ಗಿಗ್ ಕಾರ್ಮಿಕರಿಗೆ ವಿಮೆ ಸೌಲಭ್ಯ: ನೋಂದಣಿ, ಅರ್ಹತೆ ವಿವರ
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಗಿಗ್ ಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಿದೆ. ಈ ಯೋಜನೆಗೆ 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ಎಂದು ನಾಮಕರಣ ಮಾಡಲಾಗಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರಿಗೆ ಈ ಯೋಜನೆ ಜಾರಿಗೊಳಿಸಿದೆ. ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ, ಬಿಗ್ ಬಾಸ್ಕೆಟ್, ಡೊಮಿನೋಸ್ ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ ರಾಜ್ಯ ಸರ್ಕಾರವು ವಿಮಾ ಯೋಜನೆ ಜಾರಿ ಮಾಡಿದೆ.
ಕರ್ನಾಟಕ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಇ-ಕಾಮರ್ಸ್ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುವ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯವನ್ನು ಘೋಷಣೆ ಮಾಡಿತ್ತು. 7/9/2023ರ ಸರ್ಕಾರಿ ಆದೇಶದಲ್ಲಿ ಈ ವಿಮೆ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿಮೆ ಸೌಲಭ್ಯದ ಮಾಹಿತಿ; ಈ ವಿಮೆ ಸೌಲಭ್ಯವನ್ನು ಪಡೆಯಲು ಎಲ್ಲಾ ಅರ್ಹ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಈ ಸೌಲಭ್ಯವು ಕರ್ನಾಟಕದಲ್ಲಿ ಡೆಲಿವರಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ.
ಈ ವಿಮೆ ಸೌಲಭ್ಯವು ಕರ್ತವ್ಯದಲ್ಲಿರುವಾಗ/ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೆ ಅನ್ವಯವಾಗುತ್ತದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದೆ. ಯಾವುದೇ ರೀತಿಯ ಪ್ರೀಮಿಯಂ ಪಾವತಿ ಮಾಡುವ ಅವಶ್ಯಕತೆ ಇಲ್ಲ.
ಕರ್ತವ್ಯದಲ್ಲಿ ಇದ್ದಾಗ ಹಾಗೂ ಇಲ್ಲದಿರುವಾಗ ಸಂಭವಿಸುವ ಅಫಘಾತಗಳಿಗೆ ಅನ್ವಯವಾಗಲಿದೆ. ಅಫಘಾತದಿಂದ ಮರಣ ಹೊಂದಿದ್ದಲ್ಲಿ ರೂ. 2 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಸೇರಿ ಒಟ್ಟು ರೂ. 4 ಲಕ್ಷಗಳ ಪರಿಹಾರ. ಅಫಘಾತದಿಂದ ಸಂಪೂರ್ಣವಾಗಿ ಶಾಶ್ವತ ದುರ್ಬಲತೆಗೆ ಹೊಂದಿದ್ದಲ್ಲಿ ರೂ. 2 ಲಕ್ಷ, ಅಪಘಾತದ ಸಂದರ್ಭದ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಪರಿಹಾರ ದೊರೆಯಲಿದೆ.
ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರು ಹಾಗೂ ಇ.ಎಸ್.ಐ ಫಲಾನುಭವಿಗಳಾಗಿರಬಾರದು. ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ಆಧಾರ್‌ಕಾರ್ಡ್, ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ/ ವೇತನ ಚೀಟಿ/ ವೇತನ ಪಡೆದ ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ ಇವುಗಳಲ್ಲಿ ಯಾವುದಾದರೊಂದು ಹಾಗೂ ಇ-ಶ್ರಮ್ ಕಾರ್ಡ್ ದಾಖಲಾತಿಯೊಂದಿಗೆ ನೋಂದಣಿ ಮಾಡಿಸಬೇಕು.
ಸಿಎಸ್‌ಸಿ ಸೆಂಟರ್, ಕರ್ನಾಟಕ ಒನ್ ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳವರ ಕಛೇರಿ, ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಸೌಲಭ್ಯವನ್ನು ಎಲ್ಲಾ ಗಿಗ್ ಕಾರ್ಮಿಕರು ಉಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ನೀತಿ ಆಯೋಗ 2022ರ ವರದಿಯನ್ವಯ ಸ್ವಿಗ್ಗಿ, ಜೊಮಾಟೋಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಇವೇ ಮೊದಲಾದವುಗಳಲ್ಲಿ ಪೂರ್ಣ/ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷವಾಗಿದೆ.
ಈ ಕಾರ್ಮಿಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ್ದು, ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಇಂತಹ ಅಸಂಘಟಿತ ಕಾರ್ಮಿಕರಿಗಾಗಿ 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯು ರಚಿತವಾಗಿದ್ದು, ಈ ಕಾಯ್ದೆಗೆ 2009ರಲ್ಲಿ ಕರ್ನಾಟಕ ನಿಯಮಗಳು ರೂಪಿತವಾಗಿದ್ದು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಯರೂಪಗೊಂಡಿರುತ್ತದೆ.
ಗಿಗ್ ಕಾರ್ಮಿಕರು ಸರಕು/ ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಾಹನಗಳಲ್ಲಿ ವಿತರಿಸುತ್ತಿದ್ದು, ಅಂತಹ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಘಾತದಿಂದ ಮರಣ/ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.
ಅಂತಹ ಸಂದರ್ಭದಲ್ಲಿ ಗಿಗ್ ಕಾರ್ಮಿಕರು/ ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ಸೂಕ್ತ ವಿಮಾ ಸೌಲಭ್ಯ ಒದಗಿಸುವ ಮೂಲಕ ಸಂಕಷ್ಟದಿಂದ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. ಆದ್ದರಿಂದ, ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮಾ ಸೌಲಭ್ಯ ಒದಗಿಸಲಾಗಿದೆ.












Click it and Unblock the Notifications