Makar Sankranti: ಇಂದು ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ವರ್ಶ, ಈ ಚಮತ್ಕಾರದ ಸಮಯ ಹೀಗಿದೆ
ನಾಡಿನೆಲ್ಲೆಡೆ ಇಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಎಳ್ಳು-ಬೆಲ್ಲ ಹಂಚುತ್ತಾ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ಇಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಹೆಸರಾಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಕೌತುಕಕ್ಕೆ ಕ್ಷಣಗಣನೆ ಶುರುವಾಗಿದೆ.
ಪ್ರತಿ ವರ್ಷವೂ ಸಂಕ್ರಮಣದಂದು ಈ ದೇವಸ್ಥಾನದಲ್ಲಿ ಪವಾಡ ನಡೆಯುತ್ತದೆ. ಇಲ್ಲಿನ ಗವಿಗಂಗಾಧರ ದೇವಸ್ಥಾನದ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದ್ದು ಈ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದಿದ್ದಾರೆ. ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯನ ಕಿರಣಗಳು ನೇರವಾಗಿ ಗವಿಗಂಗಾಧರನನ್ನು ಸ್ಪರ್ಶಿಸುವ ಮೂಲಕ ಪ್ರಸಿದ್ಧಿ ಪಡೆದಿದೆ.

ಇನ್ನು ಈ ಬಾರಿ ಸಂಜೆ 5.14 ಗಂಟೆಯಿಂದ 5.17ರವರೆಗೆ ಸುಮಾರು 3 ನಿಮಿಷಗಳ ಅಂತರದಲ್ಲಿ ಸೂರ್ಯ ರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಲಿದೆ. ಈ ಹಿನ್ನೆಲೆ ದೇವಸ್ಥಾನದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಪೂಜಾ ಕೈಂಕರ್ಯಗಳು ಶುರುವಾಗಿವೆ. ಈ ದಿನ ಸೂರ್ಯ ದೇವನು ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸಲಿದ್ದಾನೆ.
ಇಂದಿನ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರನ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂದು ಮಕರ ಸಂಕ್ರಮಣದ ಹಿನ್ನೆಲೆ ಮುಂಜಾನೆ 5.30ರಿಂದಲೇ ಗವಿಗಂಗಾಧರೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಇಂದು ಮಧ್ಯಾಹ್ನ 12.30ರವರೆಗೆ ಮಾತ್ರವೇ ದೇವಾಲಯದ ಬಾಗಿಲು ತೆರೆದಿರಲಿದೆ. ಬಳಿಕ ಸುಮಾರು ಎರಡು ಗಂಟೆಗಳ ಕಾಲ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗುತ್ತದೆ.
ಬಳಿಕ ಸಂಜೆ 4 ಗಂಟೆಗೆ ಮತ್ತೆ ದೇವಸ್ಥಾನದ ಬಾಗಿಲನ್ನು ತೆರೆದು ಸರಳವಾಗಿ ಪೂಜೆ ನೆರವೇರಿಸಲಾಗುತ್ತೆ. ಸಂಜೆ 5.14 ಗಂಟೆಯಿಂದ 5.17ರವರೆಗೆ ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯದಲ್ಲಿ ಗವಿಗಂಗಾಧರೇಶ್ವರನಿಗೆ ವಿಶೇಷ ಅಭಿಷೇಕ ಮಾಡಲಾಗುತ್ತದೆ. ಬಳಿಕ ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸೂರ್ಯ ರಶ್ಮಿ ವೀಕ್ಷಿಸಲು ಭಕ್ತರ ದಂಡು ದೇವಸ್ಥಾನದತ್ತ ಬರುವ ಕಾರಣ ಎಲ್ಲರಿಗೂ ನೇರವಾಗಿ ದರ್ಶನ ಭಾಗ್ಯ ಸಿಗುವುದಿಲ್ಲ. ಈ ಹಿನ್ನೆಲೆ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕವೂ ಸೂರ್ಯರಶ್ಮಿ ಸ್ಪರ್ಶಿಸುವ ದೃಶ್ಯಗಳನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಕ್ತರು ಸೂರ್ಯ ರಶ್ಮಿ ಸ್ಪರ್ಶವನ್ನು ನೋಡಲು ದೇವಸ್ಥಾನದ ಹೊರಗೆ ಎಲ್ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಐದು ಟಿವಿಗಳನ್ನು ಕೂಡ ಇಡಲಾಗಿದೆ. ಸೂರ್ಯರಶ್ಮಿ ಸ್ಪರ್ಶಿಸುವ ಸಮಯದಲ್ಲಿ ದೇವಸ್ಥಾನದ ಒಳಗೆ ಅರ್ಚಕರನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ. ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯನ ಕಿರಣಗಳು ದೇವರ ದರ್ಶನ ಪಡೆಯುತ್ತದೆ ಎಂದು ನಂಬಲಾಗಿದೆ. ಈ ವೇಳೆ ಶಿವನ ವಿಗ್ರಹಕ್ಕೆ ಎಳನೀರು ಮತ್ತು ಹಾಲಿನಿಂದ ಅಭಿಷೇಕ ಕೂಡ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಸದ್ಯ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯನ ರಶ್ಮಿ ಸ್ಪರ್ಶಿಸುವುದು ಅನುಮಾನ ಎಂದೂ ಹೇಳಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ವಾತಾವರಣದಲ್ಲಿ ಬದಲಾವಣೆಯಾದರೆ ಇದು ಎಲ್ಲರಿಗೂ ಗೋಚರಿಸಲಿದೆ. ಆದರೂ ಭಕ್ತಾದಿಗಳು ದೇವಸ್ಥಾನಕ್ಕೆ ಹರಿದುಬರುತ್ತಿದ್ದಾರೆ. ಎಲ್ಲರ ಚಿತ್ತ ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯದತ್ತ ಇದೆ.












Click it and Unblock the Notifications