ಟೇಬಲ್ ಟೆನಿಸ್ ತಂಡದ ಕೋಚ್ ಈಗ ಬೆಂಗಳೂರಲ್ಲಿ ಆಟೋ ಚಾಲಕ
ಜಗತ್ತು ಎಂದೂ ಊಹಿಸದ ಹೊಡೆತವನ್ನು ಕಳೆದ ನಾಲ್ಕೈದು ವರ್ಷಗಳ ಹಿಂದೆ ಅನುಭವಿಸುವಂತಾಯಿತು. ಕಣ್ಣಿಗೆ ಕಾಣದ ವೈರಸ್ ಕೋಟ್ಯಂತರ ಜೀವಗಳನ್ನು ಬಲಿ ಪಡೆದುಕೊಂಡಿತು. ಭಾರತ ಮಾತ್ರವಲ್ಲ ಪ್ರತಿಯೊಂದು ದೇಶಗಳು ಕೂಡ ಇದರ ಅಟ್ಟಹಾಸಕ್ಕೆ ನಡುಗಿ ಹೋಗಿದ್ದು, ಇದರಿಂದ ಪಾರಾಗಲು ಪಟ್ಟ ಪಾಡು ಒಂದೆರಡಲ್ಲ. ಬಹುಶಃ ಈಗಾಗಲೇ ನಿಮಗೆ ಗೊತ್ತಾಗಿರಬಹುದು ಇದು ಕೊರೊನಾ ಅಥವಾ ಕೋವಿಡ್ 19 ವೈರಸ್ ಅಲೆ ಅಪ್ಪಳಿಸಿದಾಗ ಜಗತ್ತು ಕಂಡ ಪರಿಸ್ಥಿತಿ ಎಂದು.
ಜಗತ್ತಿನ ಆರೋಗ್ಯ ಸ್ಥಿತಿ ಮಾತ್ರವಲ್ಲ ಕೊರೊನಾ, ಆರ್ಥಿಕ ಸ್ಥಿತಿಯನ್ನು ಕೂಡ ಅಲ್ಲೋಲಕಲ್ಲೋಲ ಮಾಡಿತ್ತು. ಈ ಸಂಕಷ್ಟದ ಸಮಯದಲ್ಲಿ ಲಾಭ ಗಳಿಸಿಕೊಂಡವರು ಕೆಲವೇ ಕೆಲವು ಜನರಷ್ಟೇ. ಉಳಿದವರೆಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದವರೇ. ಕೊರೊನಾ ಅಂದು ಕೊಟ್ಟ ಹೊಡೆತದಿಂದ ಕೆಲವರು ಇನ್ನೂ ಸಹ ಚೇತರಿಸಿಕೊಂಡಿಲ್ಲ. ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ಕೆಲವರು ಈಗಲೂ ಕೂಡ ನಿರುದ್ಯೋಗಿಗಳಾಗಿಯೇ ಅಲೆದಾಡುತ್ತಿದ್ದರೆ, ಇನ್ನೂ ಕೆಲವರು ತಮ್ಮ ಆಸೆ, ಕನಸು, ಕ್ರೀಯಾಶೀಲತೆಗಳನ್ನು ಬದಿಗೊತ್ತಿ ಜೀವನ ನಡೆಸಲು ಸಿಕ್ಕ ಕೆಲಸವನ್ನು ಮಾಡುತ್ತಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಗುರುಮೂರ್ತಿ ಎನ್ ಅವರ ಕಥೆಯೂ ಇದಕ್ಕೆ ಹೊರತಾಗಿಲ್ಲ. ಟೇಬಲ್ ಟೆನಿಸ್ ತರಬೇತುದಾರರಾಗಿದ್ದ ಗುರುಮೂರ್ತಿ ಅವರು ಇಂದು ಆಟೋ ಚಾಲಕರಾಗಿ ತಮ್ಮ ಬದುಕು ನಡೆಸುತ್ತಿದ್ದಾರೆ. ಗುರುಮೂರ್ತಿ ಕೊರೊನಾ ಬರುವರೆಗೂ ಕರ್ನಾಟಕ ಟೇಬಲ್ ಟೆನಿಸ್ ತಂಡದ ತರಬೇತುದಾರರಾಗಿದ್ದರು. ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ಅವರು ಈಗ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ.
ತಮ್ಮ ಆಟೋದಲ್ಲಿ ತಮ್ಮ ಬಗ್ಗೆ ಬರೆದುಕೊಂಡಿರುವ ಗುರುಮೂರ್ತಿ ಅವರು ಯಾರಾದರೂ ಟೇಬಲ್ ಟೆನಿಸ್ ಕಲಿಯಬೇಕು ಎಂದು ಆಸಕ್ತಿ ಇದ್ದರೆ ಸಂಪರ್ಕಿಸಿ ಎಂದು ತಮ್ಮ ಫೋನ್ ನಂಬರ್‌ಅನ್ನು ನೀಡಿದ್ದಾರೆ. ಇತ್ತೀಚಿಗೆ ಅವರ ಆಟೋದಲ್ಲಿ ಪ್ರಯಾಣಿಸಿದ ಗಾಯತ್ರಿ ಗೋಪಕುಮಾರ್ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಗುರುಮೂರ್ತಿ ಅವರ ಕಥೆಯನ್ನು ಹಂಚಿಕೊಂಡಿದ್ದಾರೆ.

'ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ವೃತ್ತಿಪರ ಆಟೋ ರಿಕ್ಷಾ ಚಾಲಕರಾದ ಗುರುಮೂರ್ತಿ ಎನ್ ಅವರನ್ನು ಭೇಟಿಯಾಗಿ ಸಂತೋಷವಾಯಿತು. ಈ ಅದ್ಭುತ ಭೇಟಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲೇಬೇಕಾಯಿತು. ಅವರೊಂದಿಗಿನ ಮಾತುಕತೆಯಲ್ಲಿ ಅವರ ವೃತ್ತಿಪರತೆ, ತಾಳ್ಮೆ ಮತ್ತು ಕೆಲಸದ ಬಗ್ಗೆ ಇರುವ ಗೌರವ ನನ್ನನ್ನು ಬೆರಗುಗೊಳಿಸಿತು. ಈ ಆಕಸ್ಮಿಕ ಭೇಟಿಯು ಬಹಳ ಖುಷಿಕೊಟ್ಟಿದೆ. ನೀವು ಬೆಂಗಳೂರಿನಲ್ಲಿ ಟೇಬಲ್ ಟೆನಿಸ್ ತರಬೇತುದಾರರನ್ನು ಹುಡುಕುತ್ತಿದ್ದರೆ ಗುರುಮೂರ್ತಿ ಎನ್ ಅವರನ್ನು ಸಂಪರ್ಕಿಸಿ' ಎಂದಿರುವ ಗಾಯತ್ರಿ ಗೋಪಕುಮಾರ್ ಅವರ ನಂಬರ್ ಅನ್ನು ಕೂಡ ಹಂಚಿಕೊಂಡಿದ್ದಾರೆ.
ಸದ್ಯ ಆಟೋ ಚಾಲಕರಾಗಿರುವ ಗುರುಮೂರ್ತಿ ಅವರ ಪ್ರತಿಭೆ ಇಲ್ಲಿಗೆ ಮುಗಿದು ಹೋಗಬಾರದು ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಅವರು ಮತ್ತೆ ಮಿಂಚಬೇಕು ಎನ್ನುವ ಉದ್ದೇಶದಿಂದ ಈ ಸುಂದರವಾರ ಪೋಸ್ಟ್ ಶೇರ್ ಮಾಡಿರುವ ಗಾಯತ್ರಿ ಗೋಪಕುಮಾರ್ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications