Maha Kumbh Mela 2025: ಮಹಾಕುಂಭ ಮೇಳದಲ್ಲಿ ಸಾಧ್ವಿಯಾಗಿ ಕಾಣಿಸಿಕೊಂಡ ವಿಶ್ವಸುಂದರಿ
ನಟಿಯಾಗಿ, ಮಾಜಿ ಮಿಸ್ ಇಂಡಿಯಾ ಮತ್ತು ಮಿಸ್ ವರ್ಲ್ಡ್ ಟೂರಿಸಂ ಆಗಿ ಬಣ್ಣದ ಲೋಕದಲ್ಲಿ ಮಿಂಚಿದ್ದ ಚೆಲುವೆ ಇಶಿಕಾ ತನೇಜಾ (Ishika Taneja) ಅವರು ಸದ್ಯ ಆಧ್ಯಾತ್ಮದತ್ತ ಬಂದಿದ್ದಾರೆ. ಈ ಮೂಲಕ ಅವರು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಸದ್ಯ ಇಶಿಕಾ ತನೇಜಾ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಧ್ವಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ನಾನು ಸಾಧ್ವಿ ಅಲ್ಲ, ನಾನು ಸನಾತನಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಹಿನ್ನೆಲೆ ಗಿನ್ನೆಸ್ ವಿಶ್ವ ದಾಖಲೆಯನ್ನು ಒಳಗೊಂಡಿದೆ. ನಾನು ನನ್ನ ಪ್ರಶಸ್ತಿಯನ್ನು ನಿರ್ಭಯಾಗೆ ಅರ್ಪಿಸಿದ್ದೇನೆ. ಅದು ನನಗೆ ರಾಷ್ಟ್ರಪತಿ ಗೌರವವನ್ನು ತಂದುಕೊಟ್ಟಿದೆ. ಈಗ, ನಾನು ನನ್ನನ್ನು ಸನಾತನಕ್ಕೆ ಸಂಪೂರ್ಣವಾಗಿ ಸಮರ್ಪಿಸಿದ್ದೇನೆ. ನಾನು ಸನಾತನ ಮತ್ತು ಶಕ್ತಿಶಾಲಿ ಐಕ್ಯತೆಯನ್ನು ನಂಬುತ್ತೇನೆ ಎಂದು ಇಶಿಕಾ ತನೇಜಾ ಹೇಳಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇಶಿಕಾ ತನೇಜಾ, ಮಾಜಿ ವಿಶ್ವ ಸುಂದರಿಯಾಗಿ, ನಟಿಯಾಗಿ ಖ್ಯಾತಿ ಗಳಿಸಿದ್ದರು. ಬಳಿಕ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಅವರು ಗುರು ದೀಕ್ಷೆ ಪಡೆದಿದ್ದರು. ಇಂದಿನ ಯುವಜನರು ಧರ್ಮದೊಂದಿಗೆ ಬೆರೆತು ಆಧ್ಯಾತ್ಮಿಕ ಸಾಧನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು.
ದೀಕ್ಷೆ ಸಮಾರಂಭದಲ್ಲಿ ಸಾಧ್ವಿಯ ವೇಷಭೂಷಣದೊಂದಿಗೆ ಇಶಿಕಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.ನಾನು ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು ಹೊಂದಿದ್ದೆ. ಅದು ಧ್ಯಾನವಾಗಲಿ ಅಥವಾ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಅವರೊಂದಿಗೆ ಒಡನಾಟವೂ ಇತ್ತು. ಆದರೆ ಈಗ ನನ್ನನ್ನ ಸಂಪೂರ್ಣವಾಗಿ ಆಧ್ಯಾತ್ಮಕ್ಕೆ ಸಮರ್ಪಿಸಿಕೊಳ್ಳುವ ಸಮಯ ಬಂದಿದೆ. ಇಂದಿನ ಯುವಕರಿಗೆ ಶಕ್ತಿ ಮತ್ತು ಸಮಯವಿದೆ. ಅವರು ಅದನ್ನ ಆಧ್ಯಾತ್ಮಿಕತೆಗೆ ಬಳಸಬೇಕು ಎಂದು ಕಿವಿಮಾತು ಹೇಳಿದ್ದರು.
2017ರಲ್ಲಿ ಮಿಸ್ ವರ್ಲ್ಡ್ ಟೂರಿಸಂ (ಭಾರತ) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಇಶಿಕಾ ಅವರು ಮಲೇಷ್ಯಾದ ಮೆಲಾಕಾದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವದ ಉದ್ಯಮಿ ಮಹಿಳೆ ಎಂಬ ಬಿರುದನ್ನು ಸಹ ಪಡೆದಿದ್ದರು. ಅಲ್ಲದೆ ಇವರು ಭಾರತದ 100 ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿ ರಾಷ್ಟ್ರಪತಿ ಪ್ರಶಸ್ತಿಯನ್ನು ಸಹ ಸ್ವೀಕರಿಸಿದ್ದರು. ಆದರೆ ಸಾಧನೆಯ ಉತ್ತುಂಗದಲ್ಲಿದ್ದಾಗಲೇ ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕತೆಗೆ ಮೀಸಲಿಡಲು ಗ್ಲಾಮರ್ ಪ್ರಪಂಚವನ್ನು ತ್ಯಜಿಸಿದ್ದರು.

ಇಶಿಕಾ ಅವರು ಸರ್ಕಾರ್, ವೆಬ್ ಸರಣಿ ಹದ್ ಮತ್ತು ವಿವಿಧ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಜೊತೆಗೆ ಅವರು ಕ್ರೀಡಾ ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದರು. ಆದರೆ ಆಧ್ಯಾತ್ಮಿಕತೆ ಕಡೆಗೆ ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇಶಿಕಾ ತನೇಜಾ ಅವರು ಇತ್ತೀಚೆಗೆ ದ್ವೇಷ ಭಾಷಣದ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಭಾರತೀಯ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣವನ್ನು ಮಾಡುವ ಟೀಕೆಗೆ ಗುರಿಯಾಗಿದ್ದರು.












Click it and Unblock the Notifications