದೆ.

ಈ ಟೈಮಿನಲ್ಲೇ ಒಂದು ದಿನ ಶಾಸಕರ ಭವನದ 507ನೇ ಕೊಠಡಿಯಲ್ಲಿ ಜನತಾದಳದ ನಾಯಕರಾದ ಜೆ.ಹೆಚ್. ಪಟೇಲ್, ಡಿ.ಬಿ. ಚಂದ್ರೇಗೌಡ, ಸಿ.ಎಂ. ಇಬ್ರಾಹಿಂ, ಡಿ. ಮಂಜುನಾಥ್, ಎಂ.ಪಿ. ನಾಡಗೌಡ ಮತ್ತಿತರ ಹಲವರು ಇಸ್ಪೀಟು ಆಡುತ್ತಾ ಕುಳಿತಿರುತ್ತಾರೆ.

ಅವರು ಇಸ್ಪೀಟು ಆಡುತ್ತ ಕುಳಿತಿರುವಾಗಲೇ ಅಲ್ಲಿಗೆ ದೇವೇಗೌಡರ ಆತ್ಮೀಯರಾದ ರಾಮಲಿಂಗಾರೆಡ್ಡಿ (ಕಾಂಗ್ರೆಸ್ ನಾಯಕರಲ್ಲ) ಬರುತ್ತಾರೆ. ಅವರನ್ನು ನೋಡಿದ್ದೇ ತಡ, ಕುಳಿತಿದ್ದವರು, ಬಾರಯ್ಯಾ ರಾಮಲಿಂಗಾರೆಡ್ಡಿ, ಹೊಸತೇನೋ ಜ್ಯೋತಿಷ್ಯದ ವಿಷಯ ಇಲ್ಲದೆ ನೀನು ಬರುವುದಿಲ್ಲ. ನಿನ್ನ ಮನಸ್ಸಿನಲ್ಲಿರುವ ಆ ವಿಷಯ ಯಾವುದು? ಅಂತ ಪ್ರಶ್ನಿಸುತ್ತಾರೆ.

ಆಗ ರಾಮಲಿಂಗಾರೆಡ್ಡಿ ಅಲ್ಲಿಯೇ ಇದ್ದ ಖುರ್ಚಿಯಲ್ಲಿ ಕೂರುತ್ತಾ; ಇದೆ, ನನ್ನ ಬಳಿ ಹೊಸ ವಿಷಯ ಇದೆ. ಅದೆಂದರೆ, ತೊಂಭತ್ನಾಲ್ಕರ ವಿಧಾನಸಭಾ ಚುನಾವಣೆಯ ನಂತರ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ. ತೊಂಭತ್ತಾರರಲ್ಲಿ ಈ ದೇಶದ ಪ್ರಧಾನಿಯೂ ಆಗುತ್ತಾರೆ ಎಂದು ವಿವರಿಸುತ್ತಾರೆ.

ಕೂತಿದ್ದವರು ನಂಬಿಕೆ ಬರದೆ, ಓ ಹೌದಾ, ನಿಜಕ್ಕೂ ದೊಡ್ಡ ವಿಷಯವೇ ಕಣಯ್ಯಾ ಅನ್ನುತ್ತಾರೆ. ಆಗ ರಾಮಲಿಂಗಾರೆಡ್ಡಿ ಮೇಲೆದ್ದು ನಿಂತವರೇ ಅಲ್ಲಿದ್ದ ಗೋಡೆಯ ಬಳಿ ಹೋಗಿ ಏನನ್ನೋ ಬರೆದು, ಇವತ್ತು ಗೋಡೆಯ ಮೇಲೆ ಬರೆಯುತ್ತಿದ್ದೇನೆ, ನೆನಪಿಟ್ಟುಕೊಳ್ಳಿ. ತೊಂಭತ್ನಾಲ್ಕರಲ್ಲಿ ದೇವೇಗೌಡರು ಸಿಎಂ ಆಗುತ್ತಾರೆ, ತೊಂಭತ್ತಾರರಲ್ಲಿ ಪ್ರಧಾನಿ ಆಗುತ್ತಾರೆ ಎಂದು ಹೇಳಿ ಹೊರಟೇ ಹೋಗುತ್ತಾರೆ. ಎಲ್ಲರೂ ವಿಸ್ಮಯದಿಂದ ರಾಮಲಿಂಗಾರೆಡ್ಡಿ ಹೋದ ದಾರಿಯನ್ನೇ ನೋಡುತ್ತಾರೆ.

ಗೌಡರ ಬದಲಿಗೆ ಬೊಮ್ಮಾಯಿ ಮುಖ್ಯಮಂತ್ರಿ

ಗೌಡರ ಬದಲಿಗೆ ಬೊಮ್ಮಾಯಿ ಮುಖ್ಯಮಂತ್ರಿ

ಹಾಗೆ ನೋಡಿದರೆ ಜನತಾ ದಳದ ನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ದೇವೇಗೌಡರ ರೀತಿ ಪೂಜೆ, ಪುನಸ್ಕಾರಗಳಲ್ಲಿ ಅಂತಹ ನಂಬಿಕೆ ಇರಲಿಲ್ಲ. ಹೀಗಾಗಿ ತಾವು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತರಾದ ಮೇಲೆ ಒಂದು ಸಂದರ್ಭದಲ್ಲಿ ದೇವೇಗೌಡರ ಜತೆ ಮಾತುಕತೆ ನಡೆಸುತ್ತಾ ಕೂತಾಗ ಅವರು ತಮಾಷೆ ಮಾಡುತ್ತಾರೆ.

ದೇವೇಗೌಡರೇ, ನೀವು ಇಷ್ಟೊಂದು ಪೂಜೆ, ಪುನಸ್ಕಾರ, ಹೋಮ-ಹವನ ಮಾಡಿಸಿದರೂ ಮುಖ್ಯಮಂತ್ರಿಯಾಗಲಿಲ್ಲ. ಬದಲಿಗೆ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಯಾಕೆ ಗೊತ್ತಾ? ಅಂತ ಕೇಳುತ್ತಾರೆ. ದೇವೇಗೌಡರು ಕುತೂಹಲದಿಂದ ಯಾಕೆ? ಅಂತ ಪ್ರಶ್ನಿಸುತ್ತಾರೆ.

ನನ್ನ ಸಂಪುಟದಲ್ಲಿ ಮಂತ್ರಿಗಳಾಗಿದ್ದ ನೀವು, ಬೊಮ್ಮಾಯಿ ಅವರಿಬ್ಬರೂ ವಾಸವಾಗಿದ್ದುದು ಕ್ರೆಸೆಂಟ್ ರಸ್ತೆಯ ಬಂಗಲೆಯಲ್ಲಿ. ಆ ಸಂದರ್ಭದಲ್ಲಿ ನೀವು ಮಾಡಿಸಿದ ಹೋಮ-ಹವನಗಳ ಹೊಗೆಯೆಲ್ಲ ಬೊಮ್ಮಾಯಿ ಅವರ ಮನೆಗೆ ಹೋಗುತ್ತಿತ್ತು. ಹೀಗಾಗಿ ಅವರು ಮುಖ್ಯಮಂತ್ರಿಯಾದರು. ನೀವು ಆಗಲಿಲ್ಲ ಎಂದು ಹೆಗಡೆ ತಮಾಷೆ ಮಾಡಿದಾಗ, ದೇವೇಗೌಡರು ಮೌನವಾಗಿ ಅದನ್ನು ಕೇಳಿದ್ದರು.

ಗೌಡರಿಂದ ಶತ್ರು ಸಂಹಾರ ಯಾಗ

ಗೌಡರಿಂದ ಶತ್ರು ಸಂಹಾರ ಯಾಗ

ಜನತಾ ದಳದಲ್ಲಿ ಬಿಕ್ಕಟ್ಟು ಉಲ್ಬಣಿಸಿದ ಸಂದರ್ಭದಲ್ಲಿ ಅದೇ ಹೆಗಡೆಯವರ ಬಳಿ, ಅವರ ಆತ್ಮೀಯರಾದ ಜೀವರಾಜ್ ಆಳ್ವ ಮತ್ತಿತರರು, ನಿಮ್ಮ ವಿರುದ್ದ ದೇವೇಗೌಡರು ಚಂಡಿ ಹೋಮ ಮಾಡಿಸಿದ್ದಾರೆ. ಶತ್ರು ಸಂಹಾರ ಯಾಗ ಮಾಡಿಸಿದ್ದಾರೆ. ಅದಕ್ಕೇ ನಮಗೆ ಹಲವು ಕಿರಿಕಿರಿಗಳು. ನೀವೂ ಇದರ ಪರಿಹಾರಕ್ಕಾಗಿ ಹೋಮ ಮಾಡಿಸಬೇಕು ಎಂದು ಪಟ್ಟು ಹಿಡಿಯುತ್ತಾರೆ. ಹೆಗಡೆಯವರು ಇದನ್ನೊಪ್ಪದೇ ಹೋದರೂ ಜೀವರಾಜ್ ಆಳ್ವ ಅವರಂತಹ ಆತ್ಮೀಯರ ಪಡೆ ಬಿಡುವುದಿಲ್ಲ. ಬದಲಿಗೆ ಹೆಗಡೆ ಅವರ ಮನೆಯ ಹೆಣ್ಣು ಮಕ್ಕಳಿಗೆ ವಿಷಯ ತಿಳಿಸುತ್ತದೆ. ಕೊನೆಗೆ ಅವರ ಬಲವಂತಕ್ಕೆ ಕಟ್ಟು ಬಿದ್ದು ಹೆಗಡೆ ಮನೆಯಲ್ಲಿ ಹೋಮ ಮಾಡಿಸಲು ಒಪ್ಪುತ್ತಾರೆ. ಸರಿ, ಹೋಮದ ದಿನ ನಿಗದಿಯಾಗುತ್ತದೆ.

ಪಟ್ಟು ಹಿಡಿದು ಹೆಗಡೆಯಿಂದ ಹೋಮ ಹವನ

ಪಟ್ಟು ಹಿಡಿದು ಹೆಗಡೆಯಿಂದ ಹೋಮ ಹವನ

ಈ ಸಂದರ್ಭದಲ್ಲಿ ಹಿರಿಯ ನಾಯಕ ಎಂ.ಪಿ. ನಾಡಗೌಡ ಅವರು ಹೆಗಡೆಯವರ ಮನೆಗೆ ಹೋಗಿ ನೋಡುತ್ತಾರೆ. ಮನೆಯಿಂದ ದಟ್ಟವಾಗಿ ಹೋಮದ ಹೊಗೆ ಬರುತ್ತಿದೆ. ನಾಡಗೌಡರು ಅಚ್ಚರಿಯಿಂದ ಮನೆಯೊಳಗೆ ಹೋಗುತ್ತಾರೆ. ಹೀಗೆ ಹೋದಾಗ ಎದುರಿಗೇ ಕಂಡ ಹೆಗಡೆ ಅವರ ಬಳಿ, ಸಾರ್, ಇದೇನು ನೀವೂ ಹೋಮ, ಹವನಗಳಿಗೆ ಮುಂದಾಗಿದ್ದೀರಿ? ಅಂತ ಕೇಳುತ್ತಾರೆ. ಆಗ ಹೆಗಡೆ ಅವರು ನಗುತ್ತಾ, ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ. ಆದರೆ ಮನೆಯ ಹೆಣ್ಣು ಮಕ್ಕಳು ಬಿಡಬೇಕಲ್ಲ? ಅಂತ ಹೇಳುತ್ತಾರೆ.

ಹೀಗೆ ಹೇಳುತ್ತಲೇ ನಾಡಗೌಡರ ಹೆಗಲ ಮೇಲೆ ಕೈ ಹಾಕಿ ಮಹಡಿಯ ಮೇಲೆ ಕರೆದೊಯ್ಯುತ್ತಾರೆ. ಹೀಗೆ ಕರೆದೊಯ್ದು; ನಾಡಗೌಡರೇ, ಈಗ ಈಶ್ವರನೂ ವರ ಕೊಡುವ ವಿಷಯದಲ್ಲಿ ಬಹಳ ಎಚ್ಚರವಾಗಿದ್ದಾನೆ. ಭಸ್ನಾಸುರನಿಗೆ ನೆತ್ತಿಯ ಮೇಲೆ ಕೈಇಡುವ ವರ ಕೊಟ್ಟು ಕಷ್ಟ ಅನುಭವಿಸಿದ ಆತ ಭೂಮಿಯಲ್ಲಿರುವವರಿಗೆ ಅಂತಹ ವರವನ್ನು ಕೊಡುತ್ತಾನೆ ಎಂದು ನಾನು ನಂಬುವುದಿಲ್ಲ ಎಂದು ವಿವರಿಸುತ್ತಾರೆ. ನಾಡಗೌಡರು ಮೌನವಾಗಿ ಹೆಗಡೆ ಅವರ ಮಾತು ಕೇಳುತ್ತಾ ಕೂರುತ್ತಾರೆ. ಆದರೆ ಮುಂದೆ ದೇವೇಗೌಡ ಹಾಗೂ ಹೆಗಡೆ ನಡುವಣ ಕದನ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಅದೂ ಇತಿಹಾಸ.

ಗೌಡರು ಯಾಕೆ ಹೀಗೆ? ಕಾರಣ ನಿಗೂಢ

ಗೌಡರು ಯಾಕೆ ಹೀಗೆ? ಕಾರಣ ನಿಗೂಢ

ಹೀಗೆ ದೇವೇಗೌಡರ ಬದುಕಿನ ಘಟನೆಗಳನ್ನು, ಅವರ ಬದುಕಿನ ಸುತ್ತ ನಡೆದ ಘಟನೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ. ಹೀಗಾಗಿ ಇವತ್ತಿಗೂ ಎಲ್ಲ ಪಕ್ಷಗಳ ನಾಯಕರು ದೇವೇಗೌಡರ ವಿಷಯ ಬಂದಾಗ ತುಂಬು ಎಚ್ಚರಿಕೆಯಿಂದಿರುತ್ತಾರೆ, ಅವರ ನಡೆಗಳನ್ನು ಗಮನಿಸುತ್ತಿರುತ್ತಾರೆ.

ಅಂದ ಹಾಗೆ ನಿಮಗೊಂದು ವಿಷಯ ಗೊತ್ತಿರಲಿ. ದೇವೇಗೌಡರಿಗೆ ಬೆಂಗಳೂರಿನ ರಾಜರಾಜೇಶ್ವರಿ ದೇವಿ ಎಂದರೆ ಬಹಳ ಭಕ್ತಿ. ಹೀಗಾಗಿ ಆಗಾಗ ಅಲ್ಲಿಗೆ ಹೋಗುತ್ತಲೇ ಇರುತ್ತಾರೆ. ಆದರೆ ಅವರು ಯಾವಾಗಲೇ ಹೋಗಲಿ, ಅವರಿದ್ದ ವಾಹನ ಬಲದಿಕ್ಕಿನಲ್ಲಿ ಚಲಿಸುತ್ತಾ ಹೋಗುತ್ತದೆಯೇ ಹೊರತು ತಪ್ಪಿಯೂ ಎಡದಿಕ್ಕಿಗೆ ತಿರುಗುವುದಿಲ್ಲ. ಹೀಗೆ ಬಲದಿಕ್ಕಿನ ಮೂಲಕವೇ ತಾಯಿಯ ದೇವಸ್ಥಾನಕ್ಕೆ ಹೋಗಬೇಕು ಎಂಬುದು ದೇವೇಗೌಡರಿಗೆ ಜ್ಯೋತಿಷಿಗಳು ನೀಡಿರುವ ಸೂಚನೆ.ಅದನ್ನವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಯಾಕೆ ಎಂಬುದು ಮಾತ್ರ ಇವತ್ತಿಗೂ ನಿಗೂಢ.

English summary
Interesting anecdotes from former prime minister H D Deve Gowda's political career. Why didn't he wish Kumaraswamy to contest in election? Why Gowda goes to Rajarajeshwari temple from the right side? Write R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X