• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನ ರತ್ನಖಚಿತ ಸಿಂಹಾಸನದ ಹಿಂದಿದೆ ಪೌರಾಣಿಕ ಕಥೆ...

|

ಈ ಬಾರಿ ದಸರಾ ಮಹೋತ್ಸವ ಮೈಸೂರು ಅರಮನೆಗಷ್ಟೆ ಸೀಮಿತವಾಗಿದೆ. ನಗರದಲ್ಲಿ ವಿದ್ಯುತ್ ದೀಪ ಬೆಳಗುತ್ತಿದೆಯಾದರೂ ಅದರಾಚೆಗೆ ಯಾವ ಸಂಭ್ರಮವೂ ಕಾಣುತ್ತಿಲ್ಲ.

ಅರಮನೆ ಆವರಣದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅವುಗಳನ್ನು ಏನಿದ್ದರೂ ಆನ್ ಲೈನ್ ‌ನಲ್ಲಷ್ಟೆ ನೋಡಲು ಅವಕಾಶ. ಇನ್ನು ಅರಮನೆಯೊಳಗೆ ಸಾಂಪ್ರದಾಯಿಕ ಕಾರ್ಯಕ್ರಮ ಮತ್ತು ರತ್ನಖಚಿತ ಸಿಂಹಾಸನದಲ್ಲಿ ರಾಜಗಾಂಭೀರ್ಯದಲ್ಲಿ ಆಸೀನರಾಗಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿಕೊಡುತ್ತಿದ್ದಾರೆ. ಖಾಸಗಿ ದರ್ಬಾರ್ ಎಂದಾಗ ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸನ ಎಲ್ಲರನ್ನು ಆಕರ್ಷಿಸುತ್ತದೆ ಮತ್ತು ಅದರ ಇತಿಹಾಸ ತಿಳಿಯುವ ಕಾತರತೆ ನಮ್ಮಲ್ಲಿ ಮೂಡುವುದೂ ಸಹಜ. ಬನ್ನಿ, ಈ ದರ್ಬಾರ್ ಬಗ್ಗೆ ಇನ್ನಷ್ಟು ವಿವರವನ್ನು ನೋಡೋಣ...

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

 ನವರಾತ್ರಿ ಆರಂಭದ ದಿನ ಸಿಂಹಾಸನ ಜೋಡಣೆ

ನವರಾತ್ರಿ ಆರಂಭದ ದಿನ ಸಿಂಹಾಸನ ಜೋಡಣೆ

ಮಾಮೂಲಿ ದಿನಗಳಲ್ಲಿ ಭದ್ರತೆಯಲ್ಲಿರುವ ಈ ಸಿಂಹಾಸನ ಬಿಡಿ ಬಿಡಿಯಾಗಿರುತ್ತದೆ. ದಸರಾ ಸಂದರ್ಭ ಗೆಜ್ಜಗಹಳ್ಳಿಯಿಂದ ಬರುವ ಜನ ಇದನ್ನು ಜೋಡಿಸುತ್ತಾರೆ. ನವರಾತ್ರಿ ಆರಂಭದ ದಿನ ಸಿಂಹಾಸನಕ್ಕೆ ಸಿಂಹ ಜೋಡಣೆಯನ್ನು ವಿಧಿ ವಿಧಾನದಂತೆ ಮಾಡಲಾಗುತ್ತದೆ. ಆ ನಂತರ ಪೂಜೆ ಸಲ್ಲಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಸೀನರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಈ ರತ್ನಖಚಿತ ಸಿಂಹಾಸನ ಪೌರಾಣಿಕ ಇತಿಹಾಸವನ್ನು ಹೊಂದಿದೆ ಎನ್ನಲಾಗಿದೆ. ಇದರ ಬಗೆಗೆ ತಿಳಿಯುತ್ತಾ ಹೋದಂತೆ ರೋಮಾಂಚನಕಾರಿ ವಿಚಾರಗಳು ಹೊರಬರುತ್ತವೆ.

 ಭೂಮಿಯಲ್ಲಿ ಹೂತಿಡಲಾಗಿದ್ದ ಸಿಂಹಾಸನ

ಭೂಮಿಯಲ್ಲಿ ಹೂತಿಡಲಾಗಿದ್ದ ಸಿಂಹಾಸನ

ಇದು ಹಸ್ತಿನಾವತಿಪುರದ ರಾಜರಾದ ಪಾಂಡವರದ್ದಾಗಿದ್ದು, ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಟಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು, ಅದರಂತೆ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ, ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಭಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ.

ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಿ ಪ್ರಥಮವಾಗಿ ಸಿಂಹಾರೋಹಣ ಮಾಡಿದರೆಂದು ಹೇಳಲಾಗುತ್ತಿದೆ.

ಸಿಂಹಾಸನಕ್ಕೆ ಕೂರ್ಮರೂಪದ ಆಸನ

ಸಿಂಹಾಸನಕ್ಕೆ ಕೂರ್ಮರೂಪದ ಆಸನ

ಈ ಸಿಂಹಾಸನವನ್ನು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲಾಗಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ.

ಪೂರ್ವ ಮುಖಭಾಗದಲ್ಲಿ ಆನೆಗಳನ್ನೂ, ದಕ್ಷಿಣ ಭಾಗದಲ್ಲಿ ಕುದುರೆಗಳನ್ನು, ಪಶ್ಚಿಮದಲ್ಲಿ ಕಾಲುದಳವನ್ನು, ಉತ್ತರದಲ್ಲಿ ರಥಗಳನ್ನು ಕೆತ್ತಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆ ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಆಶೀರ್ವಾದ ಪೂರ್ವಕ ಶ್ಲೋಕಗಳಿದೆ.

 ಸಿಂಹಾಸನ ಕಾಪಾಡಿಕೊಂಡಿದ್ದು ರಾಜರ ಸಾಧನೆ

ಸಿಂಹಾಸನ ಕಾಪಾಡಿಕೊಂಡಿದ್ದು ರಾಜರ ಸಾಧನೆ

ಇಂತಹ ಸಿಂಹಾಸನವನ್ನು ಕಾಪಾಡಿಕೊಂಡು ಬಂದಿದ್ದು ಮೈಸೂರು ಮಹಾರಾಜರ ಕೀರ್ತಿ. ಈ ಸಿಂಹಾಸನವನ್ನು 1897ರಲ್ಲಿ ನಡೆದ ಹಳೆಯ ಅರಮನೆಯ ಅಗ್ನಿ ದುರಂತದಲ್ಲಿ ರಕ್ಷಿಸಿದ್ದೇ ಬಹು ದೊಡ್ಡ ಸಾಧನೆ. ಅರಮನೆ ಬೆಂಕಿಯಲ್ಲಿ ಉರಿಯುತ್ತಿದ್ದರೆ, ಬ್ರಿಟಿಷ್ ಪ್ರತಿನಿಧಿಗಳು ಮತ್ತು ಅರಮನೆಯಲ್ಲಿದ್ದ ಸೇವಕರು, ಬೆಂಕಿ ಆರಿಸಲು ಬಂದಿದ್ದ ಸ್ವಯಂಸೇವಕರು ತಮ್ಮ ಶಕ್ತಿಯನ್ನು ಬಳಸಿ ಸಿಂಹಾಸನಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಸುರಕ್ಷಿತವಾಗಿ ಹೊರಕ್ಕೆ ತರಲಾಗಿತ್ತು.

ಈ ಸಿಂಹಾಸನದ ಮಹತ್ವದ ಕುರಿತಂತೆ ಕಾಳಿ ಪುರಾಣದಲ್ಲಿ ಈ ಸಿಂಹಾಸನಾಧಿಪತಿಯು ದೇವರಿಗೂ ಮತ್ತು ಪ್ರಜೆಗಳಿಗೂ ಪ್ರತಿನಿಧಿಯಾಗಿದ್ದಾನೆಂದು ವರ್ಣಿಸಲಾಗಿದೆ. ಒಟ್ಟಾರೆ, ಮೈಸೂರು ಅರಮನೆಯಲ್ಲಿರುವ ಸಿಂಹಾಸನವನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ.

English summary
The khasagi darbar in mysuru palace grab the attention in the time of Mysuru dasara. Here is the history of jewelled throne and khasagi darbar in mysuru palace,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X