ಡಿಎಂಕೆ ಸಚಿವನ ಬಂಧನಕ್ಕೂ ಡಿಕೆಶಿ ಕೇಸಿಗೂ ಸಾಮ್ಯತೆ? ಸ್ಟಾಲಿನ್ ಸರ್ಕಾರದ ಬುಡ ಅಲುಗಾಡಿಸಿದ ಇಡಿ ದಾಳಿ!
ಕೇಂದ್ರ ತನಿಖಾ ದಳಗಳಾದ ಇಡಿ, ಸಿಬಿಐ, ಐಟಿ ಮುಂತಾದವು ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಗಳು, ಅದರ ಕೆಲಸಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹಲವು ಬಾರಿ ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ತಮಿಳುನಾಡಿನಲ್ಲಿ ಮಂಗಳವಾರ (ಜೂನ್ 13) ತಡರಾತ್ರಿ ನಡೆದ ಬೆಳವಣಿಗೆ ಇದಕ್ಕೆ ಇನ್ನೊಂದು ಉದಾಹರಣೆಯಾಗಬಲ್ಲದು.
ತಮಿಳುನಾಡಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಪವರ್ ಫುಲ್ ಮಿನಿಸ್ಟರ್, ಇಂಧನ (ವಿದ್ಯುತ್) ಸಚಿವರೂ ಆಗಿರುವ ಸೆಂಥಿಲ್ ಬಾಲಾಜಿಯವರನ್ನು ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ತಡರಾತ್ರಿ ಬಂಧಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಕಚೇರಿಯ ಸೆಕ್ರೆಟರಿಯೇಟ್ ನಿಂದ ಮಂತ್ರಿಗಳೊಬ್ಬರನ್ನು ಬಂಧಿಸಿರುವುದು ಇದೇ ಮೊದಲು.

ಸೆಂಥಿಲ್ ಬಾಲಾಜಿ (Senthil Balaji) ಕೇಸಿಗೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರಿಸುತ್ತಿರುವ ಹಲವು ಕೇಸಿಗೂ ಒಂದು ರೀತಿಯಲ್ಲಿ ಸಾಮ್ಯತೆಯಿದೆ. ಇಬ್ಬರೂ ತಮ್ಮತಮ್ಮ ರಾಜ್ಯದಲ್ಲಿ ಪ್ರಭಾವೀಗಳು. ಈ ಎರಡೂ ವಿಚಾರದಲ್ಲಿ ಬಿಜೆಪಿಯ ರಾಜಕೀಯ ಕರಿನೆರಳಿನ ಛಾಯೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ, ಡಿಕೆಶಿ ಹೇಳಿದಂತೆ, ಬಿಜೆಪಿಗೆ ಸೇರಲು ಬಹಳಷ್ಟು ಒತ್ತಡಗಳಿದ್ದವು. ಅದು ಆಗದೇ ಇದ್ದಾಗ, ತನಿಖಾ ಸಂಸ್ಥೆಗಳು ಚುರುಕಾದವು.
ಎರಡನೇ ಪ್ರಭಾವಿ ಸಚಿವರಾಗಿ ಬೆಳೆದವರು ಸೆಂಥಿಲ್ ಬಾಲಾಜಿ
ಇನ್ನೊಂದು ಕಡೆ ತಮಿಳುನಾಡು ಸರ್ಕಾರದಲ್ಲಿ ಸಿಎಂ ಸ್ಟಾಲಿನ್ ನಂತರ ಅನಧಿಕೃತವಾಗಿ ಎರಡನೇ ಪ್ರಭಾವಿ ಸಚಿವರಾಗಿ ಬೆಳೆದವರು ಸೆಂಥಿಲ್ ಬಾಲಾಜಿ. ಇವರು ಮೂಲತಃ ಡಿಎಂಕೆಯವರಲ್ಲ. ಸಿಎಂ ಜಯಲಲಿತಾ ನಿಧನದ ನಂತರ ಎಐಡಿಎಂಕೆ ತೊರೆದು ಡಿಎಂಕೆ ಸೇರಿದವರು. ಪಶ್ಚಿಮ ತಮಿಳುನಾಡು (ಈರೋಡ್, ಕೊಯಂಬತ್ತೂರು, ತಿರುಪ್ಪುರ್, ನೀಲಗಿರೀಸ್ ಜಿಲ್ಲೆ) ಭಾಗದಲ್ಲಿ ಸೆಂಥಿಲ್ ಹವಾ ಜೋರಾಗಿಯೇ ಇದೆ.
ಎಐಎಡಿಎಂಕೆ ಮತ್ತು ಬಿಜೆಪಿಗೆ ಮುಳುವಾಗುತ್ತಾರೆ ಎನ್ನುವ ಭಯ
ಈ ಭಾಗದಲ್ಲಿ ಸೆಂಥಿಲ್ ಬಾಲಾಜಿ ಎಐಎಡಿಎಂಕೆ ಮತ್ತು ಬಿಜೆಪಿಗೆ ಮುಳುವಾಗುತ್ತಾರೆ ಎನ್ನುವ ಭಯಕ್ಕಾಗಿ ಇವರನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ತಮಿಳುನಾಡಿನ ಪ್ರಭಾವೀ ಮುಖಂಡರ ಮೂಲಕ ಬಿಜೆಪಿಯ ಹೈಕಮಾಂಡ್ ಮಾಡಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಇಬ್ಬಾಗಗೊಳಿಸಿ ಏಕನಾಥ್ ಶಿಂಧೆಯ ಮೂಲಕ ಬಿಜೆಪಿ ಹೇಗೆ ರಾಜಕೀಯ ಮೇಲಾಟ ನಡೆಸಿತ್ತೋ, ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಮಾಡಲು ಹೊರಟಿದೆ ಎಂದು ಹೇಳಲಾಗುತ್ತಿದೆ.

ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಆಟ
ಆದರೆ, ಬಿಜೆಪಿಯ ಯಾವುದೇ ಆಮಿಷಕ್ಕೆ ಸೆಂಥಿಲ್ ಬಾಲಾಜಿ ಮರುಳಾಗದೇ ಇದ್ದಾಗ ಬಿಜೆಪಿಯ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಆಟ ಶುರು ಮಾಡಿತು ಎನ್ನುವುದು ಡಿಎಂಕೆಯ ಸಚಿವರು/ಮುಖಂಡರು ಮಾಡುತ್ತಿರುವ ಆರೋಪ. ಕರ್ನಾಟಕ ಕಾಂಗ್ರೆಸ್ಸಿಗೆ ಡಿ.ಕೆ.ಶಿವಕುಮಾರ್ ಹೇಗೆ ಉತ್ತಮ ಚುನಾವಣಾ ತಂತ್ರಗಾರರೋ ಅದೇ ರೀತಿ ಸಿಎಂ ಸ್ಟಾಲಿನ್ ಗೆ ಸೆಂಥಿಲ್ ಬಾಲಾಜಿ.
ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಎನ್ನುವುದು ಇಲ್ಲ
ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಎನ್ನುವುದು ಇಲ್ಲ, ಸ್ಥಳೀಯ ಪಕ್ಷಗಳ ಜೊತೆ ಕೈಜೋಡಿಸಿ 2024ರ ಲೋಕಸಭಾ ಚುನಾವಣೆಗೆ ಸಿದ್ದವಾಗಬೇಕಿದೆ. ಹಾಗಾಗಿ, ಸೆಂಥಿಲ್ ಬಾಲಾಜಿ ಮೂಲಕ ಹೊಸ ಗೇಂ ಪ್ಲ್ಯಾನ್ ಆಡಲು ಬಿಜೆಪಿ ಮುಂದಾಗಿತ್ತು. ಇವರ ಮೇಲೆ ಇಡಿ ದಾಳಿ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಯಾಕೆಂದರೆ, ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದ್ದವು. ಸೆಂಥಿಲ್ ಬಂಧನದ ವಿಚಾರದಲ್ಲಿ ವಿರೋಧ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ದ ತಿರುಗಿ ಬಿದ್ದಿವೆ.
ಅಣ್ಣಾಮಲೈ ಅವರು ಜಯಲಲಿತಾ ವಿರುದ್ದ ಮಾತನಾಡಿರುವುದು
ಇತ್ತೀಚೆಗೆ ಅಣ್ಣಾಮಲೈ ಅವರು ಜಯಲಲಿತಾ ವಿರುದ್ದ ಮಾತನಾಡಿರುವುದು, ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮರುಪರಿಶೀಲಿಸುವುದಾಗಿ ಹೇಳಿರುವುದು, ಸೆಂಥಿಲ್ ಬಾಲಾಜಿ ಬಂಧನಕ್ಕೂ ಒಂದಕ್ಕೊಂದು ಲಿಂಕ್ ಇದೆ ಎನ್ನುವುದು ತಮಿಳುನಾಡು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಲೋಕಸಭಾ ಚುನಾವಣೆಗೆ ಹತ್ತುಹನ್ನೊಂದು ತಿಂಗಳು ಇರುವುದರಿಂದ, ಈ ಲಿಂಕಿಗೆ ತಾರ್ಕಿಕ ಅಂತ್ಯ ಸದ್ಯದಲ್ಲೇ ಸಿಗಬಹುದು.
ಸೆಂಥಿಲ್ ಬಾಲಾಜಿ ತಮಿಳುನಾಡಿನಲ್ಲಿ ಸೆಟೆದು ನಿಲ್ಲುತ್ತಾರಾ
ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತಮಗೆ ಬೇಕಾದಂತೆ ಬಳಸಿಕೊಳ್ಳುವುದು ಹಿಂದಿನಿಂದಲೂ ಇದೆ, ಅದಕ್ಕೆ ಬಿಜೆಪಿ ಏನೂ ಹೊರತಾಗಿಲ್ಲ. ಹೇಗೆ, ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ದ ಬಂಡೆಯಂತೆ ನಿಂತರೋ, ಅದೇ ರೀತಿ ಸೆಂಥಿಲ್ ಬಾಲಾಜಿ ತಮಿಳುನಾಡಿನಲ್ಲಿ ಸೆಟೆದು ನಿಲ್ಲುತ್ತಾರಾ ಎನ್ನುವುದು ಕಾದು ನೋಡಬೇಕಿದೆ.












Click it and Unblock the Notifications