ಗುಂಡ್ಲುಪೇಟೆಯಲ್ಲೊಂದು ಗೊಂಬೆ ಮನೆ; ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಚಾಮರಾಜನಗರ, ಅಕ್ಟೋಬರ್, 03: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ವಿ.ಆರ್. ಸುಬ್ಬರಾವ್ ಅವರ ಮನೆಯಲ್ಲಿ ದಸರಾ ಹಬ್ಬ ಸಮೀಪಿಸುತ್ತಿದ್ದಂತೆಯೇ ಬೊಂಬೆಗಳ ಪ್ರದರ್ಶನ ನಡೆಯುತ್ತದೆ. ಸಾಂಪ್ರದಾಯಿಕವಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕತೆಯ ಬೊಂಬೆ ಪ್ರದರ್ಶನ ನಡೆಯುತ್ತದೆ. ಇದು ಕಳೆದ 85 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಹೀಗೆ ವಿ.ಆರ್. ಸುಬ್ಬರಾವ್ ಜಿಲ್ಲೆಯ ಮನೆ ಮಾತಾಗಿದ್ದಾರೆ.
ಪ್ರತಿ ವರ್ಷವು ಒಂದು ವಿಶೇಷ ಪರಿಕಲ್ಪನೆಯೊಂದಿಗೆ ಗೊಂಬೆಗಳ ವೈಭವ ವಿಜೃಂಭಣೆಯಿಂದ ನಡೆಯುತ್ತದೆ. ಕೃಷಿ ಯಾಂತ್ರೀಕರಣ, ಸಹಬಾಳ್ವೆ ಜೀವನ, ಶ್ರೀನಿವಾಸ ಕಲ್ಯಾಣ, ಪ್ರವಾಸಿ ತಾಣಗಳು, ಹಳ್ಳಿಯಲ್ಲಿ ಗಾಣದಿಂದ ಎಣ್ಣೆ ತೆಗೆಯುವ ಪ್ರತಿಕೃತಿ, ಗ್ರಾಮೀಣ ಜೀವನಶೈಲಿ ಹೀಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಬೊಂಬೆ ಪ್ರದರ್ಶನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ವಿ.ಆರ್. ಸುಬ್ಬರಾವ್ ಕುಟುಂಬ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಸುಬ್ಬರಾಬ್ ಹಾಗೂ ಉಮಾರಾವ್ ದಂಪತಿ ಕುಟುಂಬ ಮಿನಿಯೇಚರ್‌ಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸುತ್ತಾರೆ. ಈ ಬಾರಿ ಕೃಷಿ ಯಾಂತ್ರೀಕರಣ, ಗಾಣದಿಂದ ಎಣ್ಣೆ ತೆಗೆಯುವುದು ಹಾಗೂ ಸಹಬಾಳ್ವೆ ಜೀವನದ ಬಗ್ಗೆ ಮಾಡಿರುವ ಪರಿಕಲ್ಪನೆ ಗೊಂಬೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪ್ರತಿ ವರ್ಷದ ನವರಾತ್ರಿ ಉತ್ಸವದಂದು ಹತ್ತು ದಿನಗಳ ಕಾಲ ಬೊಂಬೆ ಪ್ರದರ್ಶನ ಮಾಡುವ ಈ ಕುಟುಂಬ, ಗೊಂಬೆಗಳನ್ನು ವೀಕ್ಷಿಸಲು ಬರುವವರಿಗೆ ಅತಿಥಿ ಸತ್ಕಾರ ಮಾಡುವುದರ ಜೊತೆಗೆ ನವರಾತ್ರಿ ಗೊಂಬೆಗಳ ವೈಶಿಷ್ಟ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಎಂಟು ದಶಕಗಳಿಂದ ಗೊಂಬೆಗಳ ಪ್ರದರ್ಶನ
ಗುಂಡ್ಲುಪೇಟೆ ಪಟ್ಟಣದ ವಿ.ಆರ್. ಸುಬ್ಬರಾವ್ ಮಾತನಾಡಿ ಕಳೆದ ಎಂಟು ದಶಕಗಳಿಂದ ನಮ್ಮ ಕುಟುಂಬದಲ್ಲಿ ನವರಾತ್ರಿ ಉತ್ಸವಕ್ಕೂ ಮುಂಚೆಯೇ ಸುಮಾರು ಹತ್ತು ಸಾವಿರಕ್ಕೂ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಪ್ರತಿ ವರ್ಷವು ಒಂದೊಂದು ವಿಶಿಷ್ಟ ಪರಿಕಲ್ಪನೆಯೊಂದಿಗೆ ಗೊಂಬೆ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಪಾಡ್ಯ ದಿನದಿಂದ ಗೊಂಬೆಗಳ ಪ್ರದರ್ಶನ
ನಂತರ ವಿ.ಆರ್. ಸುಬ್ಬರಾವ್ ಅವರ ಪತ್ನಿ ಉಮಾರಾವ್ ಮಾತನಾಡಿ, ''ತಾವು ಮದುವೆಯಾಗಿ ಈ ಕುಟುಂಬಕ್ಕೆ ಸೇರ್ಪಡೆಗೊಂಡ ನಂತರ ನಮ್ಮ ಹಿರಿಯರು ಪಾಲಿಸುತ್ತಿದ್ದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಪಾಡ್ಯ ದಿನದಿಂದ ಗೊಂಬೆ ಪ್ರದರ್ಶನ ಮಾಡುವ ನಾವು, ವಿಜಯದಶಮಿಯವರೆಗೂ 10 ದಿನಗಳ ಕಾಲ ಗೊಂಬೆ ಪ್ರದರ್ಶನ ಮಾಡುತ್ತೇವೆ. ಗೊಂಬೆ ಪ್ರದರ್ಶನದಲ್ಲಿ ಮೈಸೂರು ಮಹಾರಾಜರು, ನವದುರ್ಗೆಯರು, ಅಷ್ಟ ಲಕ್ಷಿಯರು, ಚಾಮುಂಡಿ ಬೆಟ್ಟ, ತಿರುಪತಿ ಬೆಟ್ಟ ಸೇರಿದಂತೆ ಮೈಸೂರು ಅರಸರ ಹಾಗೂ ದಸರಾ ವೈಭವಕ್ಕೆ ಮೆರಗು ನೀಡುವ ವಿವಿಧ ದೇವರುಗಳ ಹಾಗೂ ಇನ್ನಿತರ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ'' ಎಂದರು.

ಸುಬ್ಬರಾವ್ ಮನೆಯಲ್ಲಿ ಗೊಂಬೆ ಪ್ರದರ್ಶನ
ಗೊಂಬೆ ವೀಕ್ಷಣೆಗಾಗಿ ಬಂದಿದ್ದ ಸೌಮ್ಯ ಮಾತನಾಡಿ, ''ವಂಶ ಪಾರಂಪರ್ಯವಾಗಿ ಪ್ರತಿ ವರ್ಷವು ದಸರಾ ಸಮಯದಲ್ಲಿ ಸುಬ್ಬರಾವ್ ಅವರ ಮನೆಯಲ್ಲಿ ಗೊಂಬೆ ಪ್ರದರ್ಶನ ನಡೆಯುತ್ತದೆ. ಗೊಂಬೆ ಪ್ರದರ್ಶನದಲ್ಲಿ ಭಾರತದ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳು ಸೇರಿದಂತೆ ಪ್ರಾಚೀನ ಹಾಗೂ ಆಧುನಿಕತೆಯ ಗೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ ರೈತರಿಗೆ ನೆರವಾಗುವ ಕೃಷಿ ಯಾಂತ್ರೀಕರಣದ ಬಗ್ಗೆ ಮಾಹಿತಿ ನೀಡುವ ಗೊಂಬೆಗಳನ್ನು ಕೂರಿಸಿದ್ದಾರೆ. ಇವರ ದಸರಾ ಗೊಂಬೆಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಮುದ ನೀಡುತ್ತಿದೆ'' ಎಂದರು.

ಸುಬ್ಬರಾವ್ ಬದ್ಧತೆ ಬಗ್ಗೆ ವೀಕ್ಷಕರ ಅಭಿಪ್ರಾಯ
ನಂತರ ಗುಂಡ್ಲುಪೇಟೆ ಪಟ್ಟಣದ ನಿವಾಸಿ ಲಕ್ಷ್ಮಿ ಮಾತನಾಡಿ, ''ಪೌರಾಣಿಕ, ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಗತವೈಭವವನ್ನು ಸಾರುವ ಗೊಂಬೆಗಳ ಪ್ರದರ್ಶನವನ್ನು ಸುಬ್ಬರಾವ್ ದಂಪತಿಗಳು ಪ್ರತಿವರ್ಷ ಏರ್ಪಡಿಸುತ್ತಿದ್ದಾರೆ. ಮೈಸೂರು ದಸರೆಯ ಬಗ್ಗೆ ಅವರಿಗಿರುವ ವಿಶಿಷ್ಟ ಪ್ರೀತಿ, ಬದ್ದತೆಯನ್ನು ತೋರುತ್ತದೆ'' ಎಂದು ಗುಣಗಾನ ಮಾಡಿದರು.












Click it and Unblock the Notifications