ಮಠಕ್ಕೆ ಬಂದು ತತ್ತಿ ತಿಂತೀವಿ, ಹುಷಾರ್! ಇದು ಒಂದು ಮೊಟ್ಟೆಯ ಕಥೆ
ಕೊರೊನಾ ಹಾವಳಿಯ ನಂತರ ಶಾಲೆಗಳು ತೆರೆದಿವೆ, ಓಮ್ರಿಕಾನ್ ಕಾಟದಿಂದ ಮತ್ತೆ ಬಂದ್ ಆಗುತ್ತೋ ಗೊತ್ತಿಲ್ಲ. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮೊಟ್ಟೆ ನೀಡಬೇಕೆನ್ನುವ ಸರಕಾರದ ಆದೇಶ ಸದ್ಯ ವಾದ/ಪ್ರತಿವಾದದ ವಿಚಾರವಾಗಿದೆ.
ಅಭಿವೃದ್ದಿ ಕೆಲಸ, ಜನಪರ ವಿಷಯದ ಬಗ್ಗೆ ಚರ್ಚೆ ಮಾಡಲು ಸಾವಿರವಿದ್ದರೂ, ಮೊಟ್ಟೆ ಈಗ ಆರೋಪ, ಪ್ರತ್ಯಾರೋಪದ ವಸ್ತುವಾಗಿದೆ. ಮೊಟ್ಟೆ ತಿನ್ನುವ ಮಕ್ಕಳು ತಿನ್ನುತ್ತಾರೆ, ಸೊಪ್ಪು ತಿನ್ನುವ ಮಕ್ಕಳು ಸೊಪ್ಪೇ ತಿನ್ನಲಿ ಎಂದು ವಿಚಾರಕ್ಕೆ ತೆರೆ ಎಳೆಯುವುದನ್ನು ಬಿಟ್ಟು, ಮಠಾಧಿಪತಿಗಳು ಸೇರಿದಂತೆ, ಎಲ್ಲರೂ ಮಾತಿನ ಕೋಟೆ ಕಟ್ಟುತ್ತಿದ್ದಾರೆ.
ಶಾಲೆಯಲ್ಲಿ ಮೊಟ್ಟೆಯನ್ನು ಕೊಡುವುದಕ್ಕೆ ಹಲವು ಪೀಠಾಧಿಪತಿಗಳ ವಿರೋಧವಿದೆ. ಅದರಲ್ಲಿ, ಉಡುಪಿ ಪೇಜಾವರ ಮಠದ ಶ್ರೀಗಳು ಕೂಡಾ. ಈ ಆಹಾರ ಪದ್ದತಿಯಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎನ್ನುವ ಬೇಧಭಾವ ಮಕ್ಕಳಲ್ಲಿ ಉಂಟಾಗುತ್ತದೆ. ಶಾಲೆಯಲ್ಲಿ ಶಿಕ್ಷಣ ಕೊಡುವುದಕ್ಕೆ ಸರಕಾರ ಆದ್ಯತೆ ನೀಡಲಿ, ಮೊಟ್ಟೆಯ ವಿಚಾರಕ್ಕಲ್ಲ ಎನ್ನುವುದು ಶ್ರೀಗಳ ನಿಲುವು.
ಮೊಟ್ಟೆಯ ವಿಚಾರ ಸಮಾಜದಲ್ಲಿ ಮತ್ತೆ ಬಿರುಕನ್ನು ಮೂಡಿಸುತ್ತದೋ ಎನ್ನುವ ಆತಂಕದ ನಡುವೆ, ವಿದ್ಯಾರ್ಥಿನಿಯೊಬ್ಬಳು ಚಾಲೆಂಜ್ ಮಾಡಿ, ಆಮೇಲೆ ತನ್ನ ಮಾತನ್ನು ವಾಪಸ್ ತೆಗೆದುಕೊಂಡ ವಿದ್ಯಮಾನ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ ಸರಕಾರಕ್ಕೆ ಎಚ್ಚರಿಕೆ
"ಮಕ್ಕಳಲ್ಲಿ ಮೊಟ್ಟೆ ಯೋಜನೆ ವೈಮನಸ್ಸನ್ನು ಮೂಡಿಸುತ್ತದೆ, ಸರಕಾರ ಈ ಕೂಡಲೇ ಇದರಿಂದ ಹಿಂದಕ್ಕೆ ಸರಿಯಬೇಕು. ದೇಶವನ್ನು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವ ಬಿಜೆಪಿ ನಾಯಕರೇ ಮೊದಲು ಇದರ ಬಗ್ಗೆ ಗಮನ ಕೊಡಿ. ಲಿಂಗಾಯತ ಸಮುದಾಯದವರೇ ಸಿಎಂ ಆಗಿದ್ದರೂ, ಯೋಜನೆಗೆ ಆದೇಶ ಹೊರಡಿಸಿರುವುದು ತಪ್ಪು. ಕೂಡಲೇ ಇದನ್ನು ವಾಪಸ್ ತೆಗೆದುಕೊಳ್ಳಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ"ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.

ನಿಮಗೆ ದಕ್ಷಿಣೆ ಹಾಕಿಲ್ವಾ? ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ
ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಭಟನೆಯೊಂದನ್ನು ಎಸ್‌ಎಫ್‌ಐ ಸಂಘಟನೆ ಆಯೋಜಿಸಿತ್ತು. ಈ ವೇಳೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಸರಕಾರಕ್ಕೆ ಮತ್ತು ಮಠಾಧೀಶರಿಗೆ ಎಚ್ಚರಿಕೆಯನ್ನು ನೀಡಿದ್ದಾಳೆ. "ನಾವು ಮೊಟ್ಟೆ ತಿಂದರೆ ಬದುಕುತ್ತೇವೆ, ಇಲ್ಲವಾದರೆ ಸಾಯುತ್ತೇವೆ. ನಮಗ್ಯಾಕೆ ವಿರೋಧಿಸುತ್ತಿದ್ದೀರಾ? ನಾವು ಒಂದಲ್ಲ ಎರಡು ಮೊಟ್ಟೆಯನ್ನು ತಿನ್ನುತ್ತೇವೆ ಅದನ್ನು ಕೇಳುವುದಕ್ಕೆ ನೀವ್ಯಾರು? ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ? ನಾವು ಮಠಕ್ಕೇ ಬಂದು ಮೊಟ್ಟೆ ತಿನ್ನುತ್ತೇವೆ"ಎಂದು ಈಕೆ ಚಾಲೆಂಜ್ ಮಾಡಿದ್ದಾಳೆ.

ಶಾಲಾ ಮಕ್ಕಳಿಗೆ ಬಾಳೆಹಣ್ಣು ಓಕೆ, ಮೊಟ್ಟೆ ಯಾಕೆ ಎನ್ನುವ ಕೂಗು
ಶಾಲಾ ಮಕ್ಕಳಿಗೆ ಬಾಳೆಹಣ್ಣು ಓಕೆ, ಮೊಟ್ಟೆ ಯಾಕೆ ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮೊಟ್ಟೆ ಬೇಕು ಎನ್ನುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. "ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡುವುದಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಖಂಡಿಸುತ್ತದೆ. ಮಕ್ಕಳಲ್ಲಿ ಕೊಡಕು ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಮೊಟ್ಟೆಯ ಬದಲು ದ್ವಿದಳ ಧಾನ್ಯ, ಶೇಂಗಾಚಿಕ್ಕಿ ನೀಡಬಹುದಲ್ಲವೇ"ಎಂದು ಮಹಾಸಭಾದ ಪದಾಧಿಕಾರಿಯಾಗಿರುವ ಶರಣು ಮೋದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲದ ಅಧಿವೇಶನ
ಮೊಟ್ಟೆ ಅಥವಾ ಬಾಳೆಹಣ್ಣು ಖರೀದಿಸಲು ಸರಕಾರಕ್ಕೆ ಪ್ರತೀ ಮಕ್ಕಳಿಗೆ ದಿನವೊಂದಕ್ಕೆ ಆರು ರೂಪಾಯಿ ನೀಡುತ್ತಿದೆ. ಈಗ, ಮೊಟ್ಟೆ ಬೇಕೋ ಬೇಡವೋ ಎನ್ನುವುದು ವಿನಾಕರಣ ಚರ್ಚೆಯ ವಿಚಾರವಾಗಿ ಕೂತಿದೆ. ಈ ವಿಷಯ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಇನ್ನು, ಮಠದಂತೆ, ರಾಜಕೀಯ ವಲಯದಲ್ಲೂ ಈ ವಿಚಾರದಲ್ಲಿ ದ್ವಂದ್ವ ನಿಲುವು ಇವೆ.












Click it and Unblock the Notifications