ವಾರದ ಸಾಧಕಿ: ಸಿಸ್ಕೋ ನಿರ್ದೇಶಕಿ ಪಲ್ಲವಿ ಅರೋರ ಸಂದರ್ಶನ
"ನಾವ್ಯಾರೂ ಸೂಪರ್ ವುಮೆನ್ ಅಲ್ಲ. ಸೂಪರ್ ವುಮೆನ್ ಆಗಬೇಕಾಗಿಯೂ ಇಲ್ಲ. ದಿನವೆಲ್ಲ ಆಫೀಸಿನಲ್ಲಿ ದುಡಿದು, ಕೊನೆಗೆ ಮನೆಗೆ ಬಂದೂ ನಾನೇ ದುಡಿಯುತ್ತೇನೆ ಅಂದ್ರೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ. ಪ್ರತಿಯೊಬ್ಬರಿಗೂ ಒಂದೊಂದು ಮಿತಿ ಇದೆ. ಆ ಮಿತಿಯನ್ನು ಅರ್ಥಮಾಡಿಕೊಂಡು ಬದುಕಬೇಕು. ಉದ್ಯೋಗಸ್ಥ ಮಹಿಳೆಗೆ ಮನೆಯಲ್ಲಿ ಪತಿ, ಮಕ್ಕಳು, ಇನ್ನಿತರ ಎಲ್ಲರ ಸಹಕಾರವೂ ಮುಖ್ಯ. ಅಂಥ ಸಹಕಾರ, ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಸಿಕ್ಕರೆ ಐಟಿ ಕ್ಷೇತ್ರದಲ್ಲಿ ಮಹಿಳೆಗೆ ಖಂಡಿತವಾಗಿಯೂ ಪ್ರಾತಿನಿಧ್ಯ ಸಿಕ್ಕಬಲ್ಲದು."
ಕಳೆದ 18 ವರ್ಷಗಳಿಂದ ಮುಂಚೂಣಿ ಐಟಿ ಸಂಸ್ಥೆ ಸಿಸ್ಕೋ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಪ್ರಸ್ತುತ ಸಿಸ್ಕೋದ ನಿರ್ದೇಶಕಿಯಾಗಿ ಉನ್ನತ ಹುದ್ದೆಯಲ್ಲಿ ಕಂಪೆನಿಯನ್ನು ಮುನ್ನಡೆಸುತ್ತಿರುವ ಪಲ್ಲವಿ ಅರೋರಾ ಅವರ ಬದುಕಿನ ಅನುಭವದ ಮಾತು ಇದು.
ಐಟಿ ಕ್ಷೇತ್ರದಲ್ಲಿ 26 ವರ್ಷಗಳ ಸುದೀರ್ಘ ಅನುಭವವನ್ನು ಪಡೆದಿರುವ ಪಲ್ಲವಿ ಅರೋರಾ ನಮ್ಮ ಈ ವಾರದ ಸಾಧಕಿ. ತಂದೆ ಮೈಸೂರಿನವರು, ತಾಯಿ ಉತ್ತರ ಕರ್ನಾಟಕ ಭಾಗದವರು. ಸುಮಾರು 40 ವರ್ಷಗಳಿಂದ ಪಲ್ಲವಿ ಅವರ ತಂದೆ-ತಾಯಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರಿಂದ ಅವರ ಬೆಳೆದಿದ್ದು, ಓದಿದ್ದು ಎಲ್ಲ ಬೆಂಗಳೂರಿನಲ್ಲೇ. ಇಂಜಿನಿಯರಿಂಗ್ ಓದಿದ್ದು ಶಿವಮೊಗ್ಗದಲ್ಲಿ.
ವಿಪ್ರೋದಲ್ಲಿ ಕೆಲ ವರ್ಷ ಕೆಲಸ ಮಾಡಿದ ಅನುಭವ ಪಡೆದಿರುವ ಪಲ್ಲವಿ ಅವರು, ನಂತರ ಸಿಸ್ಕೋಕ್ಕೆ ಸೇರಿಕೊಂಡರು. ಅಮೆರಿಕದಲ್ಲಿ ಕೆಲವರ್ಷ ಕೆಲಸ ಮಾಡಿ, ನಂತರ ಭಾರತಕ್ಕೆ ಬಂದು ಅಂದಿನಿಂದಲೂ ಸಿಸ್ಕೋ ಭಾರತದ ಆಧಾರ ಸ್ತಂಭವೆಂಬಂತೆ ಕೆಲಸ ಮಾಡುತ್ತ, ಐಟಿ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ತುಂಬಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಐಟಿ ಕ್ಷೇತ್ರವನ್ನು ಅವರು ಆಯ್ದುಕೊಳ್ಳುವುದಕ್ಕಿದ್ದ ಮುಖ್ಯಕಾರಣ, ಅವರ ವೃತ್ತಿ ಬದುಕಿನ ಅನುಭವ ಮತ್ತು ಐಟಿ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಅವರು ನೀಡಿದ ಸಲಹೆ ಇಲ್ಲಿದೆ. ಇದು ಒನ್ ಇಂಡಿಯಾದ ಈ ವಾರದ ಸಾಧಕಿಯ ಸಂದರ್ಶನ.

ಚಿಕ್ಕ ವಯಸ್ಸಿನಿಂದಲೂ ತುಡಿತ
"ಐಟಿ ಕ್ಷೇತ್ರದ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ನನಗೆ ಆಸಕ್ತಿ ಜಾಸ್ತಿ. ನನ್ನ ಸಂಬಂಧಿಕರಲ್ಲಿ ಹಲವರು ಇಂಜಿನಿಯರಿಂಗ್ ಓದಿದವರಿದ್ದರಿಂದ ನನಗೆ ಮಾರ್ಗದರ್ಶನ ನೀಡುವುದಕ್ಕೂ ಬಹಳ ಜನರಿದ್ದರು. ಜೊತೆಗೆ ನನಗೂ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಬಹಳ ಆಸಕ್ತಿ ಇತ್ತು. ಅದಕ್ಕೆಂದೇ ಇಂಜಿನಿಯರಿಂಗ್ ಓದುವ ನಿರ್ಧಾರಕ್ಕೆ ಬಂದೆ. ಇಂಜಿನಿಯರಿಂಗ್ ಮುಗಿಸಿದ ನಂತರ ವಿಪ್ರೋದಲ್ಲಿ ಕೆಲ ವರ್ಷ ಕೆಲಸ ಮಾಡಿ ನಂತರ ಸಿಸ್ಕೋ ಸೇರಿಕೊಂಡೆ. ಅಮೆರಿಕದಲ್ಲಿಕೆಲ ವರ್ಷ ಕೆಲಸ ಮಾಡಿ, ಭಾರತಕ್ಕೆ ವಾಪಸ್ಸಾದೆ. ಸದ್ಯಕ್ಕೆ 19 ವರ್ಷಗಳಿಂದ ಸಿಸ್ಕೋದಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ನಾನು ಭಾರತಕ್ಕೆ ವಾಪಸ್ಸಾದಗ ಸಿಸ್ಕೋದ 36 ನೇ ಉದ್ಯೋಗಿಯಾಗಿದ್ದೆ. ಈಗ ಇಲ್ಲಿ 10,000 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ಸಾವಿರಾರು ಉದ್ಯೋಗಿಗಳನ್ನು ಸಿಸ್ಕೋಕ್ಕೆ ಕರೆತರುವಲ್ಲಿ, ಸಿಸ್ಕೋ ಕಂಪೆನಿಗೆ ಭಾರತದಲ್ಲಿ ಒಂದು ಉನ್ನತ ಸ್ಥಾನ ಸಿಗುವಂತೆ ಮಾಡುವಲ್ಲಿ ಸಾಕಷ್ಟು ಜನ ಶ್ರಮಿಸಿದ್ದಾರೆ"

ಕುಟುಂಬದ ನಿರಂತರ ಸಹಕಾರವೂ ಅಷ್ಟೇ ಮುಖ್ಯ
"ನನ್ನ ಪತಿ ಭೋಪಾಲ್ ನವರು, ಅವರದೂ ಇದೇ ಕ್ಷೇತ್ರ. ನಮಗಿಬ್ಬರು ಮಕ್ಕಳು. ಇವರೆಲ್ಲರ ನಿರಂತರ ಸಹಕಾರ, ಮತ್ತು ಅಪ್ಪ-ಅಮ್ಮನ ಬೆಂಬಲದಿಂದ ನಾನಿಂದು ಸಿಸ್ಕೋದಂಥ ಜಾಗತಿಕ ಮಟ್ಟದ ಮುಂಚೂಣಿ ಕಂಪೆನಿಯಲ್ಲಿ ಒಂದು ಉತ್ತಮ ಸ್ಥಾನ ಪಡೆದಿದ್ದೇನೆ. ನಮ್ಮಮ್ಮ ಸಹ ಉದ್ಯೋಗಸ್ಥ ಮಹಿಳೆಯಾಗಿದ್ದರು. ತನ್ನ ಮಗಳು ತನ್ನಂತೆ ಉದ್ಯೋಗಸ್ಥೆಯಾಗಬೇಕು, ಸ್ವಾವಲಂಬಿಯಾಗಬೇಕು ಅನ್ನೋದು ಅಮ್ಮನ ಕನಸಾಗಿತ್ತು. ನೀನು ನನಗಿಂತ ಒಳ್ಳೆಯ ಕೆಲಸ ಪಡೆದು, ಸಾಧನೆ ಮಾಡಬೇಕು ಎಂದು ಯಾವಾಗಲೂ ಅವರು ಹೇಳುತ್ತಲೇ ಇದ್ದರು. ಅವರ ಮಾತು ಪ್ರತಿಹಂತದಲ್ಲೂ ನನ್ನನ್ನು ಹಿಂದಡಿಯಿಡದಂತೆ ಕಾಪಾಡಿತು"

ಅಡ್ಡಿ ಆತಂಕಗಳನ್ನು ಮೀರಬೇಕಿದೆ
ಮಹಿಳೆಯರಿಗೆ ಸಾಕಷ್ಟು ಅಡ್ಡಿ-ಆತಂಕಗಳಿರುತ್ತವೆ. ನಾವು ಇಂಜಿನಿಯರಿಂಗ್ ಓದುವಾಗ ನನ್ನ ತರಗತಿಯಲ್ಲಿದ್ದವರು ಕೇವಲ 16 ಹುಡುಗಿಯರು. ಅವರಲ್ಲಿ ಈಕ ಕೆಲಸ ಮಾಡುತ್ತಿರುವವರು ಬಹುಶಃ 4 ಜನರಿದ್ದರೆ ಹೆಚ್ಚು. ಹಲವರಿಗೆ ಮುಂದೇನು ಮಾಡಬಹುದೆಂದು ಮಾರ್ಗದರ್ಶನ ಮಾಡುವುದಕ್ಕೆ ಯಾರೂ ಇರಲಿಲ್ಲ. ಮತ್ತಷ್ಟು ಜನರಿಗೆ ಬೆಂಬಲ ಸಿಗುವಂತಿರಲಿಲ್ಲ. ಮದುವೆಯಾದ ನಂತರ ಕುಟುಂಬವನ್ನೂ ನಿರ್ವಹಿಸಿ, ಉದ್ಯೋಗವನ್ನೂ ಮಾಡುವುದು ಕಷ್ಟ ಎಂಬುದು ಹಲವರ ಭಾವನೆಯಾಗಿತ್ತು. ಈ ಎಲ್ಲಾ ಕಾರಣದಿಂದ ಅವರೆಲ್ಲ ಗೃಹಿಣಿಯಾಗಿಯೇ ಉಳಿಯಬೇಕಾಯ್ತು. ಕುಟುಂಬ ಮುಖ್ಯ ಎಂಬುದು ನಿಜ. ಆದರೆ ಕುಟುಂಬದ ಸಹಕಾರವಿದ್ದರೆ ಹೆಣ್ಣು ಸ್ವಾವಲಂಬಿಯಾಗಿ ಬದುಕುವುದು ಸಾಧ್ಯ ಎಂಬುದೂ ಅಷ್ಟೇ ಮುಖ್ಯ."

ಮಹಿಳೆಯರಿಗೆ ಮಾರ್ಗದರ್ಶನ
ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೋರಲಾರರು ಎಂಬ ಮಾತಿದೆ. ಆದರೆ ನನ್ನ ಅನುಭವದ ಪ್ರಕಾರ ಮಕ್ಕಳನ್ನು ಉತ್ತಮ ಹಾದಿಯಲ್ಲಿ ನಡೆಯುವಂತೆ ಮೊದಲೇ ಟ್ಯೂನ್ ಮಾಡಿದ್ದರೆ ಅವರು ಎಲ್ಲ ಕೆಲಸಕ್ಕೂ ನಮ್ಮ ಮೇಲೆ ಅವಲಂಬಿತರಾಗುವ ಅಗತ್ಯ ಬರುವುದಿಲ್ಲ. ನಾನು ಉದ್ಯೋಗಕ್ಕೆ ಹೋಗುತ್ತೇನೆಂಬ ಕಾರಣಕ್ಕಾಗಿಯೇ ನನ್ನ ಮಕ್ಕಳು ಎಷ್ಟೋ ಕೆಲಸಗಳನ್ನು ತಾವೇ ಮಾಡಿಕೊಳ್ಳುವಷ್ಟು ಸ್ವಾವಲಂಬಿಗಳಾಗಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಐಟಿ ಕ್ಷೇತ್ರಕ್ಕೆ ಬರುವ ಮಹಿಳೆಯರಿಗೆ ಮಾರ್ಗದರ್ಶನ, ಸಲಹೆ ನೀಡುವ ಸಲುವಾಗಿ ವುಮೆನ್ ಇನ್ ಟೆಕ್ನಾಲಜಿ ಎಂಬ ಫೇಸ್ ಬುಕ್ ಫೇಜ್ ಸಹ ತೆರೆದು ಈ ಮೂಲಕ ಮಹಿಳೆಯರಿಗೆ ಸಲಹೆ ನೀಡುವ ಕೆಲಸ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ, ವ್ಯಕ್ತಿತ್ವ ವಿಕಸನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರ, ಚರ್ಚೆಗಳನ್ನೂ ಆರಂಭಿಸಿ ಈ ಮೂಲಕ ಐಟಿ ಕ್ಷೇತ್ರಕ್ಕೆ ಹೆಚ್ಚೆಚ್ಚು ಮಹಿಳೆಯರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ.

ಎಲ್ಲ ಬಿಗುಮಾನ ತೊರೆದು ಮುಂದೆ ಬನ್ನಿ...
ಬದುಕಿನಲ್ಲಿ ಮುಗಿಯಿತು ಅಂತ ಯಾವುದೂ ಇಲ್ಲ. ಈ ಬದುಕಿನಲ್ಲಿ ಕಲಿಕೆ, ಓದು ಎಲ್ಲವೂ ನಿರಂತರ ಪ್ರಕ್ರಿಯೆ. ಯಾವುದೇ ಕೆಲಸ ಮಾಡುವುದಕ್ಕೆ ಹೋದರೂ ಎಲ್ಲರಿಗಿಂತ ಉತ್ತಮವಾಗಿ ಮಾಡುವುದು ಹೇಗೆ ಎಂದು ಯೋಚಿಸಿ. ಆಗ ಉತ್ತಮ ಫಲಿತಾಂಶ ಬಂದೇ ಬರುತ್ತದೆ. ಇಂದು ಸರ್ಕಾರ ಮಹಿಳೆಯರ ಅನುಕೂಲತೆಯ ದೃಷ್ಟಿಯಿಂದ ತಾಯ್ತನದ ರಜೆಯನ್ನು 6 ತಿಂಗಳಿಗೆ ವಿಸ್ತರಿಸಿದೆ. ಜೊತೆಗೆ ಸಿಸ್ಕೋ ಸೇರಿದಂತೆ ಎಷ್ಟೋ ಕಂಪೆನಿಗಳು ಬೇಬಿ ಕೇರ್ ಸೆಂಟರ್ ಗಳನ್ನೂ ಒದಗಿಸುತ್ತಿವೆ. ಇದರಿಂದ ಉದ್ಯೋಗಸ್ಥ ಮಹಿಳೆಯರು ತಾವು ಕೆಲಸ ಮಾಡುವ ಕಚೇರಿಯಲ್ಲೇ ತಮ್ಮ ಮಕ್ಕಳ ನಿಗಾ ನೋಡಿಕೊಳ್ಳಬಹುದು. ಐಟಿ ಕ್ಷೇತ್ರಕ್ಕೆ ಮಹಿಳೆಯರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಆದ್ದರಿಂದ ಎಲ್ಲ ಬಿಗುಮಾನಗಳನ್ನು ತೊರೆದು ಮುಂದೆಬನ್ನಿ..."
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications