• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇರಳೆಯ ರಾಘವೇಂದ್ರ ಭಟ್ಟರು ಪೌರೋಹಿತ್ಯವನ್ನೇಕೆ ಬಿಟ್ಟರು?

By ರಾಘವೇಂದ್ರ ಭಟ್ಟ ನೇರಳೆ
|

"ಇನ್ನೂ ಕೆಲ ದಿನ ಹುಡುಕುವುದಕ್ಕೆ ನಾನೇನೋ ಸಿದ್ಧನಿದ್ದೇನೆ. ಜೂನ್ ಮೂವತ್ತನೇ ತಾರೀಕಿಗೆ ಪೌರೋಹಿತ್ಯ ಮಾಡುವುದನ್ನು ನಿಲ್ಲಿಸಿದೆ. ಆ ನಂತರ ಬಂದ ಹತ್ತು- ಹದಿನೈದು ಪೂಜಾ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇನ್ನು ಮುಂದಿನ ಹಾದಿ ಸಾವಯವ ಕೃಷಿ. ಜತೆಗೆ ಎಲೆಕ್ಟ್ರಿಕಲ್ ಕೆಲಸ" ಅಂತ ನಿರ್ಧಾರ ಮಾಡಿದ್ದೀನಿ ಎಂದರು ರಾಘವೇಂದ್ರ ಭಟ್ಟ ನೇರಳೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದವರಾದ ಅವರಿಗೆ ಪೌರೋಹಿತ್ಯ ವೃತ್ತಿಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಮದುವೆಗೆ ಕನ್ಯೆ ಸಿಗುತ್ತಿಲ್ಲ. ಇನ್ನು ಇತರ ಜಾತಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ಈ ವೃತ್ತಿಯಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಲೌಕಿಕವಾಗಿ ಬೇರೆ ಯಾವುದೇ ಉದ್ಯೋಗ- ವೃತ್ತಿ ಮಾಡಿದರೂ ಇಂಥ ಕಟ್ಟುಪಾಡುಗಳಿಲ್ಲ ಎಂದು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಉತ್ತರಭಾರತಕ್ಕೆ ಹೋದರೂ ಪ್ರಶ್ನೆಯಾಗಿಯೇ ಉಳಿದ ಬ್ರಾಹ್ಮಣರ ವಧು ಸಮಸ್ಯೆ

ಪೌರೋಹಿತ್ಯ ವೃತ್ತಿ ಬಿಟ್ಟಿರುವ ರಾಘವೇಂದ್ರ ಭಟ್ ಅವರು ಅದಕ್ಕೆ ಕಾರಣ ಏನು ಎಂಬುದನ್ನು ಸಹ ತಿಳಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಆ ಬಗ್ಗೆ ಚರ್ಚೆ ತುಂಬ ಹಳೆಯದಾದರೂ ರಾಘವೇಂದ್ರ ಭಟ್ ಅವರಿಗೆ ಸಿಕ್ಕಿರುವ ಸ್ಪಂದನೆ ಬೇರೆ ರೀತಿಯದು. ಹಾಗೂ ರಾಘವೇಂದ್ರ ಭಟ್ ಅವರು ಈ ಪರಿಸ್ಥಿತಿಯನ್ನು ಸ್ವೀಕರಿಸಿರುವ ಬಗೆ ಬೇರೆ.

ಪುರೋಹಿತರಾದರೆ ಬ್ರಾಹ್ಮಣ ಹೆಣ್ಣುಮಕ್ಕಳು ಮದುವೆಗೆ ಸಿಗುವುದಿಲ್ಲ. ಹಾಗೂ ಒಂದು ವೇಳೆ ನೀವು ಪ್ರಯತ್ನ ಪಡಲೇಬೇಕು ಎಂದು ಒತ್ತಡ ಹಾಕುವುದಾದರೆ ಮದುವೆ ದಲ್ಲಾಳಿಗಳಿಗೆ ಮೂರು ಲಕ್ಷ ರುಪಾಯಿ ಕೊಡಬೇಕಾಗುತ್ತದೆ. ಕೊಟ್ಟ ನಂತರ ನೋಡೋಣ ಎಂಬ ಉತ್ತರ ರಾಘವೇಂದ್ರ ಭಟ್ಟ ಅವರ ತಂದೆಗೆ ಸಿಕ್ಕಿದೆ. ಆ ನಂತರ ತಮ್ಮ ಮಗನ ನಿರ್ಧಾರವನ್ನು, ಅಂದರೆ ಪೌರೋಹಿತ್ಯ ವೃತ್ತಿ ಬಿಡುವ ತೀರ್ಮಾನ ಅವರು ಒಪ್ಪಿದ್ದಾರೆ.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!

ಅಂದಹಾಗೆ ರಾಘವೇಂದ್ರ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದೇನು ಎಂಬುದು ಇಲ್ಲಿದೆ.

ಏಳು ತಿಂಗಳಿಂದ ಇನ್ನಿಲ್ಲದಂತೆ ಪ್ರಯತ್ನ

ಏಳು ತಿಂಗಳಿಂದ ಇನ್ನಿಲ್ಲದಂತೆ ಪ್ರಯತ್ನ

ನನ್ನ ಮೇಲೆ ವಿಶ್ವಾಸವಿರುವವರು ಪೂರ್ತಿ ಓದಿ, "ಗೃಹಸ್ಥಾಶ್ರಮ" ವೆಂಬುದು ಅತ್ಯಂತ ಶ್ರೇಷ್ಠ ಮತ್ತು ಅತ್ಯಗತ್ಯ ಎಂದು ಶಾಸ್ತ್ರಗಳಲ್ಲಿಯೂ ಉಲ್ಲೇಖವಿದೆ ಮತ್ತು ಪ್ರತಿಯೊಬ್ಬರಿಗೂ ತಿಳಿದ ವಿಷಯ. ಜೊತೆಗೆ ಪುರೋಹಿತರೂ ಕೆಲವು ಕರ್ಮಾಂಗಗಳನ್ನು ಮಾಡಿಸಲು (ಪಾರಾಯಣ, ಅಗ್ನಿಮುಖ ...ಇತ್ಯಾದಿ) ಗೃಹಸ್ಥನಾಗಿರಬೇಕೆಂದು ಹೇಳಲಾಗಿದೆ. ಹೀಗಾಗಿ ಸಹಜವಾಗಿಯೇ ನನ್ನ ತಂದೆಯವರು ನನಗೆ ವಧು ಅನ್ವೇಷಣೆಗಾಗಿ ಕಳೆದ ಏಳು ತಿಂಗಳಿಂದ ಇನ್ನಿಲ್ಲದಂತೆ ಸತತ ಪ್ರಯತ್ನ ನಡೆಸಿದರು. ಅವರಿಗೆ ಬಸರಿಕಟ್ಟೆ ಮತ್ತು ಶೃಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ತುಂಬಾ ತುಂಬಾ ಪರಿಚಯ ಇದೆ. ಅದರಲ್ಲಿ ಯಾರ ಯಾರ ಮನೆಯಲ್ಲಿ ಮದುವೆಯ ವಯಸ್ಸಿನ ಹೆಣ್ಣು ಇದಾರೆ ಎಂದು ಸ್ಪಷ್ಟವಾಗಿ ತಿಳಿದುಕೊಂಡೇ ನನ್ನ ತಂದೆ ಭೇಟಿ ನೀಡುತ್ತಿದ್ದರು.

ಎಲ್ಲೆಡೆಯೂ ಇದೇ ಪ್ರತಿಕ್ರಿಯೆ

ಎಲ್ಲೆಡೆಯೂ ಇದೇ ಪ್ರತಿಕ್ರಿಯೆ

ಅವರು ಹೋದಾಗ "ಬನ್ನಿ ಭಟ್ರೇ ತುಂಬಾ ಸಮಯ ಆಗಿತ್ತಲ್ಲಾ " ಎಂದು ಉಪಚರಿಸುತ್ತಿದ್ದರು. ಆಮೇಲೆ ನನ್ನ ತಂದೆ, "ಮಗನಿಗೆ ಮದುವೆಗೆ ಹೆಣ್ಣು ನೋಡುತ್ತಿದ್ದೇನೆ , ಜಾತಕ ಕೊಡುತ್ತೀರಾ? " ಎಂದಾಗ, "ಹೌದಾ , ನಿಮ್ಮ ಮಗ ಏನ್ ಮಾಡ್ಕೊಂಡಿರೋದು?" ಎಂದಾಗ ಇವರು, "ಪೌರೋಹಿತ್ಯ" ಎನ್ನುತ್ತಿದ್ದರು. ಕೂಡಲೇ ಅವರ ಸ್ವರವೇ ಬದಲಾಗಿ " ಪುರೋಹಿತರಾ? ಹ್ಙಾ...." ಎಂದು ದೀರ್ಘ ಉದ್ಗಾರ ತೆಗೆದು, ಕೆಲವರು "ನಮ್ಮ ಮಗಳಿಗೆ ಇನ್ನೆರಡು ವರ್ಷ ಮದುವೆ ಮಾಡಲ್ಲ" ಎಂದೂ (ಹಾಗೆ ಹೇಳಿದವರ ಮಗಳಿಗೆ ಆರು ತಿಂಗಳ ಒಳಗೆ ಮದುವೆಯಾಗಿದೆ), ಕೆಲವರು "ಅವಳು ಓದಿದ್ದಾಳೆ, ಪುರೋಹಿತರನ್ನು ಒಪ್ಪುವುದಿಲ್ಲ" ಎಂದೂ, (ಮಗಳು ಒಪ್ಪುತ್ತಾಳೋ ಇಲ್ಲವೊ, ಇವರಿಗೇ ಇಷ್ಟ ಇಲ್ಲ ಎಂದು ಗೊತ್ತಾಗುತ್ತದೆ) ಇನ್ನು ಕೆಲವರು "ನಾವು ಪುರೋಹಿತರಿಗೆಲ್ಲಾ ಕೊಡಲ್ಲ" ಎಂದೂ ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸುತ್ತಿದ್ದರು. ಇದು ಕೇವಲ ಒಂದೆರಡು ಕಡೆ ಮಾತ್ರ ಆಗಿರೋದಲ್ಲ, ಎಲ್ಲೆಡೆಯೂ ಇದೇ ಪ್ರತಿಕ್ರಿಯೆ. ಅದೇ ಒಂದು ವೇಳೆ ನಾನು ಸಿಟಿಯಲ್ಲಿ ನೌಕರಿಯಲ್ಲಿದ್ದರೆ ಖಂಡಿತವಾಗಿ ಒಪ್ಪಿಕೊಳ್ಳುತ್ತಿದ್ದರು. "ವರಾನ್ವೇಷಣೆಗೆ ಇವರ ಮಾನದಂಡ ಕೇವಲ ವೃತ್ತಿ ಮತ್ತು ಸ್ಥಳ ಮಾತ್ರ. "ಸದ್ಗುಣ, ವ್ಯಕ್ತಿತ್ವಕ್ಕೆ ಬೆಲೆಯೇ ಇಲ್ಲ.

ಒಂದು ಲಕ್ಷ ಕಮಿಷನ್ ಹಾಗೂ ಮದುವೆ ಖರ್ಚು

ಒಂದು ಲಕ್ಷ ಕಮಿಷನ್ ಹಾಗೂ ಮದುವೆ ಖರ್ಚು

ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ, ಬಹುತೇಕ ಬ್ರಹ್ಮಚಾರಿ ಗಳ ಸಮಸ್ಯೆ, ಕೆಲವು ಅದೃಷ್ಟವಂತರಿಗೆ ಮದುವೆ ಆಗಿದೆ, ಆದರೂ ಆಗದೇ ಉಳಿದವರ ಸಂಖ್ಯೆಯೂ ಬಹಳಷ್ಟಿದೆ. ಹೆಣ್ಣುಮಕ್ಕಳು ಒಂದು ವಿದ್ಯೆ ಓದಿದ್ದರೆ, ನಾವು ಓದಿರುವ ವಿದ್ಯೆಗೆ ಏನೂ ಬೆಲೆಯಿಲ್ಲವೇ?

ಹೋಗಲಿ, ಬ್ರೋಕರ್ ಗಳ ಹತ್ತಿರ "ಒಂದು ಲಕ್ಷ ಕಮಿಷನ್ ಕೊಡೋಣ, ಜೊತೆಗೆ ಮದುವೆ ಖರ್ಚನ್ನು ಹಾಕ್ಕೊಳ್ತೇವೆ " ಅಂದರೂ "ಪುರೋಹಿತರಿಗೆ ಬ್ರಾಹ್ಮಣ ಹುಡ್ಗೀರು ಸಿಗೋದು ಕಷ್ಟಾನೇ" ಎನ್ನುತ್ತಾರೆ. "ಬ್ರಾಹ್ಮಣರಲ್ಲಿ ಪುರೋಹಿತರನ್ನು ಕಾಲ ಕಸದಂತೆ ಕಾಣುತ್ತಾರೆ " ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಕೃಷಿಕರು ಮತ್ತು ಅಡುಗೆಯವರಿಗೂ ಇದೇ ಸ್ಥಿತಿ ಇದ್ದರೂ ಅವರಿಗೆ ಪ್ಯಾಂಟ್ ಹಾಕದಿರುವುದು, ಹೋಟೆಲ್ ಇತ್ಯಾದಿ ಹೊರಗಡೆ ಏನಾದರೂ ತಿನ್ನದಿರುವುದು ಮುಂತಾದ ನಿಯಮ ನಿಬಂಧನೆಗಳು ಇಲ್ಲದೇ ಮುಕ್ತವಾಗಿರುತ್ತಾರೆ. ಅಲ್ಲದೇ ಅಂತರ್ಜಾತೀಯ ವಿವಾಹಕ್ಕೂ ಅಂಥಾ ಸಮಸ್ಯೆಯಾಗುವುದಿಲ್ಲ. ಆದರೆ ಪುರೋಹಿತರ ಸ್ಥಿತಿ ಹಾಗಲ್ಲ.

ಮದುವೆ ಮಾಡಿಕೊಡಲು ಮಾತ್ರ ಪುರೋಹಿತರು ಬೇಡ

ಮದುವೆ ಮಾಡಿಕೊಡಲು ಮಾತ್ರ ಪುರೋಹಿತರು ಬೇಡ

ಎಲ್ಲರ ಮನೆಗೂ ನಾಮಕರಣದಿಂದ ಬೊಜ್ಜದವರೆಗೂ ಪುರೋಹಿತರು ಬೇಕು. ಆದರೆ ಹೆಣ್ಣು ಕೊಡಲು ಮಾತ್ರ ಬೇಡ. ವರನನ್ನು ಹುಡುಕಬೇಕಾದರೆ "ಕುಲಮಗ್ರೇ ಪರೀಕ್ಷೇತಾಮ್" ಎಂದಿದ್ದಾರೆ. ಆದರೆ ಈಗ ಕೇವಲ ಹುಡುಗನ ವೃತ್ತಿಯೊಂದೇ ಮುಖ್ಯ ಎನ್ನುವಂತಾಗಿ ಅನೇಕ ಸತ್ಕುಲ ಪ್ರಸೂತ, ಉತ್ತಮ ವ್ಯಕ್ತಿಗಳು ಒಂಟಿಯಾಗಿ ಬಾಳುವಂತಾಗಿರುವುದು ಸತ್ಯ. ದೊಡ್ಡ ಮನುಷ್ಯರೆನಿಕೊಂಡವರು ಕಾಲ ಮೇಲೆ ಕಾಲು ಹಾಕಿಕೊಂಡು, "ಪುರೋಹಿತರಾದವರು ಸರಿಯಾಗಿ ವೇದಾಧ್ಯಯನ ಮಾಡಿರಬೇಕು, ಹೊರಗೆ ಏನೂ ತಿನ್ನದಿರುವುದು ಇತ್ಯಾದಿ ನಿಯಮಗಳನ್ನು ಪಾಲಿಸಬೇಕು" ಮುಂತಾದ ಅನೇಕ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ ಅವರ ಮನೆಯ ಹೆಣ್ಣುಮಕ್ಕಳನ್ನು ಪುರೋಹಿತರಿಗೆ ಮದುವೆ ಮಾಡಿಕೊಡುತ್ತೀರಾ ಅಂತ ಕೇಳಿದರೆ ಅವರು ಆಡುವ ಮಾತುಗಳು ಕೇಳಿದರೆ ಮೈಯೆಲ್ಲಾ ಉರಿಯುತ್ತದೆ.

ಪುರೋಹಿತರೇ ಹೀಗೆ ಯೋಚಿಸುತ್ತಾರೆ

ಪುರೋಹಿತರೇ ಹೀಗೆ ಯೋಚಿಸುತ್ತಾರೆ

ಎಲ್ಲಕ್ಕಿಂತ ವಿಪರ್ಯಾಸವೆಂದರೆ ಪುರೋಹಿತರಾದವರೇ ಅವರ ಮಕ್ಕಳನ್ನು ಪುರೋಹಿತರಿಗೆ ಕೊಡಲು ಒಪ್ಪದಿರುವುದು. "ಅವಳು ಓದಿರೋದ್ರಿಂದ ಕೊಡಲ್ಲ" ಎನ್ನುತ್ತಾರೆ. ಅಲ್ಲಾ ಕಣ್ರೀ ಅವರು ಮದುವೆಯಾಗಿ ಸಂಸಾರ ಮಾಡಲು, ಮಗಳನ್ನು ಬೆಳೆಸಲು, ಓದಿಸಲು ಕೊನೆಗೆ ಅವಳ ಮದುವೆ ಮಾಡಲು ಪೌರೋಹಿತ್ಯದ ದುಡಿಮೆ ಆಗುತ್ತದೆ. ಆದರೆ ಪುರೋಹಿತರನ್ನು ಮದುವೆ ಆದರೆ ಅವಳು ಬದುಕಲು ಆಗುವುದಿಲ್ಲವೇ? ಅಂತಾ ಪುರೋಹಿತರು ಬೇರೆಯವರ ಮನೆಗೆ ಹೋದಾಗ "ವೇದಾಂತ, ಶಾಸ್ತ್ರ, ಅನುಷ್ಠಾನ "ಮುಂತಾಗಿ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾರೆ. ಅದೇ ಅವರಿಗೆ ಅಳಿಯನನ್ನು ಹುಡುಕುವಾಗ ಇವ್ಯಾವುದೂ ನೆನಪಾಗುವುದಿಲ್ಲವೇ? ಹುಡುಗ ಇಂಜಿನಿಯರ್ ಆಗಿದ್ದರೆ ಸರಿ, ಅವರು ಅನುಷ್ಠಾನ ಮಾಡುವುದಿರಲಿ, ಮೈಯಲ್ಲಿ ಜನಿವಾರ ಇರುವುದೇ ಖಾತರಿಯಿಲ್ಲ ‌(ಕಣ್ಣಾರೆ ನೋಡಿರೋದ್ರಿಂದ ಹೇಳ್ತಿರೋದು). ಇಂಥವರನ್ನು ನೋಡಿಯೇ, "ಹೇಳೋದು ಆಚಾರ, ತಿನ್ನೋದು ಬದನೆಕಾಯಿ " ಅಂತಾ ಹೇಳಿರೋದು. ನಾಚಿಕೆಯಾಗ್ಬೇಕು ಪುರೋಹಿತರಿಗೆ.

ಇನ್ನೂ ಕಾಯುವುದರಲ್ಲಿ ಅರ್ಥವಿದೆಯೇ?

ಇನ್ನೂ ಕಾಯುವುದರಲ್ಲಿ ಅರ್ಥವಿದೆಯೇ?

ನೀವು "ಅನಾಥಾಶ್ರಮದ ಹುಡ್ಗೀನ , ಅಥವಾ ಬೇರೆ ಜಾತಿಯ ಹುಡ್ಗೀರನ್ನು ದತ್ತು ಪದ್ಧತಿಯ ಪ್ರಕಾರ ಮದುವೆ ಆಗಬಾರದು " ಎನ್ನುವ ಸಲಹೆ ಕೊಡೋರು ಬೇಕಾದಷ್ಟಿದಾರೆ. ಅಲ್ಲಾ ಸ್ವಾಮಿ, "ಹುಟ್ಟಿದಾಗಿನಿಂದ ಮಡಿ, ಶಾಸ್ತ್ರ ನೋಡ್ಕೊಂಡು ಬೆಳೆದಿರೋ ಬ್ರಾಹ್ಮಣ ಹುಡ್ಗೀರೇ ಅದ್ನ ಬೇಡ ಅನ್ನುವಾಗ ಅದರ ಗಂಧ, ಗಾಳಿಯೇ ಗೊತ್ತಿಲ್ಲದವರು ಹೇಗೆ ಅದನ್ನು ಒಪ್ಪಿಕೊಳ್ತಾರೆ?" ಅದೂ ಅಲ್ದೆ "ಅನುಷ್ಠಾನ ಮಾಡುವವರಿಗೆ ಸಂಪ್ರದಾಯಸ್ಥ ಮನೆಯ ಸ್ವಜಾತೀಯ ಹೆಣ್ಣು ಅಗತ್ಯವಿದೆ. ಮೈಮೇಲೆ ಜನಿವಾರ ಇಲ್ಲದಿರುವವರು ಯಾವ ಜಾತಿಯವರನ್ನು ಮದುವೆಯಾದರೂ ನಡೆಯುತ್ತದೆ. ಆದರೆ ಅವರಿಗೆ ಹೆಣ್ಣು ಕೊಡುತ್ತಾರೆ, ಇವರಿಗೆ ಇಲ್ಲ. ಎಂಥ ವಿಪರ್ಯಾಸ ಅಲ್ಲವೇ? "ಇನ್ನೂ ಸ್ವಲ್ಪ ಕಾಯಬಹುದಿತ್ತು" ಎನ್ನುವವರಿದ್ದರೆ ಕೇಳಿ -"ನನಗೆ ಈಗ ಮೂವತ್ನಾಲ್ಕು ವರ್ಷ, ಇನ್ನೂ ಕಾಯುವುದರಲ್ಲಿ ಅರ್ಥವಿದೆಯೇ?" ಆದರೆ ನನಗೆ ವರ್ಷ ಜಾಸ್ತಿ ಆಯಿತೆಂದು ನನಗೆ ಹೆಣ್ಣು ಸಿಗದಿದ್ದುದಲ್ಲ (ಯಾರ ಮನೆಯಲ್ಲೂ ವಯಸ್ಸು ಕೇಳಲೇ ಇಲ್ಲ, ಪೌರೋಹಿತ್ಯ ಅಂದ ಕೂಡಲೇ ನಿರಾಕರಿಸಿದರು ಎಂದು ಸ್ಪಷ್ಟಪಡಿಸುತ್ತಿದ್ದೇನೆ).

ಹಳ್ಳಿಗಳಲ್ಲೂ ಎಲ್ಲ ಸೌಕರ್ಯವಿದೆ

ಹಳ್ಳಿಗಳಲ್ಲೂ ಎಲ್ಲ ಸೌಕರ್ಯವಿದೆ

ಹೆತ್ತವರಿಗೆ ತಮ್ಮ ಮಗಳು ಸುಖವಾಗಿರಬೇಕೆಂಬ ಆಸೆ ತಪ್ಪಲ್ಲ. ಆದರೆ ನೌಕರಿಯಲ್ಲಿರುವವರು, ಸಿಟಿಯಲ್ಲಿರುವವರಿಗೆ ಕೊಟ್ಟರೆ ಮಾತ್ರ ಅವರು ಸುಖವಾಗಿರುತ್ತಾರೆಂಬ ಭ್ರಮೆಯ ಭೂತ ಅವರಿಗೆ ಹಿಡಿದಿದೆ. ಈಗ ಹಳ್ಳಿಯಲ್ಲಿ ಮಣ್ಣು ನೆಲ, ಸೋಗೆಯ ಮಾಡು, ಉಫ್ ಎಂದು ಊದುವ ಒಲೆ, ಚಿಮಣಿ ದೀಪ, ಕಿ.ಮೀ. ಗಟ್ಟಲೆ ನಡೆದು ಆಮೇಲೆ ಬಸ್ ಪ್ರಯಾಣ ಇವೆಲ್ಲ ಎಲ್ಲಿವೆ ಈಗ? ಟೈಲ್ಸ್ ನೆಲ(ಸಿಮೆಂಟ್), ತಾರಸಿ ಅಥವಾ ಹೆಂಚಿನ ಮಾಡು, ಗ್ಯಾಸ್ ಸ್ಟವ್, ವಿದ್ಯುತ್ (ಇನ್ ವರ್ಟರ್, ಸೋಲಾರ್ ಸಹ), ಮಿಕ್ಸಿ, ಗ್ರೈಂಡರ್, ವಾಷಿಂಗ್ ಮಷಿನ್ , ವಾಹನ ಸೌಕರ್ಯ ಇತ್ಯಾದಿ ಎಲ್ಲಾ ಸೌಲಭ್ಯಗಳು ಇವೆ. ಹಳ್ಳಿಯ ಪರಿಸ್ಥಿತಿ ಎಂಬತ್ತು ಪರ್ಸೆಂಟ್ ಬದಲಾಗಿದ್ದರೂ ಸಹ ಕೆಲವರ ಮನಸ್ಥಿತಿ ಬದಲಾಗಿಲ್ಲ. ಮೇಲೆ ಹೇಳಿದ ಅಷ್ಟೂ ಸೌಕರ್ಯಗಳಿದ್ದರೂ ಈಗಲೂ ಹಳ್ಳಿ ಅಂದರೆ ಕಷ್ಟ ಅಂತಾನೇ ಅನ್ನೋದು ಅವರು. ಹಿಂದೆ ಕನ್ಯಾಪಿತೃಗಳನ್ನು ಮೊದಲ ಒಂದೊಂದು ಅಕ್ಷರಗಳನ್ನು ಮಾತ್ರ ಬಳಸಿ "ಕಪಿ" ಗಳೆನ್ನುತ್ತಿದ್ದರು. ಆದರೆ ಈಗ ಅವರು ಮಾತನಾಡುವುದನ್ನು ಕೇಳಿದರೆ ನಿಜವಾಗಿಯೂ ಅವರು "ಕಪಿ"ಗಳಾಗಿದ್ದಾರೆ ಎನಿಸುತ್ತದೆ.

ವೃದ್ಧ ತಂದೆ-ತಾಯಿಗಳ ಬಗ್ಗೆ ಯೋಚಿಸಿ

ವೃದ್ಧ ತಂದೆ-ತಾಯಿಗಳ ಬಗ್ಗೆ ಯೋಚಿಸಿ

ಬ್ರಾಹ್ಮಣ ಆದವನು ವೇದ, ಶಾಸ್ತ್ರ ಅನುಷ್ಠಾನಕ್ಕೆ ಮೊದಲ ಪ್ರಾಶಸ್ತ್ಯ. ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಎರಡನೆಯ, ಮತ್ತು ಹಣ, ಆಸ್ತಿ , ಸಂಪತ್ತಿಗೆ ಕೊನೆಯ ಪ್ರಾಶಸ್ತ್ಯವನ್ನೂ ನೀಡಬೇಕು. ಆದರೆ ಈಗ ಕೊನೆಯ ಹಾಗೂ ಮೊದಲ ಸ್ಥಾನ ಉಲ್ಟಾ ಮಾಡಿರುವುದೇ ಅನರ್ಥಕ್ಕೆ ಕಾರಣವಾಗಿದೆ. ಹುಡುಗರ ವಿಷಯ ಹಾಗಿರಲಿ, ಅವರ ವೃದ್ಧ ತಂದೆ-ತಾಯಿಗಳ ಬಗ್ಗೆ ಯೋಚಿಸಿ, "ಮಗನಿಗೆ ಮದುವೆ ಮಾಡಲಾಗಲಿಲ್ಲ, ಮೊಮ್ಮಕ್ಕಳನ್ನು ನೋಡುವುದಕ್ಕೂ ಇಲ್ಲ" ಎಂದು ಅವರು ಸುರಿಸುವ ಕಣ್ಣೀರಿಗೂ ಕೊನೆಯಿಲ್ಲ. ನಾನು ದುಡುಕಿ ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಇಷ್ಟು ವರ್ಷ ಕಾದು, ಎಲ್ಲಾ ಪ್ರಯತ್ನ ಗಳನ್ನು ಮಾಡಿ, " ಬ್ರಾಹ್ಮಣ ಸಮುದಾಯದಲ್ಲಿ ಪುರೋಹಿತರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ" ಎಂಬ ಸತ್ಯದ ಅರಿವಾಗಿ, ಅತ್ಯಂತ ದುಃಖ ಮತ್ತು ಖೇದದಿಂದ ಈ ವೃತ್ತಿ ಯನ್ನು ಬಿಡುತ್ತಿದ್ದೇನೆ. (ಹಣ, ಆಸ್ತಿ, ಸೈಟು, ಮನೆ, ಲಕ್ಷುರಿ ಕಾರು ಮುಂತಾದ ವಿಷಯ ಕ್ಕಾಗಿ ನಾನು ಇದನ್ನು ಬಿಡುವುದಾಗಿದ್ದರೆ ತಪ್ಪಾಗುತ್ತಿತ್ತು). ಈ ಲೇಖನವನ್ನು ಓದಿ, ಅನೇಕರು ನನ್ನ ಮೇಲೆ ಕಿಡಿ ಕಾರುತ್ತಾರೆ. ಆದರೆ ಮೇಲೆ ಬರೆದಿರುವುದರಲ್ಲಿ ಏನಾದರೂ ಸುಳ್ಳಿದ್ದರೆ ಹೇಳಲಿ ನೋಡೋಣ. ಹೆಣ್ಣುಮಕ್ಕಳ ಬಗ್ಗೆ ಬರೆಯಲು ಬೇಕಾದಷ್ಟು ಜನರಿದ್ದಾರೆ. ಆದರೆ ಹುಡುಗರ ಕಷ್ಟ ದ ಬಗ್ಗೆ ಯಾರೂ ಬರೆಯುವುದಿಲ್ಲ..

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Raghavendra Bhat Nerale, 34 year old Brahmin youth recently left priest profession. Why he took such decision revealed in face book. Here is the story behind his decision.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more