Maha Kumbh Mela 2025: ವಸಂತ ಪಂಚಮಿ ಪ್ರಯುಕ್ತ ಪ್ರಯಾಗ್‌ರಾಜ್‌ನಲ್ಲಿ ಭಕ್ತಸಾಗರ, ಏನಿದರ ವಿಶೇಷತೆ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಇಂದು ವಸಂತ ಪಂಚಮಿ ಪ್ರಯುಕ್ತ ಭಕ್ತಸಾಗರ ಹರಿದುಬಂದಿದೆ. ಇಲ್ಲಿನ ತ್ರಿವೇಣಿ ಸಂಗಮ ಘಾಟ್‌ಗೆ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಇಂದು ಮುಂಜಾನೆಯೇ 8 ಗಂಟೆಗೆ ಬರೋಬ್ಬರಿ 41.90 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿರುವುದಾಗಿ ಉತ್ತರ ಪ್ರದೇಶದ ವಾರ್ತಾ ಇಲಾಖೆ ತಿಳಿಸಿದೆ.
ಮಹಾಕುಂಭ ಮೇಳ ಶುರುವಾದ ದಿನದಿಂದ ಫೆಬ್ರವರಿ 1ರವರೆಗೆ ಬರೋಬ್ಬರಿ 33.61 ಕೋಟಿಗೂ ಹೆಚ್ಚು ಭಕ್ತರು ಇಲ್ಲಿನ ಸಂಗಮ ಘಟ್ಟದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕಳೆದ ವಾರ ಮೌನಿ ಅಮಾವಾಸ್ಯೆ ದಿನವೂ ಕೋಟ್ಯಂತರ ಮಂದಿ ಇಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಅಂದು ಭಕ್ತರ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಕೂಡ ಸಂಭವಿಸಿ, ಸಾವು ನೋವುಗಳು ಸಂಭವಿಸಿತು.

ಬಳಿಕ ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ವಸಂತ ಪಂಚಮಿಯ ಶುಭದಿನದ ಹಿನ್ನೆಲೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಸರಸ್ವತಿಗೆ ಪ್ರಾರ್ಥನೆ ಸಲ್ಲಿಸಲು ಹರಿದ್ವಾರದ ಹರ್ ಕಿ ಪೌರಿಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದಾರೆ.
ಇತ್ತ ಪ್ರಯಾಗ್‌ರಾಜ್‌ನಲ್ಲೂ ಮುಂಜಾನೆಯಿಂದಲೇ ದೇಶದ ವಿವಿಧ ಭಾಗಗಳಿಂದ ಭಕ್ತರ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಅನೇಕರು ದತ್ತಿ ಕಾರ್ಯಗಳು ಮತ್ತು ಧಾರ್ಮಿಕ ಕ್ರಿಯೆಗಳನ್ನು ನಡೆಸಿದರು. ಸರಸ್ವತಿ ಮಾತೆಯು ವಸಂತ ಪಂಚಮಿಯಂದು ಜನಿಸಿದಳು ಎಂದು ನಂಬಲಾಗಿದೆ. ಈ ಮಂಗಳಕರ ದಿನದಂದು ಗಂಗೆಯಲ್ಲಿ ಸ್ನಾನ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗಿದೆ. ಈ ಹಿನ್ನೆಲೆ ಭಕ್ತರು ಗಂಗಾರತಿಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಈಡೇರಿಕೆಗೆ ಆಶೀರ್ವಾದ ಪಡೆಯುತ್ತಾರೆ.

ವಸಂತ ಪಂಚಮಿಯನ್ನು ಬಸಂತ್ ಪಂಚಮಿ ಎಂದೂ ಕರೆಯಲಾಗುತ್ತೆ. ಶ್ರೀಪಂಚಮಿ ಮತ್ತು ಸರಸ್ವತಿ ಪಂಚಮಿ ಎಂದೂ ಕರೆಯಲ್ಪಡುವ ಹಿಂದೂ ಹಬ್ಬ ವಸಂತ ಪಂಚಮಿಯನ್ನು ವಸಂತಕಾಲದ ಮೊದಲ ದಿನದಂದು ಆಚರಿಸಲಾಗುತ್ತದೆ. ಮಾಘ ಮಾಸದ ಐದನೇ ದಿನದಂದು ಇದು ಬರುತ್ತದೆ. ಇದು ಈ ಹಬ್ಬದ ನಂತರ ನಲವತ್ತು ದಿನಗಳ ನಂತರ ನಡೆಯುವ ಹೋಳಿ ಸಿದ್ಧತೆಗಳ ಆರಂಭವನ್ನು ಸಹ ಸೂಚಿಸುತ್ತದೆ. ಈ ಹಬ್ಬದ ಹಿನ್ನೆಲೆ ಸಂಗೀತ ಮತ್ತು ಕಲೆಗಳ ಹಿಂದೂ ದೇವತೆಯಾದ ಸರಸ್ವತಿಯನ್ನು ಆರಾಧಿಸಲಾಗುತ್ತದೆ.
ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಫೆಬ್ರವರಿ 3ರಂದು ಮುಂಬರುವ ವಸಂತ ಪಂಚಮಿಯ ಮೂರನೇ ಶಾಹಿ ಸ್ನಾನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಮೂರು ನದಿಗಳು ಸೇರುವ ಸಂಗಮದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ ವಸಂತ ಪಂಚಮಿಗಾಗಿ ಇಂದಿನಿಂದಲೇ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿನ್ನೆ ಶುಕ್ರವಾರ ಪ್ರಯಾಗ್‌ರಾಜ್ ಭೇಟಿ ನೀಡಿದರು. ಇದು ಮಹಾಕುಂಭ ಮೇಳದಲ್ಲಿ ಕಾಲ್ತುಳಿತದ ನಂತರ ಅವರ ಮೊದಲ ಭೇಟಿಯಾಗಿತ್ತು. ಸಿಎಂ ಯೋಗಿ ತಮ್ಮ ಭೇಟಿಯ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಸ್ವಾಗತಿಸಿ ಮಹಾಕುಂಭ ಮೇಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.












Click it and Unblock the Notifications