ಉಗುರು ಸುತ್ತಾದರೆ ಬೆರಳು ತೆಗೆಯೋಣ ಎಂಬಂತಿದೆ ಲಿಂಗಾಯತ ಪ್ರತ್ಯೇಕ ಧರ್ಮ
ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದಕ್ಕೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದೆಂಥ ಪರಿಸ್ಥಿತಿ ಅಂದರೆ, ಒಂದು ಲೋಟದಲ್ಲಿ ಮುಕ್ಕಾಲು ಭಾಗ ನೀರಿದ್ದರೆ ಅದರ ಬಗ್ಗೆ ತೋಚಿದಂತೆ ತಮ್ಮ ಅಭಿಪ್ರಾಯ ಹೇಳುತ್ತಾರೆ. ಕೆಲವರಿಗೆ ಮುಕ್ಕಾಲು ಭಾಗ ನೀರಿದೆ ಎಂಬ ಆಶಾವಾದ.
ಮತ್ತೆ ಕೆಲವರಿಗೆ ಕಾಲು ಭಾಗ ನೀರಿಲ್ಲ ಎಂಬ ಬೇಸರ. ಮತ್ತೊಂದಿಷ್ಟು ಕೆಲವರಿಗೆ ಅದಾಗಲೇ ಯಾರೋ ಕಾಲು ಭಾಗ ನೀರು ಕುಡಿದು, ಎಂಜಲು ಮಾಡಿದ್ದಾರೆ ಎಂಬ ಗುಮಾನಿ. ಒಂದು ವಿಚಾರದ ಸುತ್ತ ಹೀಗೆ ಹಲವು ಅಭಿಪ್ರಾಯಗಳು ಸುಳಿದಾಡುತ್ತಿವೆ. ಆದರೆ ಅವೆಲ್ಲದರ ಕೇಂದ್ರ ಬಿಂದುವಾಗಿ ಕಣ್ಣೆದುರು ರಾಜಕಾರಣ ಎಂಬ 'ಗೂಟ' ಎಲ್ಲವನ್ನೂ ಸಂಭಾಳಿಸುತ್ತಿದೆ.
ವೀರಶೈವ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುವುದಕ್ಕೆ ಸಾಧ್ಯವಿಲ್ಲ ಎಂದು ಈಗಾಗಲೇ ಎರಡೆರಡು ಬಾರಿ ಕೋರ್ಟ್ ಹೇಳಿದೆ. ಆ ಕಾರಣಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸುವ ತೀರ್ಮಾನಕ್ಕೆ ಬರಲಾಯಿತು. ಇದು ಮೇಲ್ನೋಟಕ್ಕೇ ಕಾಣುವಂತೆ ಈ ವರೆಗೆ ಆದ ತಪ್ಪನ್ನು ತಿದ್ದುಕೊಳ್ಳುವ ಯತ್ನದಂತೆ ಕಾಣುತ್ತದೆ.

ಪ್ರತ್ಯೇಕ ಧರ್ಮ ಎಂಬ ಪ್ರಶ್ನೆ ಏಕೆ ಬರುತ್ತದೆ?
ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಪ್ರಶ್ನೆ ಬಂದಾಗ, ಸದ್ಯಕ್ಕೆ ಆ ಸಮುದಾಯ ಅನುಸರಿಸುತ್ತಿರುವ ಜೀವನ ಪದ್ಧತಿ ಯಾವುದು ಎಂಬ ಪ್ರಶ್ನೆಗಳು ಏಳುತ್ತವೆ. ಈಶ್ವರ- ಗಣಪತಿ ಪೂಜೆ, ಯುಗಾದಿ ಆಚರಣೆ, ಭಗವದ್ಗೀತೆ ಗ್ರಂಥ ಪಠಣ...ಹೀಗೆ ಹಿಂದೂಗಳು ಹಾಗೂ ಲಿಂಗಾಯತರ ಆಚರಣೆಯಲ್ಲಿ ಸಾಮ್ಯತೆ ಇದೆ ಎಂದಾಗ ಪ್ರತ್ಯೇಕ ಧರ್ಮ ಎಂಬ ಪ್ರಶ್ನೆ ಏಕೆ ಬರುತ್ತದೆ?

ಬೆರಳು ತೆಗೆದು ಹಾಕಿಬಿಡೋಣ ಎಂಬ ಸಲಹೆ ಕೊಟ್ಟರೆ ಹೇಗೆ?
ಉಗುರು ಸುತ್ತಾಗಿದೆ ಅಂತ ವೈದ್ಯರ ಬಳಿ ಹೋದರೆ, ಬೆರಳು ತೆಗೆದು ಹಾಕಿಬಿಡೋಣ ಎಂಬ ಸಲಹೆ ಕೊಟ್ಟರೆ ಹೇಗಿರುತ್ತದೆ? ಲಿಂಗಾಯತ ಸಮಾಜದಲ್ಲಿ ಹತ್ತಾರು ಜಾತಿಗಳಿವೆ. ಅವುಗಳಿಗೆ ಮೀಸಲಾತಿ ಮತ್ತಿತರ ವಿಚಾರದಲ್ಲಿ ಅಸಮಾಧಾನ ಇದೆ ಅನ್ನೋದಾದರೆ, ಅಲ್ಲಿ ಏನಾದರೂ ಬದಲಾವಣೆ ಮಾಡಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಅಂತಾಗಿ, ಅಲ್ಪಸಂಖ್ಯಾತ ಸ್ಥಾನ ಮಾನ ಸಿಕ್ಕರಷ್ಟೇ ಪರಿಹಾರ ಅನ್ನೋದು ಯಾವ ರೀತಿಯ ತರ್ಕ?

ಬೇಕು ಅಂದವರು ಬೇಡ ಅಂತಲೂ, ಬೇಡ ಅಂದಿದ್ದವರು ಬೇಕು ಅಂತಲೂ ಪಟ್ಟು
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವತ್ವದ ಸರಕಾರ ಅಧಿಕಾರದಲ್ಲಿದ್ದಾಗಲೂ ಪ್ರತ್ಯೇಕ ಧರ್ಮದ ಮನವಿ ಕಳುಹಿಸಲಾಗಿತ್ತು. ಆಗ ಮನವಿಗೆ ಯಾವುದೇ ಪುರಸ್ಕಾರ ಸಿಕ್ಕಿರಲಿಲ್ಲ. ಆ ಮನವಿಗೆ ಬಿಜೆಪಿಯ ಸದ್ಯದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಸಹಿ ಹಾಕಿದ್ದರು. ಆಗಿನ ಕಾಂಗ್ರೆಸ್ ನಿಲುವಿನಲ್ಲೂ, ಯಡಿಯೂರಪ್ಪನವರ ಅಭಿಪ್ರಾಯದಲ್ಲೂ ಯೂ ಟರ್ನ್ ಆಗಿದೆ. ಬೇಕು ಅಂದವರು ಬೇಡ ಅಂತಲೂ, ಬೇಡ ಅಂದಿದ್ದವರು ಬೇಕು ಅಂತಲೂ ಪಟ್ಟು ಹಿಡಿದಿದ್ದಾರೆ.

ನಾಗಮೋಹನ್ ದಾಸ್ ಅವರನ್ನು ಒಳಗೊಂಡ ತಜ್ಞರ ಸಮಿತಿಯ ಶಿಫಾರಸುಗಳು
ವೀರಶೈವ- ಲಿಂಗಾಯತ ಎರಡೂ ಬೇರೆ ಅಲ್ಲ ಅನ್ನೋರು ಒಂದು ಕಡೆ, ಎರಡೂ ಬೇರೆ ಎಂಬ ವಾದ ಹೂಡುವವರು ಮತ್ತೊಂದು ಕಡೆ. ಇದೀಗ ನ್ಯಾ ನಾಗಮೋಹನ್ ದಾಸ್ ಅವರನ್ನು ಒಳಗೊಂಡ ತಜ್ಞರ ಸಮಿತಿ ಶಿಫಾರಸು ಮಾಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೆಲವು ಸಲಹೆ ಬಂದು, ಅವುಗಳನ್ನೇ ರಾಜ್ಯದಿಂದ ಕೇಂದ್ರಕ್ಕೆ ಹೊತ್ತು ಹಾಕಲು ತೀರ್ಮಾನಿಸಲಾಗಿದೆ.

ಕಾನೂನಿನ ಪ್ರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಆಗಬಹುದಾ?
ಹೀಗೆ ಒಂದೊಂದು ರಾಜ್ಯದಲ್ಲಿ, ಒಂದೊಂದು ಸಮುದಾಯ ತಮಗೆ 'ಅನ್ಯಾಯ' ಆಗಿದೆ. ಪ್ರತ್ಯೇಕ ಧರ್ಮ ಮಾಡಿ ಎಂದು ಹೊರಟರೆ ಮುಂದಿನ ದಾರಿ ಏನು? ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ಆ ಸಮಾಜದ ಎಲ್ಲರ ಅಭಿಪ್ರಾಯವೇ ಎಂಬುದು ಕೂಡ ಪ್ರಶ್ನೆ. ಇದೇನೆ ಇರಲಿ, ವೀರಶೈವ ಹಾಗೂ ಲಿಂಗಾಯತ ಎಂಬ ಭೇದ ಈವರೆಗೆ ಇತ್ತೋ- ಇಲ್ಲವೋ ಎಲ್ಲರಿಗೂ ಗೊತ್ತಿರಲಿಲ್ಲ. ಆದರೆ ಈಗಂತೂ ದೊಡ್ಡ ಕಂದಕ ಗೋಚರಿಸುತ್ತಿದೆ. ಸರಕಾರದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಆದ ನಂತರ ಬೀದರ್ ನಲ್ಲಂತೂ ಹೊಡೆದಾಟ-ಬಡಿದಾಟವೇ ಆಗಿದೆ. ಕಾನೂನಿನ ಪ್ರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಆಗಬಹುದಾ? ಜನರ ಅಭಿಪ್ರಾಯ ಏನು? ನಿಮಗೆ ಈ ಸನ್ನಿವೇಶದಲ್ಲಿ ಏನನ್ನಿಸುತ್ತದೆ?












Click it and Unblock the Notifications