ಬಿಜೆಪಿ-ಆರೆಸ್ಸೆಸ್, ಗಾಂಧಿ-ಕಾಂಗ್ರೆಸ್; ಭಾರತಕ್ಕೆ ಬೇಕು ಬೋರಿಸ್

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶ ಭಾರತ. 75 ವರ್ಷಗಳ ಸ್ವಾತಂತ್ರ್ಯ ಅನುಭವಿಸಿರುವ ಭಾರತದಲ್ಲಿ ಪ್ರಜಾತಂತ್ರೀಯ ಸಂಸ್ಥೆಗಳು ಎಷ್ಟು ಗಟ್ಟಿಯಾಗಿವೆ ಎಂಬುದನ್ನು ಅವಲೋಕಿಸಬಹುದಾದ ಸಮಯ ಇದು.

ಭಾರತದಲ್ಲಿ ಬಹು ಪಕ್ಷಗಳ ರಾಜಕೀಯ ವ್ಯವಸ್ಥೆ ಇದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಅಧಿಕಾರವನ್ನು ಹಂಚಲಾಗಿದೆ. ತಳಮಟ್ಟದಿಂದಲೂ ಜನಮತಗಳ ಮೂಲಕ ವಿವಿಧ ಸ್ತರಗಳಲ್ಲಿ ಜನಪ್ರತಿನಿಧಿಗಳ ಆಯ್ಕೆ ಆಗುತ್ತದೆ.

ಮೇಲ್ನೋಟಕ್ಕೆ ಭಾರತದ್ದು ಬಹಳ ಆದರ್ಶಪ್ರಾಯ ಎನಿಸುವ ಮತ್ತು ಬಹಳ ಜೀವಂತಿಕೆ ಇರುವ ಪ್ರಜಾಪ್ರಭುತ್ವದ ರೀತಿ ಕಾಣಿಸುವುದು ಹೌದು. ವಾಸ್ತವದಲ್ಲಿ ಹೀಗೆ ಇರುವುದು ಹೌದಾ?

ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಹೇಗಿದೆ ಸ್ಥಿತಿ? ವಿಶ್ವದ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಸಂಘಟನೆ ಎಂಬ ದಾಖಲೆಗೆ ಪಾತ್ರವಾಗಿರುವ ಬಿಜೆಪಿಯಲ್ಲಿ ಹೇಗಿದೆ ಸ್ಥಿತಿ? ರಾಜಕೀಯ ಭಾಷೆಯನ್ನೇ ಬದಲಿಸುವುದಾಗಿ ಹೇಳಿಕೊಂಡು ಬಂದ ಹೊಸ ರಾಜಕೀಯ ಪಕ್ಷಗಳ ಸ್ಥಿತಿ ಹೇಗಿದೆ?

ಭಾರತದ ಪ್ರಜಾತಂತ್ರ ವ್ಯವಸ್ಥೆ ಬ್ರಿಟನ್‌ನಿಂದಲೇ ಎರವಲು ಪಡೆದಿರುವುದು. ಬ್ರಿಟನ್ ರಾಜಕೀಯಕ್ಕೂ ಭಾರತದ ರಾಜಕೀಯಕ್ಕೂ ಎಷ್ಟು ವ್ಯತ್ಯಾಸ ಇದೆ? ಹಲವು ಪ್ರಶ್ನೆಗಳು ಕಾಡುವುದು ಸಹಜ.

 ಬೋರಿಸ್ ಜಾನ್ಸನ್ ಸ್ಥಿತಿ ಕಲ್ಪಿಸಿಕೊಳ್ಳಿ

ಬೋರಿಸ್ ಜಾನ್ಸನ್ ಸ್ಥಿತಿ ಕಲ್ಪಿಸಿಕೊಳ್ಳಿ

ಬ್ರಿಟನ್ ದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ಪಾಲಿಗೆ ಸಣ್ಣಪುಟ್ಟ ಎನಿಸುವ ಘಟನೆಗಳು ಬ್ರಿಟನ್‌ನಲ್ಲಿ ಪ್ರಧಾನಿ ತಲೆದಂಡಕ್ಕೂ ಎಡೆ ಮಾಡಿಕೊಟ್ಟಿವೆ. ಅದು ಯಾವುದೋ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ದೆಶೆಯಲ್ಲ. ಬದಲಾಗಿ ಸ್ವಂತ ಪಕ್ಷದ ಸದಸ್ಯರೇ ಸೇರಿ ಪ್ರಧಾನಿ ಬೋರಿಸ್ ಜಾನ್ಸನ್‌ರನ್ನು ಕೆಳಗಿಳಿಸಿದ್ಧಾರೆ. ಇದು ಬ್ರಿಟನ್ ರಾಜಕೀಯ ಸ್ಥಿತಿ.

ಭಾರತದಲ್ಲಿ ಇಂಥದ್ದೊಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾ ಎಂದು ಕೆಲ ರಾಜಕೀಯ ವಿಶ್ಲೇಷಕರು ಅನುಮಾನಿಸುತ್ತಾರೆ. ಭಾರತದಲ್ಲಿ ಸಿಎಂ, ಪಿಎಂ ಸ್ಥಾನದಲ್ಲಿರುವವರನ್ನು ಕೆಳಗಿಳಿಸಿದ ಉದಾಹರಣೆಗಳು ಬಹಳ ಇವೆ. ಯಡಿಯೂರಪ್ಪನವರನ್ನು ಇಳಿಸಿರಲಿಲ್ಲವೇ? ಆದರೆ, ಹೀಗೆ ಕೆಳಗಿಳಿಸಿದ್ದು ಪಕ್ಷದ ಕಾರ್ಯಕರ್ತರಾಗಲೀ ತಳಮಟ್ಟದ ನಾಯಕರಾಗಲೀ ಅಲ್ಲ. ಅತ್ಯುನ್ನತ ಹಂತದಲ್ಲಿರುವ ಹೈಕಮಾಂಡ್‌ನಿಂದ ಏಕಮುಖವಾಗಿ ತೆಗೆದುಕೊಂಡ ಕ್ರಮಗಳಿಂದ ಕೆಳಗಿಳಿಸಲ್ಪಟ್ಟವರು.

 ಪಕ್ಷಗಳಲ್ಲಿಲ್ಲ ಪ್ರಜಾಪ್ರಭುತ್ವ

ಪಕ್ಷಗಳಲ್ಲಿಲ್ಲ ಪ್ರಜಾಪ್ರಭುತ್ವ

ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ದೇಶಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಸುಧಾರಣೆ ಕಾರ್ಯ ಹೆಚ್ಚು ಸರಾಗವಾಗಿ ಆಗುತ್ತದೆ. ಅದರೆ, ಭಾರತದ ರಾಜಕಾರಣಿಗಳು ಸುಧಾರಣೆಗೆ ತೆರೆದುಕೊಳ್ಳುವುದು ಕಡಿಮೆ. ಪಕ್ಷದ ಸುಧಾರಣೆಯ ಪ್ರಯತ್ನಕ್ಕೆ ಯಾವಾಗಲೂ ಪ್ರತಿರೋಧ ವ್ಯಕ್ತವಾಗುತ್ತದೆ ಎಂದು ರಾಜಕೀಯ ತಜ್ಞ ಜೋಯಾ ಹಸನ್ ಹೇಳುತ್ತಾರೆ.

ಭಾರತದ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೇ ಇಲ್ಲ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ಪ್ರಕಾಶ್ ಪಾತ್ರಾ ಅಭಿಪ್ರಾಯಪಡುತ್ತಾರೆ.

 ಬಿಜೆಪಿಯಲ್ಲಿ ಹೇಗಿದೆ ಸ್ಥಿತಿ?

ಬಿಜೆಪಿಯಲ್ಲಿ ಹೇಗಿದೆ ಸ್ಥಿತಿ?

ಬಿಜೆಪಿಯ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಬಿಜೆಪಿಯಲ್ಲಿ ಮೊದಮೊದಲು ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿತ್ತು. ಇತ್ತೀಚೆಗೆ ಇದು ನಶಿಸಿದೆ ಎಂದು ಕೆಲವರು ಹೇಳಿದರೆ, ಆ ಪಕ್ಷದಲ್ಲಿ ಮೊದಲಿಂದಲೂ ಪ್ರಜಾಪ್ರಭುತ್ವ ಇಲ್ಲ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಆದರೆ, ನರೇಂದ್ರ ಮೋದಿ, ಅಮಿತ್ ಶಾ ರಾಷ್ಟ್ರ ರಾಜಕಾರಣಕ್ಕೆ ಬಂದ ಬಳಿಕ ಬಿಜೆಪಿ ಹೆಚ್ಚು ವ್ಯಕ್ತಿ ಆಧಾರಿತ ಪಕ್ಷವಾಗಿ ಪರಿವರ್ತನೆಗೊಂಡಿದೆ ಎಂಬುದು ಸಾಮಾನ್ಯ ಅನಿಸಿಕೆ.

"ಬಿಜೆಪಿಯಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಬ್ಲಾಕ್ ಮಟ್ಟದ ಮೇಲಿನ ಸ್ತರಗಳಿಗೆ ಚುನಾವಣೆಗಳು ನಡೆಯುತ್ತಿದ್ದವು. ಇದರಿಂದ ತಳಮಟ್ಟದಲ್ಲಿ ಕಾರ್ಯಕರ್ತರ ಬೆಂಬಲ ಇರುವ ನಾಯಕರು ರೂಪುಗೊಳ್ಳುತ್ತಿದ್ದರು. ಸಂಘಟನೆಯ ಜೀವಂತಿಕೆಗೆ ಇದು ಕಾರಣವಾಗಿತ್ತು. ಈಗಿನವರ ನಾಯಕತ್ವದಲ್ಲಿ ಈ ಪ್ರಕ್ರಿಯೆ ಕಾಣುತ್ತಿಲ್ಲ" ಎಂದು ರಾಧಿಕಾ ರಮೇಶನ್ ತಿಳಿಸುತ್ತಾರೆ.

 ಆರೆಸ್ಸೆಸ್ ಅಡ್ಡಿ

ಆರೆಸ್ಸೆಸ್ ಅಡ್ಡಿ

ಬಿಜೆಪಿಯ ಪೂರ್ವಜ ಜನಸಂಘದ ದಿನದಿಂದಲೂ ಆ ಪಕ್ಷದ ಮೇಲೆ ಆರೆಸ್ಸೆಸ್ ಹಿಡಿತ ಇಟ್ಟುಕೊಂಡೇ ಇದೆ. ಜನಸಂಘ ಮತ್ತು ಬಿಜೆಪಿಯ ಅಧ್ಯಕ್ಷರಾರೂ ಕಾರ್ಯಕರ್ತರಿಂದ ಆರಿಸಿಕೊಂಡವರಲ್ಲ, ಬದಲಾಗಿ ಆರೆಸ್ಸೆಸ್ ಸೂಚಿಸಿದ ಪ್ರಕಾರ ಆಯ್ಕೆಯಾದವರು. ನರೇಂದ್ರ ಮೋದಿ ಆಗಮನದ ಬಳಿಕ ಬಿಜೆಪಿಯಲ್ಲಿ ಆರೆಸ್ಸೆಸ್ ಹಿಡಿತ ಕಡಿಮೆ ಆಯಿತು ಎಂದು ಹೇಳಲಾಗುತ್ತದೆ. ಆದರೆ, ಆರೆಸ್ಸೆಸ್ ಹಿಡಿತ ಕಡಿಮೆಯಾದರೂ ಪಕ್ಷದ ಆಂತರಿಕ ಪ್ರಜಾಪ್ರಭುತ್ವವು ಮೋದಿ ಹಿಡಿತದಿಂದ ನಲುಗುತ್ತಿರುವುದಂತೂ ಹೌದು ಎನ್ನುತ್ತಾರೆ ಜೋಯಾ ಹಸನ್.

ಭಾರತೀಯ ಜನಸಂಘ ಸ್ಥಾಪಿಸಿದ ಶ್ಯಾಮಪ್ರಸಾದ್ ಮುಖರ್ಜಿ ಮೂಲತಃ ಕಾಂಗ್ರೆಸ್ಸಿಗರು. 1951ರಲ್ಲಿ ಜನಸಂಘ ಸ್ಥಾಪಿಸಿದ ಮುಖರ್ಜಿ ಎರಡು ವರ್ಷಗಳ ಬಳಿಕ ನಿಧನ ಹೊಂದಿದರು. ಅದಾದ ಬಳಿಕ ಚಂದ್ರ ಮೌಳಿ ಶರ್ಮಾ ಅಧ್ಯಕ್ಷರಾದರು. ಆರೆಸ್ಸೆಸ್ ಸ್ವಯಂಸೇವಕರಲ್ಲದ ಶರ್ಮಾ ಆರೆಸ್ಸೆಸ್ ಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಕೊನೆಗೆ ಶರ್ಮಾ ಪಕ್ಷ ಬಿಡಬೇಕಾಯಿತು. ದೀನ್ ದಯಾಳ್ ಉಪಾಧ್ಯಾಯ್ ಬಿಜೆಎಸ್ ಅಧ್ಯಕ್ಷರಾದರು. ಆದರೆ, ಮೌಳಿ ಚಂದ್ರ ಶರ್ಮಾ ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ಕಾರ್ಯಕ್ಕೆ ಆರೆಸ್ಸೆಸ್ ಅಡ್ಡಿ ಪಡಿಸುತ್ತಿರುವ ವಿಚಾರವನ್ನು ತಿಳಿಸಿದ್ದರು. ಈ ರಾಜೀನಾಮೆ ಪತ್ರವನ್ನು ಮಾಧ್ಯಮಕ್ಕೆ ಕೊಟ್ಟರು. ಅವರ ಪ್ರಕಾರ, ಮೊದಲ ಅಧ್ಯಕ್ಷರಾಗಿದ್ದ ಶಾಮಪ್ರಸಾಧ್ ಮುಖರ್ಜಿ ಅವರಿಗೂ ಆರೆಸ್ಸೆಸ್ ತಲೆನೋವು ಸೃಷ್ಟಿಸಿತ್ತು ಎಂದು ಶರ್ಮಾ ಆರೋಪಿಸಿದ್ದರು.

ಆಗಿನಿಂದಲೂ ಬಿಜೆಪಿಯ ನಿರ್ವಹಣೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆರೆಸ್ಸೆಸ್ ಸೂಚಿಸಿದವರೇ ಬಿಜೆಪಿಯ ಆಯಕಟ್ಟಿನ ಜಾಗದಲ್ಲಿರುತ್ತಾರೆ. ಈಗ ಆರೆಸ್ಸೆಸ್‌ಗಿಂತ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಭಾವ ಹೆಚ್ಚಿದೆಯೇ ಹೊರತು ಆಂತರಿಕ ಪ್ರಜಾಪ್ರಭುತ್ವ ಬಿಜೆಪಿಯಲ್ಲಿ ಬೆಳೆದಿಲ್ಲ ಎಂಬುದು ಕೆಲವರ ಅಭಿಪ್ರಾಯ.

 ಕಾಂಗ್ರೆಸ್‌ನಲ್ಲಿ ಹೇಗಿದೆ ಸ್ಥಿತಿ?

ಕಾಂಗ್ರೆಸ್‌ನಲ್ಲಿ ಹೇಗಿದೆ ಸ್ಥಿತಿ?

ಬಿಜೆಪಿಯಲ್ಲಿ ಆರೆಸ್ಸೆಸ್ ಇರುವಂತೆ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಕೇಂದ್ರಿತವಾಗಿದೆ. ಇಂದಿರಾ ಗಾಂಧಿ ಪ್ರಧಾನಿ ಆದ ಬಳಿಕ ಕಾಂಗ್ರೆಸ್ ಭ್ರಷ್ಟವಾಯಿತು ಎಂದು ಹೇಳುವವರಿದ್ಧಾರೆ. ಆದರೆ, ವಾಸ್ತವದಲ್ಲಿ ನೆಹರೂ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಹುತೇಕ ವ್ಯಕ್ತಿ ಕೇಂದ್ರಿತವೇ ಆಗಿದ್ದುದು. ಕಾಂಗ್ರೆಸ್‌ನೊಳಗೆ ತಮ್ಮ ಪ್ರತಿಸ್ಪರ್ಧಿಗಳೆನಿಸಿದ್ದ ಆಚಾರ್ಯ ಕೃಪಾಲಾನಿ, ಪುರುಷೋತ್ತಮದಾಸ್ ಟಂಡನ್ ಅವರನ್ನು ನೆಹರೂ ಬದಿಗೆ ಸರಿಸಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿದ್ದರು. ನೆಹರೂ ಬಳಿಕ ಅವರ ಮಗಳು ಇಂದಿರಾ ಗಾಂಧಿ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಮೇಲೆ ಅದು ಅಕ್ಷರಶಃ ಇಂದಿರಾ ಕಾಂಗ್ರೆಸ್ ಆಗಿಹೋಯಿತು.

 ಆಮ್ ಆದ್ಮಿಯಿಂದ ಬದಲಾವಣೆ?

ಆಮ್ ಆದ್ಮಿಯಿಂದ ಬದಲಾವಣೆ?

ಭಾರತದಲ್ಲಿ ಹೊಸ ರಾಜಕೀಯ ಗಾಳಿ ಬೀಸಿದ್ದು ಆಮ್ ಆದ್ಮಿ ಪಕ್ಷ. ಪಾರದರ್ಶಕ ನೀತಿ, ಜನರ ಆಡಳಿತ ಇತ್ಯಾದಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಎಎಪಿ ಈಗ ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿಗೆ ಕೇಂದ್ರಿತವಾಗಿದೆ. ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತಿದವರಿಗೆ ಪಕ್ಷದಿಂದ ಹೊರಹೋಗುವ ದಾರಿ ಮಾತ್ರವೇ ಸಿಕ್ಕಿದ್ದು.

ಭಾರತದ ರಾಜಕೀಯ ಕ್ಷೇತ್ರದ ಬಗ್ಗೆ ನಡೆದಿರುವ ಕೆಲ ಅಧ್ಯಯನಗಳ ಪ್ರಕಾರ ನಾಯಕ ಕೇಂದ್ರಿತ ಪಕ್ಷ ವ್ಯವಸ್ಥೆಯಿಂದ ರಾಜಕೀಯ ಅಪರಾಧೀಕರಣ ಹೆಚ್ಚುತ್ತಿದೆ. ಶೇ. 43ರಷ್ಟು ಲೋಕಸಭಾ ಸದಸ್ಯರ ವಿರುದ್ಧ ಕ್ರಿಮಿನಲ್ ಆರೋಪಗಳಿವೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ದುರ್ಬಲವಾದಷ್ಟೂ ಅವ್ಯವಹಾರಗಳು ಹೆಚ್ಚುತ್ತವೆ, ಪಾರದರ್ಶಕತೆ ನಶಿಸುತ್ತದೆ ಎಂದು ಎಡಿಆರ್ ಸಂಸ್ಥೆ ಹೇಳುತ್ತದೆ.

ಈಗ ಹೇಳಿ, ಬ್ರಿಟನ್‌ನಲ್ಲಿ ಪಕ್ಷದ ಇತರ ನಾಯಕರು ತಿಳಿಸಿದರೆಂದು ಬೋರಿಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರೀತಿಯಲ್ಲಿ ಭಾರತದಲ್ಲಿ ಯಾವ ಪ್ರಧಾನಿ ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಬಲ್ಲರು?

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+