ಸ್ವಚ್ಛತೆಗೆ ಮಾದರಿಯಾದ ಉಡುಪಿ ಜಿಲ್ಲಾಧಿಕಾರಿ ವಸತಿಗೃಹ
ಉಡುಪಿ ಜಿಲ್ಲಾಧಿಕಾರಿಗಳ ವಸತಿ ಗೃಹದ ಆವರಣದಲ್ಲಿ ಬೀಳುವ ಒಣಕಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರ ವಸತಿ ಗೃಹ ಸ್ವಚ್ಛತೆಗೆ ಮಾದರಿಯಾಗಿದೆ. ವಿನೂತನ ಕಾಂಪೋಸ್ಟ್ ಬೆಡ್ ನಿರ್ಮಾಣದ ಮೂಲಕ ವಿನೂತನ ಸ್ವಚ್ಛತಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಗೆ ಜಿಲ್ಲಾಧಿಕಾರಿಗಳ ವಸತಿಗೃಹ ಸಾಕ್ಷಿಯಾಗಿದೆ.
ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಉಡುಪಿಯದ್ದು. ಈಗ ಜಿಲ್ಲೆಯು ಮತ್ತೊಂದು ವಿನೂತನ ಸ್ವಚ್ಛತಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದೆ. ಇಂತಹ ಯೋಜನೆಯನ್ನು ಜಿಲ್ಲಾಧಿಕಾರಿಗಳ ವಸತಿಗೃಹದ ಮೂಲಕವೇ ಪಾರಂಭಿಸಲಾಗಿದೆ.
ಡ್ರೈ ಲೀವ್ಸ್ ಕಾಂಪೋಸ್ಟ್ ಬೆಡ್; ಜಿಲ್ಲಾಧಿಕಾರಿಗಳ ವಸತಿ ಗೃಹದ ಆವರಣದಲ್ಲಿ ಬೀಳುವ ಒಣಕಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ವಸತಿಗೃಹದಲ್ಲಿನ ಕೈ ತೋಟದ ಒಣ ಹುಲ್ಲು, ತೋಟದ ಗಿಡಗಳಿಂದ ಬೀಳುವ ಗಿಡದ ಎಲೆಗಳು, ಮರದ ಮೇಲಿಂದ ಬಿದ್ದ ಒಣ ಎಲೆಗಳನ್ನು ಒಟ್ಟುಗೂಡಿಸಿ, 'ಡ್ರೈ ಲೀವ್ಸ್ ಕಂಪೋಸ್ಟ್ ಬೆಡ್' ನಿರ್ಮಿಸಲಾಗಿದೆ.

ಕಾಪೌಂಡ್‌ನಲ್ಲಿ ಸಂಗ್ರಹಿಸಲಾದ ಎಲೆ ಮತ್ತು ಹುಲ್ಲನ್ನು ಸಗಣಿಯೊಂದಿಗೆ ಮಿಶ್ರಣ ಮಾಡಿ, 10*6 ಅಳತೆಯ ಬೆಡ್ ಮಾದರಿಯಲ್ಲಿ ಜೋಡಿಸಲಾಗಿದೆ, ಗೋಣಿಚೀಲದ ಹೊದಿಕೆ ಹಾಕಲಾಗಿದೆ. ಪ್ರತಿ ದಿನ ದಿನ ಈ ಬೆಡ್ ಮೇಲೆ ನೀರಿನ ಸಿಂಪಡಣೆ ಮಾಡಬೇಕಿದ್ದು, ಇದು 45 ದಿನಗಳ ಬಳಿಕ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಗೊಳ್ಳಲಿದೆ.
ಈ ಗೊಬ್ಬರವನ್ನು ಕೈ ತೋಟದಲ್ಲಿನ ಗಿಡಗಳಿಗೆ ಬಳಸಬಹುದು ಅಥವಾ ಅದೇ ಗೊಬ್ಬರದ ಬೆಡ್‌ನಲ್ಲಿ ಬೀಜಗಳನ್ನು ನಡೆವ ಮೂಲಕ ಗಿಡಗಳನ್ನು ಬೆಳಸಲು ಸಾಧ್ಯವಾಗಲಿದೆ. ಈ ಯೋಜನೆಯಿಂದಾಗಿ ಮನೆಯ ಆವರಣವು ಕಸದಿಂದ ಮುಕ್ತವಾಗಿ ಸ್ವಚ್ಛತೆಯಿಂದ ಕಂಗೊಳಿಸಲಿದೆ.
ಜಿಲ್ಲಾಧಿಕಾರಿಗಳ ಮಾತು; ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಈ ಕುರಿತು ಮಾತನಾಡಿ, "ಮನೆಯ ಆವರಣದಲ್ಲಿ ಬೀಳುತಿದ್ದ ಒಣಕಸವನ್ನು ಸಂಪನ್ಮೂಲವಾಗಿ ಬಳಕೆ ಮಾಡಬಹುದು ಎಂಬುದಕ್ಕೆ ಡ್ರೈ ಲೀವ್ಸ್ ಕಾಂಪೋಸ್ಟ್ ಬೆಡ್ ಮಾದರಿಯಾಗಿದೆ. ಸಾರ್ವಜನಿಕರೂ ಸಹ ತಮ್ಮ ಮನೆಗಳ ಆವರಣದಲ್ಲಿ ಬೀಳುವ ಒಣ ಕಸವನ್ನು ಸುಡುವುದು ಅಥವಾ ಬಿಸಾಡುವುದು ಮಾಡದೇ ಈ ರೀತಿಯಾಗಿ ವ್ಯವಸ್ಥಿತವಾಗಿ ಮರು ಬಳಕೆ ಮಾಡಿಕೊಳ್ಳಬಹುದಾಗಿದೆ" ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿನ ಹಸಿ ಕಸ ನಿರ್ವಹಣೆಗೆ ಡ್ರಮ್ ಕಾಂಪೋಸ್ಟ್ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಸ್ತುತ ಒಣ ಕಸ ನಿರ್ವಹಣೆ ಸಹ ಯಶಸ್ವಿಯಾಗಿ ಅನುಷ್ಠಾನಗೊಳ್ಳುವ ಮೂಲಕ ಮಾದರಿ ವಸತಿಗೃಹವಾಗಿ ಪರಿವರ್ತನೆಯಾಗಿದೆ.
ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಹೆಚ್. ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರ ನಿವಾಸದ ಕೈ ತೋಟದಲ್ಲಿ SLRM ಸ್ವಚ್ಛತಾ ಕಾರ್ಯಕರ್ತರು ಈ ವಿನೂತನ ಕಾಂಪೋಸ್ಟ್ ಬೆಡ್ ನಿರ್ಮಾಣ ಮಾಡಿದ್ದಾರೆ. ಈ ಮಾದರಿ ಬಗ್ಗೆ SLRMನ ಸ್ವಚ್ಛತಾ ಕಾರ್ಯಕರ್ತರು ವೆಲ್ಲೊರ್ ಶ್ರೀನಿವಾಸನ್ ಬಳಿ ತರಬೇತಿ ಪಡೆದಿರುತ್ತಾರೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕ ರಘುನಾಥ್ ಮಾರ್ಗದರ್ಶನ ನೀಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಹೆಚ್. ಮಾತನಾಡಿ, "ಸಾರ್ವಜನಿಕರು ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಜಿಲ್ಲೆಯ SLRMನ ಸ್ವಚ್ಛತಾ ಕಾರ್ಯಕರ್ತರ ನೆರವು ಪಡೆಯಬಹುದಾಗಿದೆ" ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಈಗಾಗಲೇ ಹಲವು ವಿಧಾನಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ವಿನೂತನ ಡ್ರೈ ಲೀವ್ಸ್ ಕಾಂಪೋಸ್ಟ್ ಬೆಡ್ ಮಾದರಿಯನ್ನು ಸರಕಾರಿ ಅಧಿಕಾರಿಗಳ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಸಾರ್ವಜನಿಕರಿಗೆ ಪ್ರೇರಣೆ ನೀಡಬೇಕು ಎನ್ನುವ ಉದ್ದೇಶದಿಂದ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಸತಿಗೃಹದಲ್ಲೇ ಪ್ರಥಮವಾಗಿ ಅಳವಡಿಸಲಾಗಿದೆ.












Click it and Unblock the Notifications