
ಕಟ್ ಕಟ್... ಪವರ್ ಕಟ್ ಅಲ್ಲ ವಿದ್ಯುತ್ ಬಿಲ್ ಕಟ್ ಮಾಡಿ
ನಮ್ಮ ಮಾಸಿಕ ಅನಿವಾರ್ಯತೆಗಳಲ್ಲಿ ವಿದ್ಯುತ್ ಬಿಲ್ ಕೂಡ ಒಂದು. ನಗರದಲ್ಲಿ ಒಂದು ಸಣ್ಣ ಕುಟುಂಬದೊಂದಿಗೆ ವಾಸಿಸುತ್ತಿದ್ದೀರೆಂದರೂ ಪ್ರತೀ ತಿಂಗಳು ನಿಮಗೆ 500 ರೂಪಾಯಿಯಿಂದ 3000 ರೂ ವರೆಗೂ ವಿದ್ಯುತ್ ಬಿಲ್ ಬರುತ್ತದೆ.
ಲೈಟ್, ಟಿವಿ, ಫ್ರಿಜ್, ಫ್ಯಾನ್, ವಾಷಿಂಗ್ ಮೆಷೀನ್, ಮೈಕ್ರೋ ಓವನ್, ಗೀಸರ್/ಹೀಟರ್, ಕಂಪ್ಯೂಟರ್/ಲ್ಯಾಪ್ ಟಾಪ್ ಈ ವಸ್ತುಗಳು ಬಹುತೇಕ ಎಲ್ಲಾ ಕುಟುಂಬಗಳಿಗೂ ಅನಿವಾರ್ಯವಾಗಿದೆ. ಇನ್ನೂ ಕೆಲವರಿಗೆ ಎಸಿ ಬೇರೆ ಇರುತ್ತದೆ.
ವಿದ್ಯುತ್ ಮಸೂದೆಗೆ ಯಾಕೆ ವಿರೋಧ? ರೈತರು, ಜನಸಾಮಾನ್ಯರ ಆತಂಕವೇನು?
ಇಷ್ಟೆಲ್ಲಾ ಸಾಧನಗಳನ್ನು ಉಪಯೋಗಿಸಿದಾಗ ವಿದ್ಯುತ್ ಬಿಲ್ ಐದು ಸಾವಿರ ಬಂದರೂ ಅಚ್ಚರಿ ಇಲ್ಲ. ಈ ಬಹುತೇಕ ಸಾಧನಗಳು ಇಂದಿನ ಬದುಕಿಗೆ ಅನಿವಾರ್ಯವಾದಂತೆ ಆಗಿವೆ. ಈ ಅನಿವಾರ್ಯತೆಗಳೊಂದಿಗೆ ಇದ್ದು ಉಳಿತಾಯ ಮಾಡುವುದು ನಮ್ಮ ಗುರಿಯಾಗಬೇಕು ಅಷ್ಟೇ.
ನಾವು ಈ ಮೇಲಿನ ಸಾಧನಗಳನ್ನು ಸರಿಯಾಗಿ ನಿರ್ವಹಿಸಿದರೆ ವಿದ್ಯುತ್ ಬಿಲ್‌ನಲ್ಲಿ ಬಹಳಷ್ಟು ಉಳಿತಾಯ ಮಾಡಲು ಸಾಧ್ಯವಿದೆ. ವಿದ್ಯುತ್ ಉಳಿತಾಯವಾದರೆ ನಮಗೆ ಹಣದ ಉಳಿತಾಯದ ಜೊತೆಗೆ ದೇಶದ ಭಾರವೂ ತಗ್ಗಿದಂತಾಗುತ್ತದೆ. ಇದೊಂದು ರೀತಿಯಲ್ಲಿ ಸ್ವಾಮಿ ಕಾರ್ಯ ಸ್ವಕಾರ್ಯದ ರೀತಿಯಂತೆ.

ಸೌರಶಕ್ತಿ
ಸಾಧ್ಯವಾದರೆ ನಿಮ್ಮ ಮನೆಗೆ ಸೌರಶಕ್ತಿ ವಿದ್ಯುತ್ ಅಳವಡಿಸಿಕೊಳ್ಳಿ. ಇದರಿಂದ ವಿದ್ಯುತ್ ಬಿಲ್‌ನಲ್ಲಿ ಬಹಳಷ್ಟು ಹಣವನ್ನು ಉಳಿತಾಯ ಮಾಡಬಹುದು.
ಸೌರ ವಿದ್ಯುತ್ ಅಳವಡಿಕೆಗೆ ಮನೆಯ ಛಾವಣಿಯಲ್ಲಿ ಸೂಕ್ತ ಸ್ಥಳಾವಕಾಶ ಇರಬೇಕು. ಅದರ ಅಳವಡಿಕೆಗೆ ಕನಿಷ್ಠ 20 ಸಾವಿರ ರೂ ವೆಚ್ಚವಾಗುತ್ತದೆ. ಅದರೆ, ಅದಕ್ಕೆ ನೀವು ಮಾಡುವ ವೆಚ್ಚದ ಹಣವನ್ನು ವಿದ್ಯುತ್ ಬಿಲ್ ಕಡಿತದ ಮೂಲಕ ಬೇಗನೇ ಹಿಂಪಡೆಯಬಹುದು.
ಬೆಂಗಳೂರಿನಂಥ ನಗರಗಳಲ್ಲಿ ಸೂರ್ಯನ ಬಿಸಿಲಿಗೇನು ಬರ ಇಲ್ಲ. ವರ್ಷದಲ್ಲಿ 300 ದಿನಗಳೂ ಸೂರ್ಯ ನೆತ್ತಿ ಮೇಲೆ ನಿಂತು ಸುಡುತ್ತಾನೆ. ನೀವು ವರ್ಷವಿಡೀ ನಿಮ್ಮ ದೈನಂದಿನ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದಲೇ ಪಡೆಯಬಹುದು. ಹೀಗಾಗಿ, ಎಲೆಕ್ಟ್ರಿಸಿಟಿ ಬಿಲ್ ತಪ್ಪಿಸಲು ಇರುವ ಪ್ರಮುಖ ಅಸ್ತ್ರ ಸೌರಶಕ್ತಿ.

ಲೈಟಿಂಗ್
ಸೌರಶಕ್ತಿ ಅಳವಡಿಸಲು ಆಗದಿದ್ದಲ್ಲಿ ವಿದ್ಯುತ್ ಉಳಿತಾಯಕ್ಕೆ ಬೇರೆ ಮಾರ್ಗಗಳನ್ನು ಅನುಸರಿಸಬಹುದು. ನಾವು ಅತಿಹೆಚ್ಚು ಬಳಸುವ ಎಲೆಕ್ಟ್ರಿಕ್ ಉತ್ಪನ್ನಗಳಲ್ಲಿ ವಿದ್ಯುತ್ ದೀಪವೂ ಒಂದು. ಇದು ಹೆಚ್ಚೇನೂ ವಿದ್ಯುಚ್ಛಕ್ತಿ ಎಳೆಯದಿದ್ದರೂ ಹೆಚ್ಚು ಬಳಕೆಯಾಗುವುದರಿಂದ ಗಂಭೀರವಾಗಿ ಪರಿಗಣಿಸಬಹುದು.
ಈಗಂತೂ ಲೈಟ್ ಬಲ್ಬ್‌ಗಳ ಕಾಲ ಬಹುತೇಕ ಮುಗಿದಿದೆ. ಎಲ್‌ಇಡಿ ಲೈಟಿಂಗ್ ಟ್ರೆಂಡಿಂಗ್‌ನಲ್ಲಿದೆ. ಎಲ್‌ಇಡಿ ಲೈಟ್‌ಗಳು, ಸಿಎಫ್‌ಎಲ್ ಬಲ್ಬ್‌ಗಳು ಅತಿಕಡಿಮೆ ವಿದ್ಯುತ್ ಬಳಸುತ್ತವೆ.
ಹಾಗೆಯೇ, ಅನಗತ್ಯವಾಗಿ ಲೈಟ್‌ಗಳನ್ನು ಆನ್‌ನಲ್ಲಿ ಇಡಬೇಡಿ. ಸಾಧ್ಯವಾದರೆ ಮನೆಯೊಳಗೆ ಲೈಟ್‌ಗಳನ್ನು ಆಟೊಮ್ಯಾಟಿಕ್ ಅಗಿ ಆನ್ ಆಫ್ ಮಾಡುವ ಸೆನ್ಸಾರ್‌ಗಳನ್ನು ಅಳವಡಿಸಿ.
ನೀವು ಒಬ್ಬರೇ ಕೋಣೆಯಲ್ಲಿ ಓದುತ್ತಿದ್ದರೆ, ಇಡೀ ರೂಮಿನ ಲೈಟ್ ಆನ್ ಮಾಡುವ ಬದಲು ರೀಡಿಂಗ್ ಲ್ಯಾಂಪ್ ಮಾತ್ರ ಆನ್ ಮಾಡಿ. ಇದರಿಂದ ಅನಗತ್ಯ ಲೈಟಿಂಗ್ ತಪ್ಪುತ್ತದೆ.
ನಿಮ್ಮ ವಿದ್ಯುತ್ ದೀಪಗಳ ಮೇಲೆ ಕೂತಿರುವ ಧೂಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಿ. ಧೂಳಿದ್ದರೆ ಶೇ. 50ರಷ್ಟು ಬೆಳಕು ಮಬ್ಬಾಗುತ್ತದೆ.

ರೆಫ್ರಿಜರೇಟರುಗಳು
ನಿಮ್ಮ ಮನೆಯಲ್ಲಿ ಹೆಚ್ಚು ಗಾಳಿಯಾಡುವ ಜಾಗದಲ್ಲಿ ರೆಫ್ರಿಜರೇಟರುಗಳನ್ನು ಇರಿಸಿ. ಸೂರ್ಯನ ಬಿಸಿಲು, ಅಡುಗೆ ಸ್ಟೋವ್ ಇತ್ಯಾದಿ ಬಿಸಿ ವಸ್ತುಗಳ ಬಳಿ ಫ್ರಿಜ್ ಇರಿಸಬೇಡಿ. ಫ್ರಿಜ್ ಡೋರ್ ಹೆಚ್ಚು ಹೊತ್ತು ತೆಗೆದುಬಿಡಬೇಡಿ.
ನೀವು ಫ್ರಿಜ್‌ನಲ್ಲಿ ಬಿಸಿ ಪದಾರ್ಥಗಳನ್ನು ಇರಿಸುವ ಮುನ್ನ ಬಿಸಿ ಆರಲು ಬಿಡಿ. ಫ್ರಿಜ್‌ನ ಕಾಯಿಲ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಿ.

ಟಿವಿ, ಗೀಸರ್ ಹುಷಾರ್
ನಮ್ಮಲ್ಲಿ ಅನೇಕರಿಗೆ ಟಿವಿ ಆನ್ ಮಾಡಿ ಅದನ್ನು ಹಾಗೇ ಬಿಟ್ಟುಬಿಡುವ ಚಾಳಿ ಇರುತ್ತದೆ. ಟಿವಿ ಅದರ ಪಾಡಿಗೆ ಅದು ಓಡುತ್ತಿರುತ್ತದೆ, ನಾವು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೇವೆ. ಕಂಪ್ಯೂಟರುಗಳ ವಿಚಾರದಲ್ಲೂ ಅಷ್ಟೇ. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇಡೀ ದಿನ ಆನ್ ಆಗಿಯೇ ಇರುತ್ತದೆ.
ಇನ್ನು ಅತಿ ಹೆಚ್ಚು ವಿದ್ಯುತ್ ಎಳೆಯುವ ಉಪಕರಣಗಳಲ್ಲಿ ಗೀಸರ್, ಎಸಿ ಪ್ರಮುಖವಾದುದು. ಬಿಸಿನೀರಿನ ಸ್ನಾನಕ್ಕೆ ಗೀಸರ್ ಅಗತ್ಯ. ಆದರೆ, ಸ್ನಾನ ಮಾಡುವ ಒಂದು ಗಂಟೆ ಮುಂಚೆಯೇ ಬಿಸಿ ನೀರು ಬಿಡುವ ಪ್ರವೃತ್ತಿ ಬಿಟ್ಟುಬಿಡಿ. ನೀವು ಸ್ನಾನಕ್ಕೆ ಹೋಗುವ ಸ್ವಲ್ಪ ಮುಂಚೆ ನೀರು ಬಿಟ್ಟರೂ ಸಾಕು. ಹಾಗೆಯೇ ಸ್ನಾನವಾದ ಕೂಡಲೇ ಗೀಸರ್ ಆಫ್ ಮಾಡುವುದನ್ನು ಮರೆಯದಿರಿ.
ಎಸಿ ವಿಚಾರದಲ್ಲೂ ಅಷ್ಟೇ. ನೀವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮತ್ತು ಅನಗತ್ಯ ಎನಿಸಿದ ಸಮಯದಲ್ಲಿ ಎಸಿಯನ್ನು ಆಫ್ ಮಾಡುವುದನ್ನು ರೂಢಿಸಿಕೊಳ್ಳಿ.
ಅಡುಗೆಗೆ ನೀವು ಎಲೆಕ್ಟ್ರಿಕ್ ಸ್ಟೋವ್ ಉಪಯೋಗಿಸುತ್ತಿದ್ದರೆ, ಮೈಕ್ರೋವೇವ್ ಓವನ್ ಬಳಸುವುದು ಹೆಚ್ಚು ಉಪಯುಕ್ತ. ಈ ಎಲ್ಲಾ ಟಿಪ್ಸ್ ಅನುಸರಿಸಿದರೆ ಬಹಳಷ್ಟು ವಿದ್ಯುತ್ ಅನ್ನು ಉಳಿಸಬಹುದು.
(ಒನ್ಇಂಡಿಯಾ ಸುದ್ದಿ)