ಕಾಂಟ್ರೋವರ್ಸಿ ಯಾಕೆ, ನನ್ನ ಕನಸುಗಳನ್ನು ಜನರಿಗೆ ತಿಳಿಸಿ: ಎಚ್ ಡಿಕೆ
Recommended Video

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಬಗ್ಗೆ ಸಿಟ್ಟಾಗಿದ್ದಾರೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಕೋಪಕ್ಕೆ ಕಾರಣವಾಗಿವೆ. ಬಹುತೇಕ ತಾಳ್ಮೆ ಕಾಯ್ದುಕೊಳ್ಳುವ ಎಚ್ ಡಿಕೆ ಯಾಕೆ ಹೀಗೆ ಸಿಟ್ಟಾಗುತ್ತಿದ್ದಾರೆ? ಈಗಲೂ ಪೂರ್ತಿಯಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳದ ಕುಮಾರಸ್ವಾಮಿ, ಪಕ್ಷದ ಸಲುವಾಗಿ ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ.
ಇವರು ಹೋದ ಕಡೆ ಜನರು ಕೂಡ ಸೇರುತ್ತಿದ್ದಾರೆ. ಆದರೆ ಸಿಗುತ್ತಿರುವ ಪ್ರಚಾರದ ಪ್ರಮಾಣ ನೋಡಿದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಸಾಕಷ್ಟು ಕಡಿಮೆ ಇದೆ. ವಿವಾದದ ಹೇಳಿಕೆಗಳು ನೀಡಿದಾಗ ಕುಮಾರಸ್ವಾಮಿ ಅವರು ಆಗುವಷ್ಟು ಹೈಲೈಟ್ ತಮ್ಮ ಕನಸಿನ ಬಗ್ಗೆ, ಯೋಜನೆಗಳ ಬಗ್ಗೆ ಮಾತನಾಡುವಾಗ ಆಗುವುದಿಲ್ಲ ಎಂಬುದು ಅವರ ತಕರಾರು.
ಇನ್ನು ಆ ಹೇಳಿಕೆಗಳನ್ನು ಗಮನಿಸಿ, ಕುಮಾರಸ್ವಾಮಿ ಆರೋಪ ಮಾಡುವುದಕ್ಕಷ್ಟೇ ಸರಿ, ವಿಚಾರ ಏನಿಲ್ಲ ಎಂಬ ಸಂದೇಶ ಜನರಿಗೆ ರವಾನೆ ಆಗುತ್ತದೆ. ತಮ್ಮ ಶ್ರಮ ಎಲ್ಲ ವ್ಯರ್ಥ ಆಗುತ್ತದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳು ಜನರಿಗೆ ತಲುಪಬೇಕು. ಆದರೆ ಅದು ಆಗುತ್ತಿಲ್ಲ ಎಂಬುದು ಅವರ ಅಳಲು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲು ಉದ್ದೇಶಿಸಿರುವ ಕೆಲವು ಮುಖ್ಯ ಯೋಜನೆಗಳ ಪ್ರಸ್ತಾವ ಈ ವರದಿಯಲ್ಲಿ ಮಾಡಲಾಗಿದೆ.

ರೈತರ ಸಾಲ ಮನ್ನಾ
ರಾಷ್ಟ್ರೀಕೃತ ಬ್ಯಾಂಕ್ ಗಳೂ ಸೇರಿದ ಹಾಗೆ ಯಾವುದೇ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನು ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯಲ್ಲಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ ಈ ರೀತಿ ಸಾಲ ಮನ್ನಾ ಮಾಡುವುದಕ್ಕೆ ಐವತ್ತೊಂದು ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ.

ಪ್ರತಿ ತಿಂಗಳು ಐದು ಸಾವಿರ
ಎಪ್ಪತ್ತು ವರ್ಷ ಮೇಲ್ಪಟ್ಟವರಿಗೆ ಜೀವಂತ ಇರುವ ತನಕ ಅವರ ನಿರ್ವಹಣೆಗೆ ಒಂದು ಕುಟುಂಬಕ್ಕೆ ಪ್ರತಿ ತಿಂಗಳು ತಲಾ ಐದು ಸಾವಿರ ರುಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಸಂಧ್ಯಾ ಸುರಕ್ಷಾ ಎಂಬ ಯೋಜನೆ ಇದೆ. ಆದರೆ ಮಾಸಾಶನ ಇಷ್ಟು ಮೊತ್ತಕ್ಕಿಲ್ಲ.

ಆರು ಸಾವಿರ ರುಪಾಯಿಯಂತೆ ಆರು ತಿಂಗಳು
ಇನ್ನು ಗರ್ಭಿಣಿಯರ ಸಾವು, ನವಜಾತ ಶಿಶು ಸಾವು ಅಥವಾ ಅಂಗವೈಕಲ್ಯ ತಡೆಯುವ ಸಲುವಾಗಿ ಪ್ರತಿ ತಿಂಗಳು ಆರು ಸಾವಿರ ರುಪಾಯಿಯಂತೆ ಹೆರಿಗೆಯ ಪೂರ್ವವಾಗಿ ಮೂರು ತಿಂಗಳು, ಆ ನಂತರ ಮೂರು ತಿಂಗಳು ಅಂದರೆ ಆರು ತಿಂಗಳ ಕಾಲ ನೀಡುವ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ.

ಸರಕಾರದಿಂದಲೇ ಕೃಷಿ ಸಾಲ
ಕೃಷಿ ಚಟುವಟಿಕೆ ಕೈಗೊಳ್ಳುವುದಕ್ಕೆ ಸರಕಾರದಿಂದಲೇ ಸಾಲ ವ್ಯವಸ್ಥೆ. ಹಾಗೂ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದಲಾವಣೆ. ಜಮೀನಿಲ್ಲದ ಕೃಷಿ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸುವ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ.

ಎಲ್ಲರನ್ನೂ ಒಳಗೊಂಡಂತೆ ಯೋಜನೆ
ಕೃಷಿಕರು, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಸಮಾಜದ ಎಲ್ಲರನ್ನೂ ಒಳಗೊಂಡಂತೆ ಯೋಜನೆಗಳನ್ನು ಹಾಕಿಕೊಂಡಿರುವ ಕುಮಾರಸ್ವಾಮಿ, ಜನರಿಗೆ ಈ ವಿಚಾರವನ್ನು ತಲುಪಿಸಲು ಹೆಣಗುತ್ತಿದ್ದಾರೆ. ಜೆಡಿಎಸ್ ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತ, ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಮುಂತಾದ ಮಾತುಗಳು ಕುಮಾರಸ್ವಾಮಿ ಆವರನ್ನು ಕೆರಳಿಸಿವೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿನ ಪ್ರಚಾರ, ಜಿಲ್ಲೆಜಿಲ್ಲೆಗಳನ್ನು ತಲುಪುವ ಪ್ರಯತ್ನದಲ್ಲಿ ಕುಮಾರಸ್ವಾಮಿ ಬೆವರು ಹರಿಸುತ್ತಿದ್ದಾರೆ.

ಎಲ್ಲರನ್ನೂ ಒಳಗೊಂಡಂತೆ ಯೋಜನೆ
ಕೃಷಿಕರು, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಸಮಾಜದ ಎಲ್ಲರನ್ನೂ ಒಳಗೊಂಡಂತೆ ಯೋಜನೆಗಳನ್ನು ಹಾಕಿಕೊಂಡಿರುವ ಕುಮಾರಸ್ವಾಮಿ, ಜನರಿಗೆ ಈ ವಿಚಾರವನ್ನು ತಲುಪಿಸಲು ಹೆಣಗುತ್ತಿದ್ದಾರೆ. ಜೆಡಿಎಸ್ ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತ, ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಮುಂತಾದ ಮಾತುಗಳು ಕುಮಾರಸ್ವಾಮಿ ಆವರನ್ನು ಕೆರಳಿಸಿವೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿನ ಪ್ರಚಾರ, ಜಿಲ್ಲೆಜಿಲ್ಲೆಗಳನ್ನು ತಲುಪುವ ಪ್ರಯತ್ನದಲ್ಲಿ ಕುಮಾರಸ್ವಾಮಿ ಬೆವರು ಹರಿಸುತ್ತಿದ್ದಾರೆ.












Click it and Unblock the Notifications