ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಎಫ್‌ಎಫ್‌ಗೆ ಫೀಫಾ ನಿಷೇಧ; ಭಾರತೀಯ ಫುಟ್ಬಾಲ್‌ಗೆ ಮರ್ಮಾಘಾತ

|
Google Oneindia Kannada News

ನವದೆಹಲಿ, ಆ. 16: ಫೀಫಾ ಸಂಸ್ಥೆ ಕೊನೆಗೂ ಭಾರತೀಯ ಫುಟ್ಬಾಲ್‌ಗೆ ಮಾರಕವಾಗುವ ನಿರ್ಧಾರ ಕೈಗೊಂಡಿದೆ. ಭಾರತೀಯ ಫುಟ್ಬಾಲ್ ಸಂಸ್ಥೆ ಎಐಎಫ್‌ಎಫ್ ಅನ್ನು ಫಿಫಾ ಮಂಗಳವಾರ ನಿಷೇಧಿಸಿದೆ. ಇದರೊಂದಿಗೆ ಭಾರತ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಅಸಾಧ್ಯವಾಗಲಿದೆ.

ಫೀಫಾ ಸದಸ್ಯ ದೇಶಗಳ ಅಧಿಕೃತ ಫುಟ್ಬಾಲ್ ಸಂಸ್ಥೆಯ ವ್ಯವಹಾರಗಳಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪವಾದಲ್ಲಿ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ. ಎಐಎಫ್‌ಎಫ್ ವಿಚಾರದಲ್ಲೂ ಅದೇ ಆಗಿರುವುದು. ಎಐಎಫ್‌ಎಫ್‌ನ ಅಧ್ಯಕ್ಷರಾಗಿದ್ದ ಪ್ರಫುಲ್ ಪಟೇಲ್ ಅವರನ್ನು ಸುಪ್ರೀಂ ಕೋರ್ಟ್ ಉಚ್ಚಾಟನೆ ಮಾಡಿತ್ತು. ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತ ಸಮಿತಿ (ಸಿಒಎ) ಇದೀಗ ಫುಟ್ಬಾಲ್ ಸಂಸ್ಥೆಯ ಆಡಳಿತವನ್ನು ನಿರ್ವಹಿಸುತ್ತಿದೆ. ಇದು ಫೀಫಾ ನಿಯಮದ ಉಲ್ಲಂಘನೆಯಾಗಿದೆ.

AIFF ರದ್ದುಗೊಳಿಸಿದ FIFA, ಫುಟ್ಬಾಲ್ ವಿಶ್ವಕಪ್ ಆಯೋಜನೆಗೆ ಪೆಟ್ಟುAIFF ರದ್ದುಗೊಳಿಸಿದ FIFA, ಫುಟ್ಬಾಲ್ ವಿಶ್ವಕಪ್ ಆಯೋಜನೆಗೆ ಪೆಟ್ಟು

ಕೆಲವಾರು ತಿಂಗಳ ಹಿಂದೆಯೇ ಈ ಬೆಳವಣಿಗೆಯಾಗಿತ್ತು. ಆಗಲೇ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) ಮೇಲೆ ಫೀಫಾ ನಿಷೇಧದ ಕತ್ತು ತೂಗುತ್ತಲೇ ಇತ್ತು. ಇತ್ತೀಚೆಗೆ, ಎಐಎಫ್‌ಎಫ್ ಸಂಸ್ಥೆಯ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು ಫೀಫಾವನ್ನು ನಿಷೇಧದ ನಿರ್ಧಾರಕ್ಕೆ ದೂಡಿತು ಎನ್ನಲಾಗಿದೆ.

ಎಐಎಫ್‌ಎಫ್‌ನ ವಿಶೇಷ ಸಭೆ ನಡೆಸಿ ಫೀಫಾ, ಎಎಫ್‌ಸಿ ಮತ್ತು ಭಾರತೀಯ ಫುಟ್ಬಾಲ್ ಸೇರಿ ರೂಪಿಸಲಾದ ನಿಯಮಾವಳಿಗೆ ಅಂಗೀಕಾರ ಕೊಡಬೇಕು ಎಂಬುದು ಫೀಫಾ ಸೂಚನೆಯಾಗಿತ್ತು. ಕಳೆದ ವಾರವೇ ಇದು ಆಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ನೇರವಾಗಿ ಫುಟ್ಬಾಲ್ ಸಂಸ್ಥೆಗೆ ಚುನಾವಣೆಗೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಭಾರತೀಯ ಫುಟ್ಬಾಲ್ ಅನ್ನು ಫೀಫಾ ನಿಷೇಧಿಸಿತೆನ್ನಲಾಗಿದೆ.

ಎಐಎಫ್ಎಫ್ ಅನ್ನು ಫೀಫಾ ನಿಷೇಧಿಸುವುದರಿಂದ ಭಾರತಕ್ಕೆ ಬಹಳಷ್ಟು ಪರಿಣಾಮಗಳು ಉಂಟಾಗುತ್ತವೆ. ಮಲಗಿರುವ ದೈತ್ಯವಾಗಿಯೇ ಇರುವ ಭಾರತೀಯ ಫುಟ್ಬಾಲ್‌ಗೆ ಇದು ಮರ್ಮಾಘಾತವಾಗಲಿದೆ. ನಮ್ಮ ಫುಟ್ಬಾಲ್ ಪ್ರಪಂಚಕ್ಕೆ ಏನೆಲ್ಲಾ ಅನಾಹುತವಾಗಬಹುದು?

ಅಂಡರ್-17 ವಿಶ್ವಕಪ್ ಆಯೋಜನೆ

ಅಂಡರ್-17 ವಿಶ್ವಕಪ್ ಆಯೋಜನೆ

ಎಐಎಫ್‌ಎಫ್ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಫೀಫಾ ಅಥವಾ ಎಎಫ್‌ಸಿ ಮಾನ್ಯತೆ ಪಡೆದ ಯಾವುದೇ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಗಳಲ್ಲಿ ಭಾರತೀಯ ತಂಡಗಳು ಆಡಲು ಸಾಧ್ಯವಾಗುವುದಿಲ್ಲ.

ಇದೇ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಹಿಳೆಯರ ಅಂಡರ್-17 ವಿಶ್ವಕಪ್ ನಡೆಯುವುದಿತ್ತು. ಭಾರತೀಯ ಮಹಿಳಾ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಯಾವುದೇ ವಿಶ್ವಕಪ್‌ನಲ್ಲಿ ಆಡುತ್ತಿರುವುದು. ಈಗ ಫೀಫಾ ನಿಷೇಧದಿಂದಾಗಿ ಭಾರತ ಈ ಟೂರ್ನಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ಕೆಲ ವರ್ಷಗಳಿಂದ ಗರಿಗೆದರಿ ಉತ್ತಮ ಪ್ರದರ್ಶನ ನೀಡಿರುವ ಭಾರತೀಯ ಮಹಿಳಾ ಫುಟ್ಬಾಲ್‌ಗಂತೂ ಫೀಫಾ ನಿಷೇಧ ಮಾರಕ ಪೆಟ್ಟು ಕೊಟ್ಟಿದೆ. ಇದರಿಂದ ಭಾರತೀಯ ಮಹಿಳಾ ಫುಟ್ಬಾಲ್ 10-20 ವರ್ಷದ ಹಿಂದಕ್ಕೆ ತಳ್ಳಿದಂತಾಗಿದೆ ಎನ್ನುತ್ತಾರೆ ತಜ್ಞರು.

ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ?ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ?

ಎಎಫ್‌ಸಿ ಟೂರ್ನಿ

ಎಎಫ್‌ಸಿ ಟೂರ್ನಿ

ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತ ಆಡಲು ಸಾಧ್ಯವಾಗುವುದಿಲ್ಲ. ನಾಲ್ಕನೇ ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದ್ದ ಭಾರತೀಯ ಫುಟ್ಬಾಲಿಗರ ಜಂಘಾಬಲವೇ ಈಗ ಉಡುಗಿಹೋದಂತಾಗಿದೆ.

ರಾಷ್ಟ್ರೀಯ ತಂಡ ಮಾತ್ರವಲ್ಲ ಭಾರತೀಯ ಫುಟ್ಬಾಲ್ ಕ್ಲಬ್‌ಗಳಿಗೂ ಸಂಕಷ್ಟದ ಸ್ಥಿತಿ. ಏಷ್ಯನ್ ಫುಟ್ಬಾಲ್ ಕ್ಲಬ್‌ಗಳ ಮಧ್ಯೆ ನಡೆಯುವ ಎಎಫ್‌ಸಿ ಕಪ್ ಟೂರ್ನಿಯಲ್ಲಿ ಭಾರತೀಯ ಕ್ಲಬ್‌ಗಳು ಅಡಲು ಸಾಧ್ಯವಾಗುವುದಿಲ್ಲ. ಎಎಫ್‌ಇ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ತಂಡವೊಂದು (ಗೋಕುಲಂ ಎಫ್‌ಸಿ) ಇದೇ ಮೊದಲ ಬಾರಿಗೆ ಆಡಲು ಅರ್ಹತೆ ಗಿಟ್ಟಿಸಿತ್ತು. ಅದೂ ಈಗ ಕೈತಪ್ಪಿತಂತಾಗಿದೆ.

ಭಾರತೀಯ ಫುಟ್ಬಾಲ್‌ಗೆ ಮರ್ಮಾಘಾತ

ಭಾರತೀಯ ಫುಟ್ಬಾಲ್‌ಗೆ ಮರ್ಮಾಘಾತ

ಎಐಎಫ್‌ಎಪ್‌ಗೆ ಫೀಫಾ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಭಾರತ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಆಗುವುದಿಲ್ಲ. ಭಾರತೀಯ ಫುಟ್ಬಾಲ್‌ಗೆ ಫೀಫಾ ನೀಡುವ 5 ಲಕ್ಷ ಡಾಲರ್ (4 ಕೋಟಿ ರೂ) ಕೈತಪ್ಪಲಿದೆ. ಈ ಧನಸಹಾಯವೇನೋ ಅಲ್ಪವಾದರೂ ಫೀಫಾ ನಿಷೇಧದ ಇತರ ಪರಿಣಾಮ ಮಾತ್ರ ಭಾರತೀಯ ಫುಟ್ಬಾಲ್‌ಗೆ ಘೋರವಾಗಲಿದೆ.

ಮಲಗಿರುವ ಫುಟ್ಬಾಲ್ ದೈತ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತ ಮತ್ತೆ ಚೇತರಿಸಿಕೊಳ್ಳುವುದು ಅಸಾಧ್ಯವೇ ಆಗಬಹುದು. ಭಾರತದ ಫುಟ್ಬಾಲ್ ವ್ಯವಸ್ಥೆಯೇ ಕುಂಠಿತಗೊಳ್ಳಬಹುದು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದೇ ಇದ್ದರೆ ಯಾವ ಆಟಗಾರ ತಾನೆ ಉತ್ಸಾಹದಿಂದ ಫುಟ್ಬಾಲ್‌ನಲ್ಲಿ ತೊಡಗಲು ಸಾಧ್ಯ. ಎಎಫ್‌ಸಿ ಟೂರ್ನಿಗಳಲ್ಲಿ ಆಡುವ ಅವಕಾಶ ಸಿಗದ ಹಿನ್ನೆಲೆಯಲ್ಲಿ ಐ ಲೀಗ್, ಐಎಸ್‌ಎಲ್ ಕ್ಲಬ್‌ಗಳೂ ಕೂಡ ಉತ್ಸಾಹ ಕಳೆದುಕೊಳ್ಳಲಿವೆ.

ಸುನೀಲ್ ಛೇಟ್ರಿ ನಿರಾಸೆ

ಸುನೀಲ್ ಛೇಟ್ರಿ ನಿರಾಸೆ

ಭಾರತೀಯ ಫುಟ್ಬಾಲ್‌ನ ಲಿವಿಂಗ್ ಲೆಜೆಂಡ್ ಎಂದೇ ಕರೆಸಿಕೊಳ್ಳುತ್ತಿರುವ ಸುನೀಲ್ ಛೇಟ್ರಿ ಕೆಲ ದಿನಗಳ ಹಿಂದೆ ಫೀಫಾ ನಿಷೇಧ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿ, ಒಂದು ವೇಳೆ ಫೀಫಾ ನಿಷೇಧ ಹೇರಿದಲ್ಲಿ ಭಾರತೀಯ ಫುಟ್ಬಾಲ್‌ಗೆ ಭಾರೀ ಹೊಡೆತ ಕೊಡಲಿದೆ ಎಂದು ಹೇಳಿದ್ದರು.

"ಇಡೀ ದೇಶಕ್ಕೆ ಮಾತ್ರವಲ್ಲ, ನನಗೂ ಇದು ಹೊಡೆತ ಕೊಡಲಿದೆ. ನನಗೀಗ 37 ವರ್ಷ. ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದೇನೆ. ನನ್ನ ಕೊನೆಯ ಪಂದ್ಯ ಯಾವಾಗ ಎಂದು ಗೊತ್ತಾಗದೇ ಹೋಗಲಿದೆ" ಎಂದು ಬಹಳ ಮಾರ್ಮಿಕವಾಗಿ ಛೇಟ್ರಿ ಹೇಳಿದ್ದರು.

37 ವರ್ಷ ವಯಸ್ಸಿನಲ್ಲಿ ಸುನೀಲ್ ಛೇಟ್ರಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕೆ ಈಗಲೂ ಅವರೇ ಆಧಾರ ಸ್ತಂಭವಾಗಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆಯಲ್ಲಿ ವಿಶ್ವದ ಅಗ್ರಮಾನ್ಯ ಅಟಗಾರರ ಸಾಲಿನಲ್ಲಿ ಛೇಟ್ರಿ ಇದ್ದಾರೆ. ಈಗ ಸಕ್ರಿಯವಾಗಿರುವ ಆಟಗಾರರ ಪೈಕಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೋನೆಲ್ ಮೆಸ್ಸಿ ಬಿಟ್ಟರೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಹೊಡೆದಿರುವುದು ಸುನೀಲ್ ಛೇಟ್ರಿ. ಫೀಫಾ ನಿಷೇಧದಿಂದಾಗಿ ಸುನೀಲ್ ಛೇಟ್ರಿ ಅವರ ಕೊನೆಯ ಓಟಕ್ಕೆ ತೊಡರುಗಾಲು ಬೀಳಲಿದೆ.

ಮುಂದೇನು ಕಥೆ?

ಮುಂದೇನು ಕಥೆ?

ಎಐಎಫ್‌ಎಫ್ ಮೇಲೆ ಫೀಫಾ ನಿಷೇಧ ಹೇರಿರುವುದು ಖಾಯಂ ಕ್ರಮ ಅಲ್ಲ. ಫೀಫಾ ನಿಯಮಾವಳಿ ಮತ್ತು ಸೂಚನೆ ಪ್ರಕಾರ ಎಐಎಫ್‌ಎಫ್‌ನಲ್ಲಿ ಆಡಳಿತ ವ್ಯವಸ್ಥೆ ಬಂದರೆ ನಿಷೇಧ ಹಿಂಪಡೆಯಲಾಗುತ್ತದೆ.

"ಆಡಳಿತಗಾರರ ಸಮಿತಿ ಸ್ಥಾಪಿಸಿ ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ಆಕ್ರಮಿಸಿಕೊಳ್ಳುವ ಆದೇಶವನ್ನು ಹಿಂಪಡೆದಾಗ ಮತ್ತು ದೈನಂದಿನ ವ್ಯವಹಾರದಲ್ಲಿ ಎಐಎಫ್‌ಎಫ್ ಆಡಳಿತಕ್ಕೆ ಪೂರ್ಣ ನಿಯಂತ್ರಣ ಸಿಕ್ಕಾಗ ನಿಷೇಧವನ್ನು ಹಿಂಪಡೆಯಲಾಗುವುದು" ಎಂದು ಫೀಫಾ ಹೇಳಿದೆ.

ಆದಷ್ಟೂ ಬೇಗ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ. ಇದು ಭಾರತೀಯ ಫುಟ್ಬಾಲ್ ಭವಿಷ್ಯದ ಪ್ರಶ್ನೆ. ಅಫ್ಘಾನಿಸ್ತಾನ ಇತ್ಯಾದಿ ವಿಶ್ವದ ಹಲವು ಫುಟ್ಬಾಲ್ ಸಂಸ್ಥೆಗಳು ಈ ಹಿಂದೆ ಫೀಫಾ ನಿಷೇಧಕ್ಕೆ ಒಳಗಾಗಿದ್ದು ನಮ್ಮ ಕಣ್ಮುಂದೆ ಇದೆ. ಈಗಷ್ಟೇ ಒಂದಷ್ಟು ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಫುಟ್ಬಾಲ್ ಪ್ರಪಾತಕ್ಕೆ ಬೀಳದಂತೆ ತಡೆಯುವುದು ಸರಕಾರದ ಕರ್ತವ್ಯವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
FIFA has banned Indian football after the AIFF administration was allegedly tinkered by the Supreme Court. Here are few important effects on Indian football due to this FIFA ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X