ಸಿದ್ದರಾಮಯ್ಯ ಸಂಪುಟ ಸೇರಿದ ರಾಹುಲ್ ಗಾಂಧಿ ಆಪ್ತ!
ದಿನೇಶ್ ಗುಂಡೂರಾವ್ ಕರ್ನಾಟಕ ರಾಜಕೀಯದ ಚಿರಪರಿಚಿತ ಹೆಸರು. ಬೆಂಗಳೂರು ನಗರ ವ್ಯಾಪ್ತಿಯ ಗಾಂಧಿನಗರ ಕ್ಷೇತ್ರದ ಶಾಸಕರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 105 ಮತಗಳ ಅಂತರದಿಂದ ಗೆಲ್ಲುವ ಮೂಲಕ ಗಮನ ಸೆಳೆದವರು. ಸಂಪುಟ ದರ್ಜೆ ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರಿದರು.
53 ವರ್ಷದ ದಿನೇಶ್ ಗುಂಡೂರಾವ್ ಈ ಬಾರಿಯ ಚುನಾವಣೆಯಲ್ಲಿ 54,118 ಮತಗಳನ್ನು ಪಡೆದು 54013 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಎ. ಆರ್. ಸೋಲಿಸಿದ್ದಾರೆ. ಗಾಂಧಿನಗರ ಕ್ಷೇತ್ರದಿಂದ 5 ಬಾರಿಗೆ ಗೆದ್ದಿದ್ದ ದಿನೇಶ್ ಗುಂಡೂರಾವ್ ಈ ಬಾರಿ ಗೆಲ್ಲುವ ಮೂಲಕ 6 ಬಾರಿಗೆ ಗೆಲುವು ಸಾಧಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಪುತ್ರ ದಿನೇಶ್ ಗುಂಡೂರಾವ್. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ದಿನೇಶ್ ಗುಂಡೂರಾವ್ ಸಚಿವರಾಗಿ ಕೆಲಸ ಮಾಡಿದ್ದರು. ಆಗ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದರು. ಕಾಂಗ್ರೆಸ್ ಪಕ್ಷದ ಮಹತ್ವದ 'ಅನ್ನಭಾಗ್ಯ' ಯೋಜನೆ ಜಾರಿಗೆ ತರುವಲ್ಲಿ ದಿನೇಶ್ ಗುಂಡೂರಾವ್ ಪಾತ್ರವೂ ಇದೆ.
ದಿನೇಶ್ ಗುಂಡೂರಾವ್ ಪರಿಚಯ; ಆರ್. ಗುಂಡೂರಾವ್ ಮತ್ತು ವರಲಕ್ಷ್ಮೀ ಗುಂಡೂರಾವ್ ಮೂವರು ಪುತ್ರರಲ್ಲಿ ದಿನೇಶ್ ಗುಂಡೂರಾವ್ ಎರಡನೇಯವರು. 1969 ಅಕ್ಟೋಬರ್ 9ರಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಜನಿಸಿದರು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದಿನೇಶ್ ಗುಂಡೂರಾವ್ ಓದಿದ್ದು, ಬೆಳೆದಿದ್ದು, ರಾಜಕೀಯ ಕಾರ್ಯಕ್ಷೇತ್ರ ಎಲ್ಲವೂ ಬೆಂಗಳೂರಿನಲ್ಲಿ.

ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣವನ್ನು ದಿನೇಶ್ ಗುಂಡೂರಾವ್ ಪಡೆದರು. 1992ರಲ್ಲಿ ಬಿಎಂಎಸ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಯುವ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ ದಿನೇಶ್ ಗುಂಡೂರಾವ್ ಬಳಿಕ ಶಾಸಕರು, ಸಚಿವರಾದರು. ಕೆಪಿಸಿಸಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದರು.
ದಿನೇಶ್ ಗುಂಡೂರಾವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರು. 1999ರಲ್ಲಿ ಮೊದಲ ಬಾರಿಗೆ ಗಾಂಧಿನಗರ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿದರು. 15,634 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿ ನಾಗರಾಜ ವಿ. ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಬಳಿಕ 2004, 2008, 2013ರಲ್ಲಿ ಇದೇ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.
2013ರ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಗಾಂಧಿನಗರದಲ್ಲಿ ಗೆದ್ದಿದ್ದ ದಿನೇಶ್ ಗುಂಡೂರಾವ್ ಸಂಪುಟ ಸೇರಿದರು. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹೊಣೆಯನ್ನು ನೀಡಲಾಯಿತು. ಪಕ್ಷದ ಮಹತ್ತರ ಯೋಜನೆ ಅನ್ನಭಾಗ್ಯದ ಯಶಸ್ಸಿಗೆ ಶ್ರಮಿಸಿದರು.
ಕೆಪಿಸಿಸಿಗೆ ಸಾರಥಿಯಾದರು; 2018ರ ಚುನಾವಣೆಯಲ್ಲಿಯೂ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದರು. ಡಾ. ಜಿ. ಪರಮೇಶ್ವರ ಬಳಿಕ ದಿನೇಶ್ ಗುಂಡೂರಾವ್‌ರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇದಕ್ಕೂ ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಹೈಕಮಾಂಡ್ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರುವ ದಿನೇಶ್ ಗುಂಡೂರಾವ್ ತಮಿಳುನಾಡು, ಪುದುಚೇರಿ ಮತ್ತು ಗೋವಾ ರಾಜ್ಯಗಳ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯೂ ಕೆಲಸ ಮಾಡಿದ್ದಾರೆ. ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.
ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 6ನೇ ಬಾರಿಗೆ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಅವರು ಸಂಪುಟ ದರ್ಜೆಯ ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟವನ್ನು ಮೇ 23, 2023ರಂದು ಸೇರ್ಪಡೆಗೊಂಡಿದ್ದಾರೆ.












Click it and Unblock the Notifications