ಮಕ್ಕಳ ವಿಚಾರದಲ್ಲಿ ಈ ನಾಲ್ಕು ಅಂಶಗಳು ಗಮನದಲ್ಲಿರಲಿ
ಮಕ್ಕಳನ್ನು ಬೆಳೆಸುವುದು ಒಂದು ಕಲೆ ಎಂದು ತಿಳಿದವರು ಹೇಳುತ್ತಾರೆ. ಬಹುಶಃ ಎಲ್ಲಾ ಪೋಷಕರಿಗೂ ಈ ಅನುಭವವಾಗಿದ್ದಿರಬಹುದು. ತುಂಟ ಮಕ್ಕಳಿರಬಹುದು, ಹಠಮಾರಿ ಮಕ್ಕಳಿರಬಹುದು, ಮೌನಯೋಗಿ ಮಕ್ಕಳಿರಬಹುದು, ಮೊದ್ದು ಮಕ್ಕಳಿರಬಹುದು, ಯಾವುದೇ ಮಕ್ಕಳಿದ್ದರೂ ಅವರನ್ನು ಸಮರ್ಪಕವಾಗಿ ಬೆಳೆಸುವುದು ವಿಭಿನ್ನ ಕೌಶಲ್ಯ.
ಪೋಷಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೆಲ ಅಂಶಗಳಿವೆ. ಚಂಡಿ ಹಿಡಿಯುವ ಮಕ್ಕಳಿಗೆ ಛಡಿಯೇಟು, ತುಂಟ ಮಕ್ಕಳಿಗೂ ಗದರಿಕೆ, ಏನೇ ಮಾಡಿದರೂ ಬೈಗುಳ, ಗುದ್ದು ಇಂಥವೇ ತಂತ್ರ. ಮಕ್ಕಳನ್ನು ಸಂಭಾಳಿಸಲು ಆಗದ ಸಂದರ್ಭದಲ್ಲಿ ಪೋಷಕರು ಬಳಸುವುದು ಏಟೆಂಬ ಅಸ್ತ್ರ.
ಇನ್ನು, ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ಅವರ ಕನಸು ಚಿಗುರತೊಡಗುತ್ತದೆ. ಆಸೆ ಆಕಾಂಕ್ಷೆಗಳು ಹೆಚ್ಚುತ್ತಾ ಹೋಗುತ್ತದೆ. ಕೆಲವೇ ವರ್ಷಗಳಲ್ಲಿ ಈ ಮಕ್ಕಳು ದೊಡ್ಡವರಾಗಿ ಸಂಪಾದನೆ ಮಾಡುತ್ತಾರೆ. ಈ ಹಂತದಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆ? ಇದು ಮಕ್ಕಳ ಜೀವನದ ಪ್ರಮುಖ ಹಂತ. ಅವರ ಎಲ್ಲಾ ಕನಸುಗಳಿಗೆ ಬುನಾದಿ ಸಿಗುವ ವಯಸ್ಸು ಅದು. ಅವರ ಭವಿಷ್ಯದ ನೆಲೆ ಯಾವುದೆಂದು ನಿರ್ಧಾರವಾಗುವ ಹಂತ.
ಆಟ ಪಾಠ ಆಡಿಕೊಂಡು ಎಂಟತ್ತು ವರ್ಷ ದಾಟಿದ ಮಕ್ಕಳಿಗೆ ಮುಂದಿನ ದಾರಿ ತೋರಿಸಬೇಕಾದ್ದು ಪೋಷಕರೇ. ದೇಶದಲ್ಲಿ ಎಲ್ಲರೂ ಉದ್ಯೋಗಬೇಟೆಗೆ ಇಳಿಯುತ್ತಾರೆಯೇ ಹೊರತು ಸ್ವಂತ ಉದ್ಯಮ ಮಾಡಿ ಹತ್ತಾರು ಜನರಿಗೆ ಕೆಲಸ ಕೊಡುವ ಆಲೋಚನೆ ಮಾಡುವವರು ವಿರಳ. ಈ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುವ ಅಗತ್ಯತೆ ಇದೆ. ನಿಮ್ಮ ಮಗು ಬ್ಯುಸಿನೆಸ್‌ಮ್ಯಾನ್ ಆಗಬೇಕೆಂದೇ ಅಲ್ಲ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ರೂಪುಗೊಳ್ಳುವತ್ತ ಗಮನ ಕೊಡುವುದು ಅಗತ್ಯ.
ಮಕ್ಕಳ ವಿಚಾರದಲ್ಲಿ ಪೋಷಕರು ಯಾವ ರೀತಿ ನಡೆದುಕೊಳ್ಳಬೇಕೆಂದು ಹೇಳಲು ಹಲವು ಸಂಗತಿಗಳಿವೆ. ಅದರಲ್ಲಿ ಈ ನಾಲ್ಕು ಅಂಶಗಳು ಬಹಳ ಮುಖ್ಯ. ಇವು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಅಂಶಗಳು. ಹೀಗಾಗಿ, ಇವು ಗಮನದಲ್ಲಿರಲಿ.

ಓದೇ ಎಲ್ಲಾ ಅಲ್ಲ
ಇವತ್ತು ಉದ್ಯೋಗವೆಂದು ಹುಚ್ಚು ಕುದುರೆಯ ಓಟದಲ್ಲಿ ತೊಡಗಿದ್ದೇವೆ. ಓದು ಓದು ಓದು, ಆ ಡಿಗ್ರಿ ಈ ಡಿಗ್ರಿ ಎಂದು ಬೆನ್ನು ಬೀಳುತ್ತೇವೆ. ಯಾರದ್ದೋ ಒತ್ತಡಕ್ಕೆ, ಮಾತಿಗೆ ಕಟ್ಟುಬಿಟ್ಟು ಹುಚ್ಚುಚ್ಚಾಗಿ ಓದುತ್ತೇವೆ. ಅಪ್ಪನ ಎಂಜಿನಿಯರಿಂಗ್, ಡಾಕ್ಟರ್ ಆಗುವ ಕನಸಿಗೆ ನಾವೇ ಸಿಲುಕಿ ಒದ್ದಾಡುತ್ತೇವೆ. ನಮ್ಮ ಈ ಹುಚ್ಚುತನವನ್ನು ನಮ್ಮ ಮಕ್ಕಳ ಮೇಲೂ ವರ್ಗಾಯಿಸಲು ನೋಡುತ್ತೇವೆ. ಇದು ಸಾಧುವಾ?
ಆಟೊಗ್ರಾಫ್‌ನಂತೆ ನಾವೇ ನಮ್ಮ ಜೀವನವನ್ನು ಹಿಂದಿರುಗಿ ನೋಡಿದರೆ ನಾವು ಓಡುತ್ತಿರುವ ರೇಸ್ ಹುಚ್ಚು ಕುದುರೆಯದ್ದು ಎಂದನಿಸದೇ ಇರದು. ಓದನ್ನು ಅರ್ಧಕ್ಕೆ ಬಿಟ್ಟ ನಮ್ಮ ಅನೇಕ ಸಹಪಾಠಿಗಳಲ್ಲಿ ಹಲವರು ಇಂದು ತಕ್ಕಮಟ್ಟಿಗೆ ಜೀವನ ನಡೆಸುತ್ತಿರುವುದನ್ನು ನೋಡಿರುತ್ತೇವೆ. ಓದೇ ಎಲ್ಲಾ ಅಲ್ಲ ಎಂಬ ಸಂಗತಿಯನ್ನು ಪೋಷಕರು ಮೊದಲು ಮನಗಾಣಬೇಕು. ನಿಮ್ಮ ಮನಸಿನ ಕಹಿಯನ್ನು ಮಗುವಿನ ಮೇಲೆ ವರ್ಗಾಯಿಸಬೇಡಿ.
ನಿಮ್ಮ ಮಗುವಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಬಿಡಿ. ನಿಮ್ಮ ಮಗುವಿಗೆ ಆಸಕ್ತಿಯೇ ಇಲ್ಲದ ವಿಷಯದಲ್ಲಿ ಡಿಗ್ರಿ ಓದಿದರೆ ಸಿಗುವ ಸರ್ಟಿಫಿಕೇಟ್‌ಗೆ ಇರುವುದು ಕೇವಲ ಕಾಗದದ ತುಂಡಿನಷ್ಟೇ ಮೌಲ್ಯ. ಇಚ್ಛೆ ಪಟ್ಟು ನಡೆದ ಹಾದಿಯಲ್ಲಿ ಸಾಧಿಸುವ ಕೆಚ್ಚು, ಸಂಪಾದನೆಯ ಅವಕಾಶ, ನೆಮ್ಮದಿ ಇಲ್ಲವೂ ಅಡಕವಾಗಿರುತ್ತವೆ.

ಉತ್ಸಾಹ ಕುಗ್ಗಿಸಬೇಡಿ
ಪ್ರತಿಯೊಂದು ಮಗುವಿಗೂ ಯಾವುದಾದರೂ ಒಂದು ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಇರುತ್ತದೆ. ಕ್ರಿಕೆಟ್ ಆಟ ಎಂದರೆ ಕೆಲವರಿಗೆ ಬಹಳ ಪ್ರಿಯ. ಇನ್ನೂ ಕೆಲವರಿಗೆ ಚೆಸ್, ಕೇರಮ್ ಆಟದ ಹುಚ್ಚು ಹಿಡಿದಿರಬಹುದು. ಕೆಲ ಮಕ್ಕಳು ವಿಡಿಯೋ ಗೇಮ್‌ನಲ್ಲಿ ಅಪರಿಮಿತ ಆಸಕ್ತಿ ತೋರಬಹುದು. ಹಲವು ನಿಸರ್ಗಪ್ರೇಮಿಗಳಾಗಿ ಕಾಡುಗಳನ್ನು ಸುತ್ತಲು ಇಚ್ಛಿಸಬಹುದು. ಹಾಗಂತ ಇವರು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್‌ನಲ್ಲಿ ಕಾರ್ಯಕ್ರಮ ಕೊಡುತ್ತಾರೆ ಎಂದಲ್ಲ. ಕ್ರಿಕೆಟ್ ಬ್ಯಾಟ್ ಹಿಡಿಯುವ ಮಕ್ಕಳೆಲ್ಲಾ ವಿರಾಟ್ ಕೊಹ್ಲಿ ಆಗಬೇಕೆಂದಿಲ್ಲ, ಅಥವಾ ರಣಜಿ ಟೀಮ್‌ಗಾದರೂ ಆಡಲಿ ಎಂದು ನಿರೀಕ್ಷಿಸುವಂತೆಯೂ ಇಲ್ಲ.
ಈ ಮಕ್ಕಳು ಓದಿ ದೊಡ್ಡವರಾದ ಮೇಲೆ ಮಾಡುವ ಕೆಲಸಕ್ಕೂ ಚಿಕ್ಕಂದಿನಲ್ಲಿ ಅವರಿಗಿದ್ದ ಹವ್ಯಾಸಕ್ಕೂ ಸಂಬಂಧವೇ ಇಲ್ಲದಿರಬಹುದು. ಆದರೆ, ಪಠ್ಯೇತರ ಚಟುವಟಿಕೆ ಎಂಬುದು ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುವ ಒಂದು ಮಾಧ್ಯಮ ಎಂಬುದು ನೆನಪಿರಲಿ. ಕ್ರಿಕೆಟ್ ಆಟದಿಂದ ಮಕ್ಕಳು ಅದೆಷ್ಟು ಪಾಠ ಕಲಿಯಬಹುದು..! ನಾಯಕತ್ವ ಗುಣ, ಸಾಂಘಿಕ ವರ್ತನೆ, ತಂಡಕ್ಕಾಗಿ ಆಡುವ ಸ್ವಭಾವ, ದೈಹಿಕ ಕ್ಷಮತೆ, ಆರೋಗ್ಯ, ಕುಶಾಗ್ರಮತಿ ಇವೆಲ್ಲವೂ ಕ್ರೀಡೆಯಿಂದ ಸಿಗುತ್ತದೆ. ಅಥವಾ ಈ ಕ್ರೀಡೆಗಳು ಮಕ್ಕಳ ಕ್ರಿಯಾಶೀಲತೆಗೆ ಪೂರಕವಾಗಿ ನೆರವಾಗುತ್ತವೆ.

ಹಣದ ಬೆಲೆ ಕಲಿಸಿ
ಮಕ್ಕಳ ವಿಚಾರದಲ್ಲಿ ಪೋಷಕರು ಮಾಡುವ ದೊಡ್ಡ ತಪ್ಪೆಂದರೆ ಹಣದ ಮೌಲ್ಯ ತಿಳಿಸಿಕೊಡದೇ ಇರುವುದು. ಮಕ್ಕಳು ಹಠ ಮಾಡುತ್ತಾರೆಂದೋ ಅಥವಾ ಅವರ ಮೇಲಿನ ಅದಮ್ಯ ಪ್ರೀತಿಯಿಂದಲೋ ಅವರು ಏನೇ ಕೇಳಿದರೂ ಎಷ್ಟೇ ಹಣವಾದರೂ ಖರೀದಿಸಿ ಕೊಟ್ಟುಬಿಡುತ್ತೇವೆ. ಇದು ಶುದ್ಧ ತಪ್ಪು. ಮಕ್ಕಳಿಗೆ ಹಣದ ಮೌಲ್ಯವೇ ತಿಳಿಯದಂತಾಗುತ್ತದೆ. ಹಣಕಾಸು ಶಿಸ್ತು ಮೈಗೂಡುವುದಿಲ್ಲ. ದೊಡ್ಡವರಾದ ಮೇಲೆ ಆ ಮಕ್ಕಳು ಸಂಪಾದನೆ ಮಾಡಿದ ಹಣವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ ನಶಿಸಿ ಹೋಗುತ್ತಿರುತ್ತದೆ.
ಹೀಗಾಗಿ, ನೀವು ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಹಣದ ಮೌಲ್ಯ ತಿಳಿಸಿಕೊಡುವ ಕೆಲಸ ಮಾಡಬೇಕು. ಹಣಕ್ಕಾಗಿ ಕಷ್ಟಪಡಬೇಕು ಎಂಬುದನ್ನು ಕಲಿಸಿಕೊಡಬೇಕು. ಉದಾಹರಣೆಗೆ, ಮಗು ಒಂದು ಸಾವಿರ ರೂ ಮೌಲ್ಯದ ವಸ್ತುವನ್ನು ಕೇಳಿತೆಂದಿಟ್ಟುಕೊಳ್ಳಿ. ಆ ಹಣ ಸಂಪಾದನೆಗೆ ಇಂತಿಷ್ಟು ಕೆಲಸ ಮಾಡಬೇಕೆಂದು ನಿಗದಿ ಮಾಡಬಹುದು. ಆ ಕೆಲಸ ಪರಿಪೂರ್ಣವಾಗಿ ಮಾಡಿ ಮುಗಿಸಿದರೆ ಒಂದು ಸಾವಿರ ರೂ ಕೊಡುತ್ತೇವೆಂದು ಹೇಳಿ. ಆ ಮೂಲಕ ಮಗುವಿಗೆ ಹಣದ ಮೌಲ್ಯ ಏನು ಎಂಬುದು ಗೊತ್ತಾಗುತ್ತದೆ ಎಂದು ಕೆಲ ಮನಃಶಾಸ್ತ್ರಜ್ಞರು ಹೇಳುತ್ತಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಕಾಲೇಜಿಗೆ ಹೋಗುವ ಮಕ್ಕಳು ಸ್ಟೂಡೆಂಟ್ ಲೋನ್ ಪಡೆದು ವಿದ್ಯಾಭ್ಯಾಸ ಮಾಡುತ್ತಾರೆಂದು ನೀವು ಕೇಳಿದ್ದಿರಬಹುದು. ಇದು ಸ್ವಲ್ಪಮಟ್ಟಿಗೆ ಹೌದು. ಅಲ್ಲಿ ವಿದ್ಯಾರ್ಥಿಗಳು ಸಾಲದ ಹಣದಲ್ಲಿ ಓದುತ್ತಾರೆ. ಓದಿನ ಜೊತೆಜೊತೆಗೆ ಹಣ ಸಂಪಾದಿಸಿ ಸಾಲ ತೀರಿಸಲು ಸಣ್ಣಪುಟ್ಟ ಕೆಲಸಗಳನ್ನೂ ಮಾಡುತ್ತಾರೆ. ಆ ಮಕ್ಕಳಿಗೆ ಹಣದ ಬೆಲೆ ತಿಳಿದಿರುವುದರಿಂದ ಶಾಲೆ ಕಾಲೇಜುಗಳಲ್ಲಿ ಕ್ಲಾಸ್‌ಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ನಿಮ್ಮ ಆಯ್ಕೆ ಮಕ್ಕಳದ್ದಾಗದಿರಲಿ
ನಮಗೆ ಮಕ್ಕಳೆಂದರೆ ವಿಪರೀತ ಕಾಳಜಿ. ಅವರ ಒಂದೊಂದು ಸಣ್ಣಪುಟ್ಟ ನಡೆಯನ್ನೂ ವಿಮರ್ಶಿಸುತ್ತೇವೆ. ಪ್ರತಿಯೊಂದಕ್ಕೂ ತಿಳಿವಳಿಕೆ ನೀಡುತ್ತೇವೆ, ಮಾರ್ಗದರ್ಶನ ಕೊಡುತ್ತೇವೆ. ನೀನು ಆ ಕೆಲಸ ಮಾಡಬೇಡ, ಇಲ್ಲಿಗೆ ಹೋಗಬೇಡ ಎಂದು ನಮ್ಮ ಅನುಭವದ ಪಾಠವನ್ನು ಹೇಳಲು ಪ್ರಯತ್ನಿಸುತ್ತೇವೆ.
ನಮಗೆ ಅನುಭವ ಇರಬಹುದು. ಆದರೆ, ಮಕ್ಕಳಲ್ಲಿ ಕುತೂಹಲ ಹೆಚ್ಚು. ಅವರ ಕುತೂಹಲಗಳನ್ನು ನಾವು ಹೊಸಕಿಹಾಕಬಾರದು. ಕುತೂಹಲದ ಜೊತೆ ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಿದರೆ ಸಾಕು.
ಒಂದು ಸಣ್ಣ ಉದಾಹರಣೆ. ಒಂದು ಪುಟ್ಟ ಮಗು ಬೆಂಕಿ ಮುಟ್ಟಲು ಯತ್ನಿಸುತ್ತದೆ. ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಮಗುವನ್ನು ಬೆಂಕಿಯ ಹತ್ತಿರ ಹೋಗದಂತೆ ಗದರಿಸುತ್ತೇವೆ. ಅದು ಮಾಡುವ ಬದಲು ಮಗುವಿಗೆ ಬೆಂಕಿಯ ಬಿಸಿ ಏನೆಂದು ಅನುಭವವಾಗಬೇಕು. ಅದರೆ, ಸುಡಲು ಬಿಡಬೇಕೆಂದಲ್ಲ. ಬೆಂಕಿ ಸುಡುತ್ತದೆಂದು ಹೇಳಿ ಸಾಕು. ಬಳಿಕ ಬೆಂಕಿ ಚುರ್ ಎನಿಸುವಷ್ಟು ತಾಕಿದರೂ ಸಾಕು ಮಗು ಮತ್ತೆಂದೂ ಬೆಂಕಿಯ ಜೊತೆ ಆಡಲು ಹೋಗುವುದಿಲ್ಲ.
ಹಾಗೆಯೇ, ಮಗು ದೊಡ್ಡದಾದ ಮೇಲೆ ಯಾವುದಾದರೂ ಚಟುವಟಿಕೆಯಲ್ಲಿ ಆಸಕ್ತಿ ತೋರುತ್ತದೆ. ನಾವು ಅದೆಲ್ಲಾ ಬೇಡ ಟೈಮ್ ವೇಸ್ಟ್ ಎಂದು ಹೇಳಿ ಸುಮ್ಮನಾಗಿಸಲು ಹೋಗುತ್ತೇವೆ. ಅದರ ಬದಲು, ಆ ಚಟುವಟಿಕೆಯಿಂದ ಏನು ಪ್ರಯೋಜನ, ಮುಂದೇನು ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಮಗುವಿನ ಮುಂದಿಡಬಹುದು. ಅಥವಾ ಪರ್ಯಾಯ ಚಟುವಟಿಕೆಗಳನ್ನು ಮಗುವಿನ ಮುಂದಿಡಬಹುದು. ಒಟ್ಟಿನಲ್ಲಿ ಮಕ್ಕಳು ಧೈರ್ಯಗೆಡಬಾರದು, ಜೊತೆಯಲ್ಲಿ ಎಚ್ಚರಿಕೆಯಲ್ಲಿ ಹೆಜ್ಜೆ ಇಡುವ ಪ್ರವೃತ್ತಿಯನ್ನು ಬೆಳೆಸುವುದು ಮುಖ್ಯ.
(ಒನ್ಇಂಡಿಯಾ ಸುದ್ದಿ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications