Maha Kumbh Mela 2025: ಪ್ರಯಾಗ್‌ರಾಜ್‌ನ ಈ ಸ್ಥಳಗಳಲ್ಲಿ ಪವಿತ್ರ ಸ್ನಾನ ಮಾಡದಂತೆ ಎಚ್ಚರಿಕೆ
ಮಹಾಕುಂಭ ಮೇಳದ ಹಿನ್ನೆಲೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಭಕ್ತರು ಆಗಮಿಸಿ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಭಕ್ತಿ ಭಾವದಿಂದ ಇಲ್ಲಿನ ಸಂಗಮದಲ್ಲಿ ಮಿಂದೇಳುತ್ತಿರುವ ಭಕ್ತರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಶಾಕ್ ನೀಡಿದೆ. ಪ್ರಯಾಗ್‌ರಾಜ್‌ನ ಕೆಲವು ಭಾಗದಲ್ಲಿರುವ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.
ಪ್ರಯಾಗ್‌ರಾಜ್‌ನ ಇಲ್ಲಿನ ಗಂಗಾ ನದಿಯಲ್ಲಿ ಫೀಕಲ್ ಕೋಲಿಫಾರ್ಮ್ (faecal coliform) ಬ್ಯಾಕ್ಟೀರಿಯಾ ಇರುವ ಬಗ್ಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳವಳ ವ್ಯಕ್ತಪಡಿಸಿದೆ. ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ ಮಟ್ಟ ಅಧಿಕವಾಗಿರುವುದರಿಂದ ಸ್ನಾನ ಮಾಡಲು ಈ ನೀರು ಗುಣಮಟ್ಟದಿಂದ ಕೂಡಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ನೀಡಿದೆ.

ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಎಂದು ಕರೆಯಲ್ಪಡುವ ಸೂಕ್ಷ್ಮಜೀವಿಗಳ ವರ್ಗವು ಮಾನವ ಮತ್ತು ಪ್ರಾಣಿಗಳ ಕರುಳಿನಲ್ಲಿ ಇರುತ್ತದೆ. ನೀರಿನಲ್ಲಿ ಇವುಗಳು ಕಂಡುಬಂದರೆ, ಪ್ರಾಣಿ ಅಥವಾ ಒಳಚರಂಡಿ ತ್ಯಾಜ್ಯದಿಂದ ಆ ನೀರು ಕಲುಷಿತಗೊಂಡಿದೆ ಎಂಬುದರ ಸಂಕೇತ ಎನ್ನಲಾಗಿದೆ.
ಆದರೆ ಎಲ್ಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ವಿಷಕಾರಿಯಲ್ಲದಿದ್ದರೂ ಅವುಗಳು ನೀರಿನಲ್ಲಿ ಕಂಡುಬಂದರೆ ಇತರ ಹಾನಿಕಾರಕ ರೋಗಕಾರಕಗಳಾದ ವೈರಸ್‌ಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಈ ಬ್ಯಾಕ್ಟೀರಿಯಾ ಇರುವ ನೀರನ್ನು ಬಳಸಿದರೆ ರೋಗಕಾರಕ ಮಾತ್ರವಲ್ಲದೆ, ತೀವ್ರ ಅನಾರೋಗ್ಯಕ್ಕೂ ತುತ್ತಾಗಬಹುದು ಎಂದು ಹೇಳಲಾಗಿದೆ.
ಈ ಬ್ಯಾಕ್ಟೀರಿಯಾ ಕೊಳಚೆನೀರಿನ ವಿಸರ್ಜನೆಯಿಂದ ಉಂಟಾಗುತ್ತದೆ. ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಫೀಕಲ್ ಕೋಲಿಫಾರ್ಮ್ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಅದು ಮಾನವನ ಆರೋಗ್ಯಕ್ಕೂ ಅಪಾಯಕಾರಿ ಎನ್ನಲಾಗಿದೆ.
ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ಪರಿಣಿತ ಸದಸ್ಯ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠವು ಪ್ರಯಾಗ್‌ರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗಳಿಗೆ ಕೊಳಚೆ ನೀರು ಬಿಡುವುದನ್ನು ತಡೆಯುವ ವಿಷಯದ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಸಿಪಿಸಿಬಿ ಈ ವರದಿಯನ್ನು ಸಲ್ಲಿಸಿದೆ.
ಸದ್ಯ ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರು ಈ ಕಲುಷಿತ ನೀರಿನಲ್ಲಿ ಉಸಿರಾಡುವುದು ಅಥವಾ ನುಂಗುವುದು ಬಹಳ ಅಪಾಯಕಾರಿ ಎಂದು ಹೇಳಲಾಗಿದೆ. ಭಕ್ತರಿಗೆ ಇದರ ಅರಿವು ಇರುವುದಿಲ್ಲ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು, ವೃದ್ಧರು ಮತ್ತು ಮಕ್ಕಳ ಮೇಲೆ ಇವು ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದೆ.
ಈಗಾಗಲೇ ಕೋಟ್ಯಂತರ ಮಂದಿ ಭಕ್ತರು ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೆ ಶಿವರಾತ್ರಿವರೆಗೆ ಮಹಾಕುಂಭ ಮೇಳ ನಡೆಯುತ್ತಿದ್ದು, ಇದಕ್ಕಾಗಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಹಾಕುಂಭ ಮೇಳದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಆಗಮಿಸುತ್ತಿರುವುದರಿಂದ ಇಲ್ಲಿನ ಸಂಗಮ್ ರೈಲು ನಿಲ್ದಾಣವನ್ನು ಫೆಬ್ರವರಿ 28 ರವರೆಗೆ ಮುಚ್ಚಲಾಗಿದೆ. ಪ್ರಯಾಗರಾಜ್ ಒಂಬತ್ತು ರೈಲು ನಿಲ್ದಾಣಗಳನ್ನು ಹೊಂದಿದ್ದು, ಸಂಗಮ್ ರೈಲು ನಿಲ್ದಾಣವು ಮಹಾಕುಂಭ ಮೇಳ ನಡೆಯುವ ಪ್ರದೇಶಕ್ಕೆ ಸಮೀಪದಲ್ಲಿದೆ.












Click it and Unblock the Notifications