• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಸಾಲ ಮನ್ನಾ : ಎಚ್ಡಿಕೆ ಹೇಳಿದ್ದರ ಮಾತಿನ ಅರ್ಥ ಅದಾಗಿರಲಿಲ್ಲ!

By ಆರ್ ಟಿ ವಿಠ್ಠಲಮೂರ್ತಿ
|

ಇದು ದಶಕಕ್ಕೂ ಹಿಂದೆ ನಡೆದ ಘಟನೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಒಮ್ಮೆ ನೆರೆಪೀಡಿತ ಕೃಷ್ಣಾ ನದಿಯ ಪ್ರದೇಶಗಳನ್ನು ನೋಡಲು ಹೋದರು. ಹೀಗೆ ಭೇಟಿ ಮಾಡಿ ನೆರೆಪೀಡಿತ ಪ್ರದೇಶಗಳನ್ನು ನೋಡುತ್ತಾ ಹೋಗುವ ವೇಳೆಗೆ ಸಂಜೆ ನಾಲ್ಕು ಗಂಟೆ ದಾಟಿತು.

ಆಗ ಜಿಲ್ಲಾಧಿಕಾರಿ ಶ್ರೀಮತಿ ಶಾಲಿನಿ ರಜನೀಶ್ ಅವರು, ಸಾರ್, ಬೆಳಗಾವಿಗೆ ಮರಳಿ ಹೋಗೋಣ ಎಂದು ಅವಸರಿಸತೊಡಗಿದರು. ಅವರ ಅವಸರ ನೋಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆಪ್ತರ ಬಳಿ, ಅದೇಕೆ ಜಿಲ್ಲಾಧಿಕಾರಿಗಳು ಬಹಳ ಅವಸರ ಮಾಡುತ್ತಿದ್ದಾರೆ? ಅಂತ ಕೇಳಿದರು.

ಉತ್ತರ ಕರ್ನಾಟಕ ಮುಖಂಡರ ಜೊತೆ ಸಿಎಂ ಸಭೆ, ಹಳೆ ಹೇಳಿಕೆಗಳಿಗೆ ತೇಪೆ

ಆಗ ಪಕ್ಕದಲ್ಲಿದ್ದ ಆಪ್ತರು : ಸಾರ್, ಬೆಂಗಳೂರಿಗೆ ಹೊರಡುವ ಹೆಲಿಕಾಪ್ಟರ್ ಸಂಜೆ ಐದೂವರೆಯ ಒಳಗೆ ಟೇಕ್ ಆಫ್ ಆಗಬೇಕು. ಹೀಗಾಗಿ ಜಿಲ್ಲಾಧಿಕಾರಿಗಳು ಅವಸರ ಮಾಡುತ್ತಿದ್ದಾರೆ ಎಂದರು. ಅದನ್ನು ಕೇಳಿದ ಕುಮಾರಸ್ವಾಮಿ; ಅಷ್ಟೇನಾ? ಹೆಲಿಕಾಪ್ಟರ್ ಟೇಕ್ ಆಫ್ ಆಗದಿದ್ದರೇನಾಯಿತು? ಇಲ್ಲೇ ಎಲ್ಲಾದರೂ ಉಳಿದುಕೊಂಡರಾಯಿತು. ಅದಕ್ಕೇಕೆ ಚಿಂತೆ? ಅಂತ ಪ್ರಶ್ನಿಸಿದರು.

ಹಾಗೆ ಪ್ರಶ್ನಿಸಿದವರೇ ಬೆಳಗಾಂ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕರಾದ ಲಕ್ಷ್ಣಣ ಸವದಿ ಅವರ ಬಳಿ ಮಾತನಾಡಿ, ಇವತ್ತು ಇಲ್ಲೇ ಎಲ್ಲಾದರೂ ಉಳಿದುಕೊಳ್ಳಬಹುದಲ್ಲವೇ? ಅಂತ ಕೇಳಿದರು. ಲಕ್ಷ್ಮಣ ಸವದಿ ಅವರೂ ಸಂತಸದಿಂದ, ಖಂಡಿತ ಸಾರ್, ಇಲ್ಲೇ ನಮ್ಮ ಹಳ್ಳಿ ಪಿ.ಕೆ.ನಾಗನೂರು ಇದೆ. ಈ ಕೃಷ್ಣಾ ನದಿಯನ್ನು ದಾಟಿದರೆ ಸಿಗುತ್ತದೆ. ಅಲ್ಲೇ ಉಳಕೊಳ್ಳುತ್ತೀರಂತೆ ಬನ್ನಿ ಎಂದು ಆಹ್ವಾನಿಸಿದರು.

ಅಖಂಡ ಕರ್ನಾಟಕ ನನ್ನುಸಿರು: ಎಚ್ಡಿಕೆ ಭಾವುಕ ನುಡಿ

ಇದಾದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ, ಲಕ್ಷ್ಮಣ ಸವದಿ ಅವರೆಲ್ಲ ಒಂದು ಟ್ರಾಕ್ಟರ್ ನಲ್ಲಿ, ಉಳಿದವರೆಲ್ಲ ಇನ್ನೆರಡು ಟ್ರಾಕ್ಟರ್ ಗಳಲ್ಲಿ ಹರಿಯುತ್ತಿದ್ದ ನೀರಿನಲ್ಲೇ ಪ್ರಯಾಣಿಸಿ ಪಿ.ಕೆ.ನಾಗನೂರು ಎಂಬ ಗ್ರಾಮವನ್ನು ತಲುಪಿದರು. ಕುಮಾರಸ್ವಾಮಿ ಅವರು ತಮ್ಮ ಜಿಲ್ಲೆಯ ಹಳ್ಳಿಯೊಂದರಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದ ಜನ ತಂಡೋಪತಂಡವಾಗಿ ಆ ಗ್ರಾಮಕ್ಕೆ ಬಂದರು.

ಗ್ರಾಮವಾಸ್ತವ್ಯದ ರೂಪುರೇಷೆ ಮೂಡಿದ್ದೇ ಅಂದು

ಗ್ರಾಮವಾಸ್ತವ್ಯದ ರೂಪುರೇಷೆ ಮೂಡಿದ್ದೇ ಅಂದು

ಮರುದಿನ ಎದ್ದು ದಿನ ಪತ್ರಿಕೆಗಳನ್ನು ನೋಡಿದರೆ, ನೆರೆ ಸಂತ್ರಸ್ತರ ಸಂಕಷ್ಟ ಆಲಿಸಲು ಬಂದ ಮುಖ್ಯಮಂತ್ರಿಗಳಿಂದ ಗ್ರಾಮವಾಸ್ತವ್ಯ ಎಂಬ ಸುದ್ದಿಗಳು ಪ್ರಕಟವಾಗಿದ್ದವು. ಅರೇ, ಒಂದು ಗ್ರಾಮದಲ್ಲಿ ಹೀಗೆ ಉಳಿದುಕೊಂಡರೆ ಜನ ಎಷ್ಟು ಪ್ರೀತಿಸುತ್ತಾರಲ್ಲವೇ? ಅಂದುಕೊಂಡ ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಗ್ರಾಮವಾಸ್ತವ್ಯದ ರೂಪುರೇಷೆಗಳು ಮೂಡಿದ್ದೇ ಅವತ್ತು.

ತುಂಬ ಜನರಿಗೆ ಗ್ರಾಮವಾಸ್ತವ್ಯ ಎಂಬುದು ಪೂರ್ವನಿಯೋಜಿತ ತಂತ್ರ ಎಂಬ ಭಾವನೆ ಇದೆ. ಆದರೆ ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಹುಜನಪ್ರಿಯವಾದ ಗ್ರಾಮವಾಸ್ತವ್ಯ ಯೋಜನೆಯ ಕನಸು ಮೊಳಕೆಯೊಡೆದಿದ್ದು ಹೀಗೆ. ಮುಂದೆ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡರು. ಸಮಾಜದ ವಿವಿಧ ವರ್ಗಗಳ ಜನರ ಮನೆಗಳಲ್ಲಿ ವಾಸ್ತವ್ಯ ಮಾಡಿದರು.

ಎಂಇಎಸ್ ಗೆ ಬ್ರೇಕ್ ಹಾಕಲು ಎಚ್ಡಿಕೆ ಉಪಾಯ

ಎಂಇಎಸ್ ಗೆ ಬ್ರೇಕ್ ಹಾಕಲು ಎಚ್ಡಿಕೆ ಉಪಾಯ

ಅಂದ ಹಾಗೆ, ಅವತ್ತು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳಲ್ಲಿ ಬೆಳಗಾಂ ಜಿಲ್ಲೆಯೊಂದಕ್ಕೇ ಕುಮಾರಸ್ವಾಮಿ ಇಪ್ಪತ್ತೇಳು ಬಾರಿ ಭೇಟಿ ನೀಡಿದ್ದರು. ಇದೇ ರೀತಿ ಬೆಳಗಾಂ ಮತ್ತಿತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಎಂ.ಇ.ಎಸ್. ಸಂಘಟನೆಯ ಹಾವಳಿ ಹೆಚ್ಚಾದ ಸಂದರ್ಭದಲ್ಲಿ ಮಧ್ಯರಾತ್ರಿಯ ವೇಳೆಗೆ ಆಪ್ತ ಅಧಿಕಾರಿಯೊಬ್ಬರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಫೋನು ಮಾಡಿದರು.

ರೀ, ದಿನೇಶ್.. ಬೆಳಗಾವಿಯಲ್ಲಿ ಎಂ.ಇ.ಎಸ್.ನವರ ಹಾವಳಿ ಹೆಚ್ಚಿದೆ. ಇದಕ್ಕೆ ಬ್ರೇಕ್ ಹಾಕಬೇಕು. ಮುಂದಿನ ಹದಿನೈದು ದಿನಗಳಲ್ಲಿ ಅಲ್ಲಿ ವಿಧಾನಮಂಡಲ ಅಧಿವೇಶನ ನಡೆಸೋಣ ಎಂದರು. ಮುಖ್ಯಮಂತ್ರಿಗಳ ಮಾತು ಕೇಳಿದ ಅವರ ಆಪ್ತ ವಲಯದ ಅಧಿಕಾರಿ ದಿನೇಶ್ ಅವರಿಗೆ ಆಶ್ಚರ್ಯ. ಹಾಗಂತಲೇ; ಸಾರ್, ಹದಿನೈದು ದಿನಗಳಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸಾಧ್ಯವೇ? ಹೇಗೆ ನಡೆಸುವುದು? ಎಲ್ಲಿ ನಡೆಸುವುದು ಸಾರ್? ಕಷ್ಟವಾಗುವುದಿಲ್ಲವೇ? ಎಂದು ಕೇಳಿದರು.

ಇಲ್ಲ, ತೊಂದರೆ ಏನಿಲ್ಲ? ನಮ್ಮ ಪ್ರಭಾಕರ ಕೋರೆಯವರ ಜತೆ ಮಾತನಾಡಿದ್ದೇನೆ. ಅವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ಅಧಿವೇಶನ ನಡೆಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ. ಒಂದು ಸಲ ಅಧಿವೇಶನ ನಡೆಸಿದರೆ ತಲುಪಬೇಕಾದವರಿಗೆ ಸರಿಯಾದ ಸಂದೇಶ ತಲುಪುತ್ತದೆ. ನಾವು ನಾಡಿನ ಯಾವ ಭಾಗವನ್ನೂ ನಿರ್ಲಕ್ಷಿಸಿಲ್ಲ ಎಂಬುದು ಅರಿವಾಗುತ್ತದೆ ಎಂದರು.

ಎಚ್ಡಿಕೆ ಹೇಳಿದ್ದ ಮಾತಿನ ಅರ್ಥ ಅದಲ್ಲ

ಎಚ್ಡಿಕೆ ಹೇಳಿದ್ದ ಮಾತಿನ ಅರ್ಥ ಅದಲ್ಲ

ಮುಂಬೈ-ಕರ್ನಾಟಕ ಭಾಗದ ಬೆಳಗಾವಿಯಲ್ಲಿ ಮೊಟ್ಟ ಮೊದಲ ಬಾರಿ ವಿಧಾನಮಂಡಲ ಅಧಿವೇಶನ ನಡೆದಿದ್ದು ಹೀಗೆ. ಇದನ್ನೆಲ್ಲ ಏಕೆ ನೆನಪಿಸಿಕೊಳ್ಳಬೇಕೆಂದರೆ ಇವತ್ತು ಉತ್ತರ ಕರ್ನಾಟಕ ಭಾಗವನ್ನು ಪ್ರತ್ಯೇಕಗೊಳಿಸಬೇಕು ಎಂದು ಪ್ರತಿಪಾದಿಸುತ್ತಿರುವ ಹಲವರು, ಕುಮಾರಸ್ವಾಮಿ ಅವರಾಡಿದ ಮಾತುಗಳನ್ನು ತಮಗಿಷ್ಟ ಬಂದಂತೆ ಇಂಟರ್ ಪ್ರಿಟ್ ಮಾಡುತ್ತಿದ್ದಾರೆ. ಸಭೆಯೊಂದರಲ್ಲಿ ಕುಮಾರಸ್ವಾಮಿ ಅವರ ಬಳಿ ಕೊಪ್ಪಳದ ರೈತರು ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದಾಗ, ನನ್ನಿಂದ ಎಷ್ಟು ಸಾಧ್ಯವೋ? ಅಷ್ಟು ಸಾಲವನ್ನು ಮನ್ನಾ ಮಾಡಿದ್ದೇನೆ. ಮತ ಹಾಕುವಾಗ ನಿಮಗೆ ನನ್ನ ನೆನಪು ಬರಲಿಲ್ಲವೇ? ಈಗ ನೀವು ಸಾಲ ಮನ್ನಾ ಮಾಡಿ ಎನ್ನಲು ಯಾವ ನೈತಿಕತೆ ಇದೆ? ಅಂತ ಹೇಳಿದ್ದಾರೆ.

ಆದರೆ ಇದರರ್ಥ, ಉತ್ತರ ಕರ್ನಾಟಕ ಭಾಗದವರು ತಮಗೆ ಮತ ಹಾಕಿಲ್ಲ. ಮತ ಹಾಕದ ಕಾರಣಕ್ಕಾಗಿ ಸಾಲ ಮನ್ನಾ ಮಾಡಿ ಎನ್ನಲು ನಿಮಗೆ ನೈತಿಕತೆಯಿಲ್ಲ ಅಂತಲ್ಲ. ಬದಲಿಗೆ, ನನ್ನ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಆದರೆ ನನ್ನ ಪಕ್ಷಕ್ಕೆ ನೀವು ಸಂಪೂರ್ಣ ಬಹುಮತ ನೀಡಿಲ್ಲ ಎಂಬ ನೋವು ಮಾತ್ರ.

ಏನೇ ಹೇಳಿದರೂ ನಾಯಕರ ಅಪಸ್ವರ

ಏನೇ ಹೇಳಿದರೂ ನಾಯಕರ ಅಪಸ್ವರ

ಸಂಪೂರ್ಣ ಬಹುಮತ ಹೊಂದಿದ ಪಕ್ಷವಾಗಿ ಜೆಡಿಎಸ್ ಅಧಿಕಾರ ಹಿಡಿಯಲಿಲ್ಲ ಎಂಬ ನೋವು ಮುಖ್ಯಮಂತ್ರಿಗಳಿಗಿದ್ದರೆ ಅದು ಸಹಜವೇ. ಈಗ ಅವರು ಯಾವ ಕೆಲಸಕ್ಕೆ ಕೈಹಾಕಿದರೂ ಸರ್ಕಾರ ರಚಿಸಲು ಬೆಂಬಲ ನೀಡಿದ ಕಾಂಗ್ರೆಸ್ ತಕರಾರು ಮಾಡುತ್ತದೆ. ಬಜೆಟ್ ಮಂಡಿಸುತ್ತೇವೆ ಎಂದರೆ ಬೇಡ ಎಂದು ಅದರ ನಾಯಕರ ಅಪಸ್ವರ ಎತ್ತಿದರು. ವಿವಿಗಳ ಸಿಂಡಿಕೇಟ್ ಸದಸ್ಯರನ್ನು ಬದಲಿಸಲು ಹೊರಟರೆ ಬೇಡ ಎಂದು ಪ್ರಮುಖ ನಾಯಕರೆನ್ನಿಸಿಕೊಂಡವರೇ ಪತ್ರ ಬರೆದರು. ಅಷ್ಟೇ ಏಕೆ? ಪೋಲೀಸ್ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ತಕರಾರು ತೆಗೆದಿದ್ದಾರೆ. ಇದೇ ರೀತಿ ಇನ್ನೂ ಹಲವು ವಿಷಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ.

ಹೀಗಾಗಿ ಸ್ವಯಂಬಲದ ಮೇಲೆ ಅಸ್ತಿತ್ವಕ್ಕೆ ಬಂದ ಸರ್ಕಾರ ನಡೆಯುವ ರೀತಿಗೂ, ಮತ್ತೊಬ್ಬರ ಬೆಂಬಲ ಪಡೆದು ಅಸ್ತಿತ್ವಕ್ಕೆ ಬಂದ ಸರ್ಕಾರ ನಡೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಇದೇ ಕಾರಣಕ್ಕಾಗಿ ಸರ್ಕಾರದ ನಡವಳಿಕೆಗಳಲ್ಲಿ ವೈರುಧ್ಯಗಳು ಕಾಣಬಹುದು. ಇದನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಕುಮಾರಸ್ವಾಮಿ ಅವರ ಮಾತಿನ ಹಿಂದಿರುವ ಧೋರಣೆಯನ್ನು ಅರ್ಥ ಮಾಡಿಕೊಂಡು ಸರ್ಕಾರದ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕೇ ವಿನಃ ಆ ಮಾತುಗಳನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ರಾಜ್ಯ ವಿಭಜನೆಯ ಕೂಗು ಹೆಚ್ಚಾಗುವಂತೆ ಮಾಡಬಾರದು.

ನಿಜಾಮನ ಕಾಲದಿಂದಲೇ ಉಕ ನಿರ್ಲಕ್ಷ್ಯ

ನಿಜಾಮನ ಕಾಲದಿಂದಲೇ ಉಕ ನಿರ್ಲಕ್ಷ್ಯ

ಇತಿಹಾಸ ಬಲ್ಲವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಅದೆಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳು ಬೇರೆ ಪ್ರೆಸಿಡೆನ್ಸಿಗಳ, ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದವು. ಪರಿಣಾಮವಾಗಿ ಅಭಿವೃದ್ಧಿಯ ವಿಷಯದಲ್ಲಿ ನಿರ್ಲಕ್ಷ್ಯಕ್ಕೂ ಒಳಗಾದವು. ಆದರೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಭಾಗಗಳು ಅಭಿವೃದ್ಧಿಯಾದವು. ಆ ಕಾಲದಲ್ಲಿ ವಿಶ್ವವಿದ್ಯಾನಿಲಯ, ನೀರಾವರಿಗೆ ಅಗತ್ಯವಾದ ಆಣೆಕಟ್ಟು, ಅತ್ಯುತ್ತಮ ರಸ್ತೆಗಳು ನಿರ್ಮಾಣಗೊಂಡಿದ್ದವು. ಆದರೆ ಉತ್ತರ ಕರ್ನಾಟಕದಲ್ಲಿ ಇವೆಲ್ಲ ಶುರುವಾಗಿದ್ದು ಏಕೀಕರಣದ ನಂತರ. ಹೀಗಾಗಿ ಅಭಿವೃದ್ಧಿಯ ವಿಷಯದಲ್ಲಿ ಹಳೆ ಮೈಸೂರು ಭಾಗಕ್ಕೂ, ಉತ್ತರ ಕರ್ನಾಟಕ ಭಾಗಕ್ಕೂ ವ್ಯತ್ಯಾಸ ಕಂಡರೆ ಅದು ಸಹಜ.

ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದು ಸರಿಯಲ್ಲ

ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದು ಸರಿಯಲ್ಲ

ಈ ವ್ಯತ್ಯಾಸವನ್ನು ಸರಿಪಡಿಸುವಂತೆ ಕೆಲಸ ಮಾಡಬೇಕು ಎಂದು ಆಳುವವರ ಮೇಲೆ ಒತ್ತಡ ಹೇರುವುದು, ಕೆಲಸ ಮಾಡಿಸುವುದು ನಮ್ಮ ಕೆಲಸವೇ ಹೊರತು, ರಾಜ್ಯ ವಿಭಜನೆಗೆ ಕುಮ್ಮಕ್ಕು ನೀಡುವುದಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಏಕೀಕರಣಕ್ಕೆ ದುಡಿದ ಹಲ ಪ್ರಮುಖರು ಉತ್ತರ ಕರ್ನಾಟಕ ಭಾಗದವರು. ಯಾಕೆಂದರೆ ಬೇರೆ ಬೇರೆ ಪ್ರಾಂತ್ಯಗಳ ಆಳ್ವಿಕೆಗೆ ಒಳಪಟ್ಟು ಅಭಿವೃದ್ಧಿಯ ವಿಷಯದಲ್ಲಿ ವಂಚಿತರಾಗಿದ್ದೇವೆ ಎಂಬ ಅರಿವು ಇದ್ದುದರಿಂದಲೇ ಅವರು ಕರ್ನಾಟಕದ ಏಕೀಕರಣಕ್ಕಾಗಿ ದುಡಿದರು. ಆದರೆ ಯಾರದೋ ರಾಜಕೀಯ ಲಾಭಕ್ಕಾಗಿ ಈ ವಿಷಯಕ್ಕೆ ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದು ಸರಿಯಲ್ಲ.

ಹಾಗೊಂದು ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಉತ್ತರ ಕರ್ನಾಟಕದ ವಿಷಯದಲ್ಲಿ ನಿರ್ಲಕ್ಷ್ಯ ಇದ್ದಿದ್ದೇ ಆಗಿದ್ದರೆ ಗ್ರಾಮವಾಸ್ತವ್ಯದಂತಹ ಯೋಜನೆ, ವಿಧಾನಮಂಡಲ ಅಧಿವೇಶನವನ್ನು ಆ ಭಾಗದಲ್ಲಿ ನಡೆಸಬೇಕು ಎಂಬ ಯೋಚನೆ ಬರಲು ಸಾಧ್ಯವೇ ಇರಲಿಲ್ಲ.

ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How chief minister H D Kumaraswamy's brain child of grama vastavya or village stay born? Read an interesting story in Kannada by R T Vittal Murthy, political analyst and senior Kannada journalist.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more