Positive News: ಕೇರಳದ ಹನ್ನ ಆಲಿಸ್ ಸೈಮನ್ ಸಾಧನೆಗೆ ಅಡ್ಡಿಯಾಗದ ವೈಕಲ್ಯ!
ಕೊಚ್ಚಿ, ಜುಲೈ 25: ಬದುಕಿನ ಹಾದಿಯಲ್ಲಿ ಯಶಸ್ಸಿನ ಗುರಿ ಮುಂದಿದ್ದರೆ ಅಂಗವೈಕಲ್ಯ ಗೆಲುವಿಗೆ ಎಂದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಕೇರಳದ ಕೊಚ್ಚಿ ಮೂಲದ ವಿದ್ಯಾರ್ಥಿನಿ ಹನ್ನ ಆಲಿಸ್ ಸೈಮನ್ ಸಾಬೀತುಪಡಿಸಿದ್ದಾರೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) ಪ್ರಕಟಿಸಿದ 12ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ವಿಕಲಚೇತನ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಆ ಮೂಲಕ ತಮ್ಮ ಸಾಧನೆಗೆ ಹಾದಿಯಲ್ಲಿ ಮತ್ತೊಂದು ಹೆಜ್ಜಿ ಮುಂದಿರಿಸಿದ್ದಾರೆ.
ಈಗಾಗಲೇ ಹನ್ನಾ ಸೈಮನ್ ಸ್ಪೂರ್ತಿದಾಯಕ ಭಾಷಣಕಾರರಾಗಿ, ಗಾಯಕಿಯಾಗಿ ಹಾಗೂ ಯೂಟ್ಯೂಬರ್ ಆಗಿ ಹೆಸರು ಸಂಪಾದಿಸಿದ್ದಾರೆ. ಇದರ ಜತೆ ಸಿಬಿಎಸ್ಇ 12ನೇ ತರಗತಿಯಲ್ಲಿ 500ಕ್ಕೆ 496 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಆಗಿದ್ದಾರೆ. ಕುರುಡುತನಕ್ಕೆ ಕಾರಣವಾದ 'ಮೈಕ್ರೋಫ್ಥಾಲ್ಮಿಯಾ' ಸ್ಥಿತಿಯು ತಮ್ಮ ಸಾಧನೆಗೆ ಅಡ್ಡಿ ಆಗಲಿಲ್ಲ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಈ ಸಾಧಕಿಯ ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಪ್ರತಿಭೆಯ ಗಣಿ ಹನ್ನ ಆಲಿಸ್ ಸೈಮನ್
ಕೇರಳದ ಹನ್ನ ಆಲಿಸ್ ಸೈಮನ್ ಸಾಧನೆಯು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಅನೇಕ ಪ್ರತಿಭೆಗಳ ಗಣಿ ಆಗಿದ್ದಾರೆ. ಅವರೇ ಬರೆದಿರುವ ಆರು ಯುವತಿಯರ ಸಾಧನೆಯ ಸಣ್ಣ ಕಥೆಗಳನ್ನು ಒಳಗೊಂಡಿರುವ 'ವೆಲ್ಕಮ್ ಹೋಮ್' ಎಂಬ ಪುಸ್ತಕವನ್ನು ಜುಲೈ 15ರಂದು ಬಿಡುಗಡೆ ಮಾಡಿದ್ದಾರೆ.
ಎಲ್ಲರಂತೆ ಶಾಲೆಗೆ ಹೋಗುವುದಕ್ಕೆ ಅವಕಾಶ ನೀಡಿದ ತಮ್ಮ ಪೋಷಕರ ಬಗ್ಗೆ ಹನ್ನ ಸೈಮನ್ ಉಲ್ಲೇಖಿಸಿದರು. "ನನ್ನ ಪೋಷಕರು ನನ್ನನ್ನು ವಿಕಲಚೇತನರ ಶಾಲೆಗೆ ಸೇರಿಸದೇ ಸಾಮಾನ್ಯ ಶಾಲೆಗೆ ಸೇರಿಸಿದ್ದು ನನಗೆ ಹೆಚ್ಚು ಸಹಕಾರಿ ಆಯಿತು. ಇದರಿಂದ ನಾನು ಮುಂದಿನ ಅಧ್ಯಯನದ ಸವಾಲನ್ನು ಎದುರಿಸುವುದಕ್ಕೆ ಸಾಧ್ಯವಾಯಿತು. ಈ ಹಂತದಲ್ಲಿ ತಾವು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದರೂ, ಅದುವೇ ತನ್ನ ಸಾಧನೆಗೆ ಮೆಟ್ಟಿಲಾಯಿತು," ಎಂದು ಸೈಮನ್ ಹೇಳಿದ್ದಾರೆ.

ತಮ್ಮ ಪೋಷಕರನ್ನು ಹಾಡಿ ಹೊಗಳಿದ ಹನ್ನಾ ಸೈಮನ್
"ನನ್ನ ಹೆತ್ತವರಿಗೆ, ನಾನು ಎಂದಿಗೂ ವಿಶೇಷವಲ್ಲ. ನಾವು ಮೂವರೂ ಸಮಾನರು ಹಾಗೂ ವಿಶೇಷವೇ ಆಗಿದ್ದೇವೆ. ಮೂರು ಮಕ್ಕಳಲ್ಲಿ ನಾನು ಒಬ್ಬಳಾಗಿದ್ದು, ಬೇರೆ ಎಂದು ಅವರು ಎಂದಿಗೂ ಹೇಳಲಿಲ್ಲ. ಅವರು ಯಾವಾಗಲೂ ನೀನೂ ಇತರ ಮಕ್ಕಳಂತೆ ಇದ್ದೀಯಾ, ಇತರ ಮಕ್ಕಳು ಏನು ಮಾಡಬಹುದೋ ಅದನ್ನು ನೀನೂ ಮಾಡಬಹುದು ಎಂದು ಹೇಳುತ್ತಿದ್ದರು. ನನ್ನ ಗೆಳೆಯರು ರೇಸ್ ನಡೆಸುತ್ತಿದ್ದಾಗ ನನಗೂ ಓಡಬೇಕೆಂಬ ಆಸೆಯಿತ್ತು. ನನ್ನ ಪೋಷಕರು ನನ್ನನ್ನು ಶಾಲೆಯ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ನನ್ನ ಕೈಗಳನ್ನು ಹಿಡಿದುಕೊಂಡು ನನ್ನೊಂದಿಗೆ ಓಡುತ್ತಿದ್ದರು, "ಎಂದು ಸೈಮನ್ ಹೇಳಿಕೊಂಡಿದ್ದಾರೆ.

ಸವಾಲು ಎದುರಿಸಲು ಬಾಲ್ಯದಿಂದ ಕಲಿತುಕೊಂಡೆ
"ನಾನು ಬೆದರಿಕೆಗಳನ್ನು ಎದುರಿಸಿದ್ದೇನೆ, ನನ್ನನ್ನು ಬಾಲ್ಯದಿಂದಲೇ ದೂರ ಇಡಲಾಗಿದ್ದು, ಬೆಳೆದಾಗಲೂ ಅಂತರ ಕಾಯ್ದುಕೊಳ್ಳಲಾಗುತ್ತಿತ್ತು. ಆದರೆ ನಾನು ಹೇಗೆ ಮುಂದುವರಿಯಬೇಕು ಎಂಬುದು ನನಗೆ ಗೊತ್ತಿತ್ತು. ಇಂಥ ಸವಾಲುಗಳನ್ನು ನಾನು ಎದುರಿಸುವುದನ್ನು ಕಲಿತುಕೊಂಡಿದ್ದೆನು. ಬಾಲ್ಯದಿಂದಲೇ ಇಂಥ ಸವಾಲುಗಳನ್ನು ಎದುರಿಸಿದ್ದು, ನನ್ನನ್ನು ಮತ್ತಷ್ಟು ಸದೃಢಳನ್ನಾಗಿ ಮಾಡಿತ್ತು. ಅದಕ್ಕಿಂತ ದೊಡ್ಡ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕಲಿಸಿತ್ತು," ಎಂದು ಸೈಮನ್ ಉಲ್ಲೇಖಿಸಿದ್ದಾರೆ.

496 ಅಂಕವನ್ನು ಪಡೆದಿರುವ ಹನ್ನ ಸೈಮನ್
ಕೊಚ್ಚಿ ನಿವಾಸಿಯಾಗಿರುವ ಹನ್ನಾ ಸೈಮನ್, ಕಾಕ್ಕನಾಡಿನ ರಾಜಗಿರಿ ಕ್ರಿಸ್ತ ಜಯಂತಿ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚಿಗೆ ಬಿಡುಗಡೆಯಾದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 500ಕ್ಕೆ 496 ಅಂಕಗಳನ್ನು ಪಡೆದುಕೊಳ್ಳುವ ಮೂಲಕ 19 ವರ್ಷದ ಹ್ಯುಮಾನಿಟೀಸ್ ವಿದ್ಯಾರ್ಥಿ ದೇಶದ ವಿಕಲಚೇತನ ವಿದ್ಯಾರ್ಥಿಗಳ ವಿಭಾಗದಲ್ಲಿ ಟಾಪರ್ ಆಗಿದ್ದಾರೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿ ಪರೀಕ್ಷಾ ಫಲಿತಾಂಶ ಜುಲೈ 22ರಂದು ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. 2021-22ನೇ ಸಾಲಿನಲ್ಲಿ ಬಾಲಕರಿಗಿಂತ ಬಾಲಕಿಯನ್ನು ಶೇ.3.29ರಷ್ಟು ಉತ್ತಮ ಸಾಧನೆ ತೋರಿದ್ದಾರೆ. ಸಿಬಿಎಸ್ಇ 12ನೇ ತರಗತಿ ಫಲಿತಾಂಶದಲ್ಲಿ ಶೇ.91.25ರಷ್ಟು ಬಾಲಕರು ಉತ್ತೀರ್ಣರಾದರೆ, ಶೇ.94.54ರಷ್ಟು ಬಾಲಕಿಯರು ಪಾಸ್ ಆಗಿದ್ದಾರೆ. ಇನ್ನು ಪರೀಕ್ಷೆಗೆ ಹಾಜರಾದ ಶೇ.100ರಷ್ಟು ಮಂಗಳಮುಖಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.












Click it and Unblock the Notifications