Hesaraghatta: ಭವಿಷ್ಯದ ಬೆಂಗಳೂರಿಗೆ ಹೆಸರಘಟ್ಟ ಪ್ರದೇಶ ಎಷ್ಟು ಮುಖ್ಯ?
ಉದ್ಯಾನನಗರಿ ಪಟ್ಟ ಗಿಟ್ಟಿಸಿಕೊಂಡಿರುವ ರಾಜಧಾನಿ ಬೆಂಗಳೂರಿನ ವೆದರ್‌ಗೆ ಮನಸೋಲದವರೇ ಇಲ್ಲ. ಇಲ್ಲಿನ ಹವಾಮಾನ ಸ್ಥಿತಿಗೆ ಫಿದಾ ಆಗಿಯೇ ದೇಶ ವಿದೇಶಗಳಿಂದ ಜನ ಬಂದು ಇಲ್ಲಿ ನೆಲೆಸುತ್ತಿದ್ದಾರೆ. ಬೆಂಗಳೂರಿಗೆ ಹೊದಿಕೆಯಂತೆ ಹೊದ್ದಿರುವ ಇಲ್ಲಿನ ಪರಿಸರ ಕೂಡ ಇದಕ್ಕೆ ಪ್ರಮುಖ ಕಾರಣ. ಇನ್ನು ಬೆಂಗಳೂರಿಗೆ ಹೊಂದಿಕೊಂಡಿರುವ ಹೆಸರಘಟ್ಟ ಪ್ರದೇಶ ಕೂಡ ನಗರದ ಜೀವನಾಡಿ ಎಂದು ಕರೆಸಿಕೊಂಡಿದೆ.
ಹೌದು, ಹೆಸರಘಟ್ಟ ಹುಲ್ಲುಗಾವಲು ಪ್ರದೇಶವು ಸದ್ಯ ಬೆಂಗಳೂರಿಗೆ ಹಸಿರು ಲಂಗ್ ಸ್ಪೇಸ್ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಹೆಸರಘಟ್ಟ ಹುಲ್ಲುಗಾವಲು ಮತ್ತು ಕೆರೆಗಳನ್ನು 'ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು' ಪ್ರದೇಶ ಎಂದು ರಾಜ್ಯ ಸರ್ಕಾರವೂ ಘೋಷಿಸಿದೆ. ಸದ್ಯ ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಉದ್ಯಾನವನಗಳನ್ನು ಕೂಡ ಉದ್ಯಾನನಗರಿಯ ಆಕ್ಸಿಜನ್ ಎಂದು ಕರೆಯಲಾಗುತ್ತಿದೆ. ಹೆಸರಘಟ್ಟ ಪ್ರದೇಶ ಕೂಡ ಇದೇ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಪರಿಸರ ತಜ್ಞರು.

ಭಾರತದಲ್ಲಿ ಬೇರೆ ಯಾವುದೇ ಮಹಾನಗರದಲ್ಲಿ ಹೆಸರಘಟ್ಟದಂತಹ ಹುಲ್ಲುಗಾವಲು ಪ್ರದೇಶ ಇಲ್ಲವೇ ಇಲ್ಲ. ಈ ವಿಚಾರದಲ್ಲಿ ಬೆಂಗಳೂರು ದಾಖಲೆ ನಿರ್ಮಿಸಿದೆ. ಅಲ್ಲದೆ ಬೆಂಗಳೂರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಂತರ ಶುದ್ಧಗಾಳಿಯನ್ನು ಪೂರೈಸುವ ಎರಡನೇ ಅತಿ ದೊಡ್ಡ ಪ್ರದೇಶ ಕೂಡ ಹೆಸರಘಟ್ಟ ಪ್ರದೇಶವಾಗಿದೆ. ಹಾಗಾಗಿ ಈ ಪ್ರದೇಶವನ್ನು ಉಳಿಸಿಕೊಳ್ಳುವುದು ಬೆಂಗಳೂರಿಗೆ ನಿರ್ಣಾಯಕ ಎಂದರೆ ತಪ್ಪಾಗದು.
ಬೆಂಗಳೂರಿನ ಹೊರವಲಯದಲ್ಲಿರುವ ಸುಮಾರು 5,678 ಎಕರೆ 32 ಗುಂಟೆ ಪ್ರದೇಶವನ್ನು ಸದ್ಯ 'ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ' ಎಂದು ಘೋಷಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಈ ಮೂಲಕ ಪರಿಸರವಾದಿಗಳು ಅರಣ್ಯ ಇಲಾಖೆಯ ಬಹುವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನಲ್ಲಿರುವ 5,678 ಎಕರೆ ಹಾಗೂ 32 ಗುಂಟೆ ಭೂಮಿಯನ್ನು ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ನಿರ್ಧರಿಸಿದೆ. ಈ ಪ್ರದೇಶವನ್ನು ಬೆಂಗಳೂರಿನ ಕೊನೆಯ ಸವನ್ನಾ ಪರಿಸರ ವ್ಯವಸ್ಥೆ ಎನ್ನಲಾಗಿದೆ.
ಬೆಂಗಳೂರು ನಗರಕ್ಕೆ ಅತಿ ಅವಶ್ಯಕವಾದ ಹೆಸರಘಟ್ಟ ಹುಲ್ಲುಗಾವಲು ಮತ್ತು ಕೆರೆಗಳನ್ನು 'ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು' ಎಂದು ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಸುಮಾರು 133 ಪ್ರಭೇದದ ಪಕ್ಷಿಗಳು, ಅಪರೂಪದ ವನ್ಯಜೀವಿಗಳು ಹಾಗೂ ನೈಸರ್ಗಿಕ ಸಸ್ಯಗಳು ಸಂರಕ್ಷಿತವಾಗಲಿವೆ. ಜೊತೆಗೆ, ಹೆಸರಘಟ್ಟ ಕೆರೆ ಮತ್ತು ಸುತ್ತಮುತ್ತಲಿನ ಪರಿಸರ ಭವಿಷ್ಯದ ತಲೆಮಾರಿಗೆ ಪೂರಕವಾಗಿ ಉಳಿಯಲಿದೆ. ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಉಳಿವಿಗೆ ಸ್ಪಂದಿಸಿದ ಈ ತೀರ್ಮಾನವು ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದು, ಬೆಂಗಳೂರಿಗರಿಗೆ ಅತ್ಯಮೂಲ್ಯವಾದ ಹಸಿರು ಲಂಗ್ ಸ್ಪೇಸ್ ಆಗಲಿದೆ ಎಂದು ಬಣ್ಣಿಸಿದ್ದಾರೆ.












Click it and Unblock the Notifications