ಯುವಜನರಲ್ಲಿ ಶ್ವಾಸಕೋಶ ಸಮಸ್ಯೆ ಸೃಷ್ಟಿಸುವುದಿಲ್ಲ ಕೊರೊನಾ ಸೋಂಕು; ಸಂಶೋಧನೆ
ಕೊರೊನಾ ಸೋಂಕು ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮೂಲಕ ಉಸಿರಾಟದಲ್ಲಿ ಸಮಸ್ಯೆ ತಂದೊಡ್ಡಬಹುದು. ಈ ಮೂಲಕ ಸೋಂಕು ಗಂಭೀರ ಸ್ವರೂಪ ಪಡೆಯಬಹುದು ಎಂಬ ಅಂಶವನ್ನು ತಜ್ಞರು ಉಲ್ಲೇಖಿಸಿದ್ದರು. ಆದರೆ ಕೊರೊನಾ ಸೋಂಕು ಮಕ್ಕಳು ಹಾಗೂ ವಯಸ್ಕರ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಈಚೆಗೆ ನಡೆಸಿದ ಎರಡು ಅಧ್ಯಯನಗಳು ತಿಳಿಸಿವೆ.
ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಇಂಟರ್‌ನ್ಯಾಷನಲ್ ಕಾಂಗ್ರೆಸ್ ಮಂಗಳವಾರ ಆಯೋಜಿಸಿದ್ದ ವರ್ಚುಯಲ್ ಸಭೆಯಲ್ಲಿ ಈ ಅಧ್ಯಯನಗಳ ಕುರಿತು ಪ್ರಸ್ತಾಪ ಮಾಡಲಾಗಿದೆ.
ಸ್ವೀಡನ್‌ನ ಕರೊಲಿಂಸ್ಕಾ ಇನ್‌ಸ್ಟಿಟ್ಯೂಟ್ ಸಂಶೋಧಕರ ನೇತೃತ್ವದ ತಂಡ ಅಧ್ಯಯನ ನಡೆಸಿದ್ದು, ಕೊರೊನಾ ಸೋಂಕಿಗೆ ತುತ್ತಾದ ಅಸ್ತಮಾ ರೋಗಿಗಳಲ್ಲಿಯೂ ಶ್ವಾಸಕೋಶದ ಕಾರ್ಯ ದುರ್ಬಲಗೊಂಡಿದ್ದು ಕಂಡುಬಂದಿಲ್ಲ. ಶ್ವಾಸಕೋಶದ ಕಾರ್ಯಾಚರಣೆ ಸೋಂಕಿನ ಕಾರಣವಾಗಿ ದುರ್ಬಲಗೊಳ್ಳುವುದಿಲ್ಲ ಎಂಬುದನ್ನು ಅಂಕಿಅಂಶಗಳ ಮೂಲಕ ತೋರಿಸಿದೆ.

ಇಂಥ ರೋಗಿಗಳಲ್ಲಿ, ಶ್ವಾಸಕೋಶದ ಕ್ರಿಯೆ ಅಳೆಯುವ ಮಾಪಕದಲ್ಲಿ, ಉಸಿರಾಟದಲ್ಲಿ ಸ್ವಲ್ಪ ಮಟ್ಟಿಗಿನ ಕ್ಷೀಣತೆ ಕಂಡುಬಂದಿದೆಯಷ್ಟೆ. ಆದರೆ ಇದು ಪರಿಣಾಮಕಾರಿ ಎನ್ನುವಂತಿಲ್ಲ ಎಂದು ತಂಡ ಹೇಳಿದೆ.
ಈ ಬಗ್ಗೆ ಮತ್ತೊಂದು ಅಧ್ಯಯನ ನಡೆದಿದ್ದು, ಕೊರೊನಾ ಸೋಂಕಿನಿಂದ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಶ್ವಾಸಕೋಶದ ಕಾರ್ಯ ದುರ್ಬಲಗೊಳ್ಳುವುದಿಲ್ಲ ಎಂಬುದನ್ನು ಇದು ಕೂಡ ಸಾಬೀತುಪಡಿಸಿದೆ. ತೀವ್ರ ಸೋಂಕನ್ನು ಹೊರತುಪಡಿಸಿ ಶ್ವಾಸಕೋಶಕ್ಕೆ ಯಾವುದೇ ಅಪಾಯ ತರುವುದಿಲ್ಲ ಎಂಬುದನ್ನು ಹೇಳಿದೆ.
ಕೊರೊನಾ ಸೋಂಕಿನಿಂದ ಮುಕ್ತವಾದ ಬಳಿಕವೂ ಶ್ವಾಸಕೋಶದ ಮೇಲೆ ಸೋಂಕು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಹುಮುಖ್ಯವಾಗಿ ಯುವಜನತೆಯಲ್ಲಿ ಸೋಂಕಿನ ಪ್ರಭಾವ ಹೇಗಿರುತ್ತದೆ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ ಎಂದು ಕರೊಲಿಂಸ್ಕಾ ಇನ್‌ಸ್ಟಿಟ್ಯೂಟ್‌ನ ಮೊಗೆನ್ಸೆನ್ ಹೇಳಿದ್ದಾರೆ.

ಮೊದಲ ಅಧ್ಯಯನವು 22ರ ಸರಾಸರಿ ವಯಸ್ಸಿನ 661 ಯುವಕರಿಂದ ಮಾಹಿತಿ ಸಂಗ್ರಹಿಸಿದೆ. ಇವರು 1994-1996ರ ಅವಧಿಯಲ್ಲಿ ಸ್ಟಾಕ್‌ಹೋಂನಲ್ಲಿ ಜನಿಸಿದವರಾಗಿದ್ದು, ಎಲ್ಲರನ್ನೂ ಸಂಶೋಧನೆಗೆ ಒಳಪಡಿಸಲಾಗಿದೆ.
ಇವರಲ್ಲಿ, ದೇಹದಲ್ಲಿ ಪ್ರತಿರಕ್ಷಣಾ ಭಾಗವಾಗಿರುವ ಶ್ವಾಸಕೋಶದ ಕಾರ್ಯ, ಉರಿಯೂತ ಹಾಗೂ ಬಿಳಿ ರಕ್ತ ಕಣಗಳ ವಿಶ್ಲೇಷಣೆಯನ್ನು ಅಧ್ಯಯನದ ದತ್ತಾಂಶ ಒಳಗೊಂಡಿದೆ.
ಈ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ 661 ಮಂದಿಯಲ್ಲಿ 178 ಮಂದಿ ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದರು. ಇವರು ಈ ಮುನ್ನ ಸೋಂಕಿಗೆ ತುತ್ತಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.
ಉಸಿರಾಟದಲ್ಲಿನ ಏರುಪೇರನ್ನು ಸೂಚಿಸುವ FEV1 ಸಾಮರ್ಥ್ಯ, ಅಂದರೆ ದೀರ್ಘ ಉಸಿರಾಟದ ನಂತರ ಹೊರಬಿಡುವ ಗಾಳಿಯಿಂದ ಶ್ವಾಸಕೋಶದಲ್ಲಿ ಗಾಳಿಯ ಪರಿಮಾಣವನ್ನು ಪ್ರತಿನಿಧಿಸುವ ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದಾರೆ. ಸೋಂಕಿನ ಮೊದಲು ಹಾಗೂ ನಂತರ ಶ್ವಾಸಕೋಶದ ಕಾರ್ಯದಲ್ಲಿನ ಬದಲಾವಣೆಗಳನ್ನು ಅಂದಾಜು ಮಾಡಿದ್ದಾರೆ. ಸಂಶೋಧಕರು ನಂತರ ಹೋಲಿಕೆ ಮಾಡಿದ್ದಾರೆ.
'ನಮ್ಮ ವಿಶ್ಲೇಷಣೆ, ಕೊರೊನಾ ಸೋಂಕಿನ ಉಪಸ್ಥಿತಿಯ ನಡುವೆ ಶ್ವಾಸಕೋಶದ ಕಾರ್ಯವನ್ನು ತೋರಿಸಿದೆ' ಎಂದು ಮೊಗೆನ್ಸನ್ ಹೇಳಿದ್ದಾರೆ.
ಅಸ್ತಮಾ ಸಮಸ್ಯೆ ಹೊಂದಿದ್ದ 123 ಮಂದಿಯನ್ನು ಕೂಡ ಸಂಶೋಧನೆಗೆ ಒಳಪಡಿಸಿದ್ದು, ವಿಶ್ಲೇಷಣೆಯಲ್ಲಿ, ಕೊರೊನಾ ಸೋಂಕು ಹೊಂದಿದ್ದ 24% ಜನರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆ ಸ್ವಲ್ಪ ಮಟ್ಟದಲ್ಲಿ ಕ್ಷೀಣಿಸಿರುವುದು ಕಂಡುಬಂದಿದೆ. ಆದರೆ ಇದು ಅಂಥ ಮಹತ್ವದ ಸಂಗತಿಯಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಉರಿಯೂತ, ಅಲರ್ಜಿ ಹೊಂದಿದ್ದ ಕೊರೊನಾ ರೋಗಿಗಳಲ್ಲಿಯೂ ಶ್ವಾಸಕೋಶದ ಕಾರ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಎರಡನೇ ಅಧ್ಯಯನವನ್ನು ಜರ್ಮನಿಯ ಯೂನಿವರ್ಸಿಟಿ ಚಿಲ್ಡ್ರನ್ ಹಾಸ್ಪಿಟಲ್‌ನಲ್ಲಿ ನಡೆಸಲಾಗಿದ್ದು, ಆಗಸ್ಟ್ 2020ರಿಂದ ಮಾರ್ಚ್ 21ರ ನಡುವೆ ಕೊರೊನಾ ಸೋಂಕಿನಿಂದ ಮಕ್ಕಳ ಮೇಲೆ ಆದ ಪರಿಣಾಮಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. 5-18 ವಯಸ್ಸಿನ 73 ಮಕ್ಕಳ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಕೊರೊನಾ ಸೋಂಕಿನ ನಂತರ ಮಕ್ಕಳ ಶ್ವಾಸಕೋಶ ಕಾರ್ಯವೈಖರಿಯನ್ನು ಎರಡು ವಾರದಿಂದ ಆರು ತಿಂಗಳವರೆಗೂ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿಗೆ ಒಳಗಾದ 45 ಮಕ್ಕಳ ಫಲಿತಾಂಶವನ್ನು ಈ ಗುಂಪಿನೊಂದಿಗೆ ಹೋಲಿಸಿ ನೋಡಲಾಗಿದೆ.
'ನಾವು ಈ ಎರಡೂ ಗುಂಪುಗಳನ್ನು ಹೋಲಿಸಿ ನೋಡಿದಾಗ ಶ್ವಾಸಕೋಶದ ಕ್ರಿಯೆಯಲ್ಲಿ ಯಾವುದೇ ಮಹತ್ವದ ವ್ಯತ್ಯಾಸಗಳನ್ನು ಕಾಣಲಿಲ್ಲ' ಎಂದು ಅಧ್ಯಯನ ನಡೆಸಿದ ಶೆಲೆಂಗ್‌ಟೆಂಡಲ್ ತಿಳಿಸಿದ್ದಾರೆ. ಆದರೆ ಅಧ್ಯಯನ ತನ್ನದೇ ಮಿತಿ ಹೊಂದಿದ್ದು, ಕಡಿಮೆ ಸಂಖ್ಯೆಯ ಜನರು ಈ ಸಂಶೋಧನೆಗೆ ಒಳಗಾಗಿದ್ದರು ಎಂಬುದನ್ನು ತಿಳಿಸಿದ್ದಾರೆ.
ಈ ಎರಡು ಅಧ್ಯಯನಗಳು ಮಕ್ಕಳು ಹಾಗೂ ಯುವ ವಯಸ್ಕರ ಶ್ವಾಸಕೋಶದ ಕಾರ್ಯವೈಖರಿ ಮೇಲೆ ಕೊರೊನಾ ಸೋಂಕಿನ ಪ್ರಭಾವದ ಬಗ್ಗೆ ಆಶ್ವಾಸನೆ ನೀಡುತ್ತದೆ ಎಂದು ಯುಕೆ ಇಂಪೀರಿಯಲ್ ಕಾಲೇಜಿನ ಪ್ರೊಫೆಸರ್ ಅನಿತಾ ಸೈಮಂಡ್ಸ್ ಹೇಳಿದ್ದಾರೆ.












Click it and Unblock the Notifications