ಗುದನಾಳದ ಕ್ಯಾನ್ಸರ್ ರೋಗಕ್ಕೆ ಬಂತು ಮದ್ದು: ಇತಿಹಾಸದಲ್ಲಿ ಇದೇ ಮೊದಲು!
ನವದೆಹಲಿ, ಜೂನ್ 8: ಕಲಿಯುಗದಲ್ಲಿ ಕ್ಯಾನ್ಸರ್ ಅಂದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ಪರಿಸ್ಥಿತಿಯಿದೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದಿಂದ ಜನರು ಪ್ರಾಣ ಬಿಡುವುದಕ್ಕಿಂತ ಈ ರೋಗಕ್ಕೆ ನೀಡುವ ಚಿಕಿತ್ಸಾ ವೈಖರಿಯಿಂದಲೇ ಸಾವನ್ನಪ್ಪುತ್ತಾರೆ ಎನ್ನುವ ಮಾತುಗಳಿವೆ. ಇಂಥ ಗಂಭೀರ ರೋಗವನ್ನು ಎದುರಿಸುತ್ತಿರುವವವರಿಗೆ ವೈದ್ಯಕೀಯ ಪ್ರಯೋಗವೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ.
ಇಡೀ ಜಗತ್ತನ್ನು ಕಾಡುತ್ತಿರುವ ಕ್ಯಾನ್ಸರ್ ರೋಗಕ್ಕೆ ನೀಡುವ ಚಿಕಿತ್ಸೆಯು ಫಲಿಕಾರಿಯಾಗಿರುವ ಉದಾಹರಣೆಗಳು ತೀರಾ ಕಡಿಮೆ. ಆದರೆ ಅಚ್ಚರಿ ಎನ್ನುವಂತಾ ಘಟನೆಯೊಂದು ನಡೆದು ಹೋಗಿದೆ. ವೈದ್ಯಕೀಯ ಪ್ರಯೋಗದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದ ಅಷ್ಟೂ ರೋಗಿಗಳು ಗುಣಮುಖರಾಗಿರುವ ಘಟನೆ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಾಮಾನ್ಯವಾಗಿ ಕ್ಯಾನ್ಸರ್ ರೋಗಗಳಲ್ಲಿ ಹಲವು ವಿಧಗಳಿವೆ. ಈ ಪೈಕಿ ಗುದನಾಳದ ಕ್ಯಾನ್ಸರ್ ಹೆಚ್ಚು ಅಪಾಯಕಾರಿ ಎಂದು ವೈದ್ಯಕೀಯ ಲೋಕವೇ ಒಪ್ಪಿಕೊಂಡಿದೆ. ಇಂಥ ಅಪಾಯಕಾರಿ ರೋಗಕ್ಕೆ ಮದ್ದು ಕಂಡುಹಿಡಿದಿರುವ ಬಗ್ಗೆ ನ್ಯೂಯಾರ್ಕ್ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ಸ್ಪಷ್ಟಪಡಿಸಿದೆ.
ಈ ಗುದನಾಳದ ಕ್ಯಾನ್ಸರ್ ರೋಗಕ್ಕೆ ನೀಡಿದ ಮದ್ದು ಯಾವ ರೀತಿಯಾಗಿತ್ತು?, ಗುದನಾಳ ಕ್ಯಾನ್ಸರ್ ರೋಗಿಗಳ ಮೇಲೆ ಮದ್ದು ಯಾವ ರೀತಿ ಪರಿಣಾಮ ಬೀರಿತು? ವೈದ್ಯಕೀಯ ಪರೀಕ್ಷೆ ಮತ್ತು ಪ್ರಯೋಗದಲ್ಲಿ ಅಳವಡಿಸಿಕೊಂಡ ವೈಖರಿ ಹೇಗಿತ್ತು ಎನ್ನುವುದರ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ.

ಪ್ರಾಯೋಗಾತ್ಮಕವಾಗಿ ನೀಡಿದ ಚಿಕಿತ್ಸೆ ಫಲಕಾರಿ
ಕ್ಯಾನ್ಸರ್ ರೋಗಕ್ಕೆ ಪ್ರಾಯೋಗಾತ್ಮಕವಾಗಿ ನೀಡಿದ ಚಿಕಿತ್ಸೆಯು ಯಶಸ್ವಿಯಾಗಿದೆ. ಗುದನಾಳದ ಕ್ಯಾನ್ಸರ್ ರೋಗಕ್ಕಾಗಿ ನೀಡಿದ ಮದ್ದು ಹೊಸ ಪವಾಡವನ್ನೇ ಸೃಷ್ಟಿಸಿದೆ. ಸಣ್ಣ ಪ್ರಮಾಣದ ವೈದ್ಯಕೀಯ ಪ್ರಯೋಗದ ಭಾಗವಾಗಿ 18 ಮಂದಿ ಗುದನಾಳ ಕ್ಯಾನ್ಸರ್ ಅನ್ನು ಹೊಂದಿರುವ ರೋಗಿಗಳಿಗೆ ದೋಸ್ಟಾರ್ಲಿಮಾಬ್ ಎಂಬ ಔಷಧವನ್ನು ನೀಡಲಾಯಿತು. ಈ ಔಷಧಿಯನ್ನು 6 ತಿಂಗಳವರೆಗೂ ತೆಗೆದುಕೊಂಡ ರೋಗಿಗಳಲ್ಲಿ ಅದಕ್ಕೂ ಮೊದಲು ಗುದನಾಳದಲ್ಲಿ ಕಾಣಿಸಿಕೊಂಡಿದ್ದ ಕ್ಯಾನ್ಸರ್ ಗಡ್ಡೆಗಳು ಮಾಯವಾಗುವ ಮೂಲಕ ಹೊಸ ಪವಾಡವನ್ನೇ ಸೃಷ್ಟಿಸಿವೆ ಎಂದು ವರದಿಯಾಗಿದೆ.

ಗುದನಾಳ ಕ್ಯಾನ್ಸರ್ ರೋಗಿಗಳಿಗೆ ನೀಡಿದ ದೋಸ್ಟಾರ್ಲಿಮಾಬ್ ಔಷಧಿ?
ದೋಸ್ಟಾರ್ಲಿಮಾಬ್ ಎನ್ನುವುದು ಪ್ರಯೋಗಾಲಯದಲ್ಲಿ ಉತ್ಪಾದಿಸಿದ ಅಣುಗಳನ್ನು ಹೊಂದಿರುವ ಔಷಧವಾಗಿದ್ದು, ಅದು ಮನುಷ್ಯನ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕೆಲಸ ಮಾಡುತ್ತವೆ. ಇದೇ ಔಷಧಿಯನ್ನು 18 ಮಂದಿ ಗುದನಾಳ ಕ್ಯಾನ್ಸರ್ ರೋಗಿಗಳಿಗೆ ಪ್ರಾಯೋಗಿಕ ಚಿಕಿತ್ಸೆಗಾಗಿ ನೀಡಲಾಯಿತು. ಇದರಿಂದ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದ್ದು, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ನಾಶವಾಗಿದೆ. ಇದನ್ನು ದೈಹಿಕ ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ. ಅದರ ಬದಲಿಗೆ ಎಂಡೋಸ್ಕೋಪಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್‌ಗಳು ಅಥವಾ ಎಂಆರ್‌ಐ ಸ್ಕ್ಯಾನ್‌ಗಳ ಮೂಲಕ ಪತ್ತೆ ಮಾಡಲಾಯಿತು.

ಕ್ಯಾನ್ಸರ್ ಚಿಕಿತ್ಸೆಯು ಬರೆದ ಹೊಸ ಇತಿಹಾಸ
ನ್ಯೂಯಾರ್ಕ್ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನ ಡಾ. ಲೂಯಿಸ್ ಎ, ಡೈಯಾಜ್ ಜೆ ಈ ಕುರಿತು ಮಾತನಾಡಿದ್ದಾರೆ. ಕ್ಯಾನ್ಸರ್ ರೋಗಕ್ಕೆ ನೀಡಿದ ಚಿಕಿತ್ಸೆಯು ಇತಿಹಾಸದಲ್ಲಿಯೇ ಮೊದಲ ಬಾರಿ ಯಶಸ್ವಿಯಾಗಿದೆ ಎಂದಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ವೈದ್ಯಕೀಯ ಪ್ರಯೋಗದ ಭಾಗವಾಗಿ ಗುರುತಿಸಿಕೊಂಡ ರೋಗಿಗಳು ಈ ಮೊದಲು ಕೂಡ ಬೇರೆ ಬೇರೆ ಚಿಕಿತ್ಸಾ ವಿಧಾನಗಳನ್ನು ಪಡೆದುಕೊಂಡಿದ್ದರು. ಆದರೆ ಅದ್ಯಾವ ಚಿಕಿತ್ಸೆಗಳೂ ಸಹ ಫಲಕಾರಿ ಎನಿಸಿರಲಿಲ್ಲ. ಉದಾಹರಣೆಗೆ ಕಿಮೊಥೆರಪಿ, ವಿಕಿರಣ ಮತ್ತು ಆಕ್ರಮಣಕಾರಿ ಶಸ್ತ್ರಚಿಕಿತ್ಸೆಯಂತಹ ಚಿಕಿತ್ಸೆಗಳು ಕರುಳು, ಮೂತ್ರ ಮತ್ತು ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುವ ಅಪಾಯವಿತ್ತು. ಈ ಹಿನ್ನೆಲೆ 18 ರೋಗಿಗಳು ಮುಂದಿನ ಹಂತದಲ್ಲಿ ತಮ್ಮ ರೋಗವನ್ನು ತೊಡೆದು ಹಾಕುವ ಉದ್ದೇಶದಿಂದಾಗಿಯೇ ಪ್ರಯೋಗದಲ್ಲಿ ಭಾಗವಹಿಸುವುದಕ್ಕೆ ಒಪ್ಪಿಕೊಂಡಿದ್ದು, ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.

ವೈದ್ಯಕೀಯ ಲೋರದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ರಯೋಗ
ಗುದನಾಳ ಕ್ಯಾನ್ಸರ್ ರೋಗಿಗಳ ಮೇಲೆ ನಡೆಸಿದ ಪ್ರಯೋಗಗಳು ಯಶಸ್ವಿಯಾಗುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ತಜ್ಞರಾಗಿರುವ ಡಾ. ಅಲನ್ ಪಿ. ವೆನೂಕ್, ಈ ಕುರಿತು ಮಾತನಾಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಭಾಗವಾಗಿದ್ದ ಪ್ರತಿಯೊಬ್ಬ ರೋಗಿಯೂ ಸಂಪೂರ್ಣ ಗುಣಮುಖರಾಗಿರುವುದು ಕಂಡು ಕೇಳರಿಯದ ವಿಷಯವಾಗಿದೆ. ಇದು ವಿಶ್ವದ ವೈದ್ಯಕೀಯ ಸಂಶೋಧನೆಗಳಲ್ಲೇ ಮೊದಲು ಎಂದು ಅವರು ಶ್ಲಾಘಿಸಿದರು. ಪ್ರಯೋಗದ ಸಂದರ್ಭದಲ್ಲಿ ನೀಡಿದ ಔಷಧಿಯಿಂದ ಎಲ್ಲಾ ರೋಗಿಗಳು ಯಾವುದೇ ರೀತಿ ಅಡ್ಡ ಪರಿಣಾಮಗಳಿಲ್ಲದೇ ಗುಣಮುಖರಾಗಿರುವುದು ವಿಶೇಷವಾಗಿ ಪ್ರಭಾವಶಾಲಿ ಎನಿಸಿದೆ ಎಂದು ಹೇಳಿದರು.

ವೈದ್ಯಕೀಯ ಪರೀಕ್ಷೆಯ ಭಾಗವಾದ ರೋಗಿಗಳು ಹೇಳಿದ್ದೇನು?
ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನಲ್ಲಿ ರೋಗಿಗಳು ಗುದನಾಳ ಕ್ಯಾನ್ಸರ್ ನಿಂದ ಹೇಗೆ ಗುಣಮುಖರಾಗಿದ್ದಾರೆ ಎಂಬ ಕ್ಷಣವನ್ನು ಆಂಕೊಲಾಜಿಸ್ಟ್ ಡಾ ಆಂಡ್ರಿಯಾ ಸೆರ್ಸೆಕ್ ವಿವರಿಸಿದ್ದಾರೆ. ಅಪಾಯಕಾರಿ ಕ್ಯಾನ್ಸರ್ ರೋಗದಿಂದ ಗುಣಮುಖರಾದವರು "ಆನಂದಭಾಷ್ಪ ಸುರಿಸಿದರು," ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿದ್ದ ರೋಗಿಗಳಿಗೆ ಪ್ರತಿ ಮೂರು ವಾರಗಳಿಗೊಮ್ಮೆ ದೋಸ್ಟಾರ್ಲಿಮಾಬ್ ಔಷಧಿಯನ್ನು ನೀಡಲಾಗುತ್ತಿತ್ತು. ಆರು ತಿಂಗಳವರೆಗೂ ಈ ಔಷಧಿಯನ್ನು ರೋಗಿಗಳಿಗೆ ಪ್ರಯೋಗಿಕವಾಗಿ ನೀಡಲಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಗುದನಾಳದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋಗಿಗಳೆಲ್ಲ ಇನ್ನೂ ಮೊದಲನೇ ಹಂತದಲ್ಲಿದ್ದವರು ಎಂದು ತಿಳಿದು ಬಂದಿದೆ. ಅಂದರೆ ದೇಹದ ಬೇರೆ ಭಾಗಗಳಿಗೆ ಈ ಕ್ಯಾನ್ಸರ್ ರೋಗಾಣುಗಳು ಹರಡಿರಲಿಲ್ಲ ಎನ್ನುವುದು ಗಮನಾರ್ಹವಾಗಿದೆ.












Click it and Unblock the Notifications