ಮನುಷ್ಯನನ್ನು ಕೊರೊನಾ ವೈರಸ್ ಸಾವಿನ ದವಡೆಗೆ ದೂಡುವುದು ಹೇಗೆ? ಇಲ್ಲಿದೆ ಇಂಚಿಂಚೂ ಮಾಹಿತಿ
ಬೀಜಿಂಗ್, ಮೇ 15: ಕೇವಲ ಐದು ತಿಂಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ಕೋವಿಡ್-19 ಅಂದ್ರೆ ಏನು ಎನ್ನುವುದೇ ಜಗತ್ತಿಗೆ ಗೊತ್ತಿರಲಿಲ್ಲ. ಆದ್ರೀಗ, ಈ ಮಹಾಮಾರಿಯಿಂದ ವಿಶ್ವದಾದ್ಯಂತ ಮೂರು ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ 45 ಲಕ್ಷಕ್ಕೂ ಹೆಚ್ಚು ಮಂದಿಗೆ ತಗುಲಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಲೇ ಇದೆ.
ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಷ್ಯಾ.!
ಅಂದ್ಹಾಗೆ, ಕೊರೊನಾ ವೈರಸ್ ಸೋಂಕು ತಗುಲಿದ ಮೇಲೆ ಮನುಷ್ಯನ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು.? ಸೋಂಕಿನ ಬಳಿಕ ಯಾವೆಲ್ಲ ಅಂಶಗಳು ಮನುಷ್ಯನನ್ನು ಸಾವಿನ ಅಂಚಿಗೆ ತಳ್ಳುತ್ತದೆ.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ಓದಿರಿ...

ವೈರಾಣು ಪ್ರವೇಶಿಸಿದ ಮೇಲೆ ಆಗುವುದೇನು.?
ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಮನುಷ್ಯನ ದೇಹದೊಳಗೆ ವೈರಾಣು ಪ್ರವೇಶಿಸಿದ ಮೇಲೆ ಶ್ವಾಸಕೋಶದಲ್ಲಿ ಆಗುವ ಬದಲಾವಣೆಗಳ ಕುರಿತು ವಿವರಿಸಲಾಗಿದೆ. ಸೋಂಕು ತೀವ್ರವಾಗಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಒದಗಿಸುವ ಬಿಳಿ ರಕ್ತ ಕಣಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ರಕ್ತದಲ್ಲಿ ಸೈಟೋಕಿನ್ ಎಂಬ ಹಾನಿಕಾರಕ ಅಂಶ ಹೆಚ್ಚಾಗುತ್ತದೆ. ರಕ್ತದಲ್ಲಿ ಸೇರಿಕೊಳ್ಳುವ ಸೈಟೊಕಿನ್ ಶ್ವಾಸಕೋಶದಲ್ಲಿ ಉರಿಯೂತದ ಸಮಸ್ಯೆಯನ್ನು ಹುಟ್ಟುಹಾಕುತ್ತದೆ.

SARS ಮತ್ತು MERS ಗೆ ಸಾಮ್ಯತೆ
''ಶ್ವಾಸಕೋಶ ಸಂಬಂಧ ರೋಗ ಹುಟ್ಟುಹಾಕುವ ಕೋವಿಡ್-19 ಈ ಹಿಂದೆ ಕಾಣಿಸಿಕೊಂಡ SARS ಮತ್ತು MERS ರೋಗಗಳ ಸಾಮ್ಯತೆಯನ್ನು ಹೊಂದಿಕೊಂಡಿದೆ. ಕೋವಿಡ್-19 ರೋಗ ಉಲ್ಬಣಗೊಳ್ಳುವಲ್ಲಿ 'ಸೈಟೋಕಿನ್ ಸ್ಟಾರ್ಮ್ ಸಿಂಡ್ರೋಮ್' ಪ್ರಮುಖ ಪಾತ್ರ ವಹಿಸುತ್ತದೆ'' ಎಂದು ಚೀನಾದ ಜುನಿ ವೈದ್ಯಕೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡೈಶುನ್ ಲಿಯು ಹೇಳಿದ್ದಾರೆ.
ಇದಪ್ಪಾ ಸುದ್ದಿ: ಡೆಡ್ಲಿ ಕೊರೊನಾನ ಬಗ್ಗುಬಡಿದು, ಸಾವನ್ನೇ ಗೆದ್ದ 113 ರ ಅಜ್ಜಿ!

ಅಂಗಗಳ ವೈಫಲ್ಯ
''ಸೈಟೋಕಿನ್ ನಿಂದ ಲಿಂಫೋಸೈಟ್ಸ್ ಮತ್ತು ನ್ಯೂಟ್ರೋಫಿಲ್ ಗೆ ಹಾನಿಯಾಗಲಿದ್ದು, ಇದರ ಪರಿಣಾಮ ತೀವ್ರ ಜ್ವರ ಮತ್ತು ರಕ್ತ ಹೆಪ್ಪುಗಟ್ಟುತ್ತದೆ. ಜೊತೆಗೆ ಲೋ ಬಿಪಿ, ಆಮ್ಲಜನಕದ ಕೊರತೆ, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಎಲ್ಲಾ ಕ್ರಿಯೆಗಳು ದೇಹದ ರೋಗ ನಿರೋಧಕ ಪ್ರತಿಬಂಧತೆಯನ್ನು ಕುಗ್ಗಿಸಿ ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಬಹು ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಹೆಚ್ಚು'' ಎಂದು ಸಂಶೋಧಕರು ಹೇಳಿದ್ದಾರೆ.

ಚಿಕಿತ್ಸೆ ಏನು.?
''ಕೋವಿಡ್-19 ನಿಂದ ಶ್ವಾಸಕೋಶದಲ್ಲಿ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ. ಕೋವಿಡ್-19 ಗೆ ಸದ್ಯ ನಿರ್ದಿಷ್ಟವಾದ Anti-viral ಚಿಕಿತ್ಸೆ ಲಭ್ಯವಿಲ್ಲ. ಹೀಗಾಗಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ರೋಗ ಲಕ್ಷಣಗಳು ಮತ್ತು ಅಂಗಗಳ ಕ್ರಿಯೆ ಮೇಲೆ ಗಮನ ಹರಿಸಬೇಕು. ಇದರಿಂದ ಸಾವಿನ ಪ್ರಮಾಣ ಕಡಿಮೆ ಆಗುತ್ತದೆ'' ಎಂದು ಸಂಶೋಧಕರು ತಿಳಿಸಿದ್ದಾರೆ. ಜೊತೆಗೆ ''ಚಿಕಿತ್ಸೆಯಾಗಿ ಕೃತಿಕ ಯಕೃತ್ತಿನಿಂದ ರಕ್ತ ಶುದ್ಧೀಕರಣ ವ್ಯವಸ್ಥೆ ಅಥವಾ ಮೂತ್ರಪಿಂಡ ಬದಲಿ ಚಿಕಿತ್ಸೆಯನ್ನು ಯಾಂತ್ರಿಕ ವಿಧಾನಗಳ ಮೂಲಕ ರಕ್ತವನ್ನು ಫಿಲ್ಟರ್ ಮಾಡಲು ಬಳಸಬಹುದು. ಜೊತೆಗೆ ಮಾಸ್ಕ್ ಮೂಲಕ Non-Invasive ವೆಂಟಿಲೇಷನ್ ಅಥವಾ ಟ್ಯೂಬ್ ಮೂಲಕ ವೆಂಟಿಲೇಷನ್ ನೀಡಬಹುದು'' ಎಂದಿದ್ದಾರೆ ಸಂಶೋಧಕರು.
'ಈ' ಕಾರಣಕ್ಕಾದರೂ ನೀವು ಕಡ್ಡಾಯವಾಗಿ ಮಾಸ್ಕ್ ಧರಿಸಿ.!

ಪೌಷ್ಟಿಕಾಂಶ ಮತ್ತು ಅಮೈನೋ ಆಸಿಡ್ಸ್
''ಕೋವಿಡ್-19 ನಿಂದ ಕರುಳಿಗೂ ಸೋಂಕು ತಾಗಲಿದ್ದು, ಕರುಳಿನ ಒಳಪದರದಲ್ಲಿ ಉರಿಯೂತ ಕಂಡುಬರುತ್ತದೆ. ಹೀಗಾಗಿ, ಪ್ರೋಬಯಾಟಿಕ್ ಮತ್ತು ಕರುಳಿನ ರೋಗ ನಿರೋಧಕ ರಕ್ಷಣೆಯನ್ನು ಸುಧಾರಿಸಲು ಪೌಷ್ಟಿಕಾಂಶಗಳು ಮತ್ತು ಅಮೈನೋ ಆಸಿಡ್ಸ್ ನೀಡಬೇಕು'' ಎಂದೂ ಡೈಶುನ್ ಲಿಯು ಮಾಹಿತಿ ನೀಡಿದ್ದಾರೆ.